ಹನು ರಾಘವಪುಡಿ ನಿರ್ದೇಶನದ ಜನಪ್ರಿಯ ಲವ್‌ ಸಿನಿಮಾ ‘ಸೀತಾ ರಾಮಂ’ ಪ್ರೇಮಿಗಳ ದಿನವಾದ ಇಂದು (ಫೆ. 14) ಮರುಬಿಡುಗಡೆಯಾಗಿದೆ. ಈ ಹಿಂದೆ 2022ರ ಆಗಸ್ಟ್‌ 5ರಂದು ಸಿನಿಮಾ ತೆರೆಕಂಡು ದೊಡ್ಡ ಯಶಸ್ಸು ಕಂಡಿತ್ತು. ದುಲ್ಕರ್‌ ಸಲ್ಮಾನ್‌ ಮತ್ತು ಮೃಣಾಲ್‌ ಠಾಕೂರ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರದ ವಿಶೇಷ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ.

ದುಲ್ಕರ್ ಸಲ್ಮಾನ್ ಮತ್ತು ಮೃಣಾಲ್ ಠಾಕೂರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಜನಪ್ರಿಯ ತೆಲುಗು ಲವ್‌ ಸಿನಿಮಾ ‘ಸೀತಾ ರಾಮಂ’ ಪ್ರೇಮಿಗಳ ದಿನದಂದು ಮರು-ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ಹನು ರಾಘವಪುಡಿ ನಿರ್ದೇಶಿಸಿದ್ದಾರೆ. ಆಗಸ್ಟ್‌ 5, 2022ರಲ್ಲಿ ತೆರೆಕಂಡಿದ್ದ ಈ ಸಿನಿಮಾ ಭಾವನಾತ್ಮವಾಗಿ ಪ್ರೇಕ್ಷಕರನ್ನು ತಟ್ಟಿತ್ತು. ವಿಮರ್ಶಾತ್ಮಕವಾಗಿಯೂ ಮೆಚ್ಚುಗೆ ಪಡೆದಿತ್ತು. ಇಂದು (ಫೆಬ್ರವರಿ 14) ಸಿನಿಮಾ ಮರು ಬಿಡುಗಡೆಯಾಗಲಿದೆ. ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ. ಒಂದು ಪ್ರೇಮಪತ್ರದಿಂದ ಶುರುವಾಗುವ ಈ ಕತೆಯು ಪ್ರಾಮಾಣಿಕ ಪ್ರೀತಿಗೆ ಉತ್ತಮ ಉದಾಹರಣೆ ಎಂದು ಮೆಚ್ಚುಗೆ ಪಡೆಯಿತು. ಒಬ್ಬ ಅನಾಥ ಸೈನಿಕ ಲೆಫ್ಟಿನೆಂಟ್ ರಾಮನಿಗೋಸ್ಕರ ಇಡೀ ಸಾಮ್ರಾಜ್ಯವನ್ನೇ ಬಿಟ್ಟು ಬರುವ ಹೈದರಾಬಾದಿನ ರಾಣಿ ನೂರ್‌ ಜಹಾನ್‌, ರಾಮ್ ಅನಾಥನೆಂದು ತಿಳಿದಿದ್ದು ಸಹ ಅವನನ್ನು ಪ್ರೀತಿಸುತ್ತಾಳೆ. ವಿಳಾಸವಿಲ್ಲದೇ ರಾಮನನ್ನು ತಲುಪುತ್ತಿದ್ದ ಆ ಪತ್ರಗಳು ರಾಮನ ಬದುಕಿನಲ್ಲಿ ತಿರುವು ಪಡೆಯುತ್ತದೆ. ಪತ್ರಗಳಲ್ಲಿ ನೂರ್‌ ಜಹಾನ್‌ ತಾನು ರಾಣಿಯೆಂಬುದನ್ನು ಮುಚ್ಚಿಟ್ಟು ಸಾಮಾನ್ಯಳಂತೆ ಸೀತಾ ಮಹಾಲಕ್ಷಿ ಹೆಸರಿನಲ್ಲಿ ಪತ್ರಗಳನ್ನು ಬರೆದು ರಾಮನಿಗೆ ಕಳುಹಿಸುತ್ತಿರುತ್ತಾಳೆ.

ಪತ್ರದ ವಿಳಾಸವನ್ನು ಹುಡುಕಿ ಹೊರಟ ರಾಮನಿಗೆ ಸೀತಾ ಹಾಗೂ ಅವಳ ವಿಳಾಸ ಕೊನೆಗೂ ಸಿಗುತ್ತದೆ. ಸೀತಾಳನ್ನು ಆಸ್ಥಾನದ ರಾಣಿಯ ನೃತ್ಯ ಶಿಕ್ಷಕಿ ಎಂದು ತಿಳಿಯುತ್ತಾನೆ. ನಂತರ ಹೈದರಾಬಾದಿನ ಪ್ರತಿಷ್ಠಿತ ರಾಜ ಮನೆತನದ ರಾಣಿ ನೂರ್‌ ಜಹಾನ್‌ ರಾಮನೊಂದಿಗೆ ಸಾಮಾನ್ಯರಂತೆ ಸಮಯ ಕಳೆಯಲು ಆರಂಭಿಸುತ್ತಾಳೆ. ಕಾಶ್ಮೀರದಲ್ಲಿ ಸೈನಿಕನಾಗಿ ಕಾರ್ಯನಿರ್ವಹಿಸುತ್ತಿದ್ದ ರಾಮ್, ಸೀತಾಳನನ್ನು ತನ್ನೊಟ್ಟಿಗೆ ಬರುವಂತೆ ಆಹ್ವಾನಿಸುತ್ತಾನೆ. ಸೀತಾ ಬಾರದಿದ್ದರೂ ಮರಳಿ ಕಾಶ್ಮೀರಕ್ಕೆ ಹೋಗುತ್ತಾನೆ. ಆಗ ರಾಮನೊಂದಿಗೆ ಹೋಗದ ಸೀತಾ ಇನ್ನೊಂದು ರಾಜ ಮನೆತನದಿಂದ ಬಂದಿದ್ದ ಮದುವೆ ಪ್ರಸ್ತಾವನೆಯನ್ನು ತಿರಸ್ಕರಿಸಿ ತನ್ನ ಆಸ್ಥಾನವನ್ನು ಸಂಪೂರ್ಣವಾಗಿ ತೊರೆದು ರಾಮನಿಗಾಗಿ ಕಾಶ್ಮೀರಕ್ಕೆ ತೆರಳುತ್ತಾಳೆ. ಕೆಲವೇ ಸಮಯ ಸೀತಾಳೊಟ್ಟಿಗೆ ಸಮಯ ಕಳೆದ ರಾಮನಿಗೆ ಪಾಕಿಸ್ತಾನಕ್ಕೆ ಹೋಗಿ ಯುದ್ದ ಮಾಡುವ ಸಂದರ್ಭ ಎದುರಾಗುತ್ತದೆ. ಯುದ್ದಕ್ಕೆ ಹೊರಡುವ ರಾಮ ಸೀತಾರ ಕೊನೆಯ ಭೇಟಿ ಅದಾಗಿರುತ್ತದೆ. ಪಾಕಿಸ್ತಾನದ ಉಗ್ರರ ಬಂಧನಕ್ಕೆ ಒಳಪಟ್ಟಾದ ಮೇಲೆ ರಾಮನಿಗೆ ಸೀತಾ ಆಸ್ಥಾನದ ರಾಣಿ ಎಂಬ ಸತ್ಯ ತಿಳಿಯುತ್ತದೆ. ಆದರೆ ಅವನು ಉಗ್ರರ ಬಂಧನಕ್ಕೆ ಒಳಪಟ್ಟು ವೀರ ಮರಣ
ಹೊಂದಿರುತ್ತಾನೆ.

ರಾಮ್‌ ತನ್ನ ಸಾವಿಗೂ ಮುನ್ನ ಸೀತಾಳಿಗಾಗಿ ಕಡೆಯ ಪತ್ರವೊಂದನ್ನು ಬರೆದಿರುತ್ತಾನೆ. ಆ ಪತ್ರದಿಂದ ಇಡೀ ಚಿತ್ರಕಥೆ ಸಾಗುತ್ತದೆ. ಈ ಪತ್ರ 20 ವರ್ಷಗಳ ನಂತರ ಸೀತಾಳಿಗೆ ತಲುಪುತ್ತದೆ. ಆ 20 ವರ್ಷಗಳು ಸಹ ಸೀತಾ, ರಾಮನ ಬರುವಿಕೆಗಾಗಿ ಕಾಯುತ್ತಿರುತ್ತಾಳೆ. ಆ ಪತ್ರವನ್ನು ರಶ್ಮಿಕಾ ಮಂದಣ್ಣ (ಪಾಕಿಸ್ತಾನಿ ಯುವತಿ) ಸೀತಾಳಿಗೆ ತಲುಪಿಸುತ್ತಾಳೆ. ‘ಯುದ್ಧದಲ್ಲಿ ಅರಳಿದ ಪ್ರೇಮಕಥೆ’ ಅಡಿಬರಹವನ್ನು ಹೊಂದಿರುವ ಈ ಚಿತ್ರದ ಪ್ರತೀ ದೃಶ್ಯಗಳು ಹಾಗೂ ಹಾಡುಗಳು ಭಾವನಾತ್ಮಕವಾಗಿ ಸೆಳೆದಿದ್ದವು. ಈ ಚಿತ್ರವು ದುಲ್ಕರ್‌ ಸಲ್ಮಾನ್‌ ಮತ್ತು ಮೃಣಾಲ್‌ ವೃತ್ತಿ ಜೀವನದಲ್ಲಿ ಅತೀ ಹೆಚ್ಚು ಜನಪ್ರಿಯತೆ ತಂದುಕೊಟ್ಟ ಚಿತ್ರವಾಯ್ತು. ಚಿತ್ರದಲ್ಲಿ ಗೌತಮ್ ವಾಸುದೇವ್ ಮೆನನ್, ಸುಮಂತ್, ಸಚಿನ್ ಖೇಡೇಕರ್, ಜಿಶು ಸೇನ್‌ ಗುಪ್ತಾ ಮತ್ತು ಮುರಳಿ ಶರ್ಮಾ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸಿನಿಮಾಗೆ ವಿಶಾಲ್ ಚಂದ್ರಶೇಖರ್ ಸಂಗೀತ ಸಂಯೋಜಿಸಿದ್ದು, ಕೋಟಗಿರಿ ವೆಂಕಟೇಶ್ವರ ರಾವ್ ಸಂಕಲನ ನಿರ್ವಹಿಸಿದ್ದಾರೆ. ಪಿ ಎಸ್ ವಿನೋದ್ ಮತ್ತು ಶ್ರೇಯಸ್ ಕೃಷ್ಣ ಛಾಯಾಗ್ರಹಣ, ಹನು ರಾಘವಪುಡಿ, ಜಯ ಕೃಷ್ಣ ಮತ್ತು ರಾಜ್‌ಕುಮಾರ್ ಕಂದಮುಡಿ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಚಿತ್ರ Swapna Cinemas ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗಿದ್ದು, Vyjayanthi Movies ಪ್ರಸ್ತುತ ಪಡಿಸಿದೆ.

LEAVE A REPLY

Connect with

Please enter your comment!
Please enter your name here