ಅಕ್ಷಯ್ ಕುಮಾರ್, ಧನುಷ್ ಮತ್ತು ಸಾರಾ ಅಲಿ ಖಾನ್ ಅಭಿನಯದ ‘ಅತ್ರಂಗಿ ರೇ’ ಹಿಂದಿ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಆನಂದ್ ಎಲ್. ರಾಯ್ ನಿರ್ದೇಶನದ ಸಿನಿಮಾ ಥಿಯೇಟರ್‌ನಲ್ಲಿ ಬಿಡುಗಡೆಯಾಗುತ್ತಿಲ್ಲ. ಡಿಸ್ನೀಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಡಿಸೆಂಬರ್ 24ರಿಂದ ಸ್ಟ್ರೀಮ್ ಆಗಲಿದೆ.
‘ಅತ್ರಂಗಿ ರೇ’ ಹಿಂದಿ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಇದೊಂದು ‘ಮ್ಯಾಜಿಕಲ್ ರಿಯಲಿಸಂ’ ಕಥಾವಸ್ತು ಎನ್ನುವುದು ಪ್ರಾಥಮಿಕವಾಗಿ ಗೋಚರವಾಗುತ್ತದೆ. ಇಲ್ಲಿ ರಿಂಕು (ಸಾರಾ) ಪಾತ್ರಕ್ಕೆ ಪ್ರಸ್ತುತ ದಿನಮಾನ ಹಾಗೂ ಹಿಂದಿನ ಜನ್ಮದ ಶೇಡ್ ಇದ್ದಂತಿದೆ. ಆಕೆ ತಾವೊಬ್ಬ ಪ್ರಬುದ್ಧ ನಟಿಯಾಗಿ ಬೆಳೆಯುತ್ತಿರುವ ಸೂಚನೆ ನೀಡುತ್ತಾರೆ. ಟ್ರೈಲರ್‌ನಲ್ಲಿ ಚಿತ್ರದ ಮೂರೂ ಪ್ರಮುಖ ಪಾತ್ರಗಳ ಎಂಟ್ರಿ ಗ್ರ್ಯಾಂಡ್ ಆಗಿದೆ. ಸಿನಿಮಾದಲ್ಲಿ ತಾವು ಹೆಚ್ಚಿನ ವಿಷಯಗಳನ್ನು ಪ್ರಸ್ತುತಪಡಿಸುವ ಸೂಚನೆ ನೀಡಿದ್ದಾರೆ ನಿರ್ದೇಶಕ ಆನಂದ್ ಎಲ್. ರಾಯ್. ಈ ಚಿತ್ರದೊಂದಿಗೆ ತಮಿಳು ನಟ ಧನುಷ್ ಬಾಲಿವುಡ್‌ಗೆ ಮರಳುತ್ತಿದ್ದಾರೆ. ಟ್ರೈಲರ್‌ನಲ್ಲಿ ಧನುಷ್ ಪಾತ್ರ ತಮಿಳು ಮಾತನಾಡುತ್ತದೆ. ಈ ಮೂಲಕ ನಿರ್ದೇಶಕರು ಈ ಪಾತ್ರದ ಪ್ರಾದೇಷಿಕತೆಯನ್ನು ಗುರುತಿಸುತ್ತಾರೆ.
ಟ್ರೈಲರ್ ಚಿತ್ರದ ಕತೆಯನ್ನು ಬಿಟ್ಟುಕೊಡುವುದಿಲ್ಲ. ಇದು ಥಿಯೇಟರ್‌ನಲ್ಲಿ ವೀಕ್ಷಿಸಲು ಒಳ್ಳೆಯ ಸಿನಿಮಾ ಆದರೂ, ನೇರವಾಗಿ ಓಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. “ಹೌದು, ಜನರು ಇದನ್ನು ದೊಡ್ಡ ಪರದೆಯಲ್ಲಿ ವೀಕ್ಷಿಸಲು ಇಚ್ಛಿಸುತ್ತಾರೆ. ಆದರೆ ಮೊದಲೇ ಒಪ್ಪಂದವಾಗಿದ್ದುದರಿಂದ ಓಟಿಟಿ ಪಾಲಾಗಿದೆ” ಎನ್ನುತ್ತಾರೆ ನಿರ್ದೇಶಕ ಆನಂದ್ ರಾಯ್. ಸಿನಿಮಾ ಸೆಟ್ಟೇರಿದಾಗ, ಈ ಚಿತ್ರದ ತಾರಾಬಳಗದ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. 26ರ ಹರೆಯದ ಸಾರಾಗೆ ಅಕ್ಷಯ್ (54), ಧನುಷ್ (38) ಹೀರೋಗಳು ಎಂದು ಮೂಗು ಮುರಿದಿದ್ದರು. “ಚಿತ್ರ ವೀಕ್ಷಿಸಿದ ನಂತರ ಅವರ ಗೊಂದಲಗಳು ನಿವಾರಣೆಯಾಗಲಿವೆ. ಕತೆಗೆ ಹೊಂದುವಂತಹ ಸ್ಟಾರ್‌ಕಾಸ್ಟ್ ಇದು” ಎನ್ನುತ್ತಾರೆ ನಿರ್ದೇಶಕ ರಾಯ್.