ನಜೀಬ್ ಅವರ ಜೀವನದ ಪ್ರತಿ ಕ್ಷಣವನ್ನು ಸೆರೆಹಿಡಿಯಲು ಇಲ್ಲಿ ನಿರ್ದೇಶಕ ಮತ್ತು ನಟ ಅದೆಷ್ಟು ಶ್ರಮ ವಹಿಸಿದ್ದಾರೆ ಎಂಬುದು ಪ್ರತೀ ಫ್ರೇಮ್ನಲ್ಲಿಯೂ ಪ್ರತಿಫಲಿಸುತ್ತದೆ. ನಟ ಪೃಥ್ವಿರಾಜ್ ಅವರ ಜೀವನದಲ್ಲಿ ನಜೀಬ್ನಂತಹ ಪಾತ್ರ ಮತ್ತೆ ಬರುವುದಿಲ್ಲ. ಇಲ್ಲಿ ಅವರು ನಜೀಬ್ ಎಂಬ ಪಾತ್ರವೇ ಆಗಿಬಿಟ್ಟಿದ್ದಾರೆ. ರಸೂಲ್ ಪೂಕುಟ್ಟಿ ಮತ್ತು ಎ ಆರ್ ರೆಹಮಾನ್ ಮ್ಯಾಜಿಕ್, ಸಿನಿಮಾದಲ್ಲಿ ಆಗಾಗ ಫೀಲ್ ಆಗುತ್ತಿರುತ್ತದೆ.
ಸಂದರ್ಶನವೊಂದರಲ್ಲಿ ರಿಯಲ್ ಲೈಫ್ ನಜೀಬ್, ರೀಲ್ ಲೈಫ್ ನಜೀಬ್ (ಪೃಥ್ವಿರಾಜ್ ಸುಕುಮಾರನ್) ಅವರಲ್ಲಿ ಮರುಭೂಮಿಯ ಬಿರುಗಾಳಿ ನೋಡಿದ್ದೀರಾ? ಎಂದು ಕೇಳುತ್ತಾರೆ. ಪೃಥ್ವಿರಾಜ್.. ಹಾಂ ಎಂದು ಉತ್ತರಿಸುತ್ತಾರೆ. ಅಲ್ಲಿನ ಬಿರುಗಾಳಿ, ಸುಡುಬಿಸಿಲು, ಮರುಳು ಎಲ್ಲವೂ ಹೇಗಿದೆ ಎಂಬುದನ್ನು ಅಲ್ಲಿದ್ದು ನೋಡಿದವರಿಗಷ್ಟೇ ಗೊತ್ತು. ಸಿನಿಮಾ ನೋಡುತ್ತಿದ್ದಂತೆ ಆ ಬೇಗುದಿ, ಆ ಶಾಖ ನಮಗೂ ತಟ್ಟುತ್ತದೆ. ‘ಆಡುಜೀವಿತಂ’ ಬರೀ ಸಿನಿಮಾ ಅಲ್ಲ, ಅದೊಂದು ಅನುಭವದ ಕತೆ. ಕಣ್ಣು ತೆರೆದರೆ ಕಣ್ಣಿಗೆ ರಾಚುವ ಮರಳು, ಮುಚ್ಚಿದಾಗ ಕಣ್ಣೊಳಗೆ ಚುಚ್ಚುವ ನೋವು. ನಾವರಿಯದಂತೆ ಕಣ್ಣ ಹನಿ ಕೆನ್ನೆ ಮೇಲೆ ಜಾರಿದಾಗ.. ನಜೀಬ್ ನೀವು ಹೇಗೆ ಸಹಿಸಿಕೊಂಡಿರಿ? ಎಂದು ಮನಸ್ಸಿನಲ್ಲೇ ಪ್ರಶ್ನೆ ಕೇಳಿದ್ದೆ. ಬ್ಲೆಸ್ಸಿ ಅಲ್ಲದೆ ಬೇರೆ ಯಾವ ನಿರ್ದೇಶಕನಿಗೆ ಈ ನೋವುಗಳನ್ನು ಇಷ್ಟು ಸುಂದರವಾಗಿ ಹಿಡಿದಿಡಲು ಸಾಧ್ಯ?
ಹೀಗೂ ಉಂಟೇ ಎಂದು ಓದುಗರನ್ನು ಬೆಚ್ಚಿಬೀಳಿಸಿದ ಬೆನ್ಯಾಮಿನ್ ಅವರ ಕಾದಂಬರಿ ಆಡುಜೀವಿತಂ ಅನ್ನು ತೆರೆಮೇಲೆ ತರಲು ಬ್ಲೆಸ್ಸಿ, ಎ ಆರ್ ರೆಹಮಾನ್, ರಸೂಲ್ ಪೂಕುಟ್ಟಿ, ಕೆ ಎಸ್ ಸುನೀಲ್, ಶ್ರೀಕರ್ ಪ್ರಸಾದ್ ಸೇರಿದಂತೆ ಭಾರತದ ಅತ್ಯುತ್ತಮ ತಂತ್ರಜ್ಞರು ಇಲ್ಲಿ ಜೊತೆಯಾಗಿದ್ದಾರೆ. ನಟ ಪೃಥ್ವಿರಾಜ್ ಅವರು ಈ ಪಾತ್ರಕ್ಕಾಗಿ ಮಾಡಿದ ತಯಾರಿ, ಸಮರ್ಪಣೆ ‘ಆಡುಜೀವಿತಂ’ ಸಿನಿಮಾವನ್ನು ಇತರ ರಿಯಲ್ ಸ್ಟೋರಿ ಸಿನಿಮಾಗಳಿಗಿಂತ ಭಿನ್ನವಾಗಿಸಿದ್ದು ಎಂದರೆ ಉತ್ಪ್ರೇಕ್ಷೆ ಅಲ್ಲ.
ಆಡುಜೀವಿತಂ ಕಾದಂಬರಿ ಓದಿದ್ದರೂ ಸಿನಿಮಾ ನೋಡಿದಾಗ ಕಾದಂಬರಿಯ ಅನುಭವ ಆಗುವುದಿಲ್ಲ. ಯಾಕೆಂದರೆ ಇವೆರಡೂ ಎರಡು ವಿಭಿನ್ನ ಸೃಷ್ಟಿಗಳು. ನಜೀಬ್, ಗಲ್ಫ್ ರಾಷ್ಟ್ರಕ್ಕೆ ಬಂದಿಳಿಯುವುದರೊಂದಿಗೆ ಚಿತ್ರ ಆರಂಭವಾಗುತ್ತದೆ. ಕಂಪನಿ ಕೆಲಸದ ವೀಸಾದೊಂದಿಗೆ ಬಂದಿದ್ದ ನಜೀಬ್ ಮತ್ತು ಆತನ ಸ್ನೇಹಿತ ಹಕೀಂ ಅನ್ನು (ಕೆ ಆರ್ ಗೋಕುಲ್) ಕಾಟ್ಟ್ ಅರಬೀ (ತುಂಬಾ ಕ್ರೂರನಾಗಿರುವ ಅರಬೀ) ಹಿಡಿದುಕೊಂಡು ಕಾರಿನಲ್ಲಿ ಕರೆದೊಯ್ಯುತ್ತಾನೆ. ಅದ್ಯಾವುದೋ ಒಳ ಪ್ರದೇಶದ ಮರುಭೂಮಿಯಲ್ಲಿ ಆಡು, ಕುರಿ ಮೇಯಿಸುವ ಗುಲಾಮ ಕೆಲಸಕ್ಕೆ ನಜೀಬ್ನನ್ನು ದೂಡುತ್ತಾನೆ. ಭಾಷೆ ಗೊತ್ತಿಲ್ಲ, ಜತೆಗೆ ಬಂದ ಹಕೀಂನನ್ನು ಬೇರೆಲ್ಲೋ ಕೆಲಸಕ್ಕೆ ನೂಕಲಾಗಿದೆ.
ತಾನು ಮೋಸ ಹೋದೆ, ಈ ಮರುಭೂಮಿಯಲ್ಲಿ ಸಿಕ್ಕಿಹಾಕಿಕೊಂಡಿದ್ದೇನೆ ಎಂದು ನಜೀಬ್ಗೆ ಗೊತ್ತಾದರೂ ಅಲ್ಲಿಂದ ಹೋಗುವುದಾದರೂ ಎಲ್ಲಿಗೆ? ಮರುಭೂಮಿಯ ಬಿಸಿಲಲ್ಲಿ ಆ ಆಡುಗಳ ಚಾಕರಿ ಮಾಡಿಕೊಂಡು ನಜೀಬ್ನ ಬದುಕು ಒಣಗುತ್ತಿದೆ. ಕೂದಲು, ಗಡ್ಡ ಬೆಳೆದಿದೆ. ಆತ ಆ ಅರಬ್ಬಿಗಳ ಕಣ್ಗಾವಲಿನಲ್ಲಿ, ಚಾಟಿಯೇಟು ತಿಂದು, ಆಡು, ಕುರಿಗಳ ಹಿಂಡಿನೊಂದಿಗೆ ತಾನೂ ಒಂದು ಪ್ರಾಣಿ ಎಂಬಂತೆ ನರಕದ ಬದುಕು ಬದುಕುತ್ತಿರುತ್ತಾನೆ. ಅಲ್ಲಿಂದ ಓಡಿ ಹೋಗಬೇಕು ಎಂದು ಪ್ರಯತ್ನಿಸಿ ಸೋಲುತ್ತಾನೆ. ಈ ಬದುಕಿಗಿಂತ ಸತ್ತರೆ ಸಾಕಿತ್ತು ಎಂದು ಕಣ್ಣೀರಾಗುತ್ತಾನೆ. ಆದರೆ ಊರಲ್ಲಿರುವ ಅಮ್ಮ, ಹೆಂಡತಿಯನ್ನು ನೋಡಬೇಕು ಎಂಬ ಆಸೆ ಆತನನ್ನು ಜೀವಂತವಾಗಿಟ್ಟಿರುತ್ತದೆ.
ಮರುಭೂಮಿಯ ಪ್ರತಿ ನೀರಿನ ಹನಿಯಲ್ಲೂ ತನ್ನೂರಿನ ನದಿ, ನದಿಯ ಪಕ್ಕದ ಮನೆ, ತನ್ನ ಕುಟುಂಬವನ್ನು ಅವನು ನೆನೆಯುತ್ತಾನೆ. ಹನಿ ನೀರಿಗೂ ತಹತಹಿಸುವ ಹೊತ್ತಲ್ಲಿ ತನ್ನ ಊರು, ತನ್ನವರನ್ನು ನೆನೆದು ಕಣ್ಣು ಹನಿಯಾಗದ ಕ್ಷಣಗಳಿಲ್ಲ. ಊರಲ್ಲಿ ನದಿಯಾಳಕ್ಕೆ ಮುಳುಗಿ ಮರಳು ಸಂಗ್ರಹಿಸುವ ಕಾಯಕ ಮಾಡಿಕೊಂಡಿದ್ದ ನಜೀಬ್ ಮನೆಯಲ್ಲಿರುವುದು ಆತನ ಅಮ್ಮ, ಮುದ್ದಾದ ಹೆಂಡತಿ ಸೈನು (ಅಮಲಾ ಪೌಲ್). ಆಕೆ ಗರ್ಭಿಣಿ. ಮನೆಯಲ್ಲಿನ ಆರ್ಥಿಕ ಸಂಕಷ್ಟ ದೂರ ಮಾಡಲು ಅವನು ಊರು ತೊರೆದು ಗಲ್ಫ್ಗೆ ಹೋಗಲೇಬೇಕಾಗಿದೆ. ಗಲ್ಫ್ನಲ್ಲಿ ದುಡಿದು, ಮನೆಗೆ ಕಳುಹಿಸುವ ಹಣದಿಂದ ಎಲ್ಲ ತಾಪತ್ರಯ ದೂರವಾಗುತ್ತದೆ ಎಂಬ ಭಾವನೆಯೊಂದಿಗೆ ಒಲ್ಲದ ಮನನಸ್ಸಿನಿಂದಲೇ ಅವನ ಕುಟುಂಬ ಅವನನ್ನು ಬೀಳ್ಕೊಟ್ಟಿದ್ದು.
ಆದರೆ ಮರುಭೂಮಿಯಲ್ಲಿನ ಬದುಕು ಅವರು ಅಂದುಕೊಂಡಂತೆ ಇರಲಿಲ್ಲ. ಸಹಾಯಕ ಕೆಲಸಕ್ಕೆ ಎಂದು ಗಲ್ಫ್ಗೆ ಕೇರಳದಿಂದ ವಿಮಾನ ಹತ್ತಿದ್ದ ಇವರು ಮರುಭೂಮಿಯ ಮಧ್ಯೆ ಸಿಕ್ಕಿಹಾಕಿಕೊಂಡಿದ್ದಾರೆ. ಮೈಗೆ ಅಂಟಿದ ಮರಳು, ಸುಡುವ ಶಾಖ. ಕುರಿಮಂದಿಯ ಹಿಂದೆ ಓಡುವ, ಒಂಟೆಗಳಿಗೆ ಆಹಾರ ನೀಡುತ್ತಾ, ಒಣ ಕುಬ್ಬೂಸ್ ಅನ್ನು ನೀರಿನಲ್ಲಿ ಅದ್ದಿ ತಿನ್ನುತ್ತಾ ಇಲ್ಲಿ ಬಂದು ಅದೆಷ್ಟು ಕಾಲವಾಯಿತೋ ಎಂಬುದೂ ತಿಳಿಯದೆ ಬದುಕುತ್ತಿರುವ ನರಕದಂತಿರುವ ಬದುಕು. ತಪ್ಪಿಸಿಕೊಂಡು ಓಡಿ ಹೋಗಲು ಪ್ರಯತ್ನಿಸಿ ಅರಬ್ಬೀ ಕೈಗೆ ಸಿಕ್ಕಿ ಆತನಿಂದ ಹೊಡೆತ ತಿಂದು ಕುರಿಗಳ ಮಧ್ಯೆ ಕಟ್ಟಿಹಾಕಿದ ಗಂಟನ್ನು ಬಿಡಿಸಿ, ಅವುಗಳ ತೊಟ್ಟಿಯಿಂದಲೇ ನೀರು ಕುಡಿಯುತ್ತಿರುವ ನಜೀಬ್.
ಮೊದಲಾರ್ಧ ಮುಗಿಯುವಷ್ಟರಲ್ಲಿ ಪ್ರೇಕ್ಷಕರ ಗಂಟಲು ಒಣಗುತ್ತದೆ. ಇದೆಲ್ಲದರ ನಡುವೆ ಟ್ಯಾಂಕ್ ತುಂಬಿ ಮರಳಿನ ಮೂಲಕ ಹರಿಯುವ ನೀರು, ಊರಿನ ನದಿಯೊಂದಿಗೆ ಬೆಸೆದಂತೆ ಮಾಡಿ ತೋರಿಸಿದ ಫ್ಲಾಶ್ ಬ್ಯಾಕ್, ಗಂಡ ಹೆಂಡತಿಯ ರೊಮ್ಯಾಂಟಿಕ್ ದೃಶ್ಯಗಳು ಹಿತವೆನಿಸುತ್ತದೆ. ಬಲವಾಗಿ ಬೀಸುವ ಮರಳಿನ ಬಿರುಗಾಳಿಗೆ ಮರಳು ದಿಬ್ಬಗಳು ಕುಸಿಯುವುದು, ದೂರದಲ್ಲಿ ನೀರಿರುವಂತೆ ತೋರುವ ಓಯಸಿಸ್ ಹೀಗೆ ಚಿತ್ರದುದ್ದಕ್ಕೂ ಹಲವು ಅದ್ಭುತ ದೃಶ್ಯಗಳಿವೆ.
ನಜೀಬ್ ಅಲ್ಲಿಂದ ತಪ್ಪಿಸಿಕೊಂಡು ಓಡುವಾಗ ವಿಷಪೂರಿತ ಮರಳು ಹಾವುಗಳು ಪಾದದಡಿಯಲ್ಲಿ ಹರಿದಾಡುತ್ತಿವೆ. ಆ ದೃಶ್ಯ ತೆರೆಯ ಮೇಲೆ ಬಂದ ಕೂಡಲೇ ಕಾಲಡಿಯಲ್ಲಿ ಹಾವು ಹರಿದಾಡಿದ ಅನುಭವ. ಹನಿ ನೀರಿಲ್ಲದೆ ಸತ್ತೇ ಹೋಗುತ್ತೇನೆ ಎಂದರೂ ‘ಯೂ ಮಸ್ಟ್ ವಾಕ್’ ಅಂತಾನೆ ಇಬ್ರಾಹಿಂ ಖಾದ್ರಿ (ಜಿಮ್ಮಿ ಜೀನ್ ಲೂಯಿಸ್), ಆಫ್ರಿಕಾದ ಕಟ್ಟು ಮಸ್ತಾದ ಯುವಕ. ಹಕೀಂ ಮತ್ತು ನಜೀಬ್ ಇವರಿಬ್ಬರೂ ವರ್ಷಗಳ ನಂತರ ಮರುಭೂಮಿಯಲ್ಲಿ ಸಿಕ್ಕು, ಅವರಿಬ್ಬರಿಗೂ ಅಲ್ಲಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡುವವನೇ ಖಾದ್ರಿ. ಎಲ್ಲಿ ಕಣ್ಣು ಹಾಯಿಸಿದರೂ ಮರುಭೂಮಿಯೇ ಮರುಭೂಮಿ. ಇಂತಿರುವಾಗ ಇವರಿಬ್ಬರನ್ನೂ ಮರುಭೂಮಿಯಿಂದ ಹೊರಗೆ ದಾಟಿಸುತ್ತೇನೆ ಎಂಬ ಭರವಸೆಯೊಂದಿಗೆ ಜತೆಯಾಗಿ ನಿಲ್ಲುವ ಖಾದ್ರಿ, ಹಕೀಂ ಉರಿ ಬಿಸಿಲಿಗೆ ಹನಿ ನೀರು ಸಿಕ್ಕದೆ ಕುಸಿದು ಬಿದ್ದಾಗ ತನ್ನ ಬೆವರ ಹನಿಯನ್ನು ಬೆರಳಲ್ಲಿಟ್ಟು ಚೀಪಿಸುವ ದೃಶ್ಯ ಎಂಥವರ ಕಣ್ಣಲ್ಲಿಯೂ ನೀರು ತರಿಸುತ್ತದೆ.
ಮರುಭೂಮಿಯಲ್ಲೇ ಜೀವ ಕಳೆದುಕೊಳ್ಳುವ ಹಕೀಂ, ಆತನ ಶವವನ್ನು ಅಲ್ಲೇ ಬಿಟ್ಟು ಬರಬೇಕಾದ ಸ್ಥಿತಿ, ಇನ್ನೇನು ನಜೀಬ್ ಮರುಭೂಮಿಯಿಂದ ರಸ್ತೆ ಸೇರಬಹುದು, ಅದಕ್ಕಾಗಿ ಇನ್ನೂ ಕಿಲೋಮೀಟರ್ಗಳಷ್ಟು ನಡೆಯಬೇಕು ಎಂದು ಲೆಕ್ಕಹಾಕುವಾಗಲೇ ನೀರಿನ ಬಾಟಲಿ ಮೇಲೆ ಖರ್ಜೂರವೊಂದನ್ನು ಸಿಕ್ಕಿಸಿ ಕಾಣೆಯಾಗುವ ಖಾದ್ರಿ. ನಜೀಬ್ ಹೇಗೋ ರಸ್ತೆ ತಲುಪಿ, ಯಾವುದೋ ಪುಣ್ಯಾತ್ಮ ಅರಬ್ಬೀ ಆತನನ್ನು ಮಲಬಾರ್ ಹೋಟೆಲ್ ಮುಂದೆ ಬಿಟ್ಟು ಹೋಗುವ ದೃಶ್ಯ.. ಈ ನಜೀಬ್ ಎಂಬ ಮನುಷ್ಯ ಇಷ್ಟು ನೋವು, ಹತಾಶೆ ಮತ್ತು ಸಂಕಟವನ್ನು ಹೇಗೆ ನಿಭಾಯಿಸಿದರು ಎಂಬುದು ಅಚ್ಚರಿ ಮೂಡಿಸುತ್ತದೆ.
ನಜೀಬ್ ಅವರ ಜೀವನದ ಪ್ರತಿ ಕ್ಷಣವನ್ನು ಸೆರೆಹಿಡಿಯಲು ಇಲ್ಲಿ ನಿರ್ದೇಶಕ ಮತ್ತು ನಟ ಅದೆಷ್ಟು ಶ್ರಮ ವಹಿಸಿದ್ದಾರೆ ಎಂಬುದು ಪ್ರತೀ ಫ್ರೇಮ್ನಲ್ಲಿಯೂ ಪ್ರತಿಫಲಿಸುತ್ತದೆ. ನಟ ಪೃಥ್ವಿರಾಜ್ ಅವರ ಜೀವನದಲ್ಲಿ ನಜೀಬ್ನಂತಹ ಪಾತ್ರ ಮತ್ತೆ ಬರುವುದಿಲ್ಲ. ಇಲ್ಲಿ ಅವರು ನಜೀಬ್ ಎಂಬ ಪಾತ್ರವೇ ಆಗಿಬಿಟ್ಟಿದ್ದಾರೆ. ರಸೂಲ್ ಪೂಕುಟ್ಟಿ ಮತ್ತು ಎ ಆರ್ ರೆಹಮಾನ್ ಮ್ಯಾಜಿಕ್, ಸಿನಿಮಾದಲ್ಲಿ ಆಗಾಗ ಫೀಲ್ ಆಗುತ್ತಿರುತ್ತದೆ. ಬೀಸುವ ಮರಳಿನ ಬಿರುಗಾಳಿಗೆ ನಜೀಬ್ ಅಂಗಿ ತೂಗಾಡುವ ಸದ್ದು ಕೂಡ ಪ್ರೇಕ್ಷಕರನ್ನು ತಲುಪುತ್ತದೆ. ಮರಳಿನಲ್ಲಿನ ಹೆಜ್ಜೆಯ ಸದ್ದು, ಭೂಮಿಯಲ್ಲಿ ಮಳೆಯ ಹನಿಯ ಸದ್ದಿನಿಂದ ಹಿಡಿದು ಮರಳು ಹಾವುಗಳು ತೆವಳುವ ಸದ್ದನ್ನೂ ಸೂಕ್ಷ್ಮವಾಗಿ ಸೆರೆಹಿಡಿಯಲಾಗಿದೆ.
‘ಪೆರಿಯೋನೆ ರೆಹಮಾನೆ’ ಹಾಡು ಸಿನಿಮಾ ಮುಗಿದ ಮೇಲೂ ಹೃದಯದಲ್ಲಿ ನೆಲೆಸುತ್ತದೆ. ಅದೊಂದು ಹಾಡು ಮಾತ್ರವಲ್ಲ, ಪ್ರಾರ್ಥನೆ. ನಜೀಬ್ಗಾಗಿ, ನಜೀಬ್ನಂತಿರುವ ಜೀವಗಳಿಗಾಗಿರುವ ಪ್ರಾರ್ಥನೆಯಾಗಿ ಪ್ರೇಕ್ಷಕ ಹೃದಯದಲ್ಲಿ ಅನುರಣಿಸುತ್ತದೆ. ನಜೀಬ್ ಅರಬ್ಬಿಯ ವಶದಿಂದ ಹೊರಬಂದು ಸ್ವದೇಶಕ್ಕೆ ವಿಮಾನ ಹತ್ತುವ ಸಮಯ. ಕೊನೆಗೂ ನಾನು ಊರಿಗೆ ಮರಳುತ್ತಿದ್ದೇನೆ ಎಂಬ ಖುಷಿ ಅವನ ಕಣ್ಣಲ್ಲಿ ಕಂಡರೆ, ಅದೆಂಥಾ ಬದುಕು! ಎಂಬ ನಿಟ್ಟುಸಿರಿನೊಂದಿಗೆ ನನ್ನ ಕಣ್ಣಂಚಿನಲ್ಲಿ ನೀರು.