ವಿವೇಕ್‌ ಅಗ್ನಿಹೋತ್ರಿ ನಿರ್ದೇಶನದ ‘The Kashmir Files’ ಹಿಂದಿ ಸಿನಿಮಾ ದಿನದಿಂದ ದಿನಕ್ಕೆ ಹಲವು ಆಯಾಮಗಳನ್ನು ಪಡೆದುಕೊಳ್ಳುತ್ತಿದೆ. ಕೆಲವು ರಾಜ್ಯಗಳಲ್ಲಿ ಚಿತ್ರಕ್ಕೆ ತೆರಿಗೆ ವಿನಾಯ್ತಿ ಸಿಕ್ಕಿದ್ದು, ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಚಿತ್ರದ ಬಗ್ಗೆ ಮಾತನಾಡಿದ್ದಾರೆ.

ತೊಂಬತ್ತರ ದಶಕದಲ್ಲಿ ಕಾಶ್ಮೀರಿ ಪಂಡಿತರ ಹತ್ಯೆ, ವಲಸೆ ಕುರಿತ ವಿವೇಕ್‌ ಅಗ್ನಿಹೋತ್ರಿ ನಿರ್ದೇಶನದ ‘The Kashmir Files’ ಸಿನಿಮಾ ದಿನಕಳೆದಂತೆ ರಾಜಕೀಯ ಆಯಾಮ ಪಡೆದುಕೊಳ್ಳುತ್ತಿದೆ. ಇದು ಪ್ರಾಪಗಾಂಡಾ ಸಿನಿಮಾ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದರೆ, ಇನ್ನೊಂದು ವರ್ಗ ಈ ಚಿತ್ರವನ್ನು ಪ್ರೊಮೋಟ್‌ ಮಾಡುತ್ತಿದೆ. ಬಿಜೆಪಿ ಆಡಳಿತ ನಡೆಸುತ್ತಿರುವ ಕರ್ನಾಟಕ, ಗುಜರಾತ್‌, ಮಧ್ಯಪ್ರದೇಶ್‌, ತ್ರಿಪುರಾ, ಹರ್ಯಾಣ, ಗೋವಾದಲ್ಲಿ ಚಿತ್ರಕ್ಕೆ ತೆರಿಗೆ ವಿನಾಯ್ತಿ ಘೋಷಿಸಲಾಗಿದೆ. ಇಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಉತ್ತರ ಪ್ರದೇಶದಲ್ಲಿ ಚಿತ್ರಕ್ಕೆ ತೆರಿಗೆ ವಿನಾಯ್ತಿ ಘೋಷಿಸಿದ್ದಾರೆ.

ಮೋದಿ ಮಾತು | ನಿನ್ನೆ ಕೇರಳ ಕಾಂಗ್ರೆಸ್‌ ಚಿತ್ರದ ಸತ್ಯಾಸತ್ಯತೆಯನ್ನು ಪ್ರಶ್ನಿಸಿ ಟ್ವೀಟ್‌ ಮಾಡಿತ್ತು. ಈ ಟ್ವೀಟ್‌ಗೆ ಬಿಜೆಪಿ ಪಕ್ಷದ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಮುಗಿಬಿದ್ದಿದ್ದಾರೆ. ಈ ಟ್ವೀಟ್‌ ಡಿಲೀಟ್‌ ಮಾಡಿರುವ ಕೇರಳ ಕಾಂಗ್ರೆಸ್‌, “ನಮ್ಮ ಟ್ವೀಟ್‌ ಅನ್ನು ಪ್ರೊಪಗಾಂಡಾಕ್ಕೆ ಬಳಕೆ ಮಾಡಲಾಗುತ್ತಿದೆ. ಆದರೆ ಚಿತ್ರದ ಸತ್ಯಾಸತ್ಯತೆಯನ್ನು ಪ್ರಶ್ನಿಸುವುದು ನಮ್ಮ ಹಕ್ಕು. ಈ ನಿಲುವಿಗೆ ನಾವು ಬದ್ಧರಾಗಿದ್ದೇವೆ” ಎಂದಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಬಿಜೆಪಿ ಪಾರ್ಲಿಮೆಂಟರಿ ಪಾರ್ಟಿ ಮೀಟಿಂಗ್‌ನಲ್ಲಿ ಅವರು ಚಿತ್ರದ ಬಗ್ಗೆ ಪ್ರಸ್ತಾಪಿಸಿ, “ಇಂತಹ ಚಿತ್ರಗಳು ಹೆಚ್ಚೆಚ್ಚು ತಯಾರಾದರೆ ಜನರಿಗೆ ಸತ್ಯ ಗೊತ್ತಾಗುತ್ತದೆ. 1975ರ ಎಮರ್ಜೆನ್ಸಿ, ದೇಶ ವಿಭಜನೆಗೆ ಸಂಬಂಧಿಸಿದಂತೆಯೂ ಸಿನಿಮಾಗಳು ತಯಾರಾಗಲಿ” ಎಂದಿದ್ದು ಚಿತ್ರತಂಡವನ್ನು ಅಭಿನಂದಿಸಿದ್ದಾರೆ.

ತೆರಿಗೆ ವಿನಾಯ್ತಿ ಪ್ರಶ್ನೆ | ಕರ್ನಾಟಕದಲ್ಲಿ ಚಿತ್ರಕ್ಕೆ ತೆರಿಗೆ ವಿನಾಯ್ತಿ ನೀಡಿರುವುದರ ಬಗ್ಗೆಯೂ ಪರ – ವಿರೋಧದ ಚರ್ಚೆಗಳು ನಡೆದಿವೆ. “ಜನರ ತೆರಿಗೆ ಹಣವನ್ನು ಈ ರೀತಿ ದುರುಪಯೋಗ ಮಾಡುವುದು ಸರಿಯಲ್ಲ. ತಮ್ಮ ರಾಜಕೀಯ ಉದ್ದೇಶಕ್ಕೆ ನಮ್ಮ ತೆರಿಗೆ ಹಣವನ್ನು ದುರ್ಬಳಕೆ ಮಾಡಲಾಗುತ್ತಿದೆ. ಪ್ರಚೋದನಕಾರಿ ವಿಷಯವನ್ನು ಪೋಷಿಸುವುದು, ವೈಭವೀಕರಿಸುವುದು ಒಳ್ಳೆಯ ಬೆಳವಣಿಗೆಯಲ್ಲ. ಚಿತ್ರದಲ್ಲಿ ಹಲವು ಅಂಶಗಳನ್ನು ಬೇಕೆಂದೇ ಮರೆಮಾಚಲಾಗಿದೆ” ಎನ್ನುವ ಅರ್ಥದಲ್ಲಿ ಹಲವರು ಸಂದೇಶಗಳನ್ನು ಹಾಕಿದ್ದಾರೆ. “ಸತ್ಯ ಎಂದಿಗೂ ಕಹಿಯಾಗಿರುತ್ತದೆ. ಇಂತಹ ಸಿನಿಮಾಗಳು ಹೆಚ್ಚೆಚ್ಚು ತಯಾರಾಗಲಿ. ರಾಷ್ಟ್ರಜಾಗೃತಿ ಮೂಡಲಿ” ಎಂದು ದೊಡ್ಡ ಸಂಖ್ಯೆಯಲ್ಲಿ ಜನರು ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ.

“The Kashmir Files ಚಿತ್ರದ ಕನ್ನಡದ ಡಬ್ಬಿಂಗ್‌ ಅವತರಣಿಕೆಯೂ ತೆರೆಕಂಡಿಲ್ಲ. ಹಿಂದಿ ಚಿತ್ರಕ್ಕೆ ತೆರಿಗೆ ವಿನಾಯ್ತಿ ಕೊಡುವ ನೀವು ಸಾಮಾಜಿಕ ಸಂದೇಶ ಇರುವಂತಹ ಕನ್ನಡ ಚಿತ್ರಗಳಿಗೇಕೆ ವಿನಾಯ್ತಿ ಕೊಡುವುದಿಲ್ಲ?” ಎಂದು ಕನ್ನಡ ಚಳವಳಿ ಹೋರಾಟಗಾರರು ಪ್ರಶ್ನಿಸಿದ್ಧಾರೆ. ಇತ್ತೀಚೆಗಷ್ಟೇ ತೆರೆಕಂಡ ‘ಜೈ ಭೀಮ್‌’ನಂತಹ ಸಿನಿಮಾ ಹೆಚ್ಚು ಜನರಿಗೆ ತಲುಪಬೇಕಿತ್ತು. ಆದರೆ ಸರ್ಕಾರಕ್ಕೆ ಇಂತಹ ಸಿನಿಮಾಗಳು ಗಮನಕ್ಕೆ ಬರುವುದಿಲ್ಲ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ನಿನ್ನೆ ಮಲ್ಟಿಪ್ಲೆಕ್ಸ್‌ನಲ್ಲಿ ಆಯೋಜನೆಗೊಂಡಿದ್ದ ‘The Kashmir Files’ ವಿಶೇಷ ಪ್ರದರ್ಶನದಲ್ಲಿ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಸೇರಿದಂತೆ ಹಲವಾರು ಶಾಸಕರು ಸಿನಿಮಾ ವೀಕ್ಷಿಸಿದ್ದಾರೆ.

ಕಪಿಲ್‌ ಶರ್ಮಾ ನಿರಾಳ | ಈ ಚಿತ್ರದ ಬಿಡುಗಡೆಗೆ ಮುನ್ನ ಕಮೆಡಿಯನ್‌, ನಟ ಕಪಿಲ್‌ ಶರ್ಮಾ ಟ್ರೋಲ್‌ಗೆ ಒಳಗಾಗಿದ್ದರು. “ಕಪಿಲ್‌ ಶರ್ಮಾ ಅವರು ತಮ್ಮ ಕಪಿಲ್‌ ಶರ್ಮಾ ಶೋಗೆ ‘The Kashmir Files’ ಚಿತ್ರತಂಡಕ್ಕೆ ಆಹ್ವಾನ ನೀಡಿಲ್ಲ” ಎಂದು ಆರೋಪಿಸಲಾಗಿತ್ತು. ‘Boycott Kapil Sharma’ ಹ್ಯಾಶ್‌ಟ್ಯಾಗ್‌ನೊಂದಿಗೆ ಟ್ವಿಟರ್‌ ಟ್ರೆಂಡ್‌ ಮಾಡಲಾಗಿತ್ತು. ಇಂದು ಚಿತ್ರದಲ್ಲಿ ನಟಿಸಿರುವ ಹಿರಿಯ ನಟ ಅನುಪಮ್‌ ಖೇರ್‌ ಸುದ್ದಿಯನ್ನು ಅಲ್ಲಗಳೆದಿದ್ದಾರೆ. “ಎರಡು ತಿಂಗಳ ಹಿಂದೆಯೇ ಕಪಿಲ್‌ ಶರ್ಮಾ ನನಗೆ ಆಹ್ವಾನ ನೀಡಿದ್ದರು. ಆದರೆ ನಮ್ಮ ಚಿತ್ರದ್ದು ಗಂಭೀರ ವಸ್ತು. ಕಾಮಿಡಿ ಶೋಗೆ ಸರಿಹೊಂದುವುದಿಲ್ಲ ಎನ್ನುವ ಕಾರಣಕ್ಕೆ ನಿರಾಕರಿಸಿದ್ದೆ” ಎಂದಿದ್ದಾರೆ. ತಮ್ಮ ಮೇಲಿನ ಆರೋಪ ತಿಳಿಯಾಗಿಸಿದ ಅನುಪಮ್‌ ಖೇರ್‌ ಅವರಿಗೆ ಕಪಿಲ್‌ ಶರ್ಮಾ ಧನ್ಯವಾದ ಅರ್ಪಿಸಿದ್ದಾರೆ.

ಕಂಗನಾ ಬೆಂಬಲ | ಬಿಡುಗಡೆಯಾದ ನಾಲ್ಕು ದಿನಗಳಲ್ಲಿ ಸಿನಿಮಾ 42 ಕೋಟಿ ರೂಪಾಯಿ ಗಳಿಕೆ ದಾಖಲಿಸಿದೆ. ‘The Kashmir Files’ ಬಗ್ಗೆ ಮೊದಲು ಮಾತನಾಡಿದ ಬಾಲಿವುಡ್‌ ನಟಿ ಕಂಗನಾ ರನಾವತ್‌ ಈಗ ಮತ್ತೆ ಚಿತ್ರವನ್ನು ಬೆಂಬಲಿಸಿ ಟ್ವೀಟ್‌ ಮಾಡಿದ್ದಾರೆ. “ಇದು ನಿಜವಾದ ಗೆಲುವು. ಕೋವಿಡ್‌ ಪ್ಯಾಂಡಮಿಕ್‌ ನಂತರದ ನಿಜವಾದ ಗೆಲುವು ಈ ಚಿತ್ರದ್ದು. ಬಾಲಿವುಡ್‌ನಲ್ಲಿ ನೇರವಾಗಿ ಮಾತನಾಡಲು ಎಲ್ಲರೂ ಹಿಂಜರಿಯುತ್ತಾರೆ. ಆದರೆ ನನಗೆ ಆ ಭಯವಿಲ್ಲ. ನೇರವಾಗಿ ಹೇಳುವ ಮೂಲಕ ಉದ್ಯಮಕ್ಕೆ ನನ್ನದೇ ಆದ ಕಾಣಿಕೆ ನೀಡುತ್ತಿದ್ದೇನೆ” ಎಂದಿದ್ದಾರೆ ಕಂಗನಾ. ಇತ್ತೀಚಿಗೆ ತೆರೆಕಂಡ ಅಲಿಯಾ ಭಟ್‌ ನಟನೆಯ ‘ಗಂಗೂಬಾಯಿ ಕಥೈವಾಡಿ’ ಚಿತ್ರದ ಯಶಸ್ಸಿನ ಬಗ್ಗೆ ಕಂಗನಾ ಕಟಕಿಯಾಡಿದ್ದರು. ಅಲಿಯಾ ಚಿತ್ರವನ್ನು ಉದ್ದೇಶಿಸಿಯೇ ಅವರು ‘The Kashmir Files’ ಚಿತ್ರದ್ದೇ ನಿಜವಾದ ಗೆಲುವು ಎಂದಿದ್ದಾರೆ.

Previous articleಅಪ್ಪು ಬಯೋಗ್ರಫಿ ‘ನೀನೇ ರಾಜಕುಮಾರ’ ಬಿಡುಗಡೆ ಮಾಡಿದ ನಟ ಸುದೀಪ್
Next articleಸೆಟ್ಟೇರಿದ ‘ವಾಮನ’; ಅಖಾಡಕ್ಕೆ ಧುಮುಕಿದ ಶೋಕ್ದಾರ್‌ ಧನ್ವೀರ್‌

LEAVE A REPLY

Connect with

Please enter your comment!
Please enter your name here