ಸಾನ್ವಿ ಸುದೀಪ್‌ ಇತ್ತೀಚೆಗೆ ತಾವು ಮಾಡುವ ಇನ್‌ಸ್ಟಾಗ್ರಾಂ ಪೋಸ್ಟ್‌ಗಳಿಂದ ಸಖತ್‌ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೆ ಅವರು ದೇಹದ ತೂಕ ಇಳಿಸಿಕೊಳ್ಳುತ್ತಿರುವ ಜರ್ನಿ ಬಗ್ಗೆ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಅದು ತುಂಬಾ ವೈರಲ್‌ ಆಗಿತ್ತು. ಈಗ ಅವರು ಮಾಡಿರುವ ಲೆಟೆಸ್ಟ್‌ ಪೋಸ್ಟ್‌ ಕಿಚ್ಚನ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟುಹಾಕಿದೆ.

ಸ್ಟಾರ್‌ ಕಿಡ್‌ ಸಾನ್ವಿ ಸುದೀಪ್‌, ಅಪ್ಪ ಸುದೀಪ್‌ ಅವರಂತೆಯೇ ಬಹುಮುಖ ಪ್ರತಿಭೆ. ಒಳ್ಳೆಯ ಗಾಯಕಿ ಆಗೋದರ ಜೊತೆಗೆ ಸಖತ್‌ ಡ್ಯಾನ್ಸರ್‌ ಸಹ ಹೌದು. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯವಾಗಿರುವ ಇವರು ತಮ್ಮ ಲೈಫ್‌ಸ್ಟೈಲ್‌ ಹಾಗೂ ಡ್ಯಾನ್ಸ್‌ ವಿಡಿಯೋಗಳನ್ನ ಹಂಚಿಕೊಳ್ಳುತ್ತಿರುತ್ತಾರೆ. ಜೊತೆಗೆ ಅಪ್ಪನ ಜೊತೆ ಸುತ್ತಾಟದಲ್ಲಿದ್ದಾಗ ತೆಗೆದ ಕೆಲವು ಅಪರೂಪದ ಫೋಟೋಗಳನ್ನೂ ಹಂಚಿಕೊಳ್ಳುತ್ತಿರುತ್ತಾರೆ. ಸಾನ್ವಿಗೆ ಸಾಕಷ್ಟು ಸಲ ಎದುರಾಗುವ ಪ್ರಶ್ನೆ ನೀವು ಚಿತ್ರರಂಗಕ್ಕೆ ಬರುತ್ತೀರಾ ಅನ್ನೋದು. ಆದರೆ, ಈ ಪ್ರಶ್ನೆಗೆ ಇನ್ನೂ ಸರಿಯಾದ ಉತ್ತರ ಮಾತ್ರ ಸಿಕ್ಕಿಲ್ಲ. ಈ ಹಿಂದೆ ಸಾನ್ವಿ ತಮ್ಮ ದೇಹದ ತೂಕ ಇಳಿಸಿಕೊಳ್ಳುವ ವಿಡಿಯೋ ಹಂಚಿಕೊಂಡಾಗಲು ಸಾಕಷ್ಟು ನೆಟ್ಟಿಗರು ಈ ಕುರಿತಾಗಿಯೇ ಪ್ರಶ್ನಿಸಿದ್ದರು. ಈಗ ಆ ಪ್ರಶ್ನೆಗೆ ಉತ್ತರ ಸಿಗುವ ಕಾಲ ಹತ್ತಿರ ಬಂದಿದೆ ಅನಿಸುತ್ತೆ.

ಸಾನ್ವಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಎರಡು ಫೋಟೋಗಳನ್ನು ಹಂಚಿಕೊಂಡಿದ್ದು, ಅದಕ್ಕೆ ಲೈಟ್ಸ್‌, ಕ್ಯಾಮೆರಾ, ಆಕ್ಷನ್‌ ಎಂದು ಕ್ಯಾಪ್ಶನ್‌ ಬರೆದಿದ್ದಾರೆ. ಒಂದು ಫೋಟೋದಲ್ಲಿ ಕೈಯಲ್ಲಿ ಪಿಸ್ತೂಲ್‌ ಹಿಡಿದು ಮಬ್ಬು ಮಬ್ಬಾಗಿರುವ ಕಡೆ ಕುಳಿತಿದ್ದಾರೆ. ಇದರಲ್ಲಿ ಯಾವುದೋ ಚಿತ್ರೀಕರಣ ನಡೆಯುತ್ತಿರುವ ಸೆಟ್‌ ಅನ್ನೋದು ಮಾತ್ರ ತಿಳಿಯುತ್ತೆ. ಆದರೆ, ಯಾವ ಸಿನಿಮಾ ಹಾಗೂ ಯಾರ ಚಿತ್ರ ಅನ್ನೋದು ಗೊತ್ತಾಗುತ್ತಿಲ್ಲ. ಮತ್ತೊಂದು ಫೋಟೋದಲ್ಲಿ ಜೈಲಿನಂತೆ ಕಾಣುವ ರೂಮ್‌ನಲ್ಲಿ ಸಾನ್ವಿ ತನ್ನ ಎದುರು ಕುಳಿತಿರುವ ವ್ಯಕ್ತಿಯ ವಿಚಾರಣೆ ಮಾಡುತ್ತಿರುವಂತೆ ಕಾಣಿಸುತ್ತಿದೆ. ಸಾನ್ವಿ ಪೊಲೀಸ್‌ ಅಧಿಕಾರಿಯ ಪಾತ್ರಧಾರಿಯಂತೆ ಪೋಸ್‌ ಕೊಟ್ಟಿದ್ದಾರೆ. ಇದನ್ನು ನೋಡಿದರೆ ಸಾನ್ವಿ ಯಾವುದಾದರೂ ಸಿನಿಮಾ ಅಥವಾ ಕಿರುಚಿತ್ರದಲ್ಲಿ ನಟಿಸುತ್ತಿರಬಹುದಾ ಎನಿಸುತ್ತದೆ. ಸಾನ್ವಿಯ ಈ ಪೋಸ್ಟ್‌ಗೆ ನೆಟ್ಟಿಗರು ಕಮೆಂಟ್‌ ಮಾಡುತ್ತಿದ್ದಾರೆ. ಸಾನ್ವಿ ಏನೋ ದೊಡ್ಡದಾಗಿ ಸಿಗ್ನಲ್‌ ಕೊಟ್ಟಿದ್ದಾರೆ ಅಂತ ಕೆಲವರು ಬರೆದರೆ, ಮತ್ತೆ ಕೆಲವರು ಶುಭ ಕೋರುತ್ತಾ… ಕಾಯುತ್ತಿದ್ದೇವೆ ಎನ್ನುತ್ತಿದ್ದಾರೆ.

ಒಳ್ಳೆಯ ಗಾಯಕಿಯಾಗಿರುವ ಸಾನ್ವಿ ಈಗಾಗಲೇ ‘ಜಿಮ್ಮಿ’ ಸಿನಿಮಾಗಾಗಿ ಹಾಡು ಹಾಡಿದ್ದಾರೆ. 20 ವರ್ಷದ ಸಾನ್ವಿ ದೇಹದ ತೂಕ ಇಳಿಸುತ್ತಿರೋದು ಹಾಗೂ ಈಗ ಈ ಪೋಸ್ಟ್‌ ಮಾಡಿರೋದನ್ನ ನೋಡಿದರೆ, ಶ್ರೀಘ್ರದಲ್ಲೇ ಈ ಪೋಸ್ಟ್‌ ಹಿಂದೆ ಇರುವ ಸೀಕ್ರೆಟ್‌ ಹೊರ ಬೀಳಲಿದೆ ಅನಿಸುತ್ತೆ.

LEAVE A REPLY

Connect with

Please enter your comment!
Please enter your name here