ಯುಗಾದಿ ಹಾಗೂ ರಂಜಾನ್‌ ಹಬ್ಬಕ್ಕೆಂದು ಮಲಯಾಳಂನ ವರ್ಷಂಗಲ್ಕು ಶೇಷಂ, ಆವೇಶಂ, ಜೈ ಗಣೇಶ್, ಮತ್ತು ಮಾರಿವಿಲ್ಲಿನ್ ಗೋಪುರಂಗಲ್ ಸಿನಿಮಾಗಳು ರಿಲೀಸ್‌ ಆಗಿವೆ. ಜೊತೆಗೆ ‘ಪ್ರೇಮಲು’, ‘ಮಂಜುಮ್ಮೇಲ್ ಬಾಯ್ಸ್’ ಹಾಗೂ ‘ಆಡುಜೀವಿತಂ’ ಸಿನಿಮಾಗಳು ಉತ್ತಮ ಪ್ರದರ್ಶನ ಕಾಣುತ್ತಿವೆ. ಹೀಗಿರುವಾಗಲೇ ಪಿವಿಆರ್‌, ಮಲಯಾಳಂ ಸಿನಿಮಾಗಳ ಪ್ರದರ್ಶನವನ್ನು ಸಂಪೂರ್ಣವಾಗಿ ರದ್ದು ಮಾಡಿದೆ.

ಭಾರತದ ದೊಡ್ಡ ಸಿನಿಮಾ ಪ್ರದರ್ಶಕರಾದ ಪಿಸಿಆರ್-ಐನಾಕ್ಸ್, ಮಲಯಾಳಂ ಸಿನಿರಂಗಕ್ಕೆ ಶಾಕ್‌ ಕೊಟ್ಟಿದೆ. ಮಲಯಾಳಂ ಸಿನಿಮಾಗಳ ಪ್ರಸಾರ ನಿಲ್ಲಿಸಲು ಪಿವಿಆರ್-ಐನಾಕ್ಸ್‌​ ನಿರ್ಧರಿಸಿದ್ದು, ಟಿಕೆಟ್‌ ಬುಕ್ಕಿಂಗ್‌ ಅನ್ನು ಸಂಪೂರ್ಣವಾಗಿ ನಿಲ್ಲಿಸಿದೆ. ಪಿವಿಆರ್‌ ಐನಾಕ್ಸ್‌ ಹೀಗೆ ಮಾಡಲು ಕಾರಣವೂ ಇದೆ. ಡಿಜಿಟಲ್ ಸೇವಾ ಪೂರೈಕೆದಾರರು ವಿಧಿಸುವ ವರ್ಚ್ಯುಯೆಲ್‌ ಪ್ರಿಂಟ್ ಫೀ (VPF) ವಿರೋಧಿಸಿ ಕೇರಳ ಚಲನಚಿತ್ರ ನಿರ್ಮಾಪಕರ ಸಂಘ ಪಿವಿಆರ್ ಐನಾಕ್ಸ್‌ ಮುಂದೆ ಬೇಡಿಕೆಯನ್ನಿಟ್ಟಿದೆ. ಈ ವಿಷಯವಾಗಿ ಇಬ್ಬರ ನಡುವೆ ಸಮಸ್ಯೆ ಬಗೆಹರಿಯದ ಕಾರಣಕ್ಕೆ ಈಗ ಪಿವಿಆರ್‌ ಐನಾಕ್ಸ್‌ ಈಗ ಮಲಯಾಳಂ ಸಿನಿಮಾಗಳನ್ನು ಪ್ರದರ್ಶನ ಮಾಡದೇ ಇರುವ ನಿರ್ಧಾರ ಮಾಡಿದೆ.

ಕೇರಳದ ನಿರ್ಮಾಪಕರು ಬಹಳ ಸಮಯದಿಂದ ವರ್ಚುವಲ್ ಪ್ರಿಂಟ್ ಫೀ (VPF) ವಿರೋಧಿಸುತ್ತಿದ್ದಾರೆ. ಕಾರಣ ಡಿಜಿಟಲ್ ಸೇವಾ ಪೂರೈಕೆದಾರರು ವಿಧಿಸುವ ಶುಲ್ಕ ಸಿನಿಮಾ ನಿರ್ಮಾಪಕರು ಹಾಗೂ ಥಿಯೇಟರ್ ಮಾಲೀಕರ ಲಾಭವನ್ನು ಕಿತ್ತುಕೊಳ್ಳುತ್ತಿದೆ ಎಂದು. ಹೀಗಾಗಿ ಬಹಳ ಹಿಂದಿನಿಂದಲೂ ಈ ಶುಲ್ಕ ವಿರೋಧಿಸಿ ಮಲಯಾಳಂ ಸಿನಿಮಾ ನಿರ್ಮಾಪಕರು ದನಿ ಎತ್ತಿದ್ದರು. ಅಲ್ಲದೆ, ಶುಲ್ಕದ ವಿಷಯದಲ್ಲಿ ನೀತಿ-ನಿಯಮಗಳನ್ನು ಬದಲಿಸಿಕೊಳ್ಳುವಂತೆ ತಿಳಿಸಿದ್ದರು. ಈ ವಿಷಯ ಈಗ ಪಿವಿಆರ್‌ ಐನಾಕ್ಸ್‌ ಹಾಗೂ ಮಲಯಾಳಂ ಸಿನಿಮಾಗಳ ನಿರ್ಮಾಪಕರ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ.

ಏನಿದು ಸಮಸ್ಯೆ..? | ಸಿನಿಮಾ ಒಂದು ನಿರ್ಮಾಣವಾಗಿ, ಬಿಡುಗಡೆ ಸಿದ್ಧವಾದ ನಂತರ ಅದನ್ನು ಡಿಜಿಟಲ್‌ ಸೇವೆ ಒದಗಿಸುವವರಿಗೆ ಕಳುಹಿಸಬೇಕು. QUBE, UFO, Sony ಸೇರಿದಂತೆ ಇತರ ಡಿಜಿಟಲ್‌ ಸೇವಾ ಪೂರೈಕೆದಾರರಿದ್ದಾರೆ. ಇವರು ಡಿಜಿಟಲ್ ಪ್ರೊಜೆಕ್ಷನ್ ಸಿಸ್ಟಮ್​ಗೆ ಬೇಕಾದ ರೀತಿಯಲ್ಲಿ ಸಿನಿಮಾದ ಫಾರ್ಮ್ಯಾಟ್​ ಅನ್ನು ಬದಲಾಯಿಸುತ್ತಾರೆ. ನಂತರ ಸಿನಿಮಾದ ವರ್ಚ್ಯುಯೆಲ್‌ ಪ್ರಿಂಟ್ ಅನ್ನು ಮಲ್ಟಿಪ್ಲೆಕ್ಸ್‌ನವರಿಗೆ ಕೊಡುತ್ತಾರೆ. ಆಗ ಸಿನಿಮಾ ಥಿಯೇಟರ್​ನಲ್ಲಿ ಪ್ರದರ್ಶನವಾಗುತ್ತದೆ. ಈ ಪ್ರಕ್ರಿಯೆಗಾಗಿ ವರ್ಚುವಲ್ ಪ್ರಿಂಟ್ ಫೀ (VPF) ಎಂಬ ಶುಲ್ಕ ತೆರಬೇಕಾಗುತ್ತದೆ.

QUBE, UFO ನಂತಹ ಡಿಜಿಟಲ್‌ ಸೇವಾ ಪೂರೈಕೆದಾರರು ಸಿಂಗಲ್‌ ಸ್ಕ್ರೀನ್‌ಗಳಿಗೆ ವರ್ಚುವಲ್ ಪ್ರಿಂಟ್ ನೀಡಲು ವಾರಕ್ಕೆ 11,500 ರೂಪಾಯಿ ಶುಲ್ಕ ವಿಧಿಸುತ್ತವೆ. ಒಂದಕ್ಕಿಂತ ಹೆಚ್ಚಿನ ಸ್ಕ್ರೀನ್‌ ಹೊಂದಿರುವ ಮಲ್ಟಿಪ್ಲೆಕ್ಸ್‌ ಗಳಿಗೆ ಈ ಶುಲ್ಕದ ಮೊತ್ತ 24,500 ರೂಪಾಯಿ ಆಗುತ್ತದೆ. ಒಂದು ಪ್ರದರ್ಶನಕ್ಕೆ 450 ರೂಪಾಯಿಯಂತೆ ಹಲವಾರು ಪ್ಲ್ಯಾನ್‌ಗಳು ಈ ಡಿಜಿಟಲ್‌ ಸೇವಾ ಪೂರೈಕೆದಾರರ ಬಳಿ ಇವೆಯಂತೆ. ಹೀಗಾಗಿ ಈ ದುಬಾರಿ ಶುಲ್ಕವನ್ನ ತಪ್ಪಿಸಲು, ಕೇರಳದ ನಿರ್ಮಾಪಕರ ಮಂಡಳಿಯು ಸಾಕಷ್ಟು ತರಬೇತಿ ಪಡೆದು, ತಂತ್ರಜ್ಞಾನದ ಕುರಿತು ಅಧ್ಯಯನ ನಡೆಸಿ, ತಮ್ಮದೇ ಆದ ಡಿಜಿಟಲ್‌ ಸೇವೆ ನೀಡುವ ‘ಪ್ರೊಡ್ಯೂಸರ್ ಡಿಜಿಟಲ್ ಕಂಟೆಂಟ್’ (PDC) ಸಿದ್ಧಪಡಿಸಿದ್ದಾರೆ. ಇದರ ಶುಲ್ಕ ಚಿತ್ರಮಂದಿರಗಳಲ್ಲಿ ವಾರಕ್ಕೆ 3,500 ಆದರೆ, ಜೀವಿತಾವಧಿಗೆ 5,500 ಆಗಿರಲಿದೆಯಂತೆ. ಮಲ್ಟಿಪ್ಲೆಕ್ಸ್‌ಗಳಲ್ಲಿ 7,500 ಆಗಿರುತ್ತದೆ ಎಂದು ಹೇಳಲಾಗುತ್ತಿದೆ. ಕೊಚ್ಚಿಯಲ್ಲಿ ಇತ್ತೀಚೆಗಷ್ಟೇ ಉದ್ಘಾಟನೆಯಾದ 9 ಸ್ಕ್ರೀನ್ ಇರುವ ಪಿವಿಆರ್ ಐನಾಕ್ಸ್‌ನಲ್ಲಿ ತಮ್ಮ ‘ಪ್ರೊಡ್ಯೂಸರ್ ಡಿಜಿಟಲ್ ಕಂಟೆಂಟ್’ ಬಳಕೆ ಮಾಡುವಂತೆ ಮನವಿ ಮಾಡಿದ್ದಾರೆ. ಆದರೆ, ಮಲಯಾಳಂ ಸಿನಿಮಾ ನಿರ್ಮಾಪಕರ ಈ ಮನವಿಗೆ ಪಿವಿಆರ್ ಐನಾಕ್ಸ್‌ ಒಪ್ಪಿಕೊಂಡಿಲ್ಲ.

ಪಿವಿಆರ್-ಐನಾಕ್ಸ್‌ನ ಸಿಇಒ ಕಮಲ್ ಜಿಯಾನ್‌ ಚಂದಾನಿ ಅವರು ಈ ಸಮಸ್ಯೆ ಕುರಿತಾಗಿ ಒಂದು ಹೇಳಿಕೆಯನ್ನ ಬಿಡುಗಡೆ ಮಾಡಿದ್ದಾರೆ. ‘ಕೇರಳ ಚಲನಚಿತ್ರ ನಿರ್ಮಾಪಕರ ಒಕ್ಕೂಟವು ತಮ್ಮ ‘ಪ್ರೊಡ್ಯೂಸರ್ ಡಿಜಿಟಲ್ ಕಂಟೆಂಟ್’ ಅನ್ನು ಮಾತ್ರ ಆಯ್ಕೆ ಮಾಡಲು ಒತ್ತಾಯಿಸುತ್ತಿದೆ. ಇದು ಕಾನೂನುಗಳಿಗೆ ವಿರುದ್ಧವಾಗಿದೆ. ಹೀಗಾಗಿ ಅವರ ಮನವಿಯನ್ನು ಪುರಸ್ಕರಿಸಲು ಸಾಧ್ಯವಾಗುತ್ತಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಈಗಾಗಲೇ ಸೇವೆ ನೀಡುತ್ತಿರುವ QUBE, UFO ನಂತಹ ಡಿಜಿಟಲ್‌ ಸೇವಾ ಪೂರೈಕೆದಾರರ ಜೊತೆ ಒಪ್ಪಂದವಾಗಿದ್ದು, ಅದಕ್ಕೆ ವಿರುದ್ಧವಾಗಿ ಹೋಗಿ ‘ಪ್ರೊಡ್ಯೂಸರ್ ಡಿಜಿಟಲ್ ಕಂಟೆಂಟ್’ನ ಒಪ್ಪಲು ಆಗುವುದಿಲ್ಲ ಎಂದು ಪಿವಿಆರ್‌ ಐನಾಕ್ಸ್‌ ತಿಳಿಸಿದೆ. ಹೀಗಾಗಿ ಮಲಯಾಳಂ ಸಿನಿಮಾ ನಿರ್ಮಾಪಕರು ತಮ್ಮ ಮನವಿಯನ್ನು ಒಪ್ಪುವವರೆಗೆ ಪಿವಿಆರ್‌ ಐನಾಕ್ಸ್‌ ಜತೆ ಸಹಕರಿಸುವುದಿಲ್ಲ ಎಂದು ಪಟ್ಟುಹಿಡಿದು ಕುಳಿತಿದೆ. ಹೀಗಾಗಿ ‘ವರ್ಚುವಲ್ ಪ್ರಿಂಟ್ ಫೀ’ ಸಮಸ್ಯೆ ಈಗ ಮತ್ತಷ್ಟು ಜಟಿಲವಾಗಿದೆ. ಸಮಸ್ಯೆ ಗಂಭೀರವಾಗುತ್ತಿದ್ದಂತೆ ಪಿವಿಆರ್‌ ಐನಾಕ್ಸ್‌ ಮಲಯಾಳಂ ಸಿನಿಮಾ ಪ್ರದರ್ಶನ ಹಾಗೂ ಟಿಕೆಟ್‌ ಬುಕ್ಕಿಂಗ್‌ ಅನ್ನು ರದ್ದು ಮಾಡಿದೆ.

LEAVE A REPLY

Connect with

Please enter your comment!
Please enter your name here