ಜನಪ್ರಿಯ ತೆಲುಗು ನಟ ಕೃಷ್ಣ ಅವರ ಹಿರಿಯ ಪುತ್ರ, ನಟ – ನಿರ್ಮಾಪಕ ರಮೇಶ್‌ ಬಾಬು ಇಂದು ಅಗಲಿದ್ದಾರೆ. ಬಾಲನಟನಾಗಿ ಬೆಳ್ಳಿತೆರೆಗೆ ಪರಿಚಯವಾಗಿದ್ದ ಅವರು ಹದಿನೈದು ಚಿತ್ರಗಳಲ್ಲಿ ನಟಿಸಿದ್ದು, ಪ್ರಸ್ತುತ ಚಿತ್ರನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದರು.

ತೆಲುಗು ಚಿತ್ರರಂಗದ ಹಿರಿಯ ನಟ ಕೃಷ್ಣ ಅವರ ಪುತ್ರ, ನಟ ಮಹೇಶ್‌ ಬಾಬು ಅವರ ಹಿರಿಯ ಸಹೋದರ ರಮೇಶ್‌ ಬಾಬು (56 ವರ್ಷ) ಇಂದು ಅಗಲಿದ್ದಾರೆ. ಯಕೃತ್ತಿಗೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ಧಾರೆ. 12ರ ಹರೆಯದಲ್ಲಿ ಬಾಲನಟನಾಗಿ ಸಿನಿಮಾಗೆ ಪರಿಚಯವಾಗಿದ್ದ ಅವರು ‘ಸಾಮ್ರಾಟ್‌’ (1987) ಚಿತ್ರದೊಂದಿಗೆ ಹೀರೋ ಆದರು. ಹದಿನೈದಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ರಮೇಶ್‌ 1997ರಲ್ಲಿ ನಟನೆಯಿಂದ ದೂರವಾಗಿದ್ದರು. ಕೃಷ್ಣ ಪ್ರೊಡಕ್ಷನ್‌ ಬ್ಯಾನರ್‌ನಡಿ ಸಹೋದರ ಮಹೇಶ್‌ ಬಾಬು ಅವರಿಗಾಗಿ ರಮೇಶ್‌ ಅವರು ‘ಅರ್ಜುನ್‌’ ಮತ್ತು ‘ಅತಿಥಿ’ ತೆಲುಗು ಚಿತ್ರಗಳನ್ನು ನಿರ್ಮಿಸಿದ್ದರು.

ರಮೇಶ್‌ ಬಾಬು ನಿಧನಕ್ಕೆ ತೆಲುಗು ಚಿತ್ರರಂಗದ ಪ್ರಮುಖರನೇಕರು ಸಂತಾಪ ಸೂಚಿಸಿದ್ದಾರೆ. ನಟ ಮಹೇಶ್‌ ಬಾಬು ತಮ್ಮ ಇನ್‌ಸ್ಟಾಗ್ರಾಮ್‌ ಅಕೌಂಟ್‌ನಲ್ಲಿ, “ನೀನು ನನ್ನ ಧೈರ್ಯ, ನೀನು ನನ್ನ ಸ್ಫೂರ್ತಿ, ನನ್ನ ಜೀವನದಲ್ಲಿ ನೀನು ಬರದಿದ್ದರೆ ನಾನೇನೂ ಸಾಧನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ನನ್ನ ಯಶಸ್ಸಿಗೆ ಕಾರಣವಾಗಿರುವ ನಿನಗೆ ಧನ್ಯವಾದ. ಮುಂದಿನ ಜನ್ಮವೊಂದಿದ್ದರೆ ಅಲ್ಲಿಯೂ ನನಗೆ ಅಣ್ಣಯ್ಯನಾಗಿ ಹುಟ್ಟಿಬಾ” ಎಂದು ಬರೆದುಕೊಂಡಿದ್ದಾರೆ. ಮಹೇಶ್‌ ಬಾಬು ತಾರಾಪತ್ನಿ ನಮ್ರತಾ ಶಿರೋಡ್ಕರ್‌, ಹಿರಿಯ ನಟ ಚಿರಂಜೀವಿ, ಪವನ್‌ ಕಲ್ಯಾಣ್‌, ವರುಣ್‌ ತೇಜ್‌ ಕೊನಿಡೇಲಾ, ನಟಿ ಲಕ್ಷ್ಮೀ ಮಂಚು ಸೇರಿದಂತೆ ತೆಲುಗು ಚಿತ್ರರಂಗದ ಹಲವರು ರಮೇಶ್‌ ಬಾಬು ಅಗಲಿಕೆಗೆ ಸಂತಾಪ ಸಂದೇಶಗಳನ್ನು ಹಾಕಿದ್ದಾರೆ.

LEAVE A REPLY

Connect with

Please enter your comment!
Please enter your name here