ಪ್ರಜ್ವಲ್ ದೇವರಾಜ್ ನಾಯಕನಾಗಿ ನಟಿಸುತ್ತಿರುವ ‘ಮಾಫಿಯಾ’ ಸಿನಿಮಾದ ಚಿತ್ರೀಕರಣ ಕಂಠೀರವ ಸ್ಟುಡಿಯೋದಲ್ಲಿ ನಿರ್ಮಿಸಲಾಗಿರುವ ಅದ್ದೂರಿ ಸೆಟ್‌ನಲ್ಲಿ ನಡೆಯುತ್ತಿದೆ. ಕಲಾ ನಿರ್ದೇಶಕ ಶ್ರೀನಿವಾಸ್ ಅವರು ಸ್ಟುಡಿಯೋದಲ್ಲಿ ಪೊಲೀಸ್ ಕಂಟ್ರೋಲ್‌ ರೂಂ ಸೆಟ್ ನಿರ್ಮಾಣ ಮಾಡಿದ್ದಾರೆ.

ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ʼಮಾಫಿಯಾʼ ಚಿತ್ರಕ್ಕೆ ಪೊಲೀಸ್‌ ಕಂಟ್ರೋಲ್‌ ರೂಂ ಸೆಟ್‌ ಹಾಕಲಾಗಿದೆ. ಪೊಲೀಸ್‌ ಪಾತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟ ದೇವರಾಜ್‌ ಮತ್ತು ಅವರ ಪುತ್ರ ಪ್ರಜ್ವಲ್‌ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇಬ್ಬರೂ ಪೊಲೀಸ್‌ ಪಾತ್ರಗಳಲ್ಲಿ ನಟಿಸುತ್ತಿದ್ದು, ಹಾಸ್ಯನಟ ಸಾಧುಕೋಕಿಲ ಸ್ಪೆಷಲ್‌ ಪೊಲೀಸ್‌ ಅಫೀಸರ್‌ ಪಾತ್ರದಲ್ಲಿದ್ದಾರೆ. ಪುತ್ರನ ಜೊತೆ ನಟಿಸುತ್ತಿರುವ ಖುಷಿ ಹಂಚಿಕೊಂಡ ನಟ ದೇವರಾಜ್‌, “ನಾನು, ನನ್ನ ಮಗ ಇಬ್ಬರೂ ಪೊಲೀಸ್ ಅಧಿಕಾರಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೇವೆ.‌ ನಿರ್ದೇಶಕ ಲೋಹಿತ್ ಇನ್ನು ಚಿಕ್ಕ ಹುಡುಗ. ಕೆಲಸ ಮಾಡುವ ರೀತಿ ಅದ್ಭುತ. ನಾನು ಮೊದಲ ದಿನದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೇನೆ. ಇಲ್ಲಿನ ತಂಡ ನೋಡಿದರೆ ಯಾರೂ ಹೊಸಬರು ಅನಿಸುವುದಿಲ್ಲ. ಎಲ್ಲರೂ ನುರಿತ ತಂತ್ರಜ್ಞರಂತೆ ಕಾಣುತ್ತಿದ್ದಾರೆ” ಎಂದು ದೇವರಾಜ್‌ ಚಿತ್ರತಂಡದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಜ್ವಲ್‌ ಜೊತೆ ಹಲವು ಚಿತ್ರಗಳಲ್ಲಿ ನಟಿಸಿರುವ ಸಾಧು ಕೋಕಿಲ ಅವರಿಗಾಗಿ ಈ ಹಿಂದೆ ಒಂದು ಚಿತ್ರವನ್ನೂ ನಿರ್ದೇಶಿಸಿದ್ದಾರೆ.

ಈ ಸೆಟ್‌ನಲ್ಲಿ ಹನ್ನೊಂದು ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಹೀರೋ ಪ್ರಜ್ವಲ್‌ ಅವರಿಗೆ ತಂದೆಯೊಂದಿಗೆ ನಟಿಸುವ ಅವಕಾಶ ವಿಶೇಷ ಅನುಭವ ನೀಡಿದೆ. “ನಾನು ಕಂಟ್ರೋಲ್ ರೂಂ ಸೆಟ್ ಅನ್ನು ಮೊಬೈಲ್‌ನಲ್ಲಿ ನೋಡಿದ್ದೆ. ಎದುರಿಗೆ ನೋಡಿ ಹೆಚ್ಚು ಖುಷಿಯಾಯಿತು. ಅದಕ್ಕಿಂತ ಖುಷಿ ಅಂದರೆ ನನ್ನ ಅಪ್ಪನ ಜೊತೆ ಕೆಲಸ ಮಾಡುತ್ತಿರುವುದು. ಈ ಹಿಂದೆ ‘ಅರ್ಜುನ’ ಚಿತ್ರದಲ್ಲಿ ಇಬ್ಬರು ವಿರುದ್ಧ ಪಾತ್ರಗಳಲ್ಲಿ ನಟಿಸಿದ್ದೆವು. ಆದರೆ ಇದರಲ್ಲಿ ಇಬ್ಬರು ಪೊಲೀಸ್ ಪಾತ್ರದಲ್ಲಿ ಅಭಿನಯಿಸುತ್ತಿದ್ದೇವೆ. ಅವರು ಸೀನಿಯರ್ ಆಫೀಸರ್, ನಾನು ಜ್ಯೂನಿಯರ್. ಸಾಧುಕೋಕಿಲ ಸರ್ ಜೊತೆ ನಟಿಸುತ್ತಿರುವುದು ಸಂತಸ ತಂದಿದೆ. ನಿರ್ದೇಶಕ ಲೋಹಿತ್ ಅವರ ಕಾರ್ಯವೈಖರಿ ಉತ್ತಮವಾಗಿದೆ” ಎಂದರು ಪ್ರಜ್ವಲ್ ದೇವರಾಜ್. “ನನ್ನಂತಹ ಕಿರಿಯ ನಿರ್ದೇಶಕ ಹಿರಿಯ ನಟರಾದ ದೇವರಾಜ್, ಸಾಧುಕೋಕಿಲ ಹಾಗೂ ನಾಯಕ ಪ್ರಜ್ವಲ್ ದೇವರಾಜ್ ಅವರೊಡನೆ ಕೆಲಸ ಮಾಡುತ್ತಿರುವುದು ನಿಜಕ್ಕೂ ಹೆಮ್ಮೆ. ಅದರಲ್ಲೂ ಪ್ರಜ್ವಲ್ ಅವರು ನೀಡುತ್ತಿರುವ ಸಹಕಾರಕ್ಕೆ ನಾನು ಆಭಾರಿ” ಎಂದು ನಿರ್ದೇಶಕ ಲೋಹಿತ್ ಧನ್ಯವಾದ ಹೇಳಿದರು. ಸೆಟ್‌ನಲ್ಲಿ ಚಿತ್ರದ ನಿರ್ಮಾಪಕ ಕುಮಾರ್‌ ಹಾಜರಿದ್ದರು.

LEAVE A REPLY

Connect with

Please enter your comment!
Please enter your name here