ಪ್ರತಿಭಾವಂತ ನಟ ಫಹಾದ್ ಫಾಸಿಲ್ ಸದ್ಯ ‘ಆವೇಶಂ’ ಮಲಯಾಳಂ ಸಿನಿಮಾದ ಯಶಸ್ಸಿನ ಖುಷಿಯಲ್ಲಿದ್ದಾರೆ. ಈ ಚಿತ್ರವೀಗ ಓಟಿಟಿಯಲ್ಲಿ ಸ್ಟ್ರೀಮ್ ಆಗಲಿದೆ. ‘ಪುಷ್ಪ’ ಚಿತ್ರದ ಖಳಪಾತ್ರದ ನಂತರ ಅವರಿಗೆ ಇತರೆ ಭಾಷೆಗಳ ಚಿತ್ರಗಳ ವಿಲನ್ ಪಾತ್ರಗಳಿಗೆ ಡಿಮಾಂಡ್ ಹೆಚ್ಚಿದೆ ಎನ್ನಲಾಗುತ್ತಿದೆ.
ಮಲಯಾಳಂನ ಪ್ರತಿಭಾವಂತ ನಟ ಫಹಾದ್ ಫಾಸಿಲ್ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ಖಳನಟ ಎಂದು ಕರೆಸಿಕೊಂಡಿದ್ದಾರೆ. ‘ಪುಷ್ಪ’ ತೆಲುಗು ಚಿತ್ರದಲ್ಲಿ SP ಭನ್ವರ್ ಸಿಂಗ್ ಶೆಖಾವತ್ ಪಾತ್ರಕ್ಕೆ ಅವರು 7 ಕೋಟಿ ರೂಪಾಯಿ ಪಡೆದಿದ್ದಾರೆ ಎನ್ನಲಾಗಿದೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಈ ಬಗ್ಗೆ ಪ್ರಸ್ತಾಪಿಸಿದಾಗ ಫಹಾದ್, ‘ಬದುಕಿನಲ್ಲಿ ಹಣವೊಂದೇ ಎಲ್ಲವೂ ಅಲ್ಲ. ನಾನು ಸಿನಿಮಾ ಮಾಡುತ್ತೇನೆ ಎಂದರೆ ಅಲ್ಲೊಂದು ಎಕ್ಸೈಟ್‌ಮೆಂಟ್ ಇರಬೇಕು. ಪುಷ್ಪ ಚಿತ್ರದಲ್ಲಿ ಸುಕುಮಾರ್ ಸೃಷ್ಟಿಸಿದ ಪಾತ್ರ ಮನಸ್ಸಿಗೆ ಹಿಡಿಸಿತು. ನಾನು ಸದ್ಯ ಭಾರತದಲ್ಲಿ ದುಬಾರಿ ಸಂಭಾವನೆ ಪಡೆಯುವ ವಿಲನ್ ಎನ್ನುವ ವಿಷಯ ನನಗೆ ಗೊತ್ತಿಲ್ಲ!’ ಎಂದಿದ್ದಾರೆ.
ಪ್ರಸ್ತುತ ಫಹಾದ್ ಅವರು ‘ಆವೇಶಂ’ ಮಲಯಾಳಂ ಸಿನಿಮಾದ ಯಶಸ್ಸಿನ ಖುಷಿಯಲ್ಲಿದ್ದಾರೆ. ಕೇವಲ ಹಣಕ್ಕಾಗಿ ತಾವು ಸಿನಿಮಾದಲ್ಲಿ ನಟಿಸುವುದಿಲ್ಲ ಎನ್ನುವ ಬಗ್ಗೆ ಅವರು ಮತ್ತಷ್ಟು ಉದಾಹರಣೆ ಕೊಡುತ್ತಾರೆ. ‘ಕುಂಬಲಂಗಿ ನೈಟ್ಸ್ ಮತ್ತು ಟ್ರಾನ್ಸ್ ಚಿತ್ರಗಳಲ್ಲೂ ನಾನು ದುಡ್ಡು ಮಾಡಿದೆ. ನಟನೆಯಿಂದಲೇ ನಾನು ದುಡ್ಡು ಮಾಡಬೇಕಿಲ್ಲ. 40 ವರ್ಷಗಳಿಂದ ಸಿನಿಮಾ ನಿರ್ಮಿಸುತ್ತಿರುವ ಕುಟುಂಬದಿಂದ ಬಂದಿದ್ದೇನೆ. ನಟಿಸುವುದು ನನಗೆ ಪ್ಯಾಷನ್’ ಎನ್ನುತ್ತಾರವರು. ಸದ್ಯ ಫಹಾದ್ ಅವರು ರಜನೀಕಾಂತ್ ಅಭಿನಯದ ‘ವೆಟ್ಟೈಯಾನ್’ ತಮಿಳು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರ ಪಾತ್ರಕ್ಕೆ ಕಾಮಿಡಿ ಶೇಡ್ ಇದೆ ಎನ್ನಲಾಗಿದೆ. ಅವರ ‘ಪಷ್ಪ 2’ ತೆರೆಗೆ ಸಿದ್ಧವಾಗಿದೆ.