ಉದ್ಯಮ ಸ್ಟಾರ್‌ ಪವರ್‌ನಷ್ಟೇ ನೆಚ್ಚಿಕೊಳ್ಳುವುದು ಸರಿಯಲ್ಲ ಎನ್ನುವುದು ಮತ್ತೆ ಸಾಬೀತಾಗಿದೆ. ಪ್ರೇಕ್ಷಕರು ದಿನದಿಂದ ದಿನಕ್ಕೆ ಹೆಚ್ಚು ಚ್ಯೂಸಿ ಆಗುತ್ತಿದ್ದು, ಗುಣಮಟ್ಟದ ಕಂಟೆಂಟ್‌ ಡ್ರಿವನ್‌ ಸಿನಿಮಾಗಳೂ ತಯಾರಾಗಬೇಕಿದೆ. ಗಟ್ಟಿ ಕಥನಗಳು ಉದ್ಯಮವನ್ನು ಕಾಪಾಡಬಲ್ಲವು ಎನ್ನುವ ಸತ್ಯ ಉದ್ಯಮದವರಿಗೆ ಮನವರಿಕೆಯಾಗಿದೆ.

ತೆಲುಗು ಚಿತ್ರರಂಗ 2025ರಲ್ಲಿ ಹಲವು ಏರಿಳಿತಗಳನ್ನು ಕಂಡಿತು. ಈ ಬಾರಿ ನಿರೀಕ್ಷೆಗಳು ಮತ್ತು ವಾಸ್ತವಗಳ ಮಧ್ಯೆ ದೊಡ್ಡ ಕಂದಕ ಸೃಷ್ಟಿಯಾಗಿದ್ದು ಹೌದು. ಹಿಂದಿನ ವರ್ಷಗಳ ಭಾರಿ ಬಜೆಟ್‌ ಸಿನಿಮಾಗಳ ಯಶಸ್ಸು ಪ್ರಸಕ್ತ ವರ್ಷದಲ್ಲೂ ಮುಂದುವರೆಯಬಹುದು ಎನ್ನುವ ನಂಬಿಕೆ ಹುಸಿಯಾಗಿ, ಬಾಕ್ಸ್‌ ಆಫೀಸ್‌ ಯಶಸ್ಸಿಗೆ ‘ಸ್ಟಾರ್‌ ಪವರ್‌’ ಒಂದೇ ಸಾಕಾಗದು ಎನ್ನುವುದು ದೃಢವಾಯ್ತು. ದುಬಾರಿ ಬಜೆಟ್‌, ದೃಶ್ಯವೈಭವ, ಅದ್ಧೂರಿ ಪ್ರಚಾರಕ್ಕಿಂತ ಕಂಟೆಂಟ್‌ ಮುಖ್ಯ ಎಂದು ಪ್ರೇಕ್ಷಕರು ಮನವರಿಕೆ ಮಾಡಿಕೊಟ್ಟರು.

ಹಾಗೆ ನೋಡಿದರೆ ವರ್ಷದ ಮೊದಲಾರ್ಧ ಉದ್ಯಮಕ್ಕೆ ನಷ್ಟವನ್ನು ತಂದುಕೊಟ್ಟಿತು. ಈ ಅವಧಿಯಲ್ಲಿ ವಿತರಕರು ಹಾಗೂ ಪ್ರದರ್ಶಕರು ಸುಮಾರು 1000 ಸಾವಿರ ಕೋಟಿಯಷ್ಟು ನಷ್ಟ ಅನುಭವಿಸುವಂತಾಯ್ತು. ಆಗಸ್ಟ್‌ನಿಂದ ಉದ್ಯಮ ಕೊಂಚ ಚೇತರಿಸಿಕೊಂಡಿತು. ಇತ್ತೀಚಿನ ದಿನಗಳ ಅತ್ಯಂತ ನೀರಸ ವರ್ಷ ಎನ್ನುವ ಹಂತದಲ್ಲಿ ಕೆಲವು ಸಿನಿಮಾಗಳು ಉದ್ಯಮದ ನೆರವಿಗೆ ಬಂದವು. ಪ್ರೇಕ್ಷಕರು ಕೂಡ ಸಿನಿಮಾಗಳ ಆಯ್ಕೆಯಲ್ಲಿ ಹೆಚ್ಚು ಜಾಗರೂಕರಾಗುತ್ತಿದ್ದಾರೆ ಎಂದು ಸಿನಿಮಾ ವಿಶ್ಲೇಷಕರು ಅಭಿಪ್ರಾಯ ಪಟ್ಟರು.

ವೆಂಕಟೇಶ್‌ ನಟನೆಯ ‘ಸಂಕ್ರಾಂತಿಕಿ ವಸ್ತುನ್ನಂ’ ಬ್ಲಾಕ್‌ಬಸ್ಟರ್‌ ಎನಿಸಿಕೊಂಡರೆ, ನಾಗಚೈತನ್ಯರ ರೊಮ್ಯಾಂಟಿಕ್‌ ಆಕ್ಷನ್‌ – ಡ್ರಾಮಾ ‘ಥಂಡೇಲ್‌’ ನೂರು ಕೋಟಿ ಕ್ಲಬ್‌ ಸೇರಿತು. ನಾನಿ ಅವರ ‘HIT’ ಸಿನಿಮಾ ಅತಿಯಾದ ಕ್ರೌರ್ಯದಿಂದಾಗಿ ಫ್ಯಾಮಿಲಿ ಪ್ರೇಕ್ಷಕರನ್ನು ಸೆಳೆಯದಿದ್ದರೂ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯ್ತು. ಶೇಖರ್‌ ಕಮ್ಮುಲು ನಿರ್ದೇಶನದ ಬಹುತಾರಾಗಣದ ‘ಕುಬೇರ’ ಸಿನಿಮಾ ಕೂಡ ಚಿತ್ರಮಂದಿರಗಳನ್ನು ತುಂಬಿಸಿತು. ಮಹಾವತಾರ ನರಸಿಂಹ, OG, ಮಿರಾಯ್‌, ಡಾಕು ಮಹಾರಾಜ್‌, ಹರಿಹರ ವೀರಮಲ್ಲು… ಯಶಸ್ಸು ಕಂಡ ಸಿನಿಮಾಗಳು. ವರ್ಷದ ಕೊನೆಗೆ ತೆರೆಗೆ ಬಂದ ‘ಅಖಂಡ 2’ ಚಿತ್ರವೂ ಪ್ರೇಕ್ಷಕರನ್ನು ಆಕರ್ಷಿಸಿತು.

ಭಾರಿ ನಿರೀಕ್ಷೆ ಇದ್ದ ‘ಗೇಮ್‌ ಚೇಂಜರ್‌’ ಸೇರಿದಂತೆ ಮತ್ತೆ ಕೆಲವು ದುಬಾರಿ ಸಿನಿಮಾಗಳು ನೆಲಕಚ್ಚಿದ್ದು ಉದ್ಯಮಕ್ಕೆ ತುಂಬಲಾರದ ನಷ್ಟ. ‘ಉದ್ಯಮ ಸ್ಟಾರ್‌ ಪವರ್‌ನಷ್ಟೇ ನೆಚ್ಚಿಕೊಳ್ಳುವುದು ಸರಿಯಲ್ಲ. ಪ್ರೇಕ್ಷಕರು ದಿನದಿಂದ ದಿನಕ್ಕೆ ಹೆಚ್ಚು ಚ್ಯೂಸಿ ಆಗುತ್ತಿದ್ದು, ಗುಣಮಟ್ಟದ ಕಂಟೆಂಟ್‌ ಡ್ರಿವನ್‌ ಸಿನಿಮಾಗಳೂ ತಯಾರಾಗಬೇಕಿದೆ’ ಎಂದು ಸಿನಿಮಾ ವಿಶ್ಲೇಷಕರು ಅಭಿಪ್ರಾಯಪಟ್ಟರು. ಇನ್ನು ಕನ್ನಡ, ತಮಿಳು, ಹಿಂದಿ, ಮಲಯಾಳಂ ಸಿನಿಮಾಗಳ ತೆಲುಗು ಡಬ್ಬಿಂಗ್‌ ವರ್ಷನ್‌ಗಳು ತೆಲುಗು ನಾಡಿನ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿವೆ. ಈ ಅಂಶವೂ ಮೂಲ ತೆಲುಗು ಸಿನಿಮಾಗಳಿಗೆ ಹೊಡೆತ ಕೊಟ್ಟಿದೆ. ಬಾಕ್ಸ್‌ ಆಫೀಸ್‌ ಲೆಕ್ಕಾಚಾರಗಳು ಬದಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಗಟ್ಟಿ ಕಥನಗಳು ಉದ್ಯಮವನ್ನು ಕಾಪಾಡಬಲ್ಲವು ಎನ್ನುವ ಸತ್ಯ ಉದ್ಯಮದವರಿಗೆ ಮನವರಿಕೆಯಾಗಿದೆ.

LEAVE A REPLY

Connect with

Please enter your comment!
Please enter your name here