‘3 ಈಡಿಯಟ್ಸ್’ ಸಿನಿಮಾದಲ್ಲಿ ಅಮೀರ್‌ ಖಾನ್‌ ಹದಿನೆಂಟರ ಹರೆಯದ ಕಾಲೇಜು ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆಗ ಅವರಿಗೆ 44 ವರ್ಷ! ಕಪಿಲ್‌ ಶರ್ಮಾ ಶೋನಲ್ಲಿ ನಟ ತಮ್ಮ ಫಿಟ್‌ನೆಸ್‌ ಗುಟ್ಟು ಹೇಳಿಕೊಂಡಿದ್ದಾರೆ.

ಸಾಮಾನ್ಯವಾಗಿ ಸ್ಟಾರ್‌ ಹಾಗೂ ಸೆಲೆಬ್ರಿಟಿಗಳು ತಮ್ಮ ಫಿಟ್‌ನೆಸ್‌ ಕಾಪಾಡಿಕೊಳ್ಳಲು ಸಮಯದ ಜೊತೆಗೆ ದುಡ್ಡನ್ನೂ ವ್ಯಯಿಸುತ್ತಾರೆ. ಹಣ ಎಂದರೆ ಸಾವಿರಗಳಲ್ಲಿ ಅಲ್ಲ. ಅದು ಲಕ್ಷಗಳಲ್ಲಿರುತ್ತದೆ. ನಟ – ನಟಿಯರು ಆಯ್ಕೆ ಮಾಡಿಕೊಳ್ಳುವ ಸಿನಿಮಾ ಹಾಗೂ ಪಾತ್ರಗಳಿಗೆ ತಕ್ಕಂತೆ ದೇಹವನ್ನು ಹುರಿಗೊಳಿಸುತ್ತಾರೆ. ಹೀಗಾಗಿ ಎಷ್ಟು ಬೇಗ ತೂಕ ಹೆಚ್ಚಿಸಿಕೊಳ್ಳುತ್ತಾರೋ, ಅಷ್ಟೇ ಬೇಗ ಇಳಿಸಿಕೊಳ್ಳುತ್ತಾರೆ. ಇದರಿಂದಾಗಿಯೇ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟ-ನಟಿಯರ ಫಿಟ್ನೆಸ್‌ ಸೀಕ್ರೆಟ್‌ ತಿಳಿಯುವ ಕಾತರ ಇರುತ್ತದೆ. ನಟ ಅಮೀರ್‌ ಅವರಿಗೆ ಈಗ 59 ವರ್ಷ. ವಯಸ್ಸು 60ಕ್ಕೆ ಹತ್ತಿರವಾಗುತ್ತಿದ್ದರೂ ಅವರು ಸಖತ್ ಯಂಗ್ ಆಗಿ ಕಾಣಿಸುತ್ತಾರೆ. ಅವರ ಈ ರೀತಿಯ ಫಿಟ್ನೆಸ್‌ಗೆ ಕಾರಣ ಏನಿರಬಹುದು ಎಂದು ತುಂಬಾ ಜನರು ತಲೆಕೆಡಿಸಿಕೊಂಡಿರುತ್ತಾರೆ. ಅದಕ್ಕೆಲ್ಲ ನಟ ಅಮೀರ್‌ ಖಾನ್‌ ಈಗ ಉತ್ತರ ಕೊಟ್ಟಿದ್ದಾರೆ.

ಅಮೀರ್ ಖಾನ್ ಇಷ್ಟು ಯಂಗ್ ಆಗಿ ಕಾಣೋಕೆ ಅವರ ಆಹಾರ ವಿಧಾನ ಹಾಗೂ ನಿತ್ಯ ಮಾಡೋ ವ್ಯಾಯಾಮ ಕಾರಣ ಇರಬೇಕು ಅಂತ ಎಲ್ಲರೂ ತಿಳಿದಿದ್ದಾರೆ. ಆದರೆ ಇದಾವುದೂ ಕಾರಣ ಅಲ್ಲ ಅಂತಿದ್ದಾರೆ ಅಮೀರ್‌. ಬಾಲಿವುಡ್‌ ಪರ್ಫೆಕ್ಷನಿಸ್ಟ್‌ ಅಮೀರ್‌ ಖಾನ್‌ ತಮ್ಮ ಫಿಟ್ನೆಸ್‌ ಗುಟ್ಟನ್ನು ರಟ್ಟು ಮಾಡಿದ್ದಾರೆ. ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ಗೆ ಅಮೀರ್‌ ಖಾನ್‌ ಅತಿಥಿಯಾಗಿ ಬಂದಿದ್ದರು. ಅಲ್ಲಿ ಹಾಸ್ಯ ಕಲಾವಿದ ಹಾಗೂ ನಿರೂಪಕ ಕಪಿಲ್‌ ಶರ್ಮಾ ಕೇಳುವ ಪ್ರಶ್ನೆಗಳಿಗೆ ಸಖತ್‌ ಪಾಸಿಟೀವ್‌ ಹಾಗೂ ಫನ್ನಿಯಾಗಿಯೇ ಉತ್ತರಿಸಿದ್ದಾರೆ.

’59ನೇ ವಯಸ್ಸಿನಲ್ಲೂ ಇಷ್ಟು ಯಂಗ್ ಆಗಿ ಕಾಣೋದು ಹೇಗೆ?’ ಎಂದು ಕಪಿಲ್‌ ಪ್ರಶ್ನಿಸಿದಾಗ, ಅದಕ್ಕೆ ಅಮೀರ್‌ ಖಾನ್‌ ಕೊಟ್ಟ ಉತ್ತರ ವೀಕ್ಷಕರ ಹುಬ್ಬೇರುವಂತೆ ಮಾಡಿದೆ. ‘ನನ್ನ ಅಪ್ಪನ ಜೀನ್ ಚೆನ್ನಾಗಿತ್ತು. ಹೀಗಾಗಿ ನನಗೆ ಯಾವುದೇ ಕ್ರೆಡಿಟ್‌ ಬೇಡ. ನಾನು ವರ್ಕೌಟ್ ಮಾಡಲ್ಲ. ಮುಖಕ್ಕೆ ಯಾವುದೇ ಕ್ರೀಮ್ ಹಾಕಲ್ಲ. ನಟನಾದ ಮೇಲೆ ನನಗೆ ಶಾಂಪೂ ಬಗ್ಗೆ ಗೊತ್ತಾಗಿದ್ದು. ಅಲ್ಲಿಯವರೆಗೆ ತಲೆ ಕೂದಲಿಗೂ ಸೋಪ್ ಹಾಕುತ್ತಿದ್ದೆ. ನಾನು ಉತ್ತಮವಾಗಿ ಕಾಣಲಿ ಎಂದು ಏನನ್ನೂ ಮಾಡುವುದಿಲ್ಲ. ಸಿನಿಮಾ ವಿಷಯಕ್ಕೆ ಬಂದಾಗ ವರ್ಕೌಟ್ ಮಾಡುತ್ತೇನೆ. ನಾನು ತುಂಬಾ ಸೋಮಾರಿ’ ಎಂದಿದ್ದಾರೆ ಅಮೀರ್‌. ಮಾತನ್ನು ಮುಂದುವರೆಸಿದ ನಟ, ‘3 ಈಡಿಯಟ್ಸ್‌’ ಸಿನಿಮಾ ಮಾಡುವಾಗ ನನಗೆ 44 ವರ್ಷ. ಆ ವಯಸ್ಸಿನಲ್ಲಿ 18 ವರ್ಷದ ಇಂಜಿನಿಯರಿಂಗ್‌ ವಿದ್ಯಾರ್ಥಿಯಾಗಿ ಅಭಿನಯಿಸಿದ್ರೆ, ಜನ ನಗುತ್ತಾರೆ ಬೇರೆ ಸಣ್ಣ ವಯಸ್ಸಿನ ಹುಡುಗರನ್ನು ಹುಡುಕಿಕೊಳ್ಳಿ ಅಂತ ನಿರ್ದೇಶಕ ರಾಜ್‌ಕುಮಾರ್‌ ಹಿರಾನಿ ಅವರಿಗೆ ಹೇಳಿದ್ದೆ. ಆದರೆ, ಕತೆ ಕೇಳಿದ ಮೇಲೆ ನನಗೆ ಪಾತ್ರ ಮಾಡಬೇಕೆನಿಸಿ ಒಪ್ಪಿಕೊಂಡೆ’ ಎಂದು ಆ ದಿನಗಳನ್ನು ಮೆಲುಕು ಹಾಕಿದ್ದಾರೆ.

LEAVE A REPLY

Connect with

Please enter your comment!
Please enter your name here