ಸಿನಿಮಾನೇ ಚೆನ್ನಾಗಿಲ್ಲ ಅಂದಾಗ ಅದು ಒಳ್ಳೆಯ ಸಂದೇಶ ಕೊಟ್ಟರೂ ಜನರಿಗೆ ತಲುಪದೇ ಹೋಗಬಹುದು. ಆದರೆ ಸಿನಿಮಾ ಚೆನ್ನಾಗಿದ್ದು ಅದರೊಳಗೆ ಕೆಟ್ಟ ಸಂದೇಶ ದಾಟಿಸುವಂತಿದ್ದರೆ ಅದು ಅಪಾಯಕಾರಿ. ಅದು ಹಾಲಿನೊಳಗೆ ವಿಷ ಹಾಕಿ ಕೊಟ್ಟಂತೆಯೇ ಒಳ್ಳೆಯ ರೂಪದಲ್ಲಿ ಒಳಸೇರಿ ಬೇರೆ ರೀತಿಯಲ್ಲಿ ಪರಿಣಾಮವನ್ನುಂಟು ಮಾಡುತ್ತದೆ. ಪ್ರಸ್ತುತ Netflixನಲ್ಲಿ ಸ್ಟ್ರೀಮ್‌ ಆಗುತ್ತಿರುವ ‘ಲಕ್ಕಿ ಭಾಸ್ಕರ್‌’ ತೆಲುಗು ಸಿನಿಮಾ ಕುರಿತ ಒಂದು ವಿಶ್ಲೇಷಣೆ.

ಈ ಸಿನಿಮಾದ ಬಗ್ಗೆ ಹೇಳುವ ಮುನ್ನ ಮತ್ತೊಂದು ಸಿನಿಮಾದ ಬಗ್ಗೆ ಇಲ್ಲಿ ಪ್ರಸ್ತಾಪಿಸಲೇಬೇಕು. ತಮಿಳಿನಲ್ಲಿ 2014ರಲ್ಲಿ ಬಂದಿದ್ದ ‘ಸದುರಂಗ ವೇಟ್ಟೈ’ ಅನ್ನುವ ಸಿನಿಮಾವೊಂದಿದೆ. ಸಾಧ್ಯವಾದರೆ ಮಿಸ್ ಮಾಡದೆ ಒಮ್ಮೆ ನೋಡಿ. ಅದರಲ್ಲೂ ಒಬ್ಬಾತ ತನ್ನ ಬುದ್ಧಿವಂತಿಕೆಯನ್ನೆಲ್ಲ ಬಳಸಿ ಜನರಿಂದ ಹಣ ಕೀಳುತ್ತಾನೆ. ಅವನ ತಂತ್ರಗಳೆಲ್ಲ ಒಂದಕ್ಕಿಂತ ಒಂದು ಅದ್ಭುತವಾಗಿರುತ್ತವೆ. ಅವನಿಂದ ಮೋಸ ಹೋದವರು ‘ಇನ್ನು ಮುಂದೆ ಇವನಿಗೆ ಸಿಕ್ಕಿ ಹಾಕಿಕೊಳ್ಳಬಾರದು’ ಅಂತ ಯೋಚಿಸುವಷ್ಟರಲ್ಲಿ ಆತ ಮತ್ತೊಂದು ತಂತ್ರ ಬಳಸಿ ಇನ್ನಷ್ಟು ಹಣ ಪೀಕುತ್ತಾನೆ. ಅಲ್ಲಿ ಹಣ ಕಳೆದುಕೊಂಡವರು ಅದರ ಅರಿವಾಗಿ ಅವನನ್ನು ಹುಡುಕುವ ಹೊತ್ತಿಗೆ ಮತ್ತೊಂದು ವೇಷದಲ್ಲಿ ಇನ್ನೆಲ್ಲೋ ಇರುತ್ತಾನೆ. ಅಲ್ಲಿ ಮೊದಲನೆಯದ್ದಕ್ಕಿಂತ ಹೆಚ್ಚು ಲಾಭ ಕೊಡುವ ವಂಚನೆ ಮಾಡುತ್ತಾನೆ.

ಕಡೆಯ ದೃಶ್ಯದಲ್ಲಿ ಒಂದು ಕಡೆ ಈತ ಹಣದೊಂದಿಗೆ ಒಂಟಿಯಾಗಿದ್ದರೆ, ಮತ್ತೊಂದು ಕಡೆ ಆತನ ಕುಟುಂಬ ನಿಂತಿರುತ್ತದೆ! ಅತ್ತ ಹೆಂಡತಿ ಮಗುವಿನೊಂದಿಗೆ ನಿಂತಿದ್ದರೆ, ಇತ್ತ ಈತ ಒಂಟಿಯಾಗಿ ಏನೂ ಲಾಭ ಕೊಡದ ಹಣದೊಂದಿಗೆ ಅಸಹಾಯಕನಾಗಿ ತಲೆ ಚಚ್ಚಿಕೊಳ್ಳುತ್ತ ಕೂರುವ ದೃಶ್ಯವಿದೆಯಲ್ಲ! ಅದೊಂದು ದೃಶ್ಯ ಸಾಕು. ನಿರ್ದೇಶಕ ಹೇಳಬೇಕಿದ್ದ ಎಲ್ಲ ಸಂದೇಶವನ್ನು ಒಟ್ಟಾರೆ ಕೊಟ್ಟುಬಿಡುತ್ತದೆ. ಒಂದು ಸಿನಿಮಾ ಸಂದೇಶವೊಂದನ್ನು ಹೇಗೆ ಸಶಕ್ತವಾಗಿ ಹೇಳಬಹುದು ಅನ್ನುವುದಕ್ಕೆ ಇದೇ ಉದಾಹರಣೆ. ಈತನಿಗೆ ತನ್ನ ತಪ್ಪಿನ ಅರಿವಾಗಿ ಆ ಹಣವನ್ನೆಲ್ಲ ಅಲ್ಲೇ ಬಿಟ್ಟು ಕುಟುಂಬದೊಂದಿಗೆ ಮತ್ತೆ ಸೇರುತ್ತಾನೆ. ಆ ಕ್ಷಣದಲ್ಲಿ ಪ್ರೇಕ್ಷಕನಿಗೆ ದಾಟಬೇಕಿದ್ದ ಸಂದೇಶ ಪರಿಣಾಮಕಾರಿಯಾಗಿ ದಾಟಿರುತ್ತದೆ.

ಹಿಂದೆ ಈ ರೀತಿಯ ‘ವ್ಯಾಲ್ಯೂ ಸಿಸ್ಟಮ್’ ನಮ್ಮ ನಮ್ಮ ಕುಟುಂಬದೊಳಗೇ ಇರುತ್ತಿತ್ತು. ಯಾರಾದರೂ ಕುಟುಂಬದವರೇ ಲಂಚ ತಿಂದು ಬದುಕುತ್ತಿದ್ದರೆ ಅವನನ್ನು ಕೀಳಾಗಿ ಕಾಣುತ್ತಿದ್ದರು. ಆತನಿಗೆ ಏನಾದರೂ ಕಷ್ಟ ಬಂದರೆ, ಅದು ಆತ ಮೋಸ ಮಾಡಿದ್ದರಿಂದಲೇ ಅಂತ ಬಹಳವಾಗಿ ನಂಬಿದ್ದರು. ಆ ಲಂಚ ಪಡೆಯುವವನೆದುರು, ಪ್ರಾಮಾಣಿಕವಾಗಿ ಕೊಂಚವೇ ಸಂಬಳ ಪಡೆಯುವ ಮಗ ಹೆಚ್ಚು ದೊಡ್ಡವನೆನಿಸಿಕೊಳ್ಳುತ್ತಿದ್ದ. ಹೀಗಾಗಿ ಕುಟುಂಬದ ಜನರೆದುರು ಯಾರಾದರೂ ಈ ರೀತಿ ಬದುಕುತ್ತಿದ್ದೇನೆ ಅಂತ ತೋರಿಸಿಕೊಳ್ಳಲೇ ಭಯಪಡುತ್ತಿದ್ದರು.

ಈಗ ಹೀಗಿದೆಯಾ? ‘ಅಯ್ಯೋ, ಅವರ ಮಗನಿಗೆ ಅದ್ಯಾವುದೋ ಡಿಪಾರ್ಟ್‌ಮೆಂಟಲ್ಲಿ ಕೆಲಸ ಅಂತೆ ಕಣ್ರೀ. ಕೈ ತುಂಬ ಸಂಬಳ, ಜೊತೆಗೆ ಅದರ ನೂರರಷ್ಟು ಗಿಂಬಳ ಅಂತೆ’ ಅಂತ ಅವನ ಬಗ್ಗೆ ಇನ್ನೊಬ್ಬರೆದುದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ನಮ್ಮ ಮಗ ಆ ರೀತಿಯ ಹುದ್ದೆಗೆ ಹೋಗುವುದು ಬೇಡ ಅಂತ ಅಂದುಕೊಳ್ಳುವ ಬದಲು ‘ಲಂಚ ಸಿಗುತ್ತದೆ’ ಅನ್ನುವ ಕಾರಣಕ್ಕೇ ಆ ಹುದ್ದೆಗಾಗಿ ತಾವು ಸಂಪಾದಿಸಿದ ಹಣವನ್ನೆಲ್ಲ ಲಂಚ ಕೊಡುವವರಿದ್ದಾರೆ.

‘ಲಕ್ಕಿ ಬಾಸ್ಕರ್’ ಈ ರೀತಿ ಇದೆಯಾ?

ನನಗೆ ಈ ‘ಲಕ್ಕಿ ಬಾಸ್ಕರ್’ ಸಿನಿಮಾದ ಕಥೆ ಸಮಸ್ಯೆ ಅನ್ನಿಸಿದ್ದೇ ಅಲ್ಲಿ. ಆ ಸಿನಿಮಾ ಹೇಳಹೊರಟಿದ್ದೇ ಸಿಕ್ಕಾಪಟ್ಟೆ Negative ಮೆಸೇಜ್ ಅನ್ನು ಅಂತ ಅನ್ನಿಸಿತು. ಇಡೀ ಸಿನಿಮಾ ಕೆಟ್ಟದ್ದನ್ನು ಹೇಳಿ ಕೊನೆಗೆ ಅದರಿಂದಾಗುವ ಪರಿಣಾಮವೇನು ಅಂತ ಒಮ್ಮೆಯಾದರೂ ಹೇಳಿ ಮುಗಿಸಿದ್ದರೆ ಓಕೆ ಅನ್ನಬಹುದು. ಇಲ್ಲಿ ಹಾಗಾಗಿಲ್ಲ. ಕೊನೆಯವರೆಗೆ ಕಾದರೂ ಆ ಬಗೆಯ ಪ್ರಯತ್ನವೇನೂ ಕಾಣಲಿಲ್ಲ. ಅಷ್ಟೆಲ್ಲ ಯಾಕೆ? ಆ ನಾಯಕನಿಗೆ ಯಾವುದೇ ಸಂದರ್ಭದಲ್ಲಿ ತಾನು ಮಾಡುತ್ತಿರುವುದು ತಪ್ಪು ಅನ್ನುವ ಅಪರಾಧಿ ಪ್ರಜ್ಞೆಯೇ ಕಾಡುವುದಿಲ್ಲ. ಮಧ್ಯೆ ಮಧ್ಯೆ ‘ನಾನೆಲ್ಲ ಮಾಡುತ್ತಿರುವುದು ನನ್ನ ಕುಟುಂಬಕ್ಕಾಗಿ’ ಅನ್ನುತ್ತಾನೆ. ಆದರೆ ಆ ಕುಟುಂಬದಿಂದಲೇ ತಾನು ಹೇಗೆ ಹಣ ಸಂಪಾದಿಸಿದೆ ಅನ್ನುವುದನ್ನು ಮುಚ್ಚಿಡುತ್ತಾನೆ.

ಲಕ್ಕಿ ಅಂತ ಆತ ಕರೆಸಿಕೊಳ್ಳುವುದೇ ಅಲ್ಲಿ. ಆತ ಮಾಡುವ ಮೋಸವನ್ನೆಲ್ಲ ಕಾನೂನಿನ ಪರಿಧಿಯೊಳಗೆ ಮಾಡಿರುತ್ತಾನೆ. ಇನ್ನೇನು ಸಿಕ್ಕಿಹಾಕಿಕೊಳ್ಳುತ್ತಾನೆ ಅನ್ನುವಾಗ ಮತ್ತೇನೋ ದಾರಿ ಹುಡುಕುತ್ತಾನೆ. ದೊಡ್ಡ ಲಾಭದೊಂದಿಗೆ ಹೊರಬರುತ್ತಾನೆ. ಸುಮ್ಮನಾಗುತ್ತಾನಾ, ಇಲ್ಲ! ಮತ್ತೊಂದು ದೊಡ್ಡ ವಿಷಯಕ್ಕೆ ಕೈ ಹಾಕುತ್ತಾನೆ. ಇದು ಮುಂದುವರೆಯುತ್ತದೆ. ಮಧ್ಯದಲ್ಲೊಮ್ಮೆ ‘ಹಣದ ಬಗೆಗಿನ ಆಸೆ ಇರಲಿ. ಆದರೆ ಹಾಗೆ ಹಣ ಮಾಡುವಾಗ ಎಲ್ಲಿ ನಿಲ್ಲಿಸಬೇಕು ಅನ್ನುವುದು ಗೊತ್ತಿರಬೇಕು’ ಅನ್ನುವ ಕಣ್ಣೊರೆಸುವ ಪಾಠ ಮಾಡುತ್ತಾನೆ. ನನಗೆ ಸಿಕ್ಕಾಪಟ್ಟೆ ಕಾಮಿಡಿ ಅನ್ನಿಸಿದ್ದೇ ಇದೇ ವಿಷಯ. ಮಾಡುತ್ತಿರೋದೆ ಟೋಪಿ ಹಾಕೋ ಕೆಲಸ. ಅದರಲ್ಲೇನು ‘ಯಾವಾಗ ನಿಲ್ಲಿಸಬೇಕು’ ಅನ್ನುವ ನೀತಿಪಾಠ?

ತನ್ನ ಬುದ್ಧಿವಂತಿಕೆಯಿಂದಲೇ ವ್ಯವಸ್ಥೆಯ ಲಾಭ ಪಡೆಯುತ್ತ ಕೋಟಿ ಕೋಟಿ ಹಣ ಮಾಡಿ ಕಡೆಗೆ ‘ಎಲ್ಲವೂ ತನ್ನ ಕುಟುಂಬಕ್ಕಾಗಿ’ ಅಂತ ಹೇಳುತ್ತಾನಾದರೂ ನಮ್ಮ ಮಧ್ಯಮ ವರ್ಗದವರಿಗೆ ಈ ಸಿನಿಮಾ ಕೊಡುವ ಮೆಸೇಜ್ ನನ್ನ ಪ್ರಕಾರ ಅಪಾಯಕಾರಿಯೇ! ಒಂದು ರೀತಿಯಲ್ಲಿ ನಾವೆಲ್ಲರೂ ಬಾಸ್ಕರ್ ಮತ್ತು ಆತನ ಫ್ಯಾಮಿಲಿ ಕೈಯಲ್ಲಿ ಹಣವಿಲ್ಲದಿದ್ದಾಗ ಸಮಾಜದಿಂದ ನಿರ್ಲಕ್ಷ್ಯಕ್ಕೊಳಗಾಗುತ್ತಾರಲ್ಲ ಆ ಪರಿಸ್ಥಿತಿಯನ್ನು ಅನುಭವಿಸಿದ್ದೇವೆ. ಅದೂ ದಿಂದಷ್ಟೇ ಅಲ್ಲ. ಕಡೆಗೆ ನಮ್ಮ ಮನೆಯವರಿಂದಲೇ ಅವಮಾನ ಅನುಭವಿಸಿರುತ್ತೇವೆ. ಕಟ್ಟಿಕೊಂಡ ಹೆಂಡತಿಯೇ ನಮ್ಮನ್ನು ‘ವೇಸ್ಟ್ ಬಾಡಿ’ ಅನ್ನುವ ಕ್ಯಾಟಗರಿಗೆ ಸೇರಿಸಬಹುದು. ಪ್ರಾಮಾಣಿಕವಾಗಿ ದುಡಿದು ಹಣ ಮಾಡುತ್ತೇನೆ ಅನ್ನುವವನೊಬ್ಬ ಕೇವಲ ತನ್ನ ಸದ್ಯದ ಅವಶ್ಯಕತೆಗಷ್ಟೇ ದುಡಿಯಲು ಸಾಧ್ಯವಾಗಿ ಎಲ್ಲರಿಂದ ಅವಮಾನಕ್ಕೀಡಾಗಬಹುದು. ಸಿಕ್ಕಾಪಟ್ಟೆ ಲಂಚ ಸಿಗುವ ಉದ್ಯೋಗದಲ್ಲಿರುವ ಮಗನಿಗೆ ಮನೆಯಲ್ಲಿ ಸಿಗುವ ಮರ್ಯಾದೆ, ಪ್ರಾಮಾಣಿಕವಾಗಿ ಕೊಂಚ ದುಡಿಯುವ ಮತ್ತೊಬ್ಬ ಮಗನಿಗೆ ಸಿಗಲಾರದು. ಪ್ರಜ್ಞಾಪೂರ್ವಕವಾಗಿಯೇ ನಮ್ಮ ಮನಸ್ಸಿನಲ್ಲಿ ನಾವೆಷ್ಟು ಭ್ರಷ್ಟರಾಗಿದ್ದೇವೆ ಅನ್ನುವುದಕ್ಕೆ ಇದೇ ಸಾಕ್ಷಿ

ಮತ್ತೊಮ್ಮೆ ಗಮನಿಸಿ. ಲಕ್ಕಿ ಬಾಸ್ಕರ್ ಮತ್ತು ಆತನ ಕುಟುಂಬ ಸಿನಿಮಾದಲ್ಲಿ ಹಣವಿಲ್ಲದಾಗ ಅನುಭವಿಸುವುದು ಮಧ್ಯಮ ಮತ್ತು ಬಡವರ್ಗದವರು ಈ ಸಮಾಜದೆದುರು ಅನುಭವಿಸುತ್ತಿರುವ ತಿರಸ್ಕಾರ-ಅವಮಾನವಷ್ಟೇ. ಆದರೆ ಕಷ್ಟವನ್ನಲ್ಲ! ಅಂದರೆ ಆತನ ಫ್ಯಾಮಿಲಿ ಊಟಕ್ಕೂ ಕಷ್ಟಪಡುವ ಸ್ಥಿತಿಯಲ್ಲೇನಿಲ್ಲ. ಬಂಧುಗಳ ಮನೆಯಲ್ಲಿ ಸಹಜವಾಗಿ ಅಷ್ಟೇನೂ ಅನುಕೂಲವಿಲ್ಲದವರು ಅನುಭವಿಸುವ ಅವಮಾನವಷ್ಟೇ ಆತನ ಫ್ಯಾಮಿಲಿ ಅನುಭವಿಸುತ್ತದೆ. ಅದಕ್ಕೆ ಉತ್ತರ ಪ್ರಾಮಾಣಿಕವಾಗಿ ಆತ ಬೇರೇನನ್ನೋ ಮಾಡಬಹುದಿತ್ತು. ಆದರೆ ಅಲ್ಲೆಲ್ಲ ಆತ ಆಯ್ದುಕೊಳ್ಳುವುದು ಮೋಸದ ದಾರಿಯನ್ನೇ. ಆಫೀಸಿನಲ್ಲಿ ನಡೆಯುವ ರಾಜಕೀಯ ಆತನೊಬ್ಬನಿಗಷ್ಟೇ ಅಲ್ಲ. ಅಲ್ಲಿ ಕೆಲಸ ಮಾಡುವ ಉಳಿದವರೂ ಅನುಭವಿಸುತ್ತಾರೆ. ಈಗಲೂ ನಾವೆಲ್ಲ ಅನುಭವಿಸುತ್ತಿದ್ದೇವೆ. ಅಂದರೆ ಎಲ್ಲರಿಗೂ ಆತನ ಮಾರ್ಗವೇ ಅಂತಿಮವಾಗಬಾರದು. ಹಣ ಕೊಡುವ ಲಕ್ಷುರಿ ಬಗ್ಗೆ, ಅದು ಹುಟ್ಟುಹಾಕುವ ಆಸೆಯ ಬಗ್ಗೆ ನಾವು ಯಾವತ್ತೂ ಎಚ್ಚರಿಕೆಯಿಂದಲೇ ಇರಬೇಕು. ಅಪ್ಪಿತಪ್ಪಿ ಹಣ ಅನ್ನುವುದೇ ನಮ್ಮ ಅಂತಿಮ ಗುರಿಯಾದರೆ ಅದರತ್ತ ಸಾಗಲು, ಒಂದು ಸಾಧನೆಗೆ-ಪ್ರೇರೇಪಣೆಗೆ ಕಾರಣವಾಗಬೇಕೇ ಹೊರತು ಕೆಟ್ಟದಾರಿ ಹಿಡಿಯಲು ಕಾರಣವಾಗಬಾರದು.

ಈ ಸಿನಿಮಾದಲ್ಲಿ ಯಾರಿಗೂ ಮೋಸವಾಗಲಿಲ್ಲ ಅಲ್ಲವೇ ಅಂತ ನೀವನ್ನಬಹುದು. ಸರ್ಕಾರಕ್ಕೆ ಹೋಗಬೇಕಿದ್ದ ತೆರಿಗೆ ಹಣ ಮೋಸವಾಯಿತು. ಶೇರ್ ಮಾರುಕಟ್ಟೆಯಲ್ಲಿ ಮೋಸದ ವ್ಯವಹಾರ ಮಾಡಿದ್ದರಿಂದ ಲಕ್ಷಾಂತರ ಜನರ ಹಣ ಹೋಯ್ತು. ಮುಖ್ಯವಾಗಿ ಪರೋಕ್ಷವಾಗಿ ನಡೆದ ದೊಡ್ಡ ದೊಡ್ಡ ಭ್ರಷ್ಟಾಚಾರದಲ್ಲಿ ಆತ ನೇರವಾಗಿ ಭಾಗಿಯಾದ ಅಲ್ಲವೇ?! ಸಿನಿಮಾ ಕೊನೆಯಾಗುವುದೂ ಕೂಡ ಆತ ಬೇರೆ ದೇಶವೊಂದರಲ್ಲಿ ತಾನು ಗಳಿಸಿದ ಹಣದಿಂದ ಮನೆ ಮಾಡಿಕೊಂಡು, ವ್ಯವಹಾರವೊಂದನ್ನು ಶುರು ಮಾಡಿ ಹಾಯಾಗಿದ್ದಾನೆ ಅಂದಾಗ. ಈಗ ಈ ಸಿನಿಮಾ ಕೊಟ್ಟ ಸಂದೇಶವಾದರೂ ಏನು?

ಇದನ್ನು ಬರೀ ಕಥೆ, ಮನರಂಜನೆಗೆ ಅನ್ನುವಂತೆ ಬಿಡಲಾಗುವುದಿಲ್ಲ. ಈಗ ಬರುತ್ತಿರುವ ಸಿನಿಮಾಗಳೆಲ್ಲ ಈ ರೀತಿಯೇ ಇವೆ. ಹಾಗೆ ನೋಡಿದರೆ ಪುಷ್ಪ, ಕೆಜಿಎಫ್ ಎಲ್ಲವೂ ಈ ಬಗೆಯ ನೆಗೆಟಿವ್ ಶೇಡ್ ಇರುವ ಸಿನಿಮಾಗಳೇ. ಯಾವ್ಯಾವೋ ರೌಡಿಯಿಸಂ ಸಿನಿಮಾಗಳಲ್ಲೇ ಕೊನೆಗೊಂದು ಸಂದೇಶ ಇರುತ್ತೆ. ಆದರೆ ಪಕ್ಕಾ ಫ್ಯಾಮಿಲಿ ಸಿನಿಮಾ ಅನ್ನುವ ವೇಷದಲ್ಲ್ ಬರುವ ‘ಲಕ್ಕಿ ಬಾಸ್ಕರ್’ ಥರದ ಸಿನಿಮಾಗಳು ಕೊಡುವ ನೆಗೆಟಿವ್ ಮೆಸೇಜುಗಳನ್ನು ನಾವು ತಳ್ಳಿಹಾಕುವಂತಿಲ್ಲ.

A good movie with a bad message & A bad Movie with a good Message! ಇವೆರಡರ ನಡುವೆ ಇರುವ ವ್ಯತ್ಯಾಸವೇ ಅದು. ಸಿನಿಮಾನೇ ಚೆನ್ನಾಗಿಲ್ಲ ಅಂದಾಗ ಅದು ಒಳ್ಳೆಯ ಸಂದೇಶ ಕೊಟ್ಟರೂ ಜನರಿಗೆ ತಲುಪದೇ ಹೋಗಬಹುದು. ಆದರೆ ಸಿನಿಮಾ ಚೆನ್ನಾಗಿದ್ದು ಅದರೊಳಗೆ ಕೆಟ್ಟ ಸಂದೇಶ ದಾಟಿಸುವಂತಿದ್ದರೆ ಅದು ಅಪಾಯಕಾರಿ. ಅದು ಹಾಲಿನೊಳಗೆ ವಿಷ ಹಾಕಿ ಕೊಟ್ಟಂತೆಯೇ ಒಳ್ಳೆಯ ರೂಪದಲ್ಲಿ ಒಳಸೇರಿ ಬೇರೆ ರೀತಿಯಲ್ಲಿ ಪರಿಣಾಮವನ್ನುಂಟು ಮಾಡುತ್ತದೆ. ನಾವು ಇದರ ಬಗ್ಗೆ ಎಚ್ಚರಿಕೆಯಿಂದಿರಬೇಕು!

LEAVE A REPLY

Connect with

Please enter your comment!
Please enter your name here