ವಂಶಿ ನಟಿಸಿ, ನಿರ್ದೇಶಿಸುತ್ತಿರುವ ‘ಫೈರ್‌ ಫ್ಲೈ’ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ನಟಿ, ನಿರ್ದೇಶಕಿ ಶೀತಲ್‌ ಶೆಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ. ನಿವೇದಿತಾ ಶಿವರಾಜಕುಮಾರ್‌ ನಿರ್ಮಾಣದ ಚಿತ್ರವಿದು.

ನಟ ಶಿವರಾಜಕುಮಾರ್‌ ಪುತ್ರಿ ನಿವೇದಿತಾ ನಿರ್ಮಾಣದ ‘ಫೈರ್ ಫ್ಲೈ’ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ನಟಿ ಶೀತಲ್‌ ಶೆಟ್ಟಿ ನಟಿಸುತ್ತಿದ್ದಾರೆ. ನಿರೂಪಕಿಯಾಗಿ ಜನಪ್ರಿಯತೆ ಗಳಿಸಿದ್ದ ಶೀತಲ್‌ ‘ಚೇಸ್‌’, ‘ಪತಿಬೇಕು.com’ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದರು. ‘ವಿಂಡೋ ಸೀಟ್‌’ ಸಿನಿಮಾ ಮೂಲಕ ನಿರ್ದೇಶಕಿಯೂ ಆದ ಅವರು ಇದೀಗ ‘ಫೈರ್ ಫ್ಲೈ’ ಚಿತ್ರದೊಂದಿಗೆ ನಟನೆಗೆ ಮರಳಿದ್ದಾರೆ. ನಿವೇದಿತಾ ಶಿವರಾಜಕುಮಾರ್‌ ಚೊಚ್ಚಲ ನಿರ್ಮಾಣದ ‘ಶ್ರೀ ಮುತ್ತು ಸಿನಿ ಸರ್ವೀಸಸ್‌’ ಬ್ಯಾನರ್‌ನಡಿ ತಯಾರಾಗುತ್ತಿರುವ ಈ ಚಿತ್ರವನ್ನು ವಂಶಿ ನಿರ್ದೇಶಿಸುತ್ತಿದ್ದು, ಅವರೇ ನಾಯಕನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ‘ವಂಶಿ ಅವರು ಸೂಕ್ತ ತಯಾರಿಯೊಂದಿಗೆ ಸೆಟ್‌ಗೆ ಬರುತ್ತಿದ್ದರು. ನಟ – ನಟಿಯರಿಂದ ತಮಗೇನು ಬೇಕು ಎನ್ನುವ ಸ್ಪಷ್ಟವಾದ ಅರಿವು ಅವರಿಗಿರುತ್ತಿತ್ತು. ಕತೆ, ಪಾತ್ರಗಳನ್ನು ಅವರು ಚೆನ್ನಾಗಿ ಕಟ್ಟಿದ್ದಾರೆ. ಹಾಗಾಗಿ ನಮಗೆ ಕೆಲಸ ಸುಲಭವಾಯ್ತು’ ಎನ್ನುತ್ತಾರೆ ಶೀತಲ್‌ ಶೆಟ್ಟಿ.

ಚಿತ್ರ ನಿರ್ಮಿಸುತ್ತಿರುವ ನಿವೇದಿತಾ ಅವರ ಅಭಿರುಚಿಯ ಬಗ್ಗೆಯೂ ಶೀತಲ್‌ ಅವರಿಗೆ ಮೆಚ್ಚುಗೆ ಇದೆ. ‘ನಿವೇದಿತಾ ಅವರು ಚಿತ್ರರಂಗದ ಕುಟುಂಬದ ಹಿನ್ನೆಲೆಯಿಂದ ಬಂದವರು. ಹಾಗಾಗಿ ಅವರಿಗೆ ಸಿನಿಮಾದ ಬಗ್ಗೆ ತಿಳುವಳಿಕೆ ಇದೆ. ಹಾಗಾಗಿಯೇ ಅವರು ಉತ್ತಮ ಅಭಿರುಚಿ ಮತ್ತು ಪ್ರಯೋಗಶೀಲ ಕತೆಯ ಫೈರ್‌ ಫ್ಲೈ ಕತೆ ಆಯ್ಕೆ ಮಾಡಿದ್ದಾರೆ’ ಎನ್ನುತ್ತಾರೆ ಶೀತಲ್‌. ಚಿತ್ರದಲ್ಲಿನ ಶೀತಲ್‌ ಅವರ ಪಾತ್ರದ ಬಗ್ಗೆ ಮಾತನಾಡುವ ನಿರ್ದೇಶಕ ವಂಶಿ, ‘ನಿವೇದಿತಾ ಅವರು ಸಿನಿಮಾದ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಮುದ್ದಾದ ನಟನೆ ಮತ್ತು ತಿಳಿಹಾಸ್ಯದ ಮೂಲಕ ಕೊನೆಯವರೆಗೂ ಕತೆಯ ಜೊತೆಯಲ್ಲಿ ಪಯಣಿಸುತ್ತಾರೆ. ದಿವ್ಯ ಎಂಬ ಪಾತ್ರ ಶೀತಲ್ ಶೆಟ್ಟಿ ಅವರಿಗೆ ಹೇಳಿ ಮಾಡಿಸಿದ ರೀತಿಯಲ್ಲಿತ್ತು. ಅವರು ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ’ ಎಂದಿದ್ದಾರೆ.

ಪುನೀತ್ ರಾಜಕುಮಾರ್‌ ಅವರ ‘ಪಿಆರ್‌ಕೆ ಪ್ರೊಡಕ್ಷನ್ಸ್’ ನಿರ್ಮಾಣದ ‘ಮಾಯಾಬಜಾರ್’ ಸಿನಿಮಾದಲ್ಲಿ ಸಹಾಯಕ ನಿರ್ದೇಶಕನಾಗಿ ವಂಶಿ ಕೆಲಸ ಮಾಡಿದ್ದರು. ‘ಪೆಂಟಗನ್’ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದರು. ಈಗ ನಿವೇದಿತಾ ನಿರ್ಮಾಣ ಮಾಡುತ್ತಿರುವ ಮೊದಲ ಚಿತ್ರಕ್ಕೆ ನಿರ್ದೇಶನ ಮಾಡುವ ಮೂಲಕ ವಂಶಿ ಅವರು ಸ್ವತಂತ್ರ ನಿರ್ದೇಶಕರಾಗಿ ಮತ್ತು ಪೂರ್ಣ ಪ್ರಮಾಣದ ಹೀರೋ ಆಗಿದ್ದಾರೆ. ‘ಫೈರ್ ಫ್ಲೈ’ ಚಿತ್ರಕ್ಕೆ ಜಯ್ ರಾಮ್ ಸಹನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಅಭಿಲಾಷ್ ಕಳತ್ತಿ ಛಾಯಾಗ್ರಹಣ, ಚರಣ್ ರಾಜ್ ಸಂಗೀತ ನಿರ್ದೇಶನ, ರಘು ನಿಡುವಳ್ಳಿ ಸಂಭಾಷಣೆಯ ಸಿನಿಮಾಗಿದೆ. ‘ಫೈರ್ ಫ್ಲೈ’ ಇದೇ ದೀಪಾವಳಿಗೆ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here