‘ಬ್ರಹ್ಮಚಾರಿ’, ‘ಐ ಲವ್ ಯೂ’, ‘ಶಿವಾರ್ಜುನ’ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದ ಅಕ್ಷಿತಾ ಬೋಪಯ್ಯ ತಮಿಳು ಕಿರುತೆರೆಯಲ್ಲಿ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡಿದ್ದರು. ಅಲ್ಲಿನ ಜನಪ್ರಿಯತೆ ಅವರಿಗೆ ತಮಿಳು ಸಿನಿಮಾ ಅವಕಾಶ ತಂದುಕೊಟ್ಟಿದೆ. ‘ಸಿದ್ಲಿಂಗು 2’ ಕನ್ನಡ ಸಿನಿಮಾ ನಿರ್ಮಿಸಿದ್ದ ನಿರ್ಮಾಪಕರ ನೂತನ ತಮಿಳು ಸಿನಿಮಾದಲ್ಲಿ ಅವರು ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಸಿನಿಮಾ ತೆಲುಗು ಭಾಷೆಯಲ್ಲೂ ತೆರೆಕಾಣಲಿದೆ.
ಕೊಡಗು ಮೂಲದ ಯುವತಿ ಅಕ್ಷಿತಾ ಬೋಪಯ್ಯ ಮೂಲತಃ ಭರತನಾಟ್ಯ ಕಲಾವಿದೆ. ನಟನೆಯೆಡೆ ಆಸಕ್ತಿಯಿದ್ದ ಅವರು ‘ರಿಯಲ್ ಪೊಲೀಸ್’ ಕನ್ನಡ ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯವಾಗಿದ್ದರು. ಸಾಯಿಕುಮಾರ್ ನಟಿಸಿದ್ದ ಚಿತ್ರವಿದು. ಇದಾದ ನಂತರ ಕೆಲವು ಸಿನಿಮಾಗಳ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡ ಅವರು ನಾಯಕಿಯಾಗಿ ಬಡ್ತಿ ಪಡೆದಿದ್ದರು. ‘ಬ್ರಹ್ಮಚಾರಿ’, ‘ಐ ಲವ್ ಯೂ’, ‘ಶಿವಾರ್ಜುನ’ ಸಿನಿಮಾಗಳಲ್ಲಿ ನಟಿಸಿದ ಅವರಿಗೆ ತಮಿಳು ಕಿರುತೆರೆಯಿಂದ ಕರೆಬಂದಿತ್ತು. ತಮಿಳು ಧಾರಾವಾಹಿ ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿತು. ಅಲ್ಲಿನ ಜನಪ್ರಿಯತೆ ಅವರಿಗೆ ತಮಿಳು ಸಿನಿಮಾ ಅವಕಾಶ ತಂದುಕೊಟ್ಟಿದೆ. ‘ಸಿದ್ಲಿಂಗು 2’ ಕನ್ನಡ ಸಿನಿಮಾ ನಿರ್ಮಿಸಿದ್ದ ನಿರ್ಮಾಪಕರ ನೂತನ ತಮಿಳು ಸಿನಿಮಾದಲ್ಲಿ ಅವರು ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಸಿನಿಮಾ ತೆಲುಗು ಭಾಷೆಯಲ್ಲೂ ತೆರೆಕಾಣಲಿದೆ. ಸದ್ಯ ಕಿರುತೆರೆಯಿಂದ ಬ್ರೇಕ್ ಪಡೆದಿರುವ ಅಕ್ಷಿತಾ ಸಿನಿಮಾಗೆ ತಯಾರಿ ನಡೆಸಿದ್ದಾರೆ.
‘ಕನ್ನಡ ಸಿನಿಮಾ ಅವಕಾಶಗಳಿಂದಾಗಿಯೇ ನಾನು ನಟಿಯಾಗಿ ಗುರುತಿಸಿಕೊಳ್ಳಲು ಸಾಧ್ಯವಾಗಿದ್ದು. ಮುಂದೆ ತಮಿಳು ಕಿರುತೆರೆಯಲ್ಲಿ ಜನಪ್ರಿಯತೆ ಸಿಕ್ಕಿತು. ಇಲ್ಲಿನ ಖ್ಯಾತಿ ಸಿನಿಮಾ ಅವಕಾಶ ತಂದುಕೊಟ್ಟಿದೆ. ನನಗೆ ಸ್ತ್ರೀಪ್ರಧಾನ ಪಾತ್ರವೊಂದರಲ್ಲಿ ನಟಿಸುವ ಆಸೆಯಿದೆ. ಮುಂದಿನ ದಿನಗಳಲ್ಲಿ ಕನ್ನಡದಲ್ಲೇ ಇಂಥದ್ದೊಂದು ಅವಕಾಶ ಸಿಗಲಿ ಎಂದು ಆಶಿಸುತ್ತೇನೆ’ ಎನ್ನುತ್ತಾರೆ ಅಕ್ಷಿತಾ. ಇನ್ನು ನೂತನ ತಮಿಳು ಚಿತ್ರದಲ್ಲಿ ತಾವು ಅಪೇಕ್ಷೆ ಪಟ್ಟಂಥಹ ಪಾತ್ರವೇ ಅವರಿಗೆ ಸಿಕ್ಕಿದೆ. ಸದ್ಯ ಕೊಡಗಿನ ಸುತ್ತಮುತ್ತ ಸಿನಿಮಾದ ಚಿತ್ರೀಕಣ ನಡೆದಿದೆ. ಅಕ್ಷಿತಾಗೆ ಆರಂಭದಲ್ಲಿ ತಮಿಳು ಭಾಷೆಯ ಅರಿವಿರಲಿಲ್ಲ. ಸೀರಿಯಲ್ ನಟಿಯಾದ ನಂತರ ಭಾಷೆಯನ್ನು ಕರಗತ ಮಾಡಿಕೊಂಡಿದ್ದಾರೆ. ಕನ್ನಡದಲ್ಲಿ ಅವರು ನಟಿಸಿರುವ ‘ಕರ್ನಾಟಕದ ಅಳಿಯ’, ‘ಮಿಸ್ಟರ್ ಆಂಡ್ ಮಿಸೆಸ್’ ಸಿನಿಮಾಗಳು ತೆರೆಗೆ ಸಿದ್ಧವಾಗಿವೆ.