ಭಾರತದ ಮೇರು ಗಾಯಕಿ ಲತಾ ಮಂಗೇಶ್ಕರ್‌ ಅವರಿಗೆ ಕೋವಿಡ್‌ ಸೋಂಕು ತಗಲಿದ್ದು, ಮುಂಬಯಿ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನ್ಯುಮೋನಿಯಾದಿಂದಲೂ ಅವರು ಬಳಲುತ್ತಿದ್ದು ಶೀಘ್ರ ಚೇತರಿಕೆಗೆ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

ಲೆಜೆಂಡರಿ ಗಾಯಕಿ ಲತಾ ಮಂಗೇಶ್ಕರ್‌ ಕೋವಿಡ್‌ ಮತ್ತು ನ್ಯುಮೋನಿಯಾದಿಂದ ಬಳಲುತ್ತಿದ್ದು, ಮುಂಬಯಿಯ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಲತಾರ ಸಂಬಂಧಿ ರಚನಾ ಷಾ ಈ ಬಗ್ಗೆ ಮಾಹಿತಿ ನೀಡಿ, “ಭಾನುವಾರ ಬೆಳಗ್ಗೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಳಿ ವಯಸ್ಸಾದ್ದರಿಂದ ಹೆಚ್ಚಿನ ನಿಗಾ ಅಗತ್ಯವಿದ್ದು, ವೈದ್ಯರು ಐಸಿಯುನಲ್ಲಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಕುಟುಂಬದ ಸದಸ್ಯರಾಗಿ ನಾವು ಅವರ ಆರೋಗ್ಯಕ್ಕೆ ಸಂಬಂಧಿಸಿದಂತೆ ಅಗತ್ಯವಿರುವ ಎಲ್ಲಾ ರೀತಿಯ ಮುತುವರ್ಜಿ ವಹಿಸಿದ್ದೇವೆ” ಎಂದಿದ್ದಾರೆ. ಬಾಲಿವುಡ್‌ ತಾರೆಯರು ಹಾಗೂ ಲತಾ ಮಂಗೇಶ್ಕರ್‌ ಅಭಿಮಾನಿಗಳು ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ನೆಚ್ಚಿನ ಗಾಯಕಿಯ ಶೀಘ್ರ ಚೇತರಿಕೆಗೆ ಸಂದೇಶಗಳನ್ನು ಹಾಕುತ್ತಿದ್ದಾರೆ. ಮಾಜಿ ಕೇಂದ್ರ ಸಚಿವ, ಲೋಕಸಭಾ ಸದಸ್ಯ ಪ್ರಕಾಶ್‌ ಜಾವಡೇಕರ್‌, “ಶೀಘ್ರ ಗುಣಮುಖರಾಗಿ ಲತಾ ಮಂಗೇಶ್ಕರ್‌ ಜೀ. ದೇಶದ ಜನತೆ ನಿಮ್ಮ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿದೆ” ಎಂದು ಟ್ವೀಟ್‌ ಮಾಡಿದ್ದಾರೆ.

‘ಭಾರತದ ಕೋಗಿಲೆ’ ಎಂದೇ ಕರೆಸಿಕೊಳ್ಳುವ ಲತಾ ಮಂಗೇಶ್ಕರ್‌ 13ರ ಬಾಲೆಯಾಗಿದ್ದಾಗಲೇ ಹಾಡಲು ಆರಂಭಿಸಿದವರು. ಬಾಲಿವುಡ್‌ನ ಮಂಗೇಶ್ಕರ್‌ ಕುಟುಂಬದ ಅವರು ಹಿಂದಿ ಸಿನಿಮಾದ ಹಿನ್ನೆಲೆ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಗಾಯಕಿ. ಅತಿ ಹೆಚ್ಚು ಗೀತೆಗಳನ್ನು ಹಾಡಿರುವ ಗಾಯಕಿ ಎಂದು 1974ರಲ್ಲಿ ಅವರ ಹೆಸರು ಗಿನ್ನಿಸ್‌ ಪುಸ್ತಕದಲ್ಲಿ ದಾಖಲಾಗಿದೆ. ಆ ಸಮಯದಲ್ಲಿ ಅವರು ಇಪ್ಪತ್ತು ಭಾಷೆಗಳಲ್ಲಿ 25 ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದರು ಎಂದು ನಮೂದಾಗಿತ್ತು. 92ರ ಹರೆಯದ ಲತಾ ಅವರು ಪದ್ಮಭೂಷಣ, ದಾದಾ ಸಾಹೇಬ್‌ ಫಾಲ್ಕೆ ಪುರಸ್ಕೃತರು.

Previous articleಹಗರಣಗಳ ಕೂಗಿನ ನಡುವೆ ಗೋಲ್ಡನ್ ಗ್ಲೋಬ್ ಸದ್ದಿಲ್ಲದೆ ಘೋಷಣೆ
Next articleಕೋವಿಡ್‌ ನಿಯಮ ಉಲ್ಲಂಘನೆ; ಸಿನಿ ಕಲಾವಿದರ ವಿರುದ್ಧ ದೂರು ದಾಖಲು

LEAVE A REPLY

Connect with

Please enter your comment!
Please enter your name here