ಪ್ರಶಾಂತ್ ಎಸ್ ನಾಯಕ್ ನಿರ್ದೇಶನದ ‘ಕಪ್ಪೆ ರಾಗ’ ಮ್ಯೂಸಿಕಲ್ ವೈಲ್ಡ್ ಲೈಫ್ ಕಿರುಚಿತ್ರಕ್ಕೆ ಪ್ರತಿಷ್ಠಿತ ಗ್ರೀನ್ ಆಸ್ಕರ್ ಪ್ರಶಸ್ತಿ ಲಭಿಸಿದೆ. ಭಾರತದಲ್ಲೇ ಹಿಂದಿ ಚಿತ್ರವೊಂದಕ್ಕೆ ಬಿಟ್ಟರೆ, ಗ್ರೀನ್ ಆಸ್ಕರ್ ಪಡೆದಿರುವ ಮತ್ತೊಂದು ಕಿರುಚಿತ್ರ ‘ಕಪ್ಪೆ ರಾಗ’ ಎನ್ನುವುದು ವಿಶೇಷ.
ಪ್ರಶಾಂತ್ ಎಸ್ ನಾಯಕ್ ನಿರ್ದೇಶನದ ಮ್ಯೂಸಿಕಲ್ ವೈಲ್ಡ್ ಲೈಫ್ ಕಿರುಚಿತ್ರ ‘ಕಪ್ಪೆ ರಾಗ’ ಪ್ರತಿಷ್ಠಿತ ಗ್ರೀನ್ ಆಸ್ಕರ್ ಪ್ರಶಸ್ತಿಗೆ ಭಾಜನವಾಗಿದೆ. ಪ್ರಶಾಂತ್ ಅವರ ಆರು ವರ್ಷಗಳ ಶ್ರಮದಿಂದ ಆರು ನಿಮಿಷಗಳ ಈ ಸುಂದರ ದೃಶ್ಯ ಕಾವ್ಯ ರೂಪುಗೊಂಡಿದೆ. ಗ್ರೀನ್ ಆಸ್ಕರ್ ಪ್ರಶಸ್ತಿ ಪಡೆದ ಕನ್ನಡದ ಪ್ರಪ್ರಥಮ ಕಿರುಚಿತ್ರ ಎಂಬ ಹೆಗ್ಗಳಿಕೆಗೆ ‘ಕಪ್ಪೆರಾಗ’ ಪಾತ್ರವಾಗಿದೆ. ಈ ಕುರಿತು ಮಾತನಾಡಿರುವ ಪ್ರಶಾಂತ್ ಎಸ್ ನಾಯಕ್, ‘ವನ್ಯಜೀವಿ ಛಾಯಾಗ್ರಹಣ ನನ್ನ ಹವ್ಯಾಸ. ಜಗತ್ತಿನ ಎಲ್ಲಾ ಪರಿಸರ ಚಿತ್ರಕಲಾಸಕ್ತರ ಮನಸ್ಸನ್ನು ಗೆದ್ದಿರುವ ಕಪ್ಪೆ ನಮ್ಮ ಪಶ್ಚಿಮ ಘಟ್ಟದ ಕರುನಾಡ ಕಪ್ಪೆ. 2014ರಲ್ಲಿ ಮೊದಲ ಬಾರಿಗೆ ಕಂಡು ಬಂದ ಕಪ್ಪೆ ಇದಾಗಿದ್ದು, ಇರುಳು ಗಪ್ಪೆಯಾಗಿರುವುದರಿಂದ ಇದನ್ನು ಸೆರೆ ಹಿಡಿಯುವುದು ಕಷ್ಟ. ತುಂಬಾ ಕಷ್ಟಪಟ್ಟು ಈ ಪ್ರಯತ್ನ ಮಾಡಿದ್ದೇವೆ. ಇಂತಹ ಅಪರೂಪದ ಕಪ್ಪೆಯ ಕುರಿತು ಚಿತ್ರೀಕರಣ ಮಾಡಿಕೊಂಡು ಬಂದ ಮೇಲೆ ಇದಕ್ಕೆ ಕಾವ್ಯ ರೂಪ ಕೊಡಬೇಕೆಂದು ನಿರ್ಧರಿಸಿದ್ದೆವು. ಗೆಳೆಯ ಪ್ರದೀಪ್ ಕೆ ಶಾಸ್ತ್ರಿ ಅದ್ಭುತ ಹಾಡೊಂದನ್ನು ಬರೆದುಕೊಟ್ಟರು. ಅಶ್ವಿನ್ ಪಿ ಕುಮಾರ್ ಸಂಗೀತ ಸಂಯೋಜಿಸಿರುವ ಈ ಹಾಡಿಗೆ ರಾಜೇಶ್ ಕೃಷ್ಣನ್ ಮತ್ತು ಅರುಂಧತಿ ದನಿಯಾಗಿದ್ದಾರೆ’ ಎನ್ನುತ್ತಾರೆ.
ಈ ಕಿರುಚಿತ್ರಕ್ಕೆ ಗ್ರೀನ್ ಆಸ್ಕರ್ ಅಥವಾ ಜ್ಯಾಕ್ ಸ್ವಾನ್ ವೈಲ್ಡ್ ಮೀಡಿಯಾ ಅವಾರ್ಡ್ ಬಂದಿದೆ. ಜಗತ್ತಿನ ಅತಿ ಪ್ರತಿಷ್ಠಿತ ಪರಿಸರ-ವನ್ಯಜೀವಿ ಚಿತ್ರಕ್ಕೆ ನೀಡುವ ಪುರಸ್ಕಾರವಿದು. ಇದು ವನ್ಯಜೀವಿಗಳ ಚಿತ್ರಗಳ ಆಸ್ಕರ್ ಎಂದೇ ಪ್ರಸಿದ್ಧಿ ಪಡೆದಿದೆ. BBC, Netflix, PBS Nature, National Geography ಮುಂತಾದ ಹಿರಿಯ ಚಿತ್ರ ಸಂಸ್ಥೆಗಳು ಕೋಟ್ಯಾಂತರ ರೂಪಾಯಿಗಳನ್ನು ಹೂಡಿ ತಯಾರಿಸುವ ತಮ್ಮ ಚಿತ್ರಗಳನ್ನು ಗ್ರೀನ್ ಆಸ್ಕರ್ ಪ್ರಶಸ್ತಿಗೆ ಕಳುಹಿಸಿಕೊಡುತ್ತಾರೆ. ಅಂತಹ ಅತ್ಯುತ್ತಮ ಪ್ರಶಸ್ತಿ ಇದು. ಭಾರತದಲ್ಲೇ ಹಿಂದಿ ಚಿತ್ರವೊಂದಕ್ಕೆ ಬಿಟ್ಟರೆ, ಗ್ರೀನ್ ಆಸ್ಕರ್ ಪಡೆದಿರುವ ಮತ್ತೊಂದು ಕಿರುಚಿತ್ರ ‘ಕಪ್ಪೆ ರಾಗ’ ಎನ್ನುವುದು ವಿಶೇಷ.