ಅಂತರರಾಷ್ಟ್ರೀಯ ಮಟ್ಟದಲ್ಲಿ ಸೆಲೆಬ್ರಿಟಿಗಳ ಸಮಾಗಮವಾಗುವ ಒಂದು ದೊಡ್ಡ ಫ್ಯಾಷನ್ ಈವೆಂಟ್ ಈ ಮೆಟ್ ಗಾಲಾ. ಈ ವರ್ಷ ಮೆಟ್ ಗಾಲಾ 2024ರಲ್ಲಿ ನಟಿ ಆಲಿಯಾ ಭಟ್ ಸೀರೆಯುಟ್ಟು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಇಟ್ಟಿದಾರೆ. ಆಲಿಯಾ ಎರಡನೇ ಸಲ ಇದರಲ್ಲಿ ಭಾಗಿಯಾಗಿದ್ದಾರೆ ಅನ್ನೋದು ವಿಶೇಷ.
ಮೆಟ್ ಗಾಲ… ಪ್ರತಿ ವರ್ಷ ನ್ಯೂಯಾರ್ಕ್ನಲ್ಲಿ ನಡೆಯುವ ಫ್ಯಾಷನ್ ಹಬ್ಬ. ಜಗತ್ತಿನ ಮೂಲೆ ಮೂಲೆಯಿಂದ ಬರುವ ವಿಶೇಷ ಆಹ್ವಾನಿತ ಸೆಲೆಬ್ರಿಟಿಗಳು ಇದರಲ್ಲಿ ಭಾಗಿಯಾಗುತ್ತಾರೆ. ವಿಶೇಷವಾಗಿ ವಿನ್ಯಾಸಿತ ಉಡುಪುಗಳಲ್ಲಿ ಮೆಚ್ಚಿನ ಸೆಲೆಬ್ರಿಟಿಗಳನ್ನು ನೋಡೋದೇ ಒಂದು ಖುಷಿ. ಪ್ರತಿ ಸಲದಂತೆ ಈ ಸಲವೂ ಅದ್ದೂರಿಯಾಗಿಯೇ ಮೆಟ್ ಗಾಲಾ ಆಯೋಜನೆಗೊಂಡಿದೆ. ಬಾಲಿವುಡ್ನ ಪ್ರತಿಭಾನ್ವಿತ ನಟಿ ಆಲಿಯಾ ಭಟ್ ಪಿಸ್ತಾ ಗ್ರೀನ್ ಕಲರ್ ಸೀರೆಯುಟ್ಟು, 23 ಅಡಿ ಉದ್ದದ ಸೆರಗನ್ನು ನೆಲದ ಮೇಲೆ ಬಿಟ್ಟು ಗ್ರ್ಯಾಂಡ್ ಆಗಿ ಮೆಟ್ ಗಾಲ ಈವೆಂಟ್ಗೆ ಎಂಟ್ರಿ ಕೊಟ್ಟಿದ್ದಾರೆ. ಜಾಗತಿಕವಾಗಿ ಜನಪ್ರಿಯವಾದ ಫ್ಯಾಷನ್ ಈವೆಂಟ್ಗೆ ಸೀರೆಯುಡಲು ನಿರ್ಧರಿಸಿದ ಆಲಿಯಾ ಭಟ್ಗೆ ನೆಟ್ಟಿಗರಿಂದ ಮೆಚ್ಚುಗೆಯ ಸುರಿ ಮಳೆಯಾಗುತ್ತಿದೆ. ಮ್ಯಾನ್ಹಟನ್ನಲ್ಲಿರುವ ಗಾಲಾ ಇನ್ಸ್ಟಿಟ್ಯೂಟ್ ಪ್ರತಿ ವರ್ಷ ಈ ಮೆಟ್ ಗಾಲಾ ಆಯೋಜಿಸುತ್ತದೆ. ಈ ಬಾರಿ ಮೆಟ್ ಗಾಲಾದ ಥೀಮ್ ‘ದಿ ಗಾರ್ಡನ್ ಆಫ್ ಟೈಮ್’ ಆಗಿದ್ದರಿಂದ ಆಲಿಯಾ ಸೀರೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಆಲಿಯಾ ಭಟ್ ಧರಿಸಿರುವ ಸೀರೆಯನ್ನು ಭಾರತದ ಖ್ಯಾತ ಫ್ಯಾಷನ್ ಡಿಸೈನರ್ ಸವ್ಯಸಾಚಿ ವಿನ್ಯಾಸ ಮಾಡಿದ್ದಾರೆ. ಫ್ಲೋರಲ್ ಪ್ರಿಂಟ್ ಇರುವ ಈ ಸೀರೆ ಹಾಗೂ ರವಿಕೆಯ ಡಿಸೈನ್ 1920ರ ದಶಕದ್ದಾಗಿದೆ. ಭಾರತೀಯ ಸಂಪ್ರದಾಯಿಕ ಉಡುಗೆಯಲ್ಲಿ ಆಲಿಯಾ ಕಾಣಿಸಿಕೊಳ್ಳುತ್ತಿದ್ದಂತೆಯೇ ಅಂತಾರಾಷ್ಟ್ರೀಯ ಪಾಪರಾಜಿಗಳು ಆಲಿಯಾ ಹೆಸರನ್ನು ಕೂಗಿ ಪ್ರೋತ್ಸಾಹಿಸಿದ್ದಾರೆ. ಸೀರೆಯುಟ್ಟು ಎಂಟ್ರಿ ಕೊಟ್ಟ ಆಲಿಯಾ ಮುಖದಲ್ಲಿ ಆತ್ಮವಿಶ್ವಾಸ ತುಂಬಿ ತುಳುಕುತ್ತಿತ್ತು. ನಮ್ಮ ದೇಶದ ರಾಣಿಯರು ಬಳಸುತ್ತಿದ್ದ ಸೀರೆಯ ಸ್ಟೈಲ್ನಿಂದ ಪ್ರೇರಣೆ ಪಡೆದು ಈ ಸೀರೆಯ ಡಿಸೈನ್ ಮಾಡಲಾಗಿದೆಯಂತೆ. ತಮ್ಮ ಸಂಪ್ರದಾಯಿಕ ಉಡುಗೆ ಕುರಿತಾಗಿ ಆಲಿಯಾ ಭಟ್ ಇನ್ಸ್ಟಾಗ್ರಾಂನಲ್ಲಿ ಖುಷಿ ಹಾಗೂ ಹೆಮ್ಮೆಯಿಂದ ಬರೆದುಕೊಂಡಿದ್ದಾರೆ. ‘ಈ ಉಡುಪನ್ನು ಡಿಸೈನ್ ಮಾಡುವ ಹಿಂದೆ 163 ಮಂದಿಯ ಶ್ರಮವಿದೆ. ಇಷ್ಟೂ ಜನ 1965 ಗಂಟೆ ಶ್ರಮಿಸಿದ್ದಾರೆ. ಅವರೆಲ್ಲರಿಗೂ ನಾನು ಆಭಾರಿಯಾಗಿದ್ದೇನೆ’ ಎಂದು ಧನ್ಯವಾದ ತಿಳಿಸಿದ್ದಾರೆ ಆಲಿಯಾ ಭಟ್.
ಪಿಸ್ತಾ ಹಸಿರು ಮತ್ತು ಬೂದು ಬಣ್ಣದ ಸೀರೆಯು ಆಗಸ ಹಾಗೂ ಸಮುದ್ರವನ್ನು ಪ್ರತಿನಿಧಿಸುತ್ತವೆಯಂತೆ. ಸೀರೆಯ ತುಂಬಾ ಹೂವುಗಳು ಕಂಗೊಳಿಸುತ್ತಿದ್ದು, ತೆಳುವಾದ ನೆಟ್ಟೆಡ್ ಸ್ಯಾರಿಗೆ ಕೋಲ್ಡ್ ಶೋಲ್ಡರ್ ಬ್ಲೌಸ್ ಜೊತೆ ಮ್ಯಾಚ್ ಮಾಡಲಾಗಿತ್ತು. ಈ ಈವೆಂಟ್ನಲ್ಲಿ ಆಲಿಯಾ ಜೊತೆಗೆ ಇಶಾ ಅಂಬಾನಿ ಗೌನ್ನಲ್ಲಿ ಮಿಂಚಿದ್ದಾರೆ. ಮದುವೆಯಾಗಿ ಮಗುವಾದ ನಂತರ ಆಲಿಯಾ ಮಗಳು ರಹಾ ಆರೈಕೆಯಲ್ಲಿ ಬ್ಯುಸಿಯಿದ್ದರು. ಈಗ ‘ಜಿಗ್ರ’ ಸಿನಿಮಾ ಚಿತ್ರೀಕರಣದಲ್ಲಿ ವ್ಯಸ್ತವಾಗಿದ್ದಾರೆ. ವಸನ್ ಬಾಲಾ ನಿರ್ದೇಶನ ಈ ಸಿನಿಮಾವನ್ನು ಆಲಿಯಾ ಹಾಗೂ ಕರಣ್ ಜೋಹರ್ ಒಟ್ಟಾಗಿ ನಿರ್ಮಿಸುತ್ತಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಲವ್ ಆ್ಯಂಡ್ ವಾರ್’ ಚಿತ್ರದಲ್ಲೂ ಆಲಿಯಾ ನಟಿಸುತ್ತಿದ್ದು, ರಣಬೀರ್ ಕಪೂರ್, ವಿಕ್ಕಿ ಕೌಶಲ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.