ನಟ ರಾಘವೇಂದ್ರ ರಾಜಕುಮಾರ್ ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಫ್ಯಾಮಿಲಿ ಫೋಟೊವೊಂದನ್ನು ಹಂಚಿಕೊಂಡು ಪುನೀತ್‌ರನ್ನು ಸ್ಮರಿಸಿದ್ದಾರೆ. ಈ ಫೋಟೋದಲ್ಲಿ ಪುಟಾಣಿ ಪುನೀತ್‌ ಇದ್ದು, ಅಪ್ಪು ಅಭಿಮಾನಿಗಳು ಸಂತಾಪ ವ್ಯಕ್ತಪಡಿಸುತ್ತಾ ರಾಘಣ್ಣನಿಗೆ ಧೈರ್ಯ ತುಂಬಿದ್ದಾರೆ.

ನಟ ರಾಘವೇಂದ್ರ ರಾಜಕುಮಾರ್‌ ಅವರು ತಮ್ಮ ಕಿರಿಯ ಸಹೋದರ ಪುನೀತ್‌ ಅಗಲಿಕೆಯ ನೋವಿನಲ್ಲಿದ್ದಾರೆ. ಮಾಧ್ಯಮಗಳೊಂದಿಗೆ ಅವರು ಧೈರ್ಯದಿಂದ ಮಾತನಾಡಿದರೂ ಆಂತರ್ಯದಲ್ಲಿ ಅವರಿಗೆ ಸಂಕಟವಿದ್ದೇ ಇದೆ. ಈ ನೋವಿನಿಂದ ಹೊರಬರಲು ಸಾಧ್ಯವಾಗದ ಅವರು ದಿನವೂ ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಪುನೀತ್ ಜೊತೆಗಿನ ತಮ್ಮ ಫೋಟೊಗಳು, ವೀಡಿಯೋ ಗಳನ್ನು ಪೋಸ್ಟ್ ಮಾಡಿ ಸಂಕಟ ತೋಡಿಕೊಳ್ಳುತ್ತಿದ್ದಾರೆ. ಇಂದು ಅವರು ಎಫ್‌ಬಿಯಲ್ಲಿ ಫ್ಯಾಮಿಲಿ ಫೋಟೊವೊಂದನ್ನು ಹಂಚಿಕೊಂಡು, “ಚಿಕ್ಕವನೇ ಬೇಗ ಹೋಗಿಬಿಟ್ಟ. ಈ ಫೋಟೊ ನೋಡಿದಾಗ ಕಣ್ಣಿಗೆ ಕತ್ತಲೆ ಕವಿಯುತ್ತದೆ” ಎಂದು ಬರೆದಿದ್ದಾರೆ. ಅವರ ಹಲವು ಫಾಲೋಯರ್ಸ್‌ ಹಾಗೂ ಅಪ್ಪು ಅಭಿಮಾನಿಗಳು ಸಂತಾಪ ಸೂಚಿಸಿದ್ದು, ರಾಘಣ್ಣನಿಗೆ ಧೈರ್ಯ ಹೇಳುವ ಕಾಮೆಂಟ್‌ಗಳನ್ನು ಹಾಕುತ್ತಿದ್ದಾರೆ.

ಇಂದು ರಾಘವೇಂದ್ರ ರಾಜಕುಮಾರ್ ಪುನೀತ್ ಸಮಾಧಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಭೇಟಿ ನೀಡಿ ನಮನ ಸಲ್ಲಿಸಿದ ವೀಡಿಯೋ ಕೂಡ ಹಂಚಿಕೊಂಡಿದ್ದಾರೆ. ತಮ್ಮ ಕುಟುಂಬ ಮತ್ತು ಅಪ್ಪು ಮೇಲೆ ಜನರಿಟ್ಟಿರುವ ಪ್ರೀತಿಗೆ ಅವರು ಧನ್ಯವಾದ ಅರ್ಪಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಪುನೀತ್ ರಾಜಕುಮಾರ್ ಸಮಾಧಿಗೆ ನಮನ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ದಿನವೂ ಸಾವಿರಾರು ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಿದ್ದು, ಅಗಲಿದ ನಟನಿಗಾಗಿ ಕಂಬನಿ ಮಿಡಿಯುತ್ತಿದ್ದಾರೆ. ಈ ಮಧ್ಯೆ ಪುನೀತ್ ನೆನಪಿನಲ್ಲಿ ನೇತ್ರದಾನಕ್ಕೆ ನೋಂದಣಿ ಮಾಡಿಕೊಳ್ಳುವ ಜನರ ಸಂಖ್ಯೆ ಹೆಚ್ಚಿದೆ. ಅವರ ಜನ್ಮದಿನವನ್ನು ‘ನೇತ್ರದಾನ ದಿನಾಚರಣೆ’ಯನ್ನಾಗಿ ಆಚರಿಸಬೇಕು ಎನ್ನುವ ಕೂಗು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿದೆ.

LEAVE A REPLY

Connect with

Please enter your comment!
Please enter your name here