ದರ್ಶನ್‌ ಅಭಿನಯದ ‘ಕಾಟೇರ’ ತೆರೆಗೆ ಸಿದ್ಧವಾಗುತ್ತಿದೆ. ಮಾಲಾಶ್ರೀ ಪುತ್ರಿ ಆರಾಧನಾ ಬೆಳ್ಳಿತೆರೆಗೆ ಪರಿಚಯವಾಗುತ್ತಿರುವ ಚಿತ್ರವಿದು. ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಣ, ತರುಣ್‌ ಸುಧೀರ್‌ ನಿರ್ದೇಶನವಿದ್ದು ಪ್ರತಿಭಾವಂತ ಕಲಾವಿದರು ಚಿತ್ರದ ಭಾಗವಾಗಿದ್ದಾರೆ.

ಕಳೆದ ವರ್ಷ ತೆರೆಕಂಡ ಜಡೇಶ್‌ ನಿರ್ದೇಶನದ ‘ಗುರುಶಿಷ್ಯರು’ ಸಿನಿಮಾ ಸಾಕಷ್ಟು ಸದ್ದು ಮಾಡಿತ್ತು. ದೇಸಿ ಕ್ರೀಡೆ ಕಬಡ್ಡಿ ಆಧರಿಸಿ ಹೆಣೆದಿದ್ದ ಕತೆಯಿದು. ಚಿತ್ರದ ಹೀರೋ ಶರಣ್‌ ಮತ್ತು ನಿರ್ದೇಶಕ ತರುಣ್‌ ಸುಧೀರ್‌ ‘ಗುರುಶಿಷ್ಯರು’ ಚಿತ್ರ ನಿರ್ಮಿಸಿದ್ದರು. ಈ ಚಿತ್ರದ ನಂತರ ತರುಣ್‌ ಮತ್ತು ಜಡೇಶ್‌ ‘ಕಾಟೇರ’ ಕತೆ ಮಾಡಲು ಶುರುಮಾಡಿದ್ದು. ತಮ್ಮೂರಿನಲ್ಲಿ ನಡೆದ ಘಟನೆಗಳನ್ನು ಆಧರಿಸಿ ಜಡೇಶ್‌ ಕತೆ ಮಾಡಿದರು. ಚಿತ್ರದ ನಾಯಕನಟನಾಗಿ ದರ್ಶನ್‌ ಅವರೇ ಇರುತ್ತಾರೆ ಎಂದು ಕಲ್ಪಿಸಿಕೊಂಡು ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದರು ತರುಣ್‌. ಕತೆ ಸಿದ್ಧವಾದ ನಂತರ ರಾಕ್‌ಲೈನ್‌ ವೆಂಕಟೇಶ್‌ ಚಿತ್ರನಿರ್ಮಾಣಕ್ಕೆ ಸಜ್ಜಾದರು. ದರ್ಶನ್‌ ಹೀರೋ ಆದರೆ ಅವರಿಗೆ ಜೋಡಿಯಾಗಿ ಮಾಲಾಶ್ರೀ ಮಗಳು ಆರಾಧನಾ ಬಂದರು. ಇದೀಗ ಶೇ.90ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಹಾಡುಗಳನ್ನು ಚಿತ್ರಿಸುವುದು ಬಾಕಿ ಇದೆ.

ಚಿತ್ರದ ಕುರಿತು ಮಾಹಿತಿ ನೀಡುವ ರಾಕ್‌ಲೈನ್‌ ವೆಂಕಟೇಶ್‌, ‘ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಈ ತನಕ ನೂರು ದಿನಗಳ ಚಿತ್ರೀಕರಣವಾಗಿದೆ. ಮೂರು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದೆ. ಇದು ಎಪ್ಪತ್ತರ ದಶಕದಲ್ಲಿ ನಡೆಯುವ ಕಥೆ. ಹಾಗಾಗಿ ಹಳ್ಳಿಯ ಸೆಟ್ ಹಾಕಿ ಚಿತ್ರೀಕರಣ ಮಾಡಿದ್ದೇವೆ. ದರ್ಶನ್‌ ಅವರಿಗೆ ನಾಯಕಿಯಾಗಿ ಮೊದಲ ಬಾರಿಗೆ ಮಾಲಾಶ್ರೀ ಅವರ ಮಗಳು ಆರಾಧನಾ ಅಭಿನಯಿಸುತ್ತಿದ್ದಾರೆ. ಜನಪ್ರಿಯ ಕಲಾವಿದರ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ’ ಎನ್ನುವ ಅವರು ವಿ ಹರಿಕೃಷ್ಣರ ಸಂಗೀತದ ಬಗ್ಗೆ ವಿಶೇಷವಾಗಿ ಮಾತನಾಡುತ್ತಾರೆ. ‘ದರ್ಶನ್‌ ಅವರ ಚಿತ್ರಗಳೆಂದರೆ ವಿ ಹರಿಕೃಷ್ಣ ವಿಶೇಷ ಸಂಗೀತ ಕೊಡುತ್ತಾರೆ. ನಮ್ಮ ಚಿತ್ರದ ಹಾಡುಗಳು ಎಲ್ಲರಿಗೂ ಇಷ್ಟವಾಗಲಿವೆ ಎನ್ನುವ ವಿಶ್ವಾಸವಿದೆ’ ಎನ್ನುತ್ತಾರೆ.

‘ದರ್ಶನ್‌ ಅವರಿಗಾಗಿಯೇ ಬರೆದ ಕತೆಯಿದು. ಮಾಲಾಶ್ರೀ ಪುತ್ರಿ ಆರಾಧನಾ ಪ್ರತಿಭಾವಂತ ನಟಿ. ಬಹುತೇಕ ಎಲ್ಲಾ ಸನ್ನಿವೇಶಗಳನ್ನು ಒಂದೇ ಟೇಕ್‌ನಲ್ಲಿ ಮುಗಿಸಿದ್ದಾರೆ. 1970ರ ಕಾಲಘಟ್ಟದಲ್ಲಿ ನಡೆಯುವ ಕಥೆಯಾಗಿದ್ದು, ಕನಕಪುರ ರಸ್ತೆಯಲ್ಲಿ ಅದ್ದೂರಿ ಹಳ್ಳಿ ಸೆಟ್ ಹಾಕಿದ್ದೇವೆ. ನೂರು ದಿನಗಳ ಚಿತ್ರೀಕರಣ ಪೂರ್ಣವಾಗಿದೆ. ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದೆ’ ಎನ್ನುವುದು ನಿರ್ದೇಶಕ ತರುಣ್‌ ಸುಧೀರ್‌ ಮಾತು. ದರ್ಶನ್‌ ಅವರು ಸಿನಿಮಾ ಬಗ್ಗೆ ಮಾತನಾಡಿ, ‘ನೂರು ದಿನಗಳ ಚಿತ್ರೀಕರಣದಲ್ಲಿ ನಾನು ಎಪ್ಪತ್ತೊಂದು ದಿನಗಳ ಚಿತ್ರೀಕರಣದಲ್ಲಿ ಭಾಗಿಯಾಗಿದ್ದೇನೆ. ರಾಕ್‌ಲೈನ್‌ ಅವರದ್ದು ಅದ್ಧೂರಿ ನಿರ್ಮಾಣ. ಒಳ್ಳೆಯ ಕತೆಯಿದೆ. ಮಾಲಾಶ್ರೀ ಪುತ್ರಿ ಆರಾಧನಾ ಒಂದೇ ಟೇಕ್‌ನಲ್ಲಿ ಸೀನ್‌ ಓಕೆ ಮಾಡುವ ಪ್ರತಿಭೆ’ ಎನ್ನುತ್ತಾರೆ. ಅವಿನಾಶ್, ಜಗಪತಿ ಬಾಬು, ವಿನೋದ್ ಆಳ್ವ, ಕುಮಾರ್ ಗೋವಿಂದ್ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಸುಧಾಕರ್ ಛಾಯಾಗ್ರಹಣ, ಮಾಸ್ತಿ ಸಂಭಾಷಣೆ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here