ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ‘ಕನ್ನಡ ಮಾಧ್ಯಮ’ ಸಿನಿಮಾದ ಕಥೆ ಸಾಗುತ್ತದೆ. ಜನಗಳಿಗೆ ಗೊತ್ತಿಲ್ಲದ ಒಂದಷ್ಟು ವಿಷಯಗಳನ್ನು ಈ ಚಿತ್ರದಲ್ಲಿ ತಿಳಿಸುವ ಪ್ರಯತ್ನ ಮಾಡುತ್ತಿದ್ದೇವೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ಅಖಿಲ್ ಪುತ್ತೂರು.
‘ಕನ್ನಡ ಮಾಧ್ಯಮ’ ಸಿನಿಮಾದ ಹೆಸರೇ ಹೇಳುವಂತೆ ಇದು ಕನ್ನಡ ಮಾಧ್ಯಮದ ಪ್ರಾಮುಖ್ಯತೆ ತಿಳಿಸುವ ಚಿತ್ರವಾಗಿದೆ. ಕಲ್ಕಿ ಪ್ರೊಡಕ್ಷನ್ ನಡಿ ವೆಂಕಟೇಶ್ ಎಸ್ ನಿರ್ಮಾಣ ಮಾಡುತ್ತಿರುವ ಸಿನಿಮಾಗೆ ಅಖಿಲ್ ಪುತ್ತೂರು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ಯುವ ನಿರ್ದೇಶಕನ ಚೊಚ್ಚಲ ಪ್ರಯತ್ನವಾಗಿದೆ. ಅಷ್ಟೇ ಅಲ್ಲ ಸಿನಿಮಾದಲ್ಲಿ ನಿರ್ದೇಶಕ ಯೋಧನ ಪಾತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು. ಹಿರಿಯ ಸಾಹಿತಿ ದೊಡ್ಡರಂಗೇಗೌಡ, ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಚಿತ್ರದ ಮೋಷನ್ ಪೋಸ್ಟರ್ ಅನಾವರಣ ಮಾಡಿ ಇಡೀ ತಂಡಕ್ಕೆ ಶುಭ ಕೋರಿದರು.
ಹಿರಿಯ ಸಾಹಿತಿ ದೊಡ್ಡರಂಗೇಗೌಡ ಮಾತನಾಡಿ, ‘ಎಲ್ಲಿ ಕನ್ನಡ ಅಲ್ಲಿ ದೊಡ್ಡ ರಂಗೇಗೌಡರು. ಆದ್ದರಿಂದ ಕನ್ನಡದ ಯಾವುದೇ ಕಾರ್ಯವಿರಲಿ, ಸಮಾರಂಭವಿರಲಿ ನಾನು ಅಲ್ಲಿ ಇರುತ್ತೇನೆ. ಗೀತೆ ಪ್ರಸ್ತುತಿಯಲ್ಲಿ ನಾನು ಪಾಲ್ಗೊಳ್ಳಲು ಮುಖ್ಯ ಕಾರಣವೇ ಕನ್ನಡ. ಕನ್ನಡವೇ ನನ್ನ ಉಸಿರು, ಕನ್ನಡವೇ ನನ್ನ ಬದುಕು, ಕನ್ನಡವೇ ನನ್ನ ಹೆಸರು, ಕನ್ನಡವೇ ನನ್ನ ಬೆಳಕು ಕೂಡ. ವಿಧಾನಸೌಧದಲ್ಲಿ ಮೊದಲ ಕನ್ನಡ ಬಳಕೆ ಪ್ರಾರಂಭವಾಗಬೇಕು. ಎಷ್ಟೋ ಅಧಿಕಾರಿಗಳು ಕನ್ನಡವನ್ನು ಬಳಸುವುದಿಲ್ಲ. ನಾನು ಆಶಾವಾದಿ. ನನ್ನಲ್ಲಿ ಆಶಾ ಕಿರಣವಿದೆ. ಕನ್ನಡ ಇಂದಲ್ಲ ನಾಳೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲಿದೆ ಎಂಬ ನಂಬಿಕೆ ಇದೆ. ಕನ್ನಡ ನಮ್ಮೆಲ್ಲರ ಚೈತನ್ಯವಾಗಲಿ. ಉಸಿರಾಗಲಿ. ಕನ್ನಡ ಮಾಧ್ಯಮ ಸಿನಿಮಾದಲ್ಲಿ ಈ ಎಲ್ಲಾ ಅಂಶಗಳನ್ನು ಅಳವಡಿಸುವಂತಾಗಲಿ. ಸಮಗ್ರವಾದ ಕನ್ನಡ ಸಮಸ್ಯೆಗಳ ಕೈಪಿಡಿ ತರ ಚಿತ್ರ ಇರಲಿ’ ಎಂದರು.
ನಿರ್ದೇಶಕ ಅಖಿಲ್ ಪುತ್ತೂರು ಮಾತನಾಡಿ, ‘ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಥೆ ಸಾಗುತ್ತದೆ. ಸಿನಿಮಾದಲ್ಲಿ ಎರಡು ಹಾಡುಗಳಿವೆ. ಜನಗಳಿಗೆ ಗೊತ್ತಿಲ್ಲದ ಒಂದಷ್ಟು ವಿಷಯಗಳನ್ನು ಕನ್ನಡ ಮಾಧ್ಯಮ ಚಿತ್ರದಲ್ಲಿ ತಿಳಿಸುತ್ತೇವೆ. ಪ್ರಸ್ತುತ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುತ್ತೇನೆ. ನಾನು ಯೋಧನಾಗಿ ಪಾತ್ರ ಮಾಡುತ್ತಿದ್ದೇನೆ’ ಎಂದು ಸಿನಿಮಾ ಬಗ್ಗೆ ಸ್ವಲ್ಪ ಮಾಹಿತಿ ಹಂಚಿಕೊಂಡರು.
‘ಕನ್ನಡ ಮಾಧ್ಯಮ’ ಸವಾದ್ ಮಂಗಳೂರು ಕಥೆ ಚಿತ್ರಕಥೆ ಹಾಗೂ ಸಂಭಾಷಣೆ ಬರೆಯುವುದರ ಜೊತೆ ಛಾಯಾಗ್ರಹಣದ ಜವಾಬ್ದಾರಿ ಕೂಡ ಹೊತ್ತುಕೊಂಡಿದ್ದಾರೆ. ಟೈಟಲ್ ಹೇಳುವಂತೆ ಕನ್ನಡ ಮಾಧ್ಯಮಗಳ ಪ್ರಾಮುಖ್ಯತೆ ತಿಳಿಸುವ ಚಿತ್ರದಲ್ಲಿ ದೊಡ್ಡರಂಗೇಗೌಡ, ನಾಗೇಂದ್ರ ಅರಸ್, ವಾಣಿ, ಅಖಿಲ್, ಜಾಹ್ನವಿ, ಚಿನ್ಮಯ್, ಶಿವಮೊಗ್ಗ ರಾಮಣ್ಣ, ಪ್ರದೀಪ್ ಕುಮಾರ್ ನಟಿಸುತ್ತಿದ್ದಾರೆ. ಸಿ ವಿಶಾಲ್ ಕೃಷ್ಣ ಕನ್ನಡ ಮಾಧ್ಯಮ ಸಿನಿಮಾಗೆ ಸಂಗೀತ ನೀಡುತ್ತಿದ್ದು, ಕೃಷ್ಣ ಸಂಕಲನ ಚಿತ್ರಕ್ಕೆ ಇರಲಿದೆ. ಮೇ 7ರಿಂದ ಶೂಟಿಂಗ್ ಶುರುವಾಗುತ್ತಿದ್ದು, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.