ಚಿತ್ರನಿರ್ಮಾಪಕ ಎಸ್‌ ಪಿ ವರದರಾಜು ಅವರ ಹೆಸರಿನಲ್ಲಿ ನೀಡಲಾಗುವ ಪ್ರಶಸ್ತಿಗೆ 2025ನೇ ಸಾಲಿನಲ್ಲಿ ಕನ್ನಡ ಚಿತ್ರರಂಗದ ಹಿರಿಯ ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ ನಾರಾಯಣ ಅವರು ಆಯ್ಕೆಯಾಗಿದ್ದಾರೆ. ರಂಗಭೂಮಿ ಕ್ಷೇತ್ರದಿಂದ ಹಿರಿಯ ನಟಿ ಶಾಂತಾಬಾಯಿ ಬೀಳಗಿ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಮುಂದಿನ ವಾರ ಫೆಬ್ರವರಿ 11ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಚಿತ್ರನಿರ್ಮಾಪಕ ಎಸ್‌ ಪಿ ವರದರಾಜು ಅವರ ಆತ್ಮೀಯ ಬಳಗದಿಂದ ಪ್ರತಿ ವರ್ಷ ಎಸ್‌ ಪಿ ವರದರಾಜು ಅವರ ಹೆಸರಿನಲ್ಲಿ ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರದ ತಲಾ ಒಬ್ಬರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. 2025ನೇ ಸಾಲಿನಲ್ಲಿ ಚಲನಚಿತ್ರ ಕ್ಷೇತ್ರದಿಂದ ಹಿರಿಯ ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತ್ ಅಶ್ವತ್ಥ ನಾರಾಯಣ ಮತ್ತು ರಂಗಭೂಮಿ ಕ್ಷೇತ್ರದಿಂದ ಹಿರಿಯ ನಟಿ ಶಾಂತಾಬಾಯಿ ಬೀಳಗಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮುಂದಿನ ವಾರ ಫೆಬ್ರವರಿ 11ರಂದು ಸಂಜೆ 5.30ಕ್ಕೆ ಬೆಂಗಳೂರಿನ ನಯನ ಸಂಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಹಿರಿಯ ನಟಿ, ವಿಧಾನ ಪರಿಷತ್‌ ಸದಸ್ಯೆ ಉಮಾಶ್ರೀ ಪ್ರಶಸ್ತಿ ಪ್ರದಾನ ಮಾಡಲಿದ್ದು, ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಿತ್ರನಿರ್ದೇಶಕ ಪಿ ಶೇಷಾದ್ರಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಎಸ್‌ ಪಿ ವರದರಾಜು ಬಳಗದವರಾದ ಸಾಹಿತಿ ಹಾಗೂ ಚಿತ್ರನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರ ಆಶಯ ನುಡಿ ಇರಲಿದೆ.

ಎಸ್‌ ಪಿ ವರದರಾಜು (1935-2006) | ಡಾ ರಾಜಕುಮಾರ್ ಮತ್ತು ಎಸ್ ಪಿ ವರದರಾಜು ಅವರು ಸೋದರ ಸಂಬಂಧಕ್ಕೆ ಒಂದು ಅಪೂರ್ವ ರೂಪಕವಾಗಿದ್ದರು. ತಮ್ಮ ಬದುಕನ್ನು ರೂಪಿಸಿದ ಪ್ರಮುಖ ಪ್ರೇರಣೆಗಳ ಪಟ್ಟಿಯಲ್ಲಿ ವರದರಾಜು ಅವರಿಗೆ ಗಣ್ಯಸ್ಥಾನ ನೀಡಿದ ಡಾ ರಾಜಕುಮಾರ್ ಅವರು ಕಿರಿಯ ಸೋದರನಿಗೆ ಹಿರಿಯ ಸ್ಥಾನ ನೀಡಿ ಹಿರಿಯರಾದರು. ವರದರಾಜು ಅವರು ಅಣ್ಣನ ಪ್ರೀತಿ ವಿಶ್ವಾಸಗಳಿಗೆ ಸ್ವಲ್ಪ ಮಾತ್ರವೂ ಚ್ಯುತಿ ತಾರದೆ ಜೀವದ ಗೆಳೆಯನಂತೆ ಕಡೆಯವರೆಗೂ ಕಾವಲಾಗಿ ನಿಂತರು. ಡಾ ರಾಜ್ ಅವರ ಕಲಾ ಬದುಕಿನ ಒಬ್ಬ ಮುಖ್ಯ ವಿನ್ಯಾಸಕರಾದರು.

ಡಾ ರಾಜಕುಮಾ‌ರ್ ಅವರಂತೆಯೇ ವರದರಾಜು ಅವರು ವೃತ್ತಿರಂಗಭೂಮಿಯ ಬದುಕಲ್ಲಿ ಬೆರೆತು ಬೆಳೆದವರು. ರಾಜ್‌ ಅವರೇ ಹೇಳಿದಂತೆ ವರದರಾಜು ಅವರು ಹಾಸ್ಯಪಾತ್ರಗಳಲ್ಲಿ ಎತ್ತಿದ ಕೈ. ತಂದೆ ಪುಟ್ಟಸ್ವಾಮಯ್ಯನವರು ವರದರಾಜು ಅವರ ಬಹುಮುಖ ಆಸಕ್ತಿಯನ್ನು ಗಮನಿಸಿ ಪೋಸ್ಟರ್ ಬರೆಯುವ ಕೆಲಸಕ್ಕೆ ಸೇರಿಸಿದ್ದೂ ಉಂಟು. ಹೀಗೆ ರಂಗಭೂಮಿಯ ಮೇಲೆ ಮತ್ತು ತೆರೆಯ ಹಿಂದೆ ಸಮಾನ ಕ್ರಿಯಾಶೀಲತೆ ಮೂಲಕವೇ ಸದಭಿರುಚಿಯನ್ನು ಕಟ್ಟುವ ಪ್ರಬುದ್ಧ ಸಾಂಸ್ಕೃತಿಕ ಪ್ರೇರಕರಾದರು. ಡಾ ರಾಜಕುಮಾರ್ ಅವರು ಚಿತ್ರರಂಗ ಪ್ರವೇಶ ಮಾಡಿ ಪ್ರಸಿದ್ಧರಾದ ಮೇಲೆ ಕತೆ ಆಯ್ಕೆ, ಚಿತ್ರಕತೆಯ ಚರ್ಚೆ ಮತ್ತು ಚಿತ್ರದ ಒಟ್ಟು ವಿನ್ಯಾಸಕ್ಕೆ ಒತ್ತಾಸೆಯಾಗುವ ಮೂಲಕ ಕನ್ನಡ ಚಿತ್ರರಂಗಕ್ಕೆ ನೇಪಥ್ಯದ ನೆರವು ನೀಡಿದರು.

ಪಾರ್ವತಮ್ಮ ರಾಜಕುಮಾರ್ ಅವರು ಸ್ವಂತ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿದ ಮೇಲೆ ಈ ಸಂಸ್ಥೆಯಿಂದ ನಿರ್ಮಾಣಗೊಂಡ ಎಲ್ಲ ಚಿತ್ರಗಳ ವಸ್ತು ವಿನ್ಯಾಸದ ಪ್ರಮುಖ ಶಕ್ತಿಯಾಗಿದ್ದ ವರದರಾಜು ಅವರು ಸದಭಿರುಚಿಗೆ ಚ್ಯುತಿ ತರುವ ಕೆಲಸವನ್ನು ಯಾವತ್ತೂ ಮಾಡಲಿಲ್ಲ. ಡಾ ರಾಜ್ ಅವರ ಅಭಿನಯದ ಚಿತ್ರಗಳು ಮತ್ತು ಶ್ರೀಮತಿ ಪಾರ್ವತಮ್ಮನವರ ಸ್ವಂತ ನಿರ್ಮಾಣದ ಚಿತ್ರಗಳು, ಸಕುಟುಂಬ ಪರಿವಾರ ಸಮೇತ ಯಾವ ಮುಜುಗರವೂ ಇಲ್ಲದಂತೆ ನೋಡಬಹುದಾದ ಚಿತ್ರಗಳೆಂಬ ಕೀರ್ತಿಯನ್ನು ಪಡೆದಿದ್ದು, ವರದರಾಜು ಅವರು ಪಾಲುದಾರರಾಗಿ ನಿರ್ಮಿಸಿದ ಚಿತ್ರಗಳು ಸಹ ಕನ್ನಡ ಚಿತ್ರರಂಗದ ಮೌಲ್ಯಕ್ಕೆ ಕಾರಣವಾಗಿವೆ. ಹೀಗೆ ಏನಿಲ್ಲವೆಂದರೂ ಸುಮಾರು 250ಕ್ಕೂ ಹೆಚ್ಚು ಕನ್ನಡ ಚಿತ್ರಗಳ ಹಿಂದೆ ವರದರಾಜು ಅವರ ಸೃಜನಶೀಲತೆ ಮತ್ತು ಸದಭಿರುಚಿಗಳು ಮಹತ್ವದ ಪಾತ್ರವಹಿಸಿದೆ.

ಡಾ ರಾಜಕುಮಾರ್ ಅವರಂತೆಯೇ ವರದರಾಜು ಅವರು ಹೆಚ್ಚಿನ ಔಪಚಾರಿಕ ಶಿಕ್ಷಣ ಪಡೆದಿರಲಿಲ್ಲವಾದರೂ ಸ್ವಯಂ ಸ್ಪೂರ್ತಿಯಿಂದ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗಳ ನಿರಂತರ ಅಧ್ಯಯನವನ್ನು ರೂಢಿಸಿಕೊಂಡಿದ್ದರು. ಕುವೆಂಪು, ಬೇಂದ್ರೆ, ಕಾರಂತ ಹೀಗೆ ಕನ್ನಡ ಸಾಹಿತ್ಯ ದಿಗ್ಗಜರ ಕೃತಿಗಳನ್ನು ಓದಿದ್ದರು. ಸಮಕಾಲೀನ ಸಾಂಸ್ಕೃತಿಕ ಬೆಳವಣಿಗೆಗಳನ್ನು ಅರ್ಥಮಾಡಿಕೊಂಡಿದ್ದರು. ಸ್ವಭಾವತಃ ಮಿತಭಾಷಿಯಾಗಿದ್ದರೂ ಆತ್ಮೀಯರೊಂದಿಗೆ ಸಾಹಿತ್ಯ ಸಂಸ್ಕೃತಿಗಳ ಬಗ್ಗೆ ಸುದೀರ್ಘ ಸಂವಾದ ನಡೆಸುತ್ತಿದ್ದರು. ನಿಜವಾದ ಅರ್ಥದಲ್ಲಿ ಸದ್ದುಗದ್ದಲವಿಲ್ಲದ ಸಾರ್ಥಕ ಸಾಧಕರಾಗಿದ್ದ ವರದರಾಜು ಅವರು 2006ರ ಫೆಬ್ರವರಿ 8ರಂದು ಅಗಲಿದರು.

ಪ್ರಗತಿ ಅಶ್ವತ್ಥನಾರಾಯಣ | ಕನ್ನಡ ಚಿತ್ರರಂಗದ ಬೆಳವಣಿಗೆಯ ಹಾದಿಯಲ್ಲಿ ‘ಪ್ರಗತಿ’ ಸ್ಟುಡಿಯೋ ಹೆಸರು ಕಡ್ಡಾಯವಾಗಿ ಪ್ರಸ್ತಾಪವಾಗುತ್ತದೆ. ಸ್ಥಿರಚಿತ್ರ ಛಾಯಾಗ್ರಹಣದ ಮೂಲಕ ನಾಲ್ಕು ದಶಕಗಳ ಕಾಲ ಕನ್ನಡ ಚಿತ್ರಜಗತ್ತಿನ ಭಾಗವಾಗಿದ್ದು ‘ಪ್ರಗತಿ’ಯ ಹೆಮ್ಮೆ. ಸ್ಥಿರಚಿತ್ರ ಛಾಯಾಗ್ರಹಣದಲ್ಲಿ ಅಶ್ವತ್ಥ ಅವರದ್ದು ನಾಲ್ಕು ದಶಕಗಳ ಅನುಭವ. ಅಧಿಕೃತವಾಗಿ ಅಶ್ವತ್ಥರ ಸ್ಥಿರಚಿತ್ರ ಛಾಯಾಗ್ರಹಣ ವೃತ್ತಿ ಆರಂಭವಾಗಿದ್ದು ಮದರಾಸಿನಲ್ಲಿ ‘ಬೆಳ್ಳಿಮೋಡ’ ಚಿತ್ರದೊಂದಿಗೆ. ಅವರು ಛಾಯಾಗ್ರಹಣ ಮಾಡಿದ ಕೊನೆಯ ಚಿತ್ರ ‘ಪ್ರೇಮ ಪ್ರೇಮ ಪ್ರೇಮ’.

‘ಪ್ರಗತಿ’ ಸ್ಟುಡಿಯೋ ಆರಂಭಿಸಿದ ನಂತರ ಸುಮಾರು 275 ಸಿನಿಮಾಗಳಿಗೆ ಅಶ್ವತ್ಥರು ಸ್ಟಿಲ್ ಫೋಟೋಗ್ರಫಿ ಮಾಡಿದ್ದಾರೆ. ಮದರಾಸಿನಲ್ಲಿದ್ದಾಗ ಮಲಯಾಳಂ ಚಿತ್ರಗಳೂ ಸೇರಿದಂತೆ 25ಕ್ಕೂ ಹೆಚ್ಚು ಚಿತ್ರಗಳಿಗೆ ದುಡಿದಿದ್ದರು. ಒಟ್ಟಾರೆ ಸ್ಟಿಲ್ ಫೋಟೋಗ್ರಾಫರ್ ಆಗಿ ಅವರು ಕೆಲಸ ಮಾಡಿದ ಚಿತ್ರಗಳ ಸಂಖ್ಯೆ 300 ದಾಟುತ್ತದೆ. ಪುಟ್ಟಣ್ಣ ಕಣಗಾಲ್ ನಿರ್ದೇಶನದ ಹನ್ನೊಂದು, ಸಿದ್ದಲಿಂಗಯ್ಯನವರ ಹದಿನಾಲ್ಕು ಸಿನಿಮಾಗಳಿಗೆ ಅಶ್ವತ್ಥರು ಸ್ಥಿರಚಿತ್ರ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ್ದಾರೆ.

‘ಪ್ರಗತಿ’ಯಲ್ಲಿ ಹತ್ತಾರು ಸ್ಟಿಲ್ ಫೋಟೋಗ್ರಾಫರ್‌ಗಳು ತಯಾರಾಗಿದ್ದಾರೆ. ಮೈಲುಗಲ್ಲು ಎನಿಸಿದ ಹಲವಾರು ಕನ್ನಡ ಚಿತ್ರಗಳಿಗೆ ಕಾರ್ಯನಿರ್ವಹಿಸಿರುವ ಅಶ್ವತ್ಥರ ಸಂಗ್ರಹದಲ್ಲಿ ದೊಡ್ಡ ಸಂಖ್ಯೆಯ ಫೋಟೋ ನೆಗೆಟಿವ್ ಇವೆ. ಸಿನಿಮಾ ಸ್ಥಿರಚಿತ್ರ, ಸಿನಿಮಾಗೆ ಸಂಬಂಧಿಸಿದ ಇತರೆ ಫೋಟೋ, ಚಿತ್ರೀಕರಣದ ಸಂದರ್ಭದ ಕ್ಲಿಪಿಂಗ್, ಚಿತ್ರೋದ್ಯಮದ ಕಾರ್ಯಕ್ರಮ, ನಟ-ನಟಿಯರ ಭಾವಚಿತ್ರ, ಕಲಾವಿದರ ಕುಟುಂಬಗಳ ವೈಯಕ್ತಿಕ ಸಮಾರಂಭಗಳು… ಹೀಗೆ ಅವರ ಸಂಗ್ರಹದಲ್ಲಿನ ಅಸಂಖ್ಯಾತ ಫೋಟೋಗಳು ಕನ್ನಡ ಚಿತ್ರರಂಗದ ಇತಿಹಾಸ ದಾಖಲಿಸುತ್ತವೆ.

ಶಾಂತಾಬಾಯಿ ಬೀಳಗಿ | ಕನ್ನಡ ರಂಗಭೂಮಿಯನ್ನು ಸಮೃದ್ಧಗೊಳಿಸಿದ ಪ್ರಮುಖ ಕಲಾವಿದೆಯರ ಸಾಲಿನಲ್ಲಿ ಶಾಂತಾಬಾಯಿ ಬೀಳಗಿಯವರನ್ನು ಹೆಸರಿಸಲೇಬೇಕು. ಇವರ ಕಲಾಸೇವೆಯು ಕನ್ನಡ ರಂಗಭೂಮಿಯ ಚರಿತ್ರೆಯ ಭಾಗವಾಗಿ ಬೆಳೆದಿದೆ. ಶ್ರೀ ಸುಂದರಾಚಾರ್ಯ ಮತ್ತು ಶ್ರೀಮತಿ ಲಕ್ಷ್ಮಮ್ಮನವರ ಪುತ್ರಿಯಾದ ಇವರು ಕಡು ಬಡತನದಲ್ಲೇ ಬೆಳೆದರು. ಕುಟುಂಬ ನಿರ್ವಹಣೆಯ ಹೊಣೆ ಹೊತ್ತು 14ನೇ ವಯಸ್ಸಿಗೇ ರಂಗಭೂಮಿ ಪ್ರವೇಶಿಸಿದರು. ತಮ್ಮ ಪ್ರತಿಭೆಯಿಂದ ಜನಮಾನಸವನ್ನು ಸೆಳೆದ ಅಭಿನೇತ್ರಿಯಾದರು. ಅನೇಕ ನಾಟಕ ಕಂಪನಿಗಳಲ್ಲಿ ಪ್ರಮುಖ ಪಾತ್ರಧಾರಿಯಾಗಿ ಅಭಿನಯಿಸಿದರು.

ಮೈದರಗಿ ವಾಮನರಾಯರ ನಾಟಕ ಕಂಪನಿ, ಬಾಗಲಕೋಟೆಯ ಶ್ರೀ ರೇಣುಕಾಚಾರ್ಯ ಸಂಘ, ಬಾಪುಗೌಡರ ನಾಟ್ಯಸಂಘ, ನ್ಯಾಮತಿಯ ಮಹೇಶ ನಾಟ್ಯಸಂಘ, ಏಣಗಿ ಬಾಳಪ್ಪನವರ ನಾಟಕ ಕಂಪನಿ, ಗುಡಗೇರಿ ಬಸವರಾಜು ನಾಟಕ ಕಂಪನಿ, ದೊಡ್ಡತಾತ ಶಿವಪುತ್ರಯ್ಯನವರ ನಾಟಕ ಕಂಪನಿ – ಇವು ಶಾಂತಾಬಾಯಿ ಬೀಳಗಿಯವರು ವೃತ್ತಿ ಬದುಕನ್ನು ಕಟ್ಟಿಕೊಂಡ ಕೆಲವು ಪ್ರಮುಖ ನಾಟಕ ಕಂಪನಿಗಳು. ಕೊಂಡು ತಂದ ಗಂಡ, ಮಲಮಗಳು, ವರನೋಡಿ ಹೆಣ್ಣುಕೊಡು, ತಾಯಿ ಕರುಳು, ಬದುಕು ಬಂಗಾರವಾಯ್ತು, ರಾಜಾ ವಿಕ್ರಮ, ಪದ್ಮಾವತಿ, ಹೇಮರೆಡ್ಡಿ ಮಲ್ಲಮ್ಮ – ಇವು ಶಾಂತಾಬಾಯಿ ಬೀಳಗಿಯವರು ನಾಯಕಿ ಪಾತ್ರಧಾರಿಯಾಗಿದ್ದ ಕೆಲವು ನಾಟಕಗಳು. ಇವರ ಪತಿ ಶ್ರೀ ಚಂದ್ರಶೇಖರ ಬೀಳಗಿಯವರೂ ಕಲಾವಿದರು. ಈ ದಂಪತಿಗೆ ಮೂವರು ಮಕ್ಕಳು. ಇವರದು ರಂಗಭೂಮಿಯನ್ನೇ ನಂಬಿ ಬದುಕು ಸವೆಸಿದ ಕುಟುಂಬ. ಶ್ರೀಮತಿ ಶಾಂತಾದೇವಿ ಬೀಳಗಿಯವರ ರಂಗಭೂಮಿ ಸಾಧನೆಗಾಗಿ ಅನೇಕ ಸಂಸ್ಥೆಗಳು ಸನ್ಮಾನ ಮಾಡಿ ಗೌರವಿಸಿವೆ.

ಇಲ್ಲಿಯವರೆಗಿನ ಎಸ್‌ ಪಿ ವರದರಾಜು ಪ್ರಶಸ್ತಿ ಪುರಸ್ಕೃತರು

2007 – ಆರ್ ಪರಮಶಿವನ್, ಎಂ ಎನ್ ಲಕ್ಷ್ಮೀದೇವಿ | 2008 – ಆರ್ ನಾಗರತ್ನಮ್ಮ, ಕೆ ಎಂ ರತ್ನಾಕರ್ | 2009 – ಸರೋಜಮ್ಮ ಧುತ್ತರಗಿ, ಶನಿಮಹದೇವಪ್ಪ | 2010 – ಬಿ ಪಿ ರಾಜಮ್ಮ, ಸದಾಶಿವ ಬ್ರಹ್ಮಾವರ | 2011 – ಲಾಲ್‌ ಮಹಮದ್ ಅಲ್ದಾಳ, ರೇವತಿ ಕಲ್ಯಾಣಕುಮಾ‌ರ್ | 2012 – ರಂಗನಾಯಕಮ್ಮ, ಅಶ್ವತ್ಥನಾರಾಯಣ | 2013 – ಮಮತಾ ಗುಡೂರು, ರಾಜೇಂದ್ರಕೃಷ್ಣ | 2014 – ಫಕೀರಪ್ಪ ವರವಿ, ಶಾಂತಮ್ಮ | 2015 – ಜಯಕುಮಾರ್, ಬಿ ಜಯಾ | 2016- ಕೊಟ್ಟೂರು ಕೋಮಲಮ್ಮ, ಡಿಂಗ್ರಿ ನಾಗರಾಜ್ | 2017 – ಅಶೋಕ ಬಸ್ತಿ, ಎಸ್ ಕೆ ಪದ್ಮಾದೇವಿ | 2018 – ಪ್ರತಿಭಾ ನಾರಾಯಣ, ಎಂ ಎಸ್ ಉಮೇಶ್ | 2019 – ಇಂದಿರಮ್ಮ, ಚಿ ದತ್ತರಾಜ್ | 2020 – ಮಾಲತಿಶ್ರೀ ಮೈಸೂರು, ಹೊನ್ನವಳ್ಳಿ ಕೃಷ್ಣ | 2021 – ಕುಕನೂರು ಬಾಬಣ್ಣ (ಜಲಾಲುದ್ದೀನ್), ಸುರೇಖ | 2022 – ಪ್ರೇಮಾ ಹೊಸಮನಿ, ಚಿಕ್ಕಣ್ಣ | 2023 – ಡಿ ಲಲಿತಮ್ಮ, ಬೆಂಗಳೂರು ನಾಗೇಶ್ 2024 – ಅನ್ನಪೂರ್ಣ ಸಾಗರ, ಬಿ ಮಲ್ಲೇಶ್
(‘ಎಸ್‌ ಪಿ ವರದರಾಜು ಆತ್ಮೀಯರ ಬಳಗ’ದ ಸದಸ್ಯರು – ಪ್ರೊ ಬರಗೂರು ರಾಮಚಂದ್ರಪ್ಪ, ದೊಡ್ಡಹುಲ್ಲೂರು ರುಕ್ಕೋಜಿ, ಸುರೇಶ್‌ ಅರಸು, ಮುರಳೀಧರ ಹಾಲಪ್ಪ, ಗ್ರೀನ್‌ ಹೌಸ್‌ ವಾಸು, ಎಚ್‌ ಎನ್‌ ಗೋಪಾಲಕೃಷ್ಣ, ಚನ್ನ, ಡಾ ಎ ವಿ ಲಕ್ಷ್ಮೀನಾರಾಯಣ)

LEAVE A REPLY

Connect with

Please enter your comment!
Please enter your name here