ಕನ್ನಡದ ಸೂಪರ್‌ಹಿಟ್ ಸಿನಿಮಾ ‘ನಾ ನಿನ್ನ ಬಿಡಲಾರೆ’ ಶೀರ್ಷಿಕೆಯಡಿ ನೂತನ ಸಿನಿಮಾ ಸೆಟ್ಟೇರಿದೆ. ‘GHOST 2.0’ ಶೀರ್ಷಿಕೆಯ ಅಡಿಬರಹ. ಹೇಮಂತ್ ಹೆಗಡೆ ನಟಿಸಿ, ನಿರ್ದೇಶಿಸುತ್ತಿರುವ ಚಿತ್ರದ ನಾಯಕಿಯಾಗಿ ಅಪೂರ್ವ ನಟಿಸುತ್ತಿದ್ದಾರೆ. ನಟಿ ಭಾವನಾ ರಾಮಣ್ಣ ಪ್ರೇತಾತ್ಮದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಕಿರುತೆರೆ ಹಾಗೂ ಹಿರಿತೆರೆ ನಟ, ನಿರ್ಮಾಪಕ ಹೇಮಂತ್ ಹೆಗಡೆ ‘ನಾ ನಿನ್ನ ಬಿಡಲಾರೆ’ ಸಿನಿಮಾ ಆರಂಭಿಸಿದ್ದಾರೆ. ದಶಕಗಳ ಹಿಂದೆ ಇದೇ ಶೀರ್ಷಿಕೆಯಡಿ ತೆರೆಗೆ ಬಂದ ಅನಂತನಾಗ್ – ಲಕ್ಷ್ಮಿ ಜೋಡಿಯ ಸಿನಿಮಾ ದೊಡ್ಡ ಯಶಸ್ಸು ಕಂಡಿತ್ತು. ಹೇಮಂತ್ ಹೆಗಡೆ ಈ ಶೀರ್ಷಿಕೆಯನ್ನು ತಮ್ಮ ಸಿನಿಮಾಗೆ ನಾಮಕರಣ ಮಾಡಿದ್ದಾರೆ. ‘GHOST 2.0’ ಶೀರ್ಷಿಕೆಯ ಅಡಿಬರಹ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ ಎಂ ಸುರೇಶ್ ಸಿನಿಮಾಗೆ ಆರಂಭ ಫಲಕ ತೋರಿಸಿದರೆ, ನೈಸ್ ಸಂಸ್ಥೆ ಮುಖ್ಯಸ್ಥ, ಚಿತ್ರನಿರ್ಮಾಪಕ ಅಶೋಕ್ ಖೇಣಿ ಕ್ಯಾಮೆರಾ ಚಾಲನೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಚಿತ್ರದ ನಾಯಕಿಯಾಗಿ ಅಪೂರ್ವ ನಟಿಸುತ್ತಿದ್ದು, ನಟಿ ಭಾವನಾ ರಾಮಣ್ಣ ಪ್ರೇತಾತ್ಮದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಚಿತ್ರದ ಬಗ್ಗೆ ಮಾತನಾಡಿದ ಹೇಮಂತ್ ಹೆಗಡೆ, ‘ಇದೊಂದು ಹಾರರ್ ಜಾನರ್ ಚಿತ್ರ. ಹಿಂದಿನ ಸೂಪರ್ ಹಿಟ್ ಚಲನಚಿತ್ರದ ಶೀರ್ಷಿಕೆ ನಮ್ಮ ಚಿತ್ರದ ಕಥೆಗೆ ಸೂಕ್ತವಾಗಿದೆ. ಹಾಗಾಗಿ ಈ ಶೀರ್ಷಿಕೆ ಆಯ್ಕೆಮಾಡಿದ್ದೇವೆ. ಆದರೆ ಹಳೆಯ ಚಿತ್ರದ ಕತೆಗೂ, ನಮ್ಮ ಚಿತ್ರದ ಕತೆಗೂ ಹೋಲಿಕೆ ಇಲ್ಲ. ಕನ್ನಡದಲ್ಲಿ ಒಂದೊಳ್ಳೆ ಹಾರಾರ್ ಚಿತ್ರ ಬಂದು ಬಹಳ ಸಮಯವಾಗಿದೆ. ಹಾಗಾಗಿ ಹಾರಾರ್ ಜಾನರ್ ಆಯ್ಕೆ ಮಾಡಿಕೊಂಡಿದ್ದೇವೆ’ ಎನ್ನುತ್ತಾರೆ. ಹೊಸನಗರದ ಬಳಿಯ ನೂರೈವತ್ತು ವರ್ಷಗಳ ಹಳೆಯ ಮನೆಯಲ್ಲಿ ಮೂವತ್ತು ದಿನಗಳ ಕಾಲ ಚಿತ್ರೀಕರಣ ನಡೆಯಲಿದೆಯಂತೆ. ಜುಲೈ ಕೊನೆಗೆ ಚಿತ್ರೀಕರಣ ಆರಂಭವಾಗಲಿದೆ. ಕಿಶೋರ್, ಮಕರಂದ ದೇಶಪಾಂಡೆ, ಶಂಕರ್ ಅಶ್ವಥ್, ಶರತ್ ಲೋಹಿತಾಶ್ವ, ಸುಚೇಂದ್ರ ಪ್ರಸಾದ್ ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ. ವಾಸುಕಿ ವೈಭವ್ ಸಂಗೀತ ಸಂಯೋಜಿಸಲಿದ್ದು, ಕೃಷ್ಣ ಬಂಜನ್ ಛಾಯಾಗ್ರಹಣ ನಿರ್ವಹಿಸಲಿದ್ದಾರೆ. ಅನ್ವಿತಾ ಆರ್ಟ್ಸ್ ಲಾಂಛನದಲ್ಲಿ ಶಶಿಕಿರಣ್ ರಂಗನಾಥ್, ಕಿರಣ್ ನಾಗರಾಜ್ ಹಾಗೂ ಬಾಲಕೃಷ್ಣ ಪೆರುಂಬಲ ಚಿತ್ರ ನಿರ್ಮಿಸುತ್ತಿದ್ದಾರೆ.