ನಟ ದರ್ಶನ್‌ ‘ಡೆವಿಲ್‌’ ಸಿನಿಮಾದ ಚಿತ್ರೀಕರಣದ ವೇಳೆ ಕೈಗೆ ಪಟ್ಟು ಮಾಡಿಕೊಂಡಿದ್ದರು. ಇದರಿಂದ ಸಿನಿಮಾದ ಶೂಟಿಂಗ್‌ ತಡವಾಗಬಹುದು ಎಂದು ಅಭಿಮಾನಿಗಳಿಗೆ ಬೇಸರವಾಗಿತ್ತು. ಆದರೆ ಚಿತ್ರದ ನಿರ್ದೇಶಕ ಮಿಲನ ಪ್ರಕಾಶ್‌ ಅವರು ಹಾಗಾಗದು ಎನ್ನುವ ಸೂಚನೆ ನೀಡಿದ್ದಾರೆ. ಅಭಿಮಾನಿಗಳನ್ನು ಖುಷಿ ಪಡಿಸಲು ಇದೇ ಮೇ 10ರಂದು ಚಿತ್ರದ ಮೇಕಿಂಗ್‌ ವೀಡಿಯೋ ಬಿಡುಗಡೆ ಮಾಡುತ್ತಿದ್ದಾರೆ.

‘ಕಾಟೇರ’ ಚಿತ್ರದ ದೊಡ್ಡ ಯಶಸ್ಸಿನ ನಂತರ ನಟ ದರ್ಶನ್‌ ಅವರ ‘ಡೆವಿಲ್‌’ ಸಿನಿಮಾ ಘೋಷಣೆಯಾಗಿತ್ತು. ಮಿಲನ ಪ್ರಕಾಶ್‌ ನಿರ್ದೇಶನದ ಚಿತ್ರವಿದು. ಚಿತ್ರೀಕರಣದ ವೇಳೆ ದರ್ಶನ್‌ ಅವರ ಕೈಗೆ ಪಟ್ಟಾಗಿದ್ದು ಸಿನಿಮಾಗೆ ಕೊಂಚ ಹಿನ್ನೆಡೆಯಾಗಿದ್ದು ಹೌದು. ಸಾಧ್ಯವಾದಷ್ಟು ಬೇಗ ಶೂಟಿಂಗ್‌ ಮುಗಿಸಿ ಥಿಯೇಟರ್‌ಗೆ ಬರಬೇಕು ಎಂದುಕೊಂಡಿದ್ದರು ದರ್ಶನ್‌. ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ಹೀರೋನನ್ನು ಮತ್ತೆ ದೊಡ್ಡ ಪರದೆ ಮೇಲೆ ನೋಡಲು ಕಾತುರರಾಗಿದ್ದರು. ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ನಟ ದರ್ಶನ್‌ ಕೈಗೆ ಎಲ್ಬೋ ಬ್ರೇಸ್‌ ಪ್ಲೇಟ್‌ ಹಾಕಿಕೊಂಡು ಕಾಣಿಸಿಕೊಳ್ಳುತ್ತಿದ್ದರು. ಮೊನ್ನೆ ಎಲ್ಬೋ ಬ್ರೇಸ್‌ ಪ್ಲೇಟ್‌ ತೆಗೆದು ಗೆಳೆಯರೊಬ್ಬರೊಂದಿಗೆ ಫೋಟೊದಲ್ಲಿ ದರ್ಶನ್‌ ಕಾಣಿಸಿಕೊಂಡಿದ್ದಾರೆ. ಇದು ಅಭಿಮಾನಿಗಳಲ್ಲಿ ಸಂತಸ ತಂದಿದೆ.

ನಿರ್ದೇಶಕ ಮಿಲನ ಪ್ರಕಾಶ್‌ ಅವರು ‘ಡೆವಿಲ್‌’ ಚಿತ್ರದ ಮೇಕಿಂಗ್‌ ವೀಡಿಯೋ ಇದೇ ಮೇ 10ರಂದು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಇದು ದರ್ಶನ್‌ ಅಭಿಮಾನಿಗಳ ಸಂತಸ ಹೆಚ್ಚಿಸಿದೆ. ಚಿತ್ರದ ಮೊದಲ ಹಂತದ ಚಿತ್ರೀಕರಣಕ್ಕಾಗಿ ಬೃಹತ್‌ ಸೆಟ್‌ ಹಾಕಲಾಗಿತ್ತು. ಮೇಕಿಂಗ್‌ ವೀಡಿಯೋದಲ್ಲಿ ಈ ಸೆಟ್‌ನ ದೃಶ್ಯಗಳು ರಿವೀಲ್‌ ಆಗುವ ಸಾಧ್ಯತೆಗಳಿವೆ. ಚಿತ್ರದ ನಾಯಕಿ ಯಾರು ಎನ್ನುವ ಬಗ್ಗೆ ಚಿತ್ರತಂಡವಿನ್ನೂ ಸುಳಿವು ಬಿಟ್ಟುಕೊಟ್ಟಿಲ್ಲ. ಬಾಲಿವುಡ್‌ ನಟ ಮಹೇಶ್‌ ಮಂಜ್ರೇಕರ್‌ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿರುವುದು ವಿಶೇಷ. ಚಿತ್ರಕ್ಕೆ ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜಿಸುತ್ತಿದ್ದು, ಸುಧಾಕರ್‌ ಜೆ ರಾಜ್‌ ಛಾಯಾಗ್ರಹಣ ಮಾಡುತ್ತಿದ್ದಾರೆ. ‘ಡೆವಿಲ್‌’ ನಂತರ ದರ್ಶನ್‌ ಅವರು ಪ್ರೇಮ್‌ ನಿರ್ದೇಶನದ ಚಿತ್ರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

LEAVE A REPLY

Connect with

Please enter your comment!
Please enter your name here