ಇಪ್ಪತ್ನಾಲ್ಕು ಗಂಟೆ ಅವಧಿಯಲ್ಲಿ ನಡೆಯುವ ಕತೆ ‘ಲಾಂಗ್‌ ಡ್ರೈವ್‌’. ಪ್ರಯಾಣದಲ್ಲಿ ಘಟಿಸುವ ಆಕಸ್ಮಿಕಗಳು ಚಿತ್ರದ ಕಥಾವಸ್ತು. ನಾಲ್ಕು ಪ್ರಮುಖ ಪಾತ್ರಗಳ ಸುತ್ತ ನಡೆಯುವ ಕತೆ. ಶ್ರೀರಾಜ್‌ ನಿರ್ದೇಶನದ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದ್ದು, ಫೆಬ್ರವರಿ 10ಕ್ಕೆ ಸಿನಿಮಾ ತೆರೆಕಾಣಲಿದೆ.

“ಇಂತಹ ಘಟನೆಗಳು ಪ್ರತಿಯೊಬ್ಬರ ಜೀವನದಲ್ಲೂ ನಡೆಯುತ್ತಿರುತ್ತವೆ. ಮುನ್ನಚ್ಚೆರಿಕೆ ಇಲ್ಲದೆ ಹೋಗುವ ಲಾಂಗ್‌ ಡ್ರೈವ್‌ನಿಂದಾಗಿ ಘಟಿಸುವ ಆಕಸ್ಮಿಕಗಳು ಚಿತ್ರದ ವಸ್ತು. ಚಿತ್ರದಲ್ಲಿ ನಾನು ಕೆಲಸ ಹುಡುಕುತ್ತಿರುವ ಯುವಕ. ತೊಂದರೆಯಾದರೆ ತಿರುಗಿ ಬೀಳುವ ಪಾತ್ರ. ಲಾಂಗ್‌ ಡ್ರೈವ್‌ಗೂ ಮುಂಚೆ ಮತ್ತು ನಂತರ ಏನಾಗುತ್ತದೆ ಎನ್ನುವುದು ಕಥಾನಕ” ಎನ್ನುತ್ತಾರೆ ಚಿತ್ರದ ಹೀರೋ ಅರ್ಜುನ್‌ ಯೋಗಿ. ಹೀರೋ ಆಗಿ ಅವರಿಗಿದು ಮೂರನೇ ಸಿನಿಮಾ. ಚಿತ್ರದಲ್ಲಿ ಅವರ ಪಾತ್ರಕ್ಕೆ ಎರಡು ಭಿನ್ನ ಶೇಡ್‌ಗಳಿವೆಯಂತೆ. ತೇಜಸ್ವಿನಿ ಶೇಖರ್‌ ಮತ್ತು ಸುಪ್ರೀತಾ ಸತ್ಯನಾರಾಯಣ ಚಿತ್ರದ ಇಬ್ಬರು ನಾಯಕಿಯರು. ದಶಕದಿಂದ ಸಿನಿಮಾ ಬರಹಗಾರರಾಗಿ ಕೆಲಸ ಮಾಡುತ್ತಿರುವ ಶ್ರೀರಾಜ್‌ ಅವರ ಚೊಚ್ಚಲ ನಿರ್ದೇಶನದ ಸಿನಿಮಾ. ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದೆ.

ಇದೊಂದು ರೊಮ್ಯಾಂಟಿಕ್‌ – ಥ್ರಿಲ್ಲರ್‌ ಜರ್ನೀ ಕತೆ ಎನ್ನುತ್ತಾರೆ ನಿರ್ದೇಶಕರು. ಚಿತ್ರದ ನಿರ್ಮಾಪಕ ಶಬರಿ ಮಂಜು ಅವರು ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಮುಖ್ಯಭೂಮಿಕೆ ಕಲಾವಿದರಿಗೆ ಸರಿಸಮನಾಗಿ ಚಿತ್ರಿಸಿರುವ ಪಾತ್ರವಿದು. “ಸಿನಿಮಾ ಮಾಡುವುದು ನನ್ನ ಬಹುದಿನಗಳ ಕನಸು. ಸ್ನೇಹಿತನ ಬದುಕಿನಲ್ಲಿ ನಡೆದ ಘಟನೆಯೊಂದು ಚಿತ್ರಕ್ಕೆ ಪ್ರೇರಣೆಯಾಗಿದೆ. ಈ ಸಿನಿಮಾ ಮೂಲಕ ನಿರ್ಮಾಣದೊಂದಿಗೆ ನಟನಾಗುವ ಆಸೆಯೂ ಈಡೇರಿದೆ” ಎನ್ನುತ್ತಾರವರು. ಒಂದೊಳ್ಳೆ ಸಂದೇಶ ದಾಟಿಸುವುದು ಚಿತ್ರತಂಡದ ಉದ್ದೇಶ. ಬಲ ರಾಜ್ವಾಡಿ, ಮಹೇಶ್ ಗುರು, ಮೋಹನ್ ಅನ್ನಳ್ಳಿ ಇತರೆ ಪ್ರಮುಖ ಪಾತ್ರಧಾರಿಗಳು. ವಿಕಾಸ್ ವಸಿಷ್ಠ ಸಂಗೀತ ಸಂಯೋಜನೆ, ರಾಮಿ ಶೆಟ್ಟಿ ಪವನ್ ಸಂಕಲನ, ಕಿಟ್ಟಿ ಕೌಶಿಕ್ ಛಾಯಾಗ್ರಹಣ ಚಿತ್ರಕ್ಕಿದೆ. ಫೆಬ್ರವರಿ 10ರಂದು ‘ಲಾಂಗ್‌ ಡ್ರೈವ್‌’ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here