ಹಿಂದಿ ನಟ, ಚಿತ್ರನಿರ್ದೇಶಕ ಮನೋಜ್‌ ಕುಮಾರ್‌ (87 ವರ್ಷ) ಅಗಲಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು (ಏಪ್ರಿಲ್‌ 4) ಇಹಲೋಕ ತ್ಯಜಿಸಿದ್ದಾರೆ. ಹಿರಿಯ ನಟನ ಅಗಲಿಕೆಗೆ ಸಿನಿಮಾರಂಗ ಸೇರಿದಂತೆ ವಿವಿಧ ಕ್ಷೇತ್ರಗಳು ಗಣ್ಯರು ಸಂತಾಪ ಸೂಚಿಸಿದ್ದಾರೆ.

60, 70ರ ದಶಕಗಳ ಜನಪ್ರಿಯ ಹಿಂದಿ ನಾಯಕನಟ, ನಿರ್ದೇಶಕ, ನಿರ್ಮಾಪಕ ಮನೋಜ್‌ ಕುಮಾರ್‌ (87 ವರ್ಷ) ಅಗಲಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ರಾಷ್ಟ್ರಪ್ರೇಮದ ಸಿನಿಮಾಗಳೆಂದರೆ ಥಟ್ಟನೆ ನೆನಪಾಗುವ ಹೆಸರು ಮನೋಜ್‌ ಕುಮಾರ್‌. ಪ್ರಜ್ಞಾಪೂರ್ವಕವಾಗಿ ಇಂತಹ ಕತೆಗಳನ್ನೇ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದ ನಟ ಅವರು. 1937ರಲ್ಲಿ ಪಂಜಾಬ್‌ನಲ್ಲಿ ಜನಿಸಿದ ಮನೋಜ್‌ ಕುಮಾರ್‌ ಅವರ ಜನ್ಮನಾಮ ಹರಿಕೃಷ್ಣನ್‌ ಗೋಸ್ವಾಮಿ. ದೇಶವಿಭಜನೆಯ ಸಂದರ್ಭದಲ್ಲಿ ಅವರ ಕುಟುಂಬ ದಿಲ್ಲಿಗೆ ಬಂದು ನೆಲೆಸಿತು. 1957ರಲ್ಲಿ ‘ಫ್ಯಾಷನ್‌’ ಚಿತ್ರದಲ್ಲಿ ಭಿಕ್ಷುಕನ ಪಾತ್ರದ ಮೂಲಕ ಅವರು ಬೆಳ್ಳಿತೆರೆಗೆ ಪರಿಚಯವಾದರು.

ಸಿನಿಮಾರಂಗಕ್ಕೆ ಬಂದ ಆರಂಭದ ದಿನಗಳಲ್ಲಿ ಅವರು ಸಾಕಷ್ಟು ಪರಿಶ್ರಮ ಪಡಬೇಕಾಯ್ತು. ಈ ಸಂದರ್ಭದಲ್ಲಿ ಅವರು ಸಿನಿಮಾ ಸ್ಟುಡಿಯೋಗಳಲ್ಲಿ Ghost writer ಆಗಿ ಕೆಲಸ ಮಾಡಿದರು. ಪ್ರತೀ ಸನ್ನಿವೇಶದ ಬರವಣಿಗೆಗೆ ಅವರಿಗೆ 11 ರೂಪಾಯಿ ಸಂಭಾವನೆ ಸಿಗುತ್ತಿತ್ತು. 1965ರ ಇಂಡಿಯಾ – ಪಾಕಿಸ್ತಾನ್‌ ಯುದ್ಧದ ನಂತರ ಪ್ರಧಾನಿ ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರಿಂದ ಮನೋಜ್‌ ಕುಮಾರ್‌ರಿಗೆ ಕರೆಬಂದಿತು. ‘ಜೈ ಜವಾನ್‌ ಜೈ ಕಿಸಾನ್‌’ ಘೋಷಣೆಗೆ ಸೂಕ್ತ ರೀತಿಯಲ್ಲಿ ಹೊಂದುವಂತೆ ಚಿತ್ರವೊಂದನ್ನು ಮಾಡಲು ಶಾಸ್ತ್ರಿ ಅವರು ಮನೋಜ್‌ರಿಗೆ ಸಲಹೆ ಮಾಡಿದರು. ಆಗ ತಯಾರಾದದ್ದೇ ‘ಉಪ್ಕಾರ್‌’ (1967).

ಪೂರಬ್‌ ಔರ್‌ ಪಶ್ಚಿಮ್‌, ರೋಟಿ ಕಪಡಾ ಔರ್‌ ಮಕಾನ್‌, ಕ್ರಾಂತಿ, ಕ್ಲರ್ಕ್‌… ಮನೋಜ್‌ ಕುಮಾರ್‌ ನಟನೆ, ನಿರ್ದೇಶನದ ಅತ್ಯಂತ ಜನಪ್ರಿಯ ಸಿನಿಮಾಗಳು. ಅವರ ನಿರ್ದೇಶನದ ‘ಕ್ಲರ್ಕ್‌’ ಚಿತ್ರದಲ್ಲಿ ಪಾಕಿಸ್ತಾನಿ ಕಲಾವಿದರಾದ ಮೊಹಮ್ಮದ್‌ ಅಲಿ ಮತ್ತು ಝೆಬಾ ನಟಿಸಿದ್ದರು. ‘ಜೈಹಿಂದ್‌’ (1999) ಅವರ ನಿರ್ದೇಶನದ ಕೊನೆಯ ಸಿನಿಮಾ. ಸಿನಿಮಾರಂಗಕ್ಕೆ ಮನೋಜ್‌ ಕುಮಾರ್‌ ಅವರ ಕೊಡುಗೆ ಪರಿಗಣಿಸಿ 1992ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಯ್ತು. 2015ರಲ್ಲಿ ಭಾರತೀಯ ಸಿನಿಮಾರಂಗದ ಅತ್ಯುನ್ನತ ಪುರಸ್ಕಾರ ದಾದಾ ಸಾಹೇಬ್‌ ಫಾಲ್ಕೆ ಗೌರವಕ್ಕೆ ಮನೋಜ್‌ ಕುಮಾರ್‌ ಭಾಜನರಾದರು.

LEAVE A REPLY

Connect with

Please enter your comment!
Please enter your name here