ಸಿದ್ದು ಜೊನ್ನಲಗಡ್ಡ ಮತ್ತು ಅನುಪಮಾ ಪರಮೇಶ್ವರನ್ ಅಭಿನಯದ ತೆಲುಗು ಸಿನಿಮಾ ‘ಟಿಲ್ಲು ಸ್ಕ್ವೇರ್’ ಇತ್ತೀಚೆಗಷ್ಟೆ ತೆರೆಕಂಡು ಸಖತ್ ಸದ್ದು ಮಾಡಿತ್ತು. ಬಾಕ್ಸಾಫೀಸ್ ಕೊಳ್ಳೆ ಹೊಡೆದ ಈ ಚಿತ್ರವನ್ನ ಈಗ ನೀವು ಮನೆಯಲ್ಲೇ ಕುಳಿತು ವೀಕ್ಷಿಸಬಹುದಾಗಿದೆ.
ಕಳೆದ ಕೆಲವು ವಾರಗಳಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದ ತೆಲುಗು ಸಿನಿಮಾ ‘ಟಿಲ್ಲು ಸ್ಕ್ವೇರ್’. ತೆರೆಕಂಡ ಸಾಕಷ್ಟು ಕಡೆಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಂಡು ಗಲ್ಲಾಪೆಟ್ಟಿಗೆಯಲ್ಲಿ ಸಖತ್ ಸದ್ದು ಮಾಡಿತ್ತು. ಈ ಸಿನಿಮಾಗಾಗಿ ಸಿನಿಪ್ರಿಯರು ಕಾತರದಿಂದ ಕಾಯಲು ಕಾರಣ ಒಂದಲ್ಲ, ಎರಡು. ‘ಡಿಜೆ ಟಿಲ್ಲು’ ಚಿತ್ರದ ಸೀಕ್ವೆಲ್ ಆಗಿದ್ದು ಒಂದು ಕಾರಣವಾದರೆ, ಅದರ ನಾಯಕ ಸಿದ್ದು ಜೊನ್ನಲಗಡ್ಡ ಎರಡನೇ ಕಾರಣ. ಇದರ ಜೊತೆಗೆ ಅನುಪಮಾ ಪರಮೆಶ್ವರನ್ ಈ ಸಿನಿಮಾದಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿ ನಟಿಸಿರೋದು ಪಡ್ಡೆ ಹುಡುಗರನ್ನು ಚಿತ್ರಮಂದಿರಕ್ಕೆ ಕರೆತಂದಿತ್ತು. ತೆರೆಕಂಡ ಮೊದಲ ದಿನದಿಂದಲೇ ಗೆಲುವಿನ ಕುದುರೆ ಏರಿದ್ದ ಈ ಸಿನಿಮಾ ಕೋಟಿ ಕೋಟಿ ಬಾಚಿಕೊಂಡಿತು.
‘ಟಿಲ್ಲು ಸ್ಕ್ವೇರ್’ ಆಕ್ಷನ್ ಕಾಮಿಡಿ ರೊಮ್ಯಾಂಟಿಕ್ ಡ್ರಾಮಾ. ಮಲ್ಲಿಕ್ ರಾಮ್ ನಿರ್ದೇಶನದ ಈ ಸಿನಿಮಾ ಈಗಲೂ ಚಿತ್ರಮಂದಿರಗಳಲ್ಲಿ ವೀಕ್ಷಣೆಗೆ ಲಭ್ಯವಿದೆ. ಆದರೆ, ಎಲ್ಲ ಕಡೆ ನೋಡಲು ಸಿಗೋದಿಲ್ಲ. ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆದ ಬೆನ್ನಲ್ಲೇ ಚಿತ್ರದ ಒಟಿಟಿ ರಿಲೀಸ್ ದಿನಾಂಕ ಅನೌನ್ಸ್ ಆಗಿದೆ. ಇದೇ ಏಪ್ರಿಲ್ ಕೊನೆಯ ವಾರದಲ್ಲಿ ನೆಟ್ಫ್ಲಿಕ್ಸ್ನಲ್ಲಿ ‘ಟಿಲ್ಲು ಸ್ಕ್ವೇರ್’ ಸಿನಿಮಾ ರಿಲೀಸ್ ಆಗಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಚಿತ್ರತಂಡ ಹಾಗೂ ನೆಟ್ಫ್ಲಿಕ್ಸ್ ಕಡೆಯಿಂದ ಅಧಿಕೃತ ಮಾಹಿತಿ ಇನ್ನೂ ಲಭ್ಯವಾಗಿಲ್ಲ.










