ಅಮೀರ್ ಖಾನ್ ಹಾಗೂ ಅವರ ಮಾಜಿ ಪತ್ನಿ ಕಿರಣ್ ರಾವ್ ಬಾಡಿಗೆ ತಾಯ್ತನದ ಸಹಾಯದಿಂದ ಮಗು ಪಡೆದ ವಿಷಯ ಗೊತ್ತೇ ಇದೆ. ಅವರ ಈ ನಿರ್ಧಾರಕ್ಕೆ ಇದ್ದ ಬಲವಾದ ಕಾರಣ ಏನೆಂದು ಕಿರಣ್ ರಾವ್ ಈಗ ಹಂಚಿಕೊಂಡಿದ್ದಾರೆ.
ಅಮೀರ್ ಖಾನ್ ಎರಡನೇ ಪತ್ನಿ ಹಾಗೂ ನಿರ್ದೇಶಕಿ ಕಿರಣ್ ರಾವ್ ತಮ್ಮ ವಿವಾಹ, ಮಗು ಪಡೆದ ಘಟ್ಟ ಹಾಗೂ ವಿಚ್ಛೇದನದವರೆಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಅಷ್ಟೇ ಅಲ್ಲ ವಿವಾಹಕ್ಕೆ ಮೊದಲು ಹಾಗೂ ವಿವಾಹದ ನಂತರವೂ ಅಮೀರ್ ಖಾನ್, ಅವರ ತಾಯಿ ಹಾಗೂ ಮೊದಲ ಪತ್ನಿ ರೀನಾ ದತ್ತಾ ಜೊತೆಗೂ ಆರೋಗ್ಯಕರ ಬಾಂಧವ್ಯ ಇಟ್ಟುಕೊಂಡಿರುವುದಾಗಿ ಕಿರಣ್ ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಈಗಾಗಲೇ ಅಮೀರ್ ಖಾನ್ರಿಂದ ವಿಚ್ಛೇದನ ಪಡೆದು ದೂರಾಗಿರುವ ಕಿರಣ್ ರಾವ್, ತಮ್ಮ ತಾಯ್ತನದ ಪ್ರಯಾಣದ ಕುರಿತು ಮಾತನಾಡಿದ್ದಾರೆ.
‘ಮದುವೆಯಾದ ಮೊದಲ ಐದು ವರ್ಷಗಳು ನನಗೆ ಸಾಕಷ್ಟು ಸಲ ಗರ್ಭಪಾತವಾಗಿತ್ತು. ಮಗುವನ್ನು ಪಡೆಯಲು ಹಾತೊರೆಯುತ್ತಿದ್ದ ನನಗೆ, ಗರ್ಭವೇ ನಿಲ್ಲುತ್ತಿರಲಿಲ್ಲ. ಆರೋಗ್ಯದ ಸಮಸ್ಯೆಯಿಂದಾಗಿ ತುಂಬಾ ಬಳಲಿದ್ದೆ. ಆದರೂ ನನಗೆ ನನ್ನದೇ ಮಗು ಬೇಕಿತ್ತು. ಹೀಗಾಗಿ ಬೇರೆ ದಾರಿ ಇಲ್ಲದೆ ಬಾಡಿಗೆ ತಾಯ್ತನದ ಮೊರೆ ಹೋಗಬೇಕಾಯಿತು. ‘ದೋಬಿ ಘಾಟ್’ ಸಿನಿಮಾ ಮಾಡಿದಾಗ ಆಜಾದ್ ಹುಟ್ಟಿದ. ಆಗ ತಾಯಿಯಾಗಿ ಮಗನ ಲಾಲನೆ ಪಾಲನೆಯೇ ನನಗೆ ಮುಖ್ಯವಾಗಿತ್ತು. ಆ ಕಾಲಘಟ್ಟವನ್ನು ನಾನು ತುಂಬಾ ಎಂಜಾಯ್ ಮಾಡಿದೆ. ಹೀಗಾಗಿ 10 ವರ್ಷಗಳ ಕಾಲ ಮಗನ ಜೊತೆ ಕಳೆದ ಸಮಯ ನಿಜಕ್ಕೂ ಖುಷಿ ಕೊಟ್ಟಿದೆ’ ಎಂದಿದ್ದಾರೆ.
ನಿರ್ಮಾಪಕಿ ಹಾಗೂ ನಿರ್ದೇಶಕಿಯಾಗಿ ಕೆಲಸ ಮಾಡಿರುವ ಕಿರಣ್ ರಾವ್ ಅವರ ಡೈರೆಕ್ಷನ್ನಲ್ಲಿ ಮೂಡಿ ಬಂದಿರುವ 2ನೇ ಸಿನಿಮಾ ‘ಲಾಪತಾ ಲೇಡಿಸ್’. 10 ವರ್ಷಗಳ ನಂತರ ಕಿರಣ್ ರಾವ್ ಈ ಚಿತ್ರದ ಮೂಲಕ ಕಮ್ಬ್ಯಾಕ್ ಮಾಡಿದ್ದಾರೆ. ಈ ಸಿನಿಮಾದ ಟೀಸರ್ ಹಾಗೂ ಟ್ರೇಲರ್ ರಿಲೀಸ್ ಆಗುತ್ತಿದ್ದಂತೆಯೇ ಸಿಕ್ಕಾಪಟ್ಟೆ ಕುತೂಹಲ ಹುಟ್ಟಿಸಿತ್ತು. ಸಿನಿಮಾ ಬಿಡುಗಡೆಯಾದ ಮೇಲೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು.