ಕಳರಿಪಯಟ್ಟು ಯುದ್ಧ ಕಲೆ ಕುರಿತು ರಂಜನ್ ಮುಲಾರತ್ ‘ಲುಕ್ ಬ್ಯಾಕ್’ ಸಿನಿಮಾ ರೂಪಿಸಿದ್ದಾರೆ. ನಿರ್ಮಾಣ, ನಿರ್ದೇಶನದ ಜೊತೆ ಚಿತ್ರದ ಪ್ರಮುಖ ಪಾತ್ರದಲ್ಲಿ ಅವರು ಅಭಿನಯಿಸಿದ್ದಾರೆ. ಹಂಸಲೇಖ ಸಂಗೀತ ಚಿತ್ರಕ್ಕಿದೆ. ಟ್ರೇಲರ್ ರಿಲೀಸ್ ಆಗಿದ್ದು, ಇದೇ ಸೆಪ್ಟೆಂಬರ್ 27ರಂದು ಸಿನಿಮಾ ತೆರೆಕಾಣುತ್ತಿದೆ.
ಕೇರಳದಲ್ಲಿ ಹೆಚ್ಚಾಗಿ ಬಳಕೆಯಲ್ಲಿರುವ ಕಳರಿಪಯಟ್ಟು ಯುದ್ದ ಕಲೆ ಕುರಿತಾದ ಸಿನಿಮಾ ‘ಲುಕ್ ಬ್ಯಾಕ್’ ತೆರೆಗೆ ಸಿದ್ಧವಾಗಿದೆ. ರಂಜನ್ ಮುಲಾರತ್ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿ, ನಟಿಸಿದ್ದಾರೆ. ಕನ್ನಡ, ಮಲಯಾಳಂ, ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಸಿನಿಮಾ ತಯಾರಾಗಿದ್ದು, ಕನ್ನಡ ಅವತರಣಿಕೆಗೆ ‘ನೆನೆ ಮನವೆ’ ಎನ್ನುವ ಹೆಸರಿದೆ. ಟ್ರೇಲರ್ ರಿಲೀಸ್ ಆಗಿದ್ದು, ಇದೇ ಸೆಪ್ಟೆಂಬರ್ 27ರಂದು ಕರ್ನಾಟಕ ಮತ್ತು ಕೇರಳದಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಉಪಾಸನಾ ಗುರ್ಜನ್ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕಳರಿಪಯಟ್ಟು ಕಲೆಯಲ್ಲಿ ಪದ್ಮಶ್ರೀ ಪುರಸ್ಕಾರ ಪಡೆದಿರುವ 84 ವರ್ಷದ ಮೀನಾಕ್ಷಿಯಮ್ಮ ಚಿತ್ರದಲ್ಲಿ ನಟಿಸಿರುವುದು ವಿಶೇಷ. ಹಿರಿಯ ಸಂಗೀತ ಸಂಯೋಜಕ, ಗೀತರಚನೆಕಾರ ಹಂಸಲೇಖ ಅವರು ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ರಂಜನ್ ಮುಲಾರತ್ ಅವರ ನೆರವಿಗೆ ನಿಂತಿದ್ದಾರೆ.
ತಮ್ಮ ಸಿನಿಮಾ ಬಗ್ಗೆ ಮಾತನಾಡುವ ರಂಜನ್ ಮುಲಾರತ್, ‘ಕಳರಿಪಯಟ್ಟು ಕಲೆ ಮಾರ್ಷಲ್ ಆರ್ಟ್ಸ್‌ನ ಒಂದು ಭಾಗ. ಕತೆ ಎಲ್ಲಾ ಭಾಷೆಗಳಿಗೆ ಆಪ್ತವಾಗಿದ್ದರಿಂದ ಇಂಗ್ಲೀಷ್‌ನಲ್ಲಿ ಸಂಭಾಷಣೆ ಇರುವ ಟ್ರೇಲರ್ ರಿಲೀಸ್ ಮಾಡಲಾಗಿದೆ. ಚಿತ್ರದಲ್ಲಿ ಕಳರಿಪಯಟ್ಟು ಕಲೆಯೇ ಹೀರೋ ಎಂದು ಹೇಳಬಹುದು. ಕಳರಿಪಯಟ್ಟು ಕಲೆ ಕರಗತ ಮಾಡಿಕೊಂಡಿರುವ ಪದ್ಮಶ್ರೀ ಪುರಸ್ಕೃತ ಮೀನಾಕ್ಷಿಯಮ್ಮ ಚಿತ್ರದಲ್ಲಿರುವುದು ನಮ್ಮ ಬಲ ಹೆಚ್ಚಿಸಿದೆ. ಇನ್ನು ಚಿತ್ರದ ಹೃದಯ, ಸಂಗೀತ ಎನ್ನಬಹುದು. ಹಂಸಲೇಖ ಸೇರಿದಂತೆ ನಾಲ್ಕು ವಿದೇಶಿ ಸಂಗೀತ ನಿರ್ದೇಶಕರು ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ಇದೇ ಸೆಪ್ಟೆಂಬರ್ 27ರಂದು ಕರ್ನಾಟಕ ಮತ್ತುಕೇರಳದಲ್ಲಿ ಸಿನಿಮಾ ತೆರೆಕಾಣಲಿದೆ. ನಂತರದ ದಿನಗಳಲ್ಲಿ ದೇಶ, ವಿದೇಶಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲಿದ್ದೇವೆ. ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಚಿತ್ರವಿದು’ ಎನ್ನುತ್ತಾರೆ.
ಟ್ರೇಲರ್ ಬಿಡುಗಡೆ ಮಾಡಿದ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ, ‘ಭಾರತೀಯ ಪ್ರಾಚೀನ ಕಲೆಯ ಸಿನಿಮಾ ಮಾಡಿರುವ ಉದ್ದೇಶ ಚೆನ್ನಾಗಿದೆ. ಹಾಡುಗಳಿಗೆ ಕೆಲಸ ಮಾಡಿಕೊಟ್ಟಿದ್ದೇನೆ. ಕಳರಿ ಅಂದರೆ ಕಳೆಯನ್ನು ಕಿತ್ತು ಹಾಕು ಎನ್ನಬಹುದು. ಮೈಮೇಲೆ, ಮನಸಿನ ಮೇಲೆ ಅರಿವಿರಬೇಕು ಎಂಬುದು ಚಿತ್ರದ ಆಶಯವಾಗಿದೆ. ಪ್ರತೀಕಾರದ ಕತೆ ಒಳಗೊಂಡಿದ್ದು, ಕ್ಲೈಮ್ಯಾಕ್ಸ್‌ನಲ್ಲಿ ಕ್ಷಮಿಸು ಎಂದು ಹೇಳಲಾಗಿದೆ. ಇಂದಿನ ಹೆಣ್ಣು ಮಕ್ಕಳು ರಕ್ಷಣೆಯ ದೃಷ್ಠಿಯಿಂದ ಈ ಕಲೆಯನ್ನು ಕಲಿಯಬೇಕು’ ಎಂದು ಸಲಹೆ ಮಾಡಿದರು.
ಚಿತ್ರದ ನಾಯಕಿಯಾಗಿ ಪ್ರಮುಖ ಪಾತ್ರ ನಿರ್ವಹಿಸಿರುವ ಉಪಾಸನಾ ಗುರ್ಜರ್, ‘ನಿರ್ದೇಶಕರು ಕಥೆ ಹೇಳಿದಾಗ ಭಯ ಆಯ್ತು. ನನಗಿದು ತುಂಬಾ ಸ್ಪೆಷಲ್ ಸಿನಿಮಾ. ಅಜ್ಜಿ ಮನೆಯಲ್ಲಿ ಶೂಟ್ ಮಾಡಲಾಗಿದೆ. ಕಳರಿ ಪಯಟ್ಟು ಟ್ರೇನಿಂಗ್ ಪಡೆದು ಪಾತ್ರ ಮಾಡಿದ್ದೇನೆ. ಇಂದಿನ ಯುಗದಲ್ಲಿ ಮಹಿಳೆಯರು ಸ್ವರಕ್ಷಣೆ ಮಾಡಿಕೊಳ್ಳಲು ಕಳರಿ ಉತ್ತಮ ಆಯ್ಕೆ ಹಾಗೂ ಆರೋಗ್ಯಕ್ಕೂ ಇದು ಒಳ್ಳೆಯ ಕಲೆ ಆಗಿದೆ’ ಎನ್ನುತ್ತಾರೆ. ಚಿತ್ರದಲ್ಲಿ ಹತ್ತು ಫೈಟ್ಸ್ ಇವೆ. ಕೇರಳ ಮತ್ತು ಆಗುಂಬೆಯಲ್ಲಿ ಒಂದು ತಿಂಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಕೃಷ್ಣ ನಾಯ್ಕರ್ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ನಿರ್ದೇಶಕರ ಪುತ್ರ ಆರ್ಯನಾಥ್ ಮುಲಾರತ್ ಮತ್ತು ಮಡದಿ ಶೈನಿ ರಂಜನ್ ಸುದ್ದಿಗೋಷ್ಠಿಯಲ್ಲಿ ಚಿತ್ರದ ಕುರಿತಾಗಿ ತಮ್ಮ ಅನುಭವ ಹಂಚಿಕೊಂಡರು.