ಕನ್ನಡ ಮೂಲದ ಬಹುಭಾಷಾ ನಟ ಅರ್ಜುನ್‌ ಸರ್ಜಾ ಅವರ ತಾರಾಪುತ್ರಿ ಐಶ್ವರ್ಯ ಸರ್ಜಾ ಮತ್ತು ಉಮಾಪತಿ ರಾಮಯ್ಯ ಅವರ ವಿವಾಹ ಮೊನ್ನೆ ಜೂನ್‌ 10ರಂದು ಚೆನ್ನೈನಲ್ಲಿ ನೆರವೇರಿದೆ. ಚೆನ್ನೈನ ಅಂಜನಸುತ ಶ್ರೀ ಯೋಗಾಂಜನೇಯ ದೇವಸ್ಥಾನದಲ್ಲಿ ಯುವ ತಾರೆಯರು ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಜೂನ್‌ 14ರಂದು ಚೆನ್ನೈನ ಖಾಸಗಿ ಹೋಟೆಲ್‌ನಲ್ಲಿ ಆರತಕ್ಷತೆ ನಡೆಯಲಿದೆ.

ಕನ್ನಡ ಮೂಲದ ಜನಪ್ರಿಯ ನಟ ಅರ್ಜುನ್‌ ಸರ್ಜಾ ಮತ್ತು ನಿವೇದಿತಾ ಅರ್ಜುನ್‌ ಅವರ ಹಿರಿಯ ಪುತ್ರಿ ಐಶ್ವರ್ಯ ಅರ್ಜುನ್‌ ಅವರು ನಟ ಉಮಾಪತಿ ರಾಮಯ್ಯ ಅವರನ್ನು ವರಿಸಿದ್ದಾರೆ. ಖ್ಯಾತ ತಮಿಳು ನಟ, ಚಿತ್ರನಿರ್ದೇಶಕ ತಂಬಿ ರಾಮಯ್ಯ ಅವರ ಪುತ್ರ ಉಮಾಪತಿ ಅವರು ಉದಯೋನ್ಮುಖ ತಮಿಳು ಚಿತ್ರನಟ. ಚೆನ್ನೈನ ಅಂಜನಸುತ ಶ್ರೀ ಯೋಗಾಂಜನೇಯ ದೇವಸ್ಥಾನದಲ್ಲಿ ಮೊನ್ನೆ ಜೂನ್ ಹತ್ತರಂದು ವಿವಾಹ ನೆರವೇರಿತು. ಜೂನ್ ಏಳರಂದು ಅರಿಶಿನ‌ ಶಾಸ್ತ್ರದೊಂದಿಗೆ‌ ಮದುವೆ ಕಾರ್ಯಕ್ರಮಗಳು ಆರಂಭವಾದವು. ಆನಂತರ ಸಂಗೀತ್ ಹಾಗೂ ವರಪೂಜಾ ಮಹೋತ್ಸವ ನಡೆಯಿತು. ಸಂಗೀತ್ ಸಮಾರಂಭಕ್ಕೆ ಹೆಸರಾಂತ ಕಲಾ ನಿರ್ದೇಶಕ ಮೋಹನ್ ಅವರು ಆಕರ್ಷಕ ಸೆಟ್ ಹಾಕಿದ್ದರು. ಎರಡು ಕುಟುಂಬಗಳ ಬಂಧುಗಳು ಹಾಗೂ ಹತ್ತಿರದ‌ ಮಿತ್ರರು ಈ ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ಜೂನ್ 14ರಂದು ಚೆನ್ನೈನ ಖಾಸಗಿ ಹೋಟೆಲ್‌ನಲ್ಲಿ ಆರತಕ್ಷತೆ ನಡೆಯಲಿದೆ.

ನಟಿ ಐಶ್ವರ್ಯಾ ಅರ್ಜುನ್ 2013ರಲ್ಲಿ ನಟ ವಿಶಾಲ್ ಜೋಡಿಯಾಗಿ ‘ಪಟ್ಟತ್ತು ಯಾನೈ’ ತಮಿಳು ಆಕ್ಷನ್ ಕಾಮಿಡಿ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ್ದರು. 2018ರಲ್ಲಿ ಅರ್ಜುನ್‌ ಸರ್ಜಾ ಅವರು ತಮ್ಮ ನಿರ್ಮಾಣ, ನಿರ್ದೇಶನದ ‘ಪ್ರೇಮ ಬರಹ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಐಶ್ವರ್ಯರನ್ನು ಪರಿಚಯಿಸಿದರು. ಈ ಸಿನಿಮಾ ತಮಿಳಿನಲ್ಲೂ ತಯಾರಾಗಿತ್ತು. ನಟ ಉಮಾಪತಿ ರಾಮಯ್ಯ 2017ರಲ್ಲಿ ‘ಅಧಗಪ್ಪಟ್ಟತ್ತು ಮಗಜನಂಗಳೆ’ ಚಿತ್ರದ ಮೂಲಕ ತಮಿಳು ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ನಂತರ ಅವರ ತಂದೆ ರಾಮಯ್ಯ ನಿರ್ದೇಶನದ ‘ಮಣಿಯಾರ್ ಕುಟುಂಬಂ’, ‘ತಿರುಮಾನಂ’, ‘ತನ್ನೆ ವಾಂಡಿ’ ಅವರ ನಟನೆಯ ಇತರೆ ತಮಿಳು ಸಿನಿಮಾಗಳು. ‘Survivor Tamil’ ಟೀವಿ ಶೋನಲ್ಲೂ ಅವರು ಕಾಣಿಸಿಕೊಂಡಿದ್ದರು.

LEAVE A REPLY

Connect with

Please enter your comment!
Please enter your name here