ಬೆಳ್ಳಿತೆರೆಯಲ್ಲಿ ಇದೊಂದು ವಿಶಿಷ್ಟ ಪ್ರಯೋಗ. ರವಿ ಬಸ್ರೂರು ಅವರ ಸೃಜನಶೀಲತೆ ಇಲ್ಲಿ ವರ್ಕ್ ಆಗಿದೆ. ಸಿನಿಮಾಗೆ ಅಗತ್ಯವಿರುವ ಆಕರ್ಷಕ ವಿಶ್ಯುಯಲ್ಸ್, ಅದ್ಧೂರಿ ಸೆಟ್‌ಗಳು – ವಸ್ತ್ರವಿನ್ಯಾಸದ ಜೊತೆಗೆ ಉತ್ತಮ ಹಿನ್ನೆಲೆ ಸಂಗೀತದೊಂದಿಗೆ ಅವರು ಪ್ರೇಕ್ಷಕರನ್ನು ಹಿಡಿದಿಡುತ್ತಾರೆ. ದೊಡ್ಡವರಿಗೆ ಇದೊಂದು ವಿಶೇಷ ಪ್ರಯೋಗ ಎನಿಸಿದರೆ, ಚಿಕ್ಕ ಮಕ್ಕಳು ಚೆಂದದ ಕತೆಯೊಂದನ್ನು ನೋಡಿದ ಖುಷಿ ಅನುಭವಿಸಬಹುದು.
ಪ್ರಸ್ತುತ ಸಿನಿಮಾ ತನ್ನ ಸಾಂಪ್ರದಾಯಕ ನೆಲೆಯಿಂದ ಹೊರ ಜಿಗಿದಿದೆ. ಅಲ್ಲೀಗ ಸಾಕಷ್ಟು ಪ್ರಯೋಗಗಳು ಆಗುತ್ತಿವೆ. ಪ್ರೇಕ್ಷಕರು ಕೂಡ ಭಿನ್ನ ಕಂಟೆಂಟ್, ನಿರೂಪಣೆಯನ್ನು ಇಷ್ಟಪಟ್ಟು ನೋಡುತ್ತಿದ್ದಾರೆ. ಇದರ ಜೊತೆಗೆ ತಂತ್ರಜ್ಞಾನದ ನೆರವು ಕೂಡ ಸಿನಿಮಾದವರಿಗೆ ವರವಾಗಿದೆ. ಕನ್ನಡ ಚಿತ್ರರಂಗ ಕೂಡ ಇದಕ್ಕೆ ಹೊರತಲ್ಲ. ‘KGF’ ಸರಣಿ ಸಿನಿಮಾಗಳ ಮೂಲಕ ದೊಡ್ಡ ಸದ್ದು ಮಾಡಿದ ಸಂಗೀತ ಸಂಯೋಜಕ ರವಿ ಬಸ್ರೂರು ಇಂತಹ ಪ್ರಯೋಗಗಳಿಗೆ ತುಡಿಯುವ ತಂತ್ರಜ್ಞ. ಈ ಹಿಂದೆ ‘ಗಿರ್ಮಿಟ್’ ಸಿನಿಮಾ ನಿರ್ದೇಶಿಸಿ ಗಮನ ಸೆಳೆದಿದ್ದರು. ಇದೀಗ ‘ವೀರ ಚಂದ್ರಹಾಸ’ ಸಿನಿಮಾದೊಂದಿಗೆ ಬೆಳ್ಳಿತೆರೆಯಲ್ಲಿ ಸಂಚಲನ ಸೃಷ್ಟಿಸಿದ್ದಾರೆ.
ಕರಾವಳಿ ಮೂಲದ ರವಿ ಬಸ್ರೂರು ಅವರಿಗೆ ತಮ್ಮ ನೆಲದ ಯಕ್ಷಗಾನ ಕಲೆಯನ್ನು ಜಾಗತಿಕ ನೆಲೆಯಲ್ಲಿ ಪರಿಚಯಿಸುವ ಇರಾದೆ. ಇದು ಅವರ ದಶಕಗಳ ಕನಸು. ಈ ಹಿನ್ನೆಲೆಯಲ್ಲಿ ರೂಪುಗೊಂಡ ಚಿತ್ರವೇ ‘ವೀರ ಚಂದ್ರಹಾಸ’. ಯಕ್ಷಗಾನದ ಜನಪ್ರಿಯ ಪ್ರಸಂಗವೊಂದನ್ನು ಅವರು ಬೆಳ್ಳಿತೆರೆಗೆ ಅಳವಡಿಸಿದ್ದಾರೆ. ಹಾಗೆ ನೋಡಿದರೆ ಇದೊಂದು ದೊಡ್ಡ ಸವಾಲು. ಈ ಹಿಂದೆ ಯಾವ ಮಾದರಿಯೂ ಇಲ್ಲದ ಈ ಪ್ರಯೋಗಕ್ಕೆ ಅವರು ಮುಂದಾಗಿದ್ದೇ ಒಂದು ಸಾಹಸ. ಯಕ್ಷಗಾನ ಕಲೆಗೆ ಎಲ್ಲಿಯೂ ಚ್ಯುತಿ ಬರದಂತೆ, ಕತೆಯನ್ನು ಸಿನಿಮಾ ಆಗಿಸುವ ಸವಾಲಿನಲ್ಲಿ ಅವರು ಯಶಸ್ವಿಯಾಗಿದ್ದಾರೆ ಎಂದೇ ಹೇಳಬಹುದು. ಪೌರಾಣಿಕ ಕತೆಯೊಂದನ್ನು ಯಕ್ಷಗಾನ ಕಲೆಗೆ ಬೆಸೆದು, ಅದನ್ನು ಸಿನಿಮ್ಯಾಟಿಕ್ ಆಗಿ ಕಟ್ಟಿಕೊಡುವ ಅವರ ಕಲ್ಪನೆಗೆ ಕಲಾವಿದರು ಹಾಗೂ ತಂತ್ರಜ್ಞರ ಸಂಪೂರ್ಣ ಸಹಕಾರ ಸಿಕ್ಕಿದೆ.
ಸಿನಿಮಾದ ಆರಂಭದಲ್ಲಿ ಮೂಲ ಕತೆಗೆ ಹಿನ್ನೆಲೆಯಾಗಿ ಅವರು AI ತಂತ್ರಜ್ಞಾನ ಬಳಕೆ ಮಾಡಿದ್ದಾರೆ. ಕೆಲವೇ ನಿಮಿಷಗಳ ಈ ವಿಶ್ಯುಯಲ್ಸ್ ಪ್ರೇಕ್ಷಕರಿಗೆ ಕತೆಯನ್ನು ಕನ್ವಿನ್ಸಿಂಗ್ ಆಗಿ ದಾಟಿಸುತ್ತದೆ. ಮುಂದೆ ಮೂಲ ಕತೆಯ ಸಂದರ್ಭದಲ್ಲಿ ಅನುಭವಿ ಯಕ್ಷಗಾನ ಕಲಾವಿದರು ತಮ್ಮ ಉತ್ತಮ ನಟನೆ ಮತ್ತು ನೃತ್ಯದ ಮೂಲಕ ಕತೆಯನ್ನು ಹೆಗಲ ಮೇಲೆ ಹೊತ್ತೊಯ್ದಿದ್ದಾರೆ. ರವಿ ಬಸ್ರೂರು ಅವರ ಈ ವಿಶಿಷ್ಟ ಪ್ರಯೋಗಕ್ಕೆ ನಟ ಶಿವರಾಜಕುಮಾರ್ ಜೊತೆಯಾಗಿರುವುದು ಚಿತ್ರದ ಬಲ ಹೆಚ್ಚಿಸಿದೆ. ಸಿಂಗಾನಲ್ಲೂರು ಸಂಸ್ಥಾನದ ‘ಶಿವಪುಟ್ಟಸ್ವಾಮಿ’ ಪಾತ್ರ ನಿರ್ವಹಿಸಿದ್ದಾರೆ ಶಿವರಾಜಕುಮಾರ್. ಸ್ಟಾರ್ ಹೀರೋ ಎನ್ನುವ ಹಮ್ಮು – ಬಿಮ್ಮುಗಳಿಲ್ಲದೆ ಅವರ ಪಾತ್ರವೂ ಯಕ್ಷಗಾನ ಕಲಾವಿದರೊದರೊಂದಿಗೆ ಬೆಸೆದುಕೊಂಡಿದೆ. ಶಿವರಾಜಕುಮಾರ್ ಅವರಲ್ಲದೆ, ಸಿನಿಮಾರಂಗದ ಚಂದನ್ ಶೆಟ್ಟಿ (ಸಮುದ್ರಸೇನ), ಗರುಡ ರಾಮ್ (ಗರುಡಾಕ್ಷ), ಪುನೀತ್ ರುದ್ರನಾಗ್ (ಕರಕಂಡು), ಪ್ರಣವ್ ಸೂರ್ಯ (ಸಂವರಣ) ಕೂಡ ಸಿನಿಮಾದಲ್ಲಿ ಪಾತ್ರಗಳಾಗಿ ಪರಿಚಯವಾಗಿದ್ದಾರೆ. ‘ವೀರ ಚಂದ್ರಹಾಸ’ ಪಾರ್ಟ್ 2ನಲ್ಲಿ ಈ ಪಾತ್ರಗಳಿಗೆ ಹೆಚ್ಚಿನ ಸ್ಕ್ರೀನ್ ಸ್ಪೇಸ್ ಸಿಗುವ ಸೂಚನೆ ಕೊಟ್ಟಿದ್ದಾರೆ ರವಿ ಬಸ್ರೂರು.
ಮೊದಲೇ ಹೇಳಿದಂತೆ ಇದು ಬೆಳ್ಳಿತೆರೆಯಲ್ಲಿ ಹೊಸತೊಂದು ಪ್ರಯೋಗ. ರವಿ ಬಸ್ರೂರು ಅವರ ಸೃಜನಶೀಲತೆ ಇಲ್ಲಿ ವರ್ಕ್ ಆಗಿದೆ. ಸಿನಿಮಾಗೆ ಅಗತ್ಯವಿರುವ ಆಕರ್ಷಕ ವಿಶ್ಯುಯಲ್ಸ್, ಅದ್ಧೂರಿ ಸೆಟ್‌ಗಳು – ವಸ್ತ್ರವಿನ್ಯಾಸದ ಜೊತೆಗೆ ಉತ್ತಮ ಹಿನ್ನೆಲೆ ಸಂಗೀತದೊಂದಿಗೆ ಅವರು ಪ್ರೇಕ್ಷಕರನ್ನು ಹಿಡಿದಿಡುತ್ತಾರೆ. ಯಕ್ಷಗಾನದ ವೀರಾವೇಷದ ಪಾತ್ರಗಳ ಜೊತೆಗೆ ‘ಕಪ್ಪ ಧೂತ’ನಂತಹ ಹಾಸ್ಯ ಪಾತ್ರಗಳೂ ಇಲ್ಲಿವೆ. ಈ ಸಿನಿಮಾ ಮೂಲಕ ಯಕ್ಷಗಾನ ಕಲಾವಿದರು, ಭಾಗವತರು, ವಾದ್ಯಗಾರರನ್ನು ಜನರಿಗೆ ಪರಿಚಯಿಸುವ ರವಿ ಬಸ್ರೂರು ಅವರ ಪ್ರಯತ್ನ ಶ್ಲಾಘನೀಯವಾದುದು. ದೊಡ್ಡವರಿಗೆ ಇದೊಂದು ವಿಶೇಷ ಪ್ರಯೋಗ ಎನಿಸಿದರೆ, ಚಿಕ್ಕ ಮಕ್ಕಳು ಚೆಂದದ ಕತೆಯೊಂದನ್ನು ನೋಡಿದ ಖುಷಿ ಅನುಭವಿಸಬಹುದು.