ಸಂದೀಪ್‌ ಸುಕುಂದ್‌ ನಿರ್ದೇಶನದ ‘ಶಾಖಾಹಾರಿ’ ಸಿನಿಮಾದ ಫಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆಯಾಗಿದೆ. ಚಿತ್ರದಲ್ಲಿ ರಂಗಾಯಣ ರಘು ಅವರು ಬಾಣಸಿಗನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಲೆನಾಡಿನ ತೀರ್ಥಹಳ್ಳಿಯಲ್ಲಿ ಚಿತ್ರದ ಬಹುಪಾಲು ಚಿತ್ರೀಕರಣ ನಡೆದಿದೆ.

ರಂಗಾಯಣ ರಘು ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಶಾಖಾಹಾರಿ’ ಚಿತ್ರದ ಫಸ್ಟ್‌ಲುಕ್‌ ಪೋಸ್ಟರ್ ಬಿಡುಗಡೆಯಾಗಿದೆ. ಪೋಷಕ ಪಾತ್ರದಲ್ಲಿ ಹೆಚ್ಚಾಗಿ ನಟಿಸುತ್ತಿದ್ದ ರಂಗಾಯಣ ರಘು ಈ ಚಿತ್ರದಲ್ಲಿ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಸಂದೀಪ್‌ ಸುಂಕದ್‌ ನಿರ್ದೇಶಿಸಿದ್ದಾರೆ. ರಂಗಾಯಣ ರಘು ಎಂದರೆ ಅವರ ನಟನೆಯ ಹಾಸ್ಯದೃಶ್ಯಗಳು ಕಣ್ಮುಂದೆ ಬರುತ್ತವೆ. ವಿಶೇಷವಾಗಿ ಪೋಷಕ ಪಾತ್ರಗಳಲ್ಲಿ ಅವರು ಪ್ರೇಕ್ಷಕರನ್ನು ಹೆಚ್ಚು ಸೆಳೆದಿದ್ದರು. ಈಗ ಅವರು ‘ಶಾಖಾಹಾರಿ’ ಚಿತ್ರದಲ್ಲಿ ಬಾಣಸಿಗನಾಗಿ ಪಾತ್ರ ನಿರ್ವಹಿಸಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ ಅವರು ಚಿತ್ರದಲ್ಲಿ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಮಲೆನಾಡಿನ ತೀರ್ಥಹಳ್ಳಿ ಪ್ರದೇಶದಲ್ಲಿ ನಡೆಯುವ ನಿಗೂಢ ಕತೆಯಿದು ಎನ್ನಲಾಗಿದೆ. ಆ ನಿಗೂಢ ಘಟನೆಗಳಲ್ಲಿ ಬಾಣಸಿಗನ ಪಾತ್ರದ ಬಗ್ಗೆ ಹೆಚ್ಚು ಕುತೂಹಲ ಮೂಡಿದೆ. ಪೊಲೀಸ್‌ ಅಧಿಕಾರಿ ಏನು ತನಿಖೆ ಮಾಡುತ್ತಿದ್ದಾನೆ, ಎಲ್ಲಾ ನಿಗೂಢ ಘಟನೆಗಳಿಗೆ ಬಾಣಸಿಗ ಕಾರಣವಾಗಿರಬಹುದಾ? ಅವನೇ ಈ ಎಲ್ಲಾ ಘಟನೆಗಳಿಗೆ ಸೂತ್ರದಾರಿಯೇ ಅಥವಾ ನಿಗೂಢ ಘಟನೆಗಳನ್ನು ಪತ್ತೆಹಚ್ಚಲು ಇವನೇ ಕಾರಣನಾಗುತ್ತಾನೆಯೇ? ಹೀಗೆ ಹಲವು ಪ್ರಶ್ನೆಗಳು ಪೋಸ್ಟರ್‌ನಿಂದ ಮೂಡುತ್ತವೆ. ಈ ಸಿನಿಮಾವನ್ನು Kilambi Media Lab ಅಡಿಯಲ್ಲಿ ರಾಜೇಶ್‌ ಕೀಳಂಬಿ ಮತ್ತು ರಂಜಿನಿ ಪ್ರಸನ್ನ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಸುಜಯ್‌ ಶಾಸ್ತ್ರಿ, ಹರಿಣಿ, ಪ್ರತಿಮಾ ನಾಯಕ್‌ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾಗೆ ವಿಶ್ವಜಿತ್‌ ರಾವ್‌ ಛಾಯಾಗ್ರಹಣ, ಶಶಾಂಕ್‌ ನಾರಾಯಣ ಸಂಕಲನ, ಮಯೂರ್‌ ಅಂಬೆಕಲ್ಲು ಸಂಗೀತ ಸಂಯೋಜನೆಯಿದೆ.

LEAVE A REPLY

Connect with

Please enter your comment!
Please enter your name here