ಹಿಂದಿ ಚಿತ್ರರಂಗ ಕಂಡ ಖ್ಯಾತ ನೃತ್ಯ ಸಂಯೋಜಕಿ ದಿವಂಗತ ಸರೋಜ್ ಖಾನ್ ಅವರ ಜನ್ಮದಿನವಿಂದು (Nov 22). 2000ಕ್ಕೂ ಹೆಚ್ಚು ಹಾಡುಗಳಿಗೆ ನೃತ್ಯ ಸಂಯೋಜಿಸಿರುವ ಸರೋಜ್ ಕನ್ನಡ ಸಿನಿಮಾಕ್ಕೂ ನೃತ್ಯ ಸಂಯೋಜನೆ ಮಾಡಿದ್ದಾರೆ. ಕನ್ನಡದಲ್ಲಿ ಅವರು ನೃತ್ಯ ಸಂಯೋಜನೆ ಮಾಡಿದ ಒಂದೇ ಒಂದು ಸಿನಿಮಾ ‘ಗರ’. ಮುರಳಿ ಕೃಷ್ಣ ನಿರ್ದೇಶನದ ಈ ಸಿನಿಮಾ 2019ರಲ್ಲಿ ತೆರೆಗೆ ಬಂದಿತ್ತು. ಈ ಚಿತ್ರದ ಎರಡು ಹಾಡುಗಳಿಗೆ ಸರೋಜ್ ಖಾನ್ ನೃತ್ಯ ಸಂಯೋಜನೆ ಮಾಡಿದ್ದರು.
ನಾಲ್ಕು ದಶಕಗಳ ಕಾಲ ಬಾಲಿವುಡ್‌ನ ಕುಣಿಸಿದಾಕೆ ಸರೋಜ್ ಖಾನ್. ಈಕೆಯನ್ನು ಎಲ್ಲರೂ ‘ಮಾಸ್ಟಚರ್ ಜೀ’ ಎಂದೇ ಕರೆಯುತ್ತಾರೆ. ನೃತ್ಯ ಸಂಯೋಜನೆಯಲ್ಲಿ ಗಂಡಸರೇ ಅಧಿಪತ್ಯ ಹೊಂದಿದ್ದ ಕಾಲದಲ್ಲಿ ಸಿನಿಮಾ ಇಂಡಸ್ಟ್ರಿಗೆ ಬಂದು ಪರದೆಯ ಮೇಲೆ ನಾಯಕ, ನಾಯಕಿಯರು ಮಾತ್ರವಲ್ಲ ಪ್ರೇಕ್ಷಕರು ಕೂಡಾ ಹುಚ್ಚೆದ್ದು ಕುಣಿಯುವಂತೆ ಮಾಡಿದವರು ಈಕೆ. ಸುಮಾರು 2000ಕ್ಕಿಂತಲೂ ಹೆಚ್ಚು ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಅದ್ಭುತ ಪ್ರತಿಭೆಯಾಗಿದ್ದ ಸರೋಜ್ ಖಾನ್ ನಮ್ಮನ್ನಗಲಿ 4 ವರ್ಷಗಳು ಕಳೆದಿವೆ. ಆಕೆ ಬಿಟ್ಟು ಹೋದ ಜಾಗವನ್ನು ತುಂಬಲು ಯಾರಿಂದಲೂ ಸಾಧ್ಯವಾಗಿಲ್ಲ. ಇಂದು ಸರೋಜ್ ಖಾನ್ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಮದರ್ ಆಫ್ ಡ್ಯಾನ್ಸ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಸರೋಜ್ ಖಾನ್ ಬದುಕಿನ ಕ್ಷಣಗಳನ್ನು ನೆನೆಯೋಣ…
ಸರೋಜ್ ಖಾನ್ ಎಂಬ ನಿರ್ಮಲಾ ನಾಗ್‌ಪಾಲ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ತಮ್ಮ ಹದಿಮೂರನೇ ವಯಸ್ಸಿನಲ್ಲಿ. 1950ರ ದಶಕದ ಉತ್ತರಾರ್ಧದಲ್ಲಿ, ಅವರು ಹಲವಾರು ಸಿನಿಮಾಗಳಲ್ಲಿ ಹಿನ್ನೆಲೆ ನೃತ್ಯಗಾರ್ತಿಯಾಗಿ ಕೆಲಸ ಮಾಡಿದ್ದರು. ಆಗ ಅವರು ಖ್ಯಾತ ನೃತ್ಯನಿರ್ದೇಶಕ ಬಿ ಸೋಹನ್‌ಲಾಲ್ ಬಳಿ ತರಬೇತಿ ಪಡೆಯುತ್ತಿದ್ದರು. ಸರೋಜ್ ಖಾನ್‌ಗೆ ಆಗ 13 ವಯಸ್ಸು, ಗುರು ಸೋಹನ್‌ಲಾಲ್‌ಗೆ 43 ವರ್ಷ. ಅವರಿಬ್ಬರೂ ಮದುವೆಯಾದರು. ಸೋಹನ್ ಲಾಲ್‌ಗೆ ಈ ಹಿಂದೆ ಮದುವೆ ಆಗಿತ್ತು, ಆ ದಾಂಪತ್ಯದಲ್ಲಿ ನಾಲ್ಕು ಮಕ್ಕಳಿದ್ದರು. ಇದ್ಯಾವುದೂ ತಿಳಿಯದೆ ಆಗಿನ್ನೂ ಹದಿಹರೆಯದ ಸರೋಜ್ ಖಾನ್, ಸೋಹನ್‌ಲಾಲ್ ಜತೆ ದಾಂಪತ್ಯ ನಡೆಸಿದರು. ಸಿನಿಮಾಗಳಿಗೆ ಅವರಿಬ್ಬರೂ ಜತೆಯಾಗಿ ಕೆಲಸ ಮಾಡಿದರು. ಈ ದಾಂಪತ್ಯಕ್ಕೆ ಇಬ್ಬರು ಮಕ್ಕಳಿದ್ದಾರೆ. ಆಮೇಲೆ ಸೋಹನ್ ಲಾಲ್‌ರಿಂದ ವಿಚ್ಛೇದನ ಪಡೆದ ಸರೋಜ್, 1975ರಲ್ಲಿ ರೋಷನ್ ಖಾನ್ ಎಂಬ ಉದ್ಯಮಿಯನ್ನು ಮದುವೆಯಾದರು. ಈ ದಾಂಪತ್ಯಕ್ಕೆ ಸುಖೈನಾ ಖಾನ್ ಎಂಬ ಮಗಳಿದ್ದಾಳೆ.
1974ರಲ್ಲಿ ‘ಗೀತಾ ಮೇರಾ ನಾಮ್’ ಎಂಬ ಸಿನಿಮಾಕ್ಕೆ ಮೊದಲ ಬಾರಿ ಸರೋಜ್ ನೃತ್ಯ ನಿರ್ದೇಶಕಿಯಾಗಿ ಕೆಲಸ ಮಾಡಿದರು. ಆ ನಂತರ 1987ರಲ್ಲಿ ತೆರೆಕಂಡ ‘ಮಿಸ್ಟರ್ ಇಂಡಿಯಾ’ ಸಿನಿಮಾದಲ್ಲಿ ಶ್ರೀದೇವಿ ಹೆಜ್ಜೆ ಹಾಕಿದ ‘ಹವಾ ಹವಾಯಿ’ ಹಾಡಿನ ನೃತ್ಯ ಸಂಯೋಜನೆ ಅವರನ್ನು ಗುರುತಿಸುವಂತೆ ಮಾಡಿತು. ಇದಾದ ನಂತರ ಸರೋಜ್ ಖಾನ್, ಶ್ರೀದೇವಿಯೊಂದಿಗೆ ನಗೀನಾ, ಚಾಂದಿನಿ ಮೊದಲಾದ ಸಿನಿಮಾಗಳಲ್ಲಿ ಕೆಲಸ ಮಾಡಿದರು. 1990ರ ದಶಕದಲ್ಲಿ ಈಕೆ ನೃತ್ಯ ನಿರ್ದೇಶಿಸಿದ ‘ಏಕ್ ದೋ ಥೀನ್’, ‘ಧಕ್ ಧಕ್ ಕರ್‌ನೇ ಲಗಾ’, ‘ಚೋಲಿ ಕೆ ಪೀಚೆ ಕ್ಯಾ ಹೈ’ ಮತ್ತು ‘ತಮ್ಮ ತಮ್ಮಾ’ ಹಾಡುಗಳು ಸೂಪರ್ ಹಿಟ್ ಆದವು. ‘ಬಾಜಿಗರ್’, ‘ದಿಲ್ ವಾಲೇ ದುಲ್ಹನಿಯಾ ಲೇ ಜಾಯೇಂಗೆ’, ‘ಪರ್‌ದೇಸ್’, ‘ಸೋಲ್ಜರ್’, ‘ತಾಲ್’, ‘ವೀರ್-ಝಾರಾ’, ‘ಡಾನ್’, ‘ಸಾವರಿಯಾ’, ‘ಲಗಾನ್’, ‘ತನು ವೆಡ್ಸ್ ಮನು ರಿಟರ್ನ್ಸ್’, ‘ಮಣಿಕರ್ಣಿಕಾ’… ಸರೋಜ್ ಖಾನ್ ನೃತ್ಯ ಸಂಯೋಜಿಸಿರುವ ಕೆಲವು ಪ್ರಮುಖ ಸಿನಿಮಾಗಳು.
ಸಂಜಯ್ ಲೀಲಾ ಬನ್ಸಾಲಿಯವರ ‘ದೇವದಾಸ್’ ಸಿನಿಮಾದಲ್ಲಿ ಐಶ್ವರ್ಯ ರೈ ಮತ್ತು ಮಾಧುರಿ ದೀಕ್ಷಿತ್ ಹೆಜ್ಜೆ ಹಾಕಿದ ‘ಡೋಲಾ ರೇ’ ಹಾಡನ್ನು ಮರೆಯುವುದುಂಟೇ? ಈ ಹಾಡಿನ ನೃತ್ಯ ನಿರ್ದೇಶನ ಸರೋಜ್ ಖಾನ್ ಅವರದ್ದಾಗಿತ್ತು. ಮಣಿರತ್ನಂ ನಿರ್ದೇಶನದ ‘ಗುರು’, ಮನೋಜ್ ಕೆ ಜಯನ್ ಮತ್ತು ಅದಿತಿ ರಾವ್ ಹೈದರಿ ನಟಿಸಿದ ತಮಿಳು ಚಿತ್ರ ‘ಶೃಂಗಾರಂ’, ಇಮ್ತಿಯಾಜ್ ಅಲಿ ನಿರ್ದೇಶನದ ‘ಜಬ್ ವಿ ಮೆಟ್’ನಲ್ಲಿ ಸರೋಜ್ ಖಾನ್ ಜಾದೂ ಕಾಣಬಹುದು. ‘ಜಬ್ ವಿ ಮೆಟ್’, ‘ಶೃಂಗಾರಂ’ ಮತ್ತು ‘ದೇವದಾಸ್’ ಚಿತ್ರಗಳ ನೃತ್ಯ ನಿರ್ದೇಶನಕ್ಕಾಗಿ ಸರೋಜ್ ರಾಷ್ಟ್ರಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಅಂದಹಾಗೆ, ಸರೋಜ್ ಖಾನ್ ಹಿಂದಿ ಮಾತ್ರವಲ್ಲ ತಮಿಳು ಮತ್ತು ಕನ್ನಡ ಸಿನಿಮಾಗಳಿಗೂ ನೃತ್ಯ ಸಂಯೋಜನೆ ಮಾಡಿದ್ದಾರೆ. ಕನ್ನಡದಲ್ಲಿ ಅವರು ನೃತ್ಯ ಸಂಯೋಜನೆ ಮಾಡಿದ ಒಂದೇ ಒಂದು ಸಿನಿಮಾ ‘ಗರ’. ಮುರಳಿ ಕೃಷ್ಣ ನಿರ್ದೇಶನದ ಈ ಸಿನಿಮಾ 2019ರಲ್ಲಿ ತೆರೆಗೆ ಬಂದಿತ್ತು. ಇದರಲ್ಲಿ ಎರಡು ಹಾಡುಗಳಿಗೆ ಸರೋಜ್ ಖಾನ್ ನೃತ್ಯ ಸಂಯೋಜನೆ ಮಾಡಿದ್ದರು.
ಜಾನಪದ, ಪಾಶ್ಚಿಮಾತ್ಯ ನೃತ್ಯ ಪ್ರಕಾರಗಳನ್ನು ಶಾಸ್ತ್ರೀಯ ನೃತ್ಯದೊಂದಿಗೆ ಸೇರಿಸಿ ಭಾರತೀಯ ಚಲನಚಿತ್ರ ಜಗತ್ತಿನಲ್ಲಿ ಹೊಸ ಮಾದರಿಯನ್ನು ಸೃಷ್ಟಿಸಿದರು ಸರೋಜ್ ಖಾನ್. 2000 ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿ ಹಿರಿಯ ನೃತ್ಯ ನಿರ್ದೇಶಕಿಯಾಗಿದ್ದರೂ ಸಿನಿಮಾದಲ್ಲಿ ಅವಕಾಶ ಸಿಗುತ್ತಿಲ್ಲ ಎಂದು ಸರೋಜ್ ಖಾನ್ ಒಮ್ಮೆ ದುಃಖ ತೋಡಿಕೊಂಡಿದ್ದರು. ನಂತರ ಅಭಿಷೇಕ್ ವರ್ಮನ್ ನಿರ್ದೇಶನದ ‘ಕಳಂಕ್’ ಸಿನಿಮಾದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ಈ ಸಿನಿಮಾದ ‘ತಬಾ ಹೋ ಗಯೇ’ ಹಾಡಿಗೆ ಅವರು ನೃತ್ಯ ನಿರ್ದೇಶನ ಮಾಡಿದ್ದು, ಇದು ಅವರ ಕೊನೆಯ ಸಿನಿಮಾ ಆಗಿತ್ತು. ಸಿನಿಮಾದಲ್ಲಿ ಯಾವುದೇ ಸಂದರ್ಭದ ಹಾಡೇ ಇರಲಿ ಅದನ್ನು ನೃತ್ಯಾಭಿನಯದ ಮೂಲಕ ಅಭಿವ್ಯಕ್ತಿಪಡಿಸಿ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುವಂತೆ ಮಾಡಿದ ಕೀರ್ತಿ ಸರೋಜ್ ಖಾನ್‌ಗೆ ಸಲ್ಲುತ್ತದೆ.