ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್ರನ್ನು ಚಿತ್ರರಂಗದಿಂದ ನಿಷೇಧಿಸಬೇಕು ಎನ್ನುವ ಕೂಗು ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ ಎಂ ಸುರೇಶ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಟ ದರ್ಶನ್ ಪ್ರಕರಣ ಕನ್ನಡ ಚಿತ್ರರಂಗಕ್ಕೆ ಕಪ್ಪುಚುಕ್ಕೆಯಂತಾಗಿದೆ. ಸದ್ಯ ದರ್ಶನ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ನಿನ್ನೆಯಿಂದಲೇ ದರ್ಶನ್ ವಿರುದ್ಧ ರಾಜ್ಯದ ಹಲವೆಡೆ ಪ್ರತಿಭಟನೆಗಳು ನಡೆಯುತ್ತಿವೆ. ಕೊಲೆ ಆರೋಪ ಹೊತ್ತಿರುವ ದರ್ಶನ್ರನ್ನು ಚಿತ್ರರಂಗದಿಂದ ನಿಷೇಧಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಪಡಿಸುತ್ತಿದ್ದಾರೆ. ಕನ್ನಡ ಚಿತ್ರರಂಗದ ಹಲವರು ಪ್ರಕರಣದ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದು, ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ದರ್ಶನ್ರ ಕೃತ್ಯವನ್ನು ಖಂಡಿಸುತ್ತಿದ್ದಾರೆ. ಚಿತ್ರರಂಗದಿಂದ Ban ಮಾಡಬೇಕೆನ್ನುವ ಕೂಗಿನ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ ಎಂ ಸುರೇಶ್ ಅವರು ಮಾತನಾಡಿದ್ದಾರೆ.
‘ಈ ಕೃತ್ಯ ಅಕ್ಷಮ್ಯ. ಕನ್ನಡ ಚಿತ್ರರಂಗದಲ್ಲಿ ಹಿಂದೆಂದೂ ಇಂತಹ ಘಟನೆ ಆಗಿರಲಿಲ್ಲ. ದೊಡ್ಡ ನಟನಾಗಿ ಬೆಳೆದ ದರ್ಶನ್ ಅವರು ಹೀಗೆ ಮಾಡಿದ್ದರೆ ಅದು ಘೋರ ಅಪರಾಧ. ಒಂದೊಮ್ಮೆ ಆರೋಪ ಸಾಬೀತಾದರೆ ನಿಷೇಧದ ಬಗ್ಗೆ ಗಂಭೀರವಾಗಿ ಆಲೋಚಿಸಲಾಗುವುದು. ನಾವು ಅವರನ್ನು ನಿಷೇಧಿಸುವುದರಿಂದ ಕೊಲೆಯಾದ ವ್ಯಕ್ತಿಯ ಕುಟುಂಬಕ್ಕೆ ನ್ಯಾಯ ಸಿಗುವುದಿಲ್ಲ. ಈ ಬಗ್ಗೆ ಕಲಾವಿದರ ಸಂಘವೂ ಗಟ್ಟಿಯಾದ ನಿರ್ಧಾರ ಕೈಗೊಳ್ಳಬೇಕಿದೆ’ ಎಂದಿದ್ದಾರೆ ಸುರೇಶ್. ವಾಣಿಜ್ಯ ಮಂಡಳಿ ನಿರ್ಮಾಪಕರ ಪರವೂ ನಿಲ್ಲಬೇಕಿದೆ ಎಂದೂ ಹೇಳುತ್ತಾರವರು. ‘ದರ್ಶನ್ರನ್ನು ನಂಬಿ ಚಿತ್ರನಿರ್ಮಾಪಕರು ಕೋಟ್ಯಾಂತರ ರೂಪಾಯಿ ಹಣ ವ್ಯಯಿಸಿರುತ್ತಾರೆ. ವಿತರಕರು, ಪ್ರದರ್ಶಕರೂ ಈ ಸಿನಿಮಾ ವ್ಯವಹಾರದಲ್ಲಿ ಪಾಲುದಾರರು. ಅವರಿಗೂ ಅನ್ಯಾಯವಾಗಕೂಡದು’ ಎನ್ನುವ ಸುರೇಶ್, ನ್ಯಾಯಾಲಯದ ತೀರ್ಪಿಗೆ ಕಾಯುತ್ತಿದ್ದಾರೆ.
ಸುರೇಶ್ ಅವರು ಕನ್ನಡ ಚಿತ್ರರಂಗದ ಕಲಾವಿದರ ಸಂಘದ ನಿಲುವಿನ ಬಗ್ಗೆ ಪ್ರಸ್ತಾಪಿಸಿದ್ದಾರೆ. ಹಾಗೆ ನೋಡಿದರೆ ಕಲಾವಿದರ ಸಂಘದಲ್ಲಿ ಚಟುವಟಿಕೆಗಳು ನಿಂತುಹೋಗಿ ವರ್ಷಗಳೇ ಆಗಿವೆ. ಅಂಬರೀಶ್ ಅವರಿದ್ದಾಗ ಸಭೆ, ಸಮಾರಂಭಗಳು ನಡೆಯುತ್ತಿದ್ದವು. ಕಲಾವಿದರು ಒಂದೆಡೆ ಸೇರುತ್ತಿದ್ದರು. ಈಗ ಸಂಘಟನೆಯಲ್ಲಿ ಸೂಕ್ತ ಪ್ರಾತಿನಿಧ್ಯವೇ ಇಲ್ಲದಂತಾಗಿದೆ. ಹಾಗಾಗಿ ಕಲಾವಿದರ ಸಂಘದಲ್ಲಿ ಯಾವುದೇ ಕಠಿಣ ನಿರ್ಧಾರ ನಿರೀಕ್ಷಿಸುವುದು ಕಷ್ಟಸಾಧ್ಯ. ಇನ್ನು, ನಿರ್ಮಾಪಕರ ಬಗೆಗಿನ ವಾಣಿಜ್ಯ ಮಂಡಳಿ ಅಧ್ಯಕ್ಷರ ಕಾಳಜಿಯನ್ನೂ ತೆಗೆದು ಹಾಕುವಂತಿಲ್ಲ. ಒಟ್ಟಿನಲ್ಲಿ ದರ್ಶನ್ ಅವರ ಸ್ವಯಂಕೃತಾಪರಾಧ ವಾಣಿಜ್ಯ ಮಂಡಳಿಯನ್ನೂ ಇಕ್ಕಟ್ಟಿಗೆ ಸಿಲುಕಿಸಿದೆ ಎಂದು ಹೇಳಬಹುದು.