ಮುಖೇಶ್ ಕುಮಾರ್ ಸಿಂಗ್ ನಿರ್ದೇಶನದ ಬಹುನಿರೀಕ್ಷಿತ ‘ಕಣ್ಣಪ್ಪ’ ತೆಲುಗು ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಹಿರಿಯ ನಟ ಮೋಹನ್ ಬಾಬು ಅವರು ತಮ್ಮ ತಾರಾಪುತ್ರ ವಿಷ್ಣು ಮಂಚು ಅವರಿಗೆ ನಿರ್ಮಿಸುತ್ತಿರುವ ಚಿತ್ರವಿದು. ಟೀಸರ್‌ನಲ್ಲಿ ಪುರಾಣದ ಬೇಡರ ಕಣ್ಣಪ್ಪನ ಕತೆಯ ಬಗ್ಗೆ ಯಾವುದೇ ಸುಳಿವು ಇಲ್ಲದೆ, ಯುದ್ಧದ ಸನ್ನಿವೇಶಗಳೇ ಹೆಚ್ಚಾಗಿದ್ದು ಕುತೂಹಲ ಮೂಡಿಸಿದೆ.
ವಿಷ್ಣು ಮಂಚು ಅಭಿನಯದ ‘ಕಣ್ಣಪ್ಪ’ ತೆಲುಗು ಸಿನಿಮಾದ ಟೀಸರ್ ರಿಲೀಸ್ ಆಗಿದೆ. ತೆಲುಗು ಚಿತ್ರರಂಗದ ಹಿರಿಯ ನಟ ಮೋಹನ್ ಬಾಬು ಅವರು ಪುತ್ರ ವಿಷ್ಣು ಮಂಚು ಅವರಿಗೆ ನಿರ್ಮಿಸುತ್ತಿರುವ ಚಿತ್ರವಿದು. ಮುಖೇಶ್ ಕುಮಾರ್ ನಿರ್ದೇಶನದ ಪೌರಾಣಿಕ ಚಿತ್ರದಲ್ಲಿ ವಿವಿಧ ಭಾಷೆಗಳ ಜನಪ್ರಿಯ ನಟರು ನಟಿಸುತ್ತಿದ್ದಾರೆ. ಇದು ಪುರಾಣದ ದಂತಕತೆ ಬೇಡರ ಕಣ್ಣಪ್ಪ ಕುರಿತ ಕತೆ ಎಂದೇ ಎಲ್ಲರೂ ಭಾವಿಸಿದ್ದಾರೆ. ಆದರೆ ಟೀಸರ್‌ನಲ್ಲಿ ಈ ಕತೆಯ ಯಾವುದೇ ಕುರುಹುಗಳು ಸಿಗುತ್ತಿಲ್ಲ. ಬದಲಿಗೆ ಟೀಸರ್ ತುಂಬಾ ಆದಿವಾಸಿ ಜನಾಂಗದ ಯುದ್ಧದ ಸನ್ನಿವೇಶಗಳೇ ತುಂಬಿವೆ. ಹೀರೋ ವಿಷ್ಣು ಮಂಚು ಮಾತನಾಡಿ, ‘ಕಣ್ಣಪ್ಪ ಸಿನಿಮಾ ಬರೀ ಇತಿಹಾಸವಲ್ಲ, ಇದು ಎರಡನೇ ಶತಮಾನದ ಚೋಳರ ಕಾಲದ ಕತೆ ಎಂದು ಶಂಕರಾಚಾರ್ಯರು ಹೇಳಿದ್ದರು. 14ನೇ ಶತಮಾನದಲ್ಲಿ ಕವಿ ಧೂರ್ಜಟಿ ಈ ಬಗ್ಗೆ ಬರೆದಿದ್ದಾರೆ. 18ನೇ ಶತಮಾನದಲ್ಲಿ ಬ್ರಿಟಿಷರೂ ಇಂಗ್ಲಿಷ್‌ನಲ್ಲಿ ಇದನ್ನು ಉಲ್ಲೇಖಿಸಿದ್ದಾರೆ. ಇದೆಲ್ಲವನ್ನು ಅಧ್ಯಯನ ನಡೆಸಿ ಈ ಸಿನಿಮಾ ಮಾಡಿದ್ದೇವೆ. ಅಷ್ಟೇ ಎಚ್ಚರಿಕೆಯಿಂದ ಈ ಸಿನಿಮಾ ಮಾಡಿದ್ದೇವೆ’ ಎಂದಿದ್ದಾರೆ.
ನಿರ್ಮಾಪಕ, ನಟ ಮೋಹನ್ ಬಾಬು, ‘ಪರಮೇಶ್ವರನ ಒಪ್ಪಿಗೆಯ ಮೇರೆಗೆ ನಾವು ಈ ಕಣ್ಣಪ್ಪ ಸಿನಿಮಾ ಮಾಡಿದ್ದೇವೆ. ಅಚ್ಚುಕಟ್ಟಾಗಿ ಸಿನಿಮಾ ಮೂಡಿ ಬಂದಿದೆ. ಬಹುಭಾಷೆಯ ತಾರೆಯರು ನಮ್ಮ ಸಿನಿಮಾದಲ್ಲಿ ನಟಿಸಿದ್ದಾರೆ’ ಎನ್ನುತ್ತಾರೆ. ‘ಕಣ್ಣಪ್ಪ ಕೇವಲ ಸಿನಿಮಾ ಅಲ್ಲ. ಇದು ನಮ್ಮ ಇತಿಹಾಸ. ಪ್ರತಿಯೊಬ್ಬರೂ ತಮ್ಮ ತಮ್ಮ ಪಾತ್ರಗಳನ್ನು ಜೀವಿಸಿದ್ದಾರೆ. ಈಗಲೂ ನಾವು ಆ ಪಾತ್ರಗಳಲ್ಲಿ ಉಳಿದಿದ್ದೇವೆ. ನಾವು ನಮ್ಮ ಇತಿಹಾಸವನ್ನು ಹೇಳಬೇಕು. ಎಲ್ಲರೂ ಕಣ್ಣಪ್ಪನನ್ನು ನೋಡಬೇಕು’ ಎನ್ನುವುದು ಹಿರಿಯ ನಟ ಶರತ್ ಕುಮಾರ್ ಅವರ ಮಾತು. ಬಾಲಿವುಡ್ ನಟ ಅಕ್ಷಯ್ ಕುಮಾರ್, ಪ್ರಭಾಸ್, ಮೋಹನ್ ಲಾಲ್, ಮಧುಬಾಲಾ ಚಿತ್ರದ ವಿಶೇಷ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.