ಬಾಡಿಗೆ ಹಂತಕನಾಗಿ ಮುಖ್ಯ ಪಾತ್ರಧಾರಿ ಅಭಿಷೇಕ್ ಬಚ್ಚನ್‌ಗೆ ಇರುವುದು ಕಸರತ್ತು ಮಾಡಿ ಸಿಕ್ಸ್ ಪ್ಯಾಕ್ಸ್ ತೋರಿಸುವ ಪಾತ್ರವಲ್ಲ‌. ಒಬ್ಬರಾದ ಮೇಲೆ ಒಬ್ಬರನ್ನು ಸೈಲೆನ್ಸರ್ ಹಾಕಿದ ರಿವಾಲ್ವರಿನಿಂದ ಕೊಲ್ಲುತ್ತಾ ಸಾಗುವ ಅವನು ಹೊರನೋಟಕ್ಕೆ ಓರ್ವ ಎಲ್‌ಐಸಿ ಏಜೆಂಟ್. ಹೀಗೂ ಒಬ್ಬ ಸೀರಿಯಲ್ ಕಿಲ್ಲರ್ ಇರಬಹುದೇ ಎಂಬುದು ಪ್ರೇಕ್ಷಕನಿಗಿಂತ ಮೊದಲು ಆತನಿಗೇ ಪ್ರಶ್ನೆ. ‘ಬಾಬ್ ಬಿಸ್ವಾಸ್’ ಹಿಂದಿ ಸಿನಿಮಾ ZEE5ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಆತ ಎಂಟು ವರ್ಷಗಳ ಕೋಮಾದಿಂದ ಆಗಷ್ಟೇ ಎಚ್ಚರಗೊಂಡಿದ್ದಾನೆ. ‘ನಿನ್ನ ಹೆಸರು ಬಾಬ್ ಬಿಸ್ವಾಸ್’ ಎಂದು ಡಾಕ್ಟರ್ ಹೇಳಿದ ಕಾರಣ ಅವನಿಗೆ ಗೊತ್ತೇ ವಿನಃ ಇಲ್ಲದಿದ್ದರೆ ಅವನ ಹೆಸರೂ ಅವನಿಗೇ ತಿಳಿಯದು. ಆ ಪುಟ್ಟ ಬಾಲಕ ಅಪ್ಪಾ ಎಂದು ಓಡಿ ಬಂದುದರಿಂದ ಆತ ಮಗ ಎಂದು ತಿಳಿಯಬೇಕು. ಅವನ ನೋಡಿ ನಸುನಕ್ಕು ಬಳಿ ಬಂದವಳು ಹೆಂಡತಿ. ಇಷ್ಟು ಬಿಟ್ಟರೆ ಅವನ ಬಗ್ಗೆಯೇ ಅವನಿಗೆ ಏನೂ ತಿಳಿದಿಲ್ಲ, ಸಿನಿಮಾ ನೋಡುತ್ತಿರುವ ಪ್ರೇಕ್ಷಕನಂತೆಯೇ.

ಬಾಬ್ ಬಿಸ್ವಾಸ್ ಬಗ್ಗೆ ಆತ ಮತ್ತು ಪ್ರೇಕ್ಷಕ ಇಬ್ಬರೂ ಒಂದೊಂದೇ ವಿಚಾರವನ್ನು ಒಟ್ಟೊಟ್ಟಿಗೇ ತಿಳಿದುಕೊಳ್ಳುತ್ತಾ ಸಾಗುವುದು ಚಿತ್ರಕತೆಯ ವೈಶಿಷ್ಟ್ಯ. ಸುಜೋಯ್ ಘೋಶ್ ಒಂಭತ್ತು ವರ್ಷಗಳ ಹಿಂದಿನ ತನ್ನದೇ ಸಿನಿಮಾ ‘ಕಹಾನಿ’ಯ ಒಂದು ಪಾತ್ರ ಬಾಬ್ ಬಿಸ್ವಾಸನನ್ನೇ ಮೂಲದಲ್ಲಿಟ್ಟು ಮಾಡಿದ ಕತೆಗೆ ಚಿತ್ರಕತೆಯನ್ನೂ ಹೆಣೆದಿದ್ದಾರೆ. ಆಕೆಯ ಮೊದಲ ಚಿತ್ರ ಎಂದು ಪ್ರೇಕ್ಷಕನಿಗೆ ಅನಿಸದಂತೆ ನಿರ್ದೇಶಿಸಿದ್ದಾರೆ ಚಿತ್ರಕತೆಗಾರನ ಮಗಳು ದಿಯಾ ಅನ್ನಪೂರ್ಣ ಘೋಶ್.

ಇದೊಂದು ಕ್ರೈಂ ಥ್ರಿಲ್ಲರ್ ಎಂಬುದಕ್ಕೆ ಮೊದಲ ದೃಶ್ಯವೇ ಅಡಿಪಾಯ ಹಾಕುತ್ತದೆ. ಇಬ್ಬರು ಹೈ ಪ್ರೊಫೈಲ್ ಡ್ರಗ್ ಉದ್ಯಮಿಗಳ ನಡುವೆ ಭವಿಷ್ಯದ ಅವಕಾಶಗಳ ಬಗ್ಗೆ ಮಾತುಕತೆಯ ಸನ್ನಿವೇಶವದು. ಭವಿಷ್ಯದ ವಿಚಾರ ಬಂದಾಗ ರೂಪಕವಾಗಿದ್ದೂ ನಾಟಕೀಯ ಅನಿಸದಂತೆ ಯುವ ಪೀಳಿಗೆಯನ್ನು ಎಳೆದು ತಂದದ್ದು ಸಿನಿಮೀಯ ಕಲಾತ್ಮಕತೆ ನ್ಯಾಯ ಒದಗಿಸುತ್ತದೆ. ಹಾಗೆಂದು ಮುಂದೆಲ್ಲಿಯೂ ಡ್ರಗ್ಸ್ ದಂಧೆಯ ಬಗ್ಗೆ ಅತಿರಂಜಿತ ದೃಶ್ಯಗಳಿಲ್ಲ. ಇದು ಡ್ರಗ್ಸಿಗೇ ಸಂಬಂಧಿಸಿದ್ದು ಎಂದು ವಾಚ್ಯವಾಗಿ ಹೇಳದಿದ್ದರೂ ನೋಡುಗನಿಗೆ ಅನಿಸುವ ಕೆಲವು ಸನ್ನಿವೇಶಗಳು ಬಂದು ಹೋಗುತ್ತವಷ್ಟೆ. ಸಿನಿಮಾದ ಮೊದಲಾರ್ಧದಲ್ಲಿ ಮುಖ್ಯವಾಗಿ ಇರುವುದು ಇಬ್ಬರೇ. ಒಬ್ಬ ತನ್ನ ಬಗ್ಗೆಯೇ ತಾನು ಅರಿಯುವ ಬಾಬ್ ಬಿಸ್ವಾಸ್, ಮತ್ತೊಬ್ಬ ಅವನ ಬಗ್ಗೆ ತಿಳಿಯುವ ಕುತೂಲವಿರುವ ಪ್ರೇಕ್ಷಕ. ಸುತ್ತಲೂ ಕತೆ ಬಿಚ್ಚಿಕೊಳ್ಳುತ್ತಾ ಸಾಗುವಾಗಲೂ ಈ ಭಾವವನ್ನು ಪ್ರೇಕ್ಷಕನಿಗೆ ತಿಳಿದೂ ತಿಳಿಯದಂತೆ ಮೂಡಿಸುವುದು ಚಿತ್ರಕತೆಗಾರನ ಪ್ರೌಢಿಮೆ.

ತಾನು ಅಪಘಾತದಿಂದ ಕೋಮಾಕ್ಕೆ ಹೋಗುವ ಮೊದಲು ಜನಸಾಮಾನ್ಯರ ನಡುವೆ ಜನಸಾಮಾನ್ಯನಂತೆಯೇ ಇದ್ದ ಒಬ್ಬ ಸೀರಿಯಲ್ ಕಿಲ್ಲರ್ ಎಂಬುದು ಬಿಸ್ವಾಸನಿಗೆ ತಿಳಿಯುವಾಗಲೇ ನಮಗೂ ತಿಳಿಯುವುದು. ಆ ಮುಖ್ಯ ಪಾತ್ರಧಾರಿಗೆ ಯಾವುದೇ ಹಿಂದಿನ ನೆನಪಿಲ್ಲ. ಹಾಗಾಗಿ ಪ್ರೇಕ್ಷಕನಿಗೂ ಫ್ಲ್ಯಾಶ್‌‌‌‌ ಬ್ಯಾಕಿನಲ್ಲಿ ಕತೆ ತಿಳಿಯುವ ಅವಕಾಶವಿಲ್ಲ. ಚಿತ್ರದ ಮಧ್ಯಭಾಗಕ್ಕೆ ಬರುವಾಗ ಆ ಪಾತ್ರಕ್ಕೆ ಹಳೆಯ ನೆನಪೊಂದು ಫ್ಲ್ಯಾಶ್‌‌‌ ಆಗಲು ಶುರುವಾದಾಗಲೇ ಪ್ರೇಕ್ಷಕ ಮಹಾಪ್ರಭುವಿಗೂ ಅದನ್ನು ತಿಳಿಯುವ ಭಾಗ್ಯ. ಹಾಗಾಗಿ ಮೊದಲಾರ್ಧ ಅನಾಯಾಸವಾಗಿ ನೋಡಿಸಿಕೊಂಡು ಹೋಗುತ್ತದೆ.

ಬಾಬ್ ಬಿಸ್ವಾಸ್‌ನ ಪತ್ನಿ ಮೇರಿ ಪಾತ್ರಕ್ಕೆ ಚಿತ್ರಾಂಗದಾ ಸಿಂಗ್ ಸುಲಭದಲ್ಲಿ ಒಗ್ಗಿಕೊಂಡಿದ್ದಾರೆ. ಬೆಂಗಾಲಿ ಹಿನ್ನೆಲೆಯಲ್ಲಿ ನಡೆಯುವ ಕತೆಗೆ ಆಕೆಯ ಬಟ್ಟೆಬರೆ ನಾಜೂಕಾಗಿ ಒಪ್ಪುತ್ತದೆ. ಅಂದ ಮಾತ್ರಕ್ಕೇ ಆ ಪಾತ್ರ ಅಲ್ಲಿಗೇ ಸೀಮಿತವಾಗಿ ನಿಂತಿಲ್ಲ. ಕಾಮುಕ ಮೇಲಾಧಿಕಾರಿಯನ್ನು ಕೆಲಸದ ಅನಿವಾರ್ಯತೆಯ ಕಾರಣ ಸಾಧ್ಯವಾದಷ್ಟೂ ಕಡೆಗಣಿಸಿ ಕೊನೆಗೆ ಪರಿಸ್ಥಿತಿ ಕೈ ಮೀರುತ್ತಿದೆ ಎಂಬ ಅರಿವಾಗುತ್ತಿದ್ದ ಹಾಗೆಯೇ‌ ಸನ್ನಿವೇಶವನ್ನು ತಾನೇ ನಿಭಾಯಿಸುವುದು ಅವಳ ಪಾತ್ರಕ್ಕೆ ನ್ಯಾಯಯುತ ಗಟ್ಟಿತನ ಕೊಡುತ್ತದೆ. ಹಾಗೆಂದು ಬಾಡಿಗೆ ಹಂತಕನಾಗಿ ಮುಖ್ಯ ಪಾತ್ರಧಾರಿ ಅಭಿಷೇಕ್ ಬಚ್ಚನ್‌ಗೆ ಇರುವುದು ಕಸರತ್ತು ಮಾಡಿ ಸಿಕ್ಸ್ ಪ್ಯಾಕ್ಸ್ ತೋರಿಸುವ ಪಾತ್ರವಲ್ಲ‌. ಒಬ್ಬರಾದ ಮೇಲೆ ಒಬ್ಬರನ್ನು ಸೈಲೆನ್ಸರ್ ಹಾಕಿದ ರಿವಾಲ್ವರಿನಿಂದ ಕೊಲ್ಲುತ್ತಾ ಸಾಗುವ ಅವನು ಹೊರನೋಟಕ್ಕೆ ಓರ್ವ ಎಲ್‌ಐಸಿ ಏಜೆಂಟ್. ಹೀಗೂ ಒಬ್ಬ ಸೀರಿಯಲ್ ಕಿಲ್ಲರ್ ಇರಬಹುದೇ ಎಂಬುದು ಪ್ರೇಕ್ಷಕನಿಗಿಂತ ಮೊದಲು ಆತನಿಗೇ ಪ್ರಶ್ನೆ.

ಆತ ಹೊಡೆದುರುಳಿಸುವ ರೀತಿ, ಸ್ಥಳ, ಸಮಯ‌ – ಇವೆಲ್ಲವೂ ಕ್ರೈಂ ಥ್ರಿಲ್ಲರ್‌ನ ಸ್ಥಾಪಿತ ಮಟ್ಟುಗಳನ್ನು ಕೆಡವಿ ಸಾಗುವಂಥವು. ಹಾಗೆ ನೋಡಿದರೆ ಬಾಬ್ ಬಿಸ್ವಾಸ್ ಒಂದು ಕ್ರೈಂ ಥ್ರಿಲ್ಲರ್ ಎಂಬುದಕ್ಕಿಂತ ಹೆಚ್ಚು ಡಾರ್ಕ್ ಕಾಮಿಡಿ ಎನ್ನಬಹುದು ಅನಿಸುತ್ತದೆ. ಆದರೆ ಡಾರ್ಕ್ ಕಾಮಿಡಿ ಲೇಪವನ್ನು ಢಾಳಾಗಿ ಹಚ್ಚುವಲ್ಲಿ ಸಿನಿಮಾ ಪರಿಪೂರ್ಣ ಯಶಸ್ಸು ಕಂಡಿಲ್ಲವಾದ ಕಾರಣ ಅದನ್ನು ಕ್ರೈಂ ಥ್ರಿಲ್ಲರ್ ಎಂಬಲ್ಲಿಗೇ ಸೀಮಿತಗೊಳಿಸುವುದು ವಾಸಿ. ಸಿನಿಮೀಯವಾಗಿಯೇ ಸಾಗುವ ಕತೆ ಕಡೆಗೂ ಇದೊಂದು ಸಿನಿಮಾವಷ್ಟೇ ಎಂಬ ಛಾಪು ಮೂಡಿಸುವುದು ಬಹುಶಃ ಉದ್ದೇಶಿತ, ಹಾಗಲ್ಲದಿದ್ದರೆ ಅದು ಈ ಚಿತ್ರದ ಸೋಲು ಅನ್ನಬಹುದು. ಈ ನಡುವೆ ಮೆಡಿಕಲ್‌ ಪ್ರವೇಶ ಪಡೆಯಲು ಹುಚ್ಚಿಗೆ ಬಿದ್ದು ಓದುವ ಮಿನಿ ಪಾತ್ರಧಾರಿ ಸಮರ ತಿಜೋರಿ ಆ ವಯಸ್ಸಿನವರು ಬಯಸುವ ಸ್ವತಂತ್ರ, ಇಟ್ಟುಕೊಂಡಿರುವ ಬಿಗುಮಾನಗಳನ್ನೆಲ್ಲ ಅಚ್ಚುಕಟ್ಟಾಗಿ ನಿಭಾಯಿಸಿದ್ದಾಳೆ.

ವೈದ್ಯರು ಮತ್ತು ಪೊಲೀಸರ ಒಳಕೈಯಿಂದ ಮುನ್ನಡೆಯುವ ಡ್ರಗ್ ಮಾಫಿಯಾದ ಈ ಕತೆಯಲ್ಲಿ ಯಾವುದೇ ಪೊಲೀಸರೂ ಸಮವಸ್ತ್ರದಲ್ಲಿ ಕಾಣುವುದೇ ಇಲ್ಲದಿರುವುದು ಸ್ಥಾಪಿತ ಮಟ್ಟುಗಳನ್ನು ಮೀರಿ ಸಾಗುವುದಕ್ಕೆ ಮತ್ತೊಂದು ಸಾಕ್ಷಿ. ಕತೆಗೆ ಪ್ರಮುಖ ತಿರುವು ಬರುವುದೇ ಹಿಟ್ ಲಿಸ್ಟ್‌ನಲ್ಲಿದ್ದೂ ಹತ್ಯೆಯಿಂದ ಬಚಾವಾಗುವ ಪೊಲೀಸ್ ಮುಖ್ಯಸ್ಥೆಯಿಂದ. ಜತೆಗೆ ಡ್ರಗ್ ಮಾಫಿಯಾದ ಬೆನ್ನತ್ತಿ ಸಾಗುವ ತನಿಖಾಧಿಕಾರಿಯೂ ಮಹಿಳೆಯೇ. ಈ ಮೂಲಕ ಯಾವ ಕಡೆಯೂ ಬಲವಂತವಾಗಿ ಮಹಿಳಾವಾದದ ಪ್ರತಿಮೆ ಸ್ಥಾಪಿಸದೆಯೇ ಸಹಜ ರೀತಿಯಲ್ಲೇ ಮಹಿಳೆಯ ಒಳಗಿನ ಗಟ್ಟಿತನ ಕಟ್ಟಿ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ ನಿರ್ದೇಶಕಿ ದಿಯಾ.

ಸುಜಯ್ ಘೋಶ್ ಹಾಗೂ ರಾಜ್ ವಸಂತ್ ಬರೆದ ಸಂಭಾಷಣೆ ಪಾತ್ರಗಳ ಗುರಿ ಮತ್ತು ಮಿತಿಯನ್ನು ಸೊಗಸಾಗಿ ನಿರೂಪಿಸುತ್ತದೆ. ಕೃಷ್ಣನ ಕತೆ ಹೇಳುವಾಗಲೂ ಕ್ರಿಸ್ತನ ಧರ್ಮ ವಿವರಿಸುವಾಗಲೂ ಅವರ ಸಂಭಾಷಣೆ ಪರಿಣಾಮಕಾರಿ. ಈ ಎಲ್ಲವಕ್ಕೂ ಪೂರಕವಾಗಿ ಇರುವುದು ಗೈರಿಕ್ ಸರ್ಕಾರ್ ಛಾಯಾಗ್ರಹಣ. ಝೀ5ನಲ್ಲಿ ಬಿಡುಗಡೆಯಾದ ಬಾಬ್ ಬಿಸ್ವಾಸ್ ನಿರ್ಮಾಣ ಹಂತದಲ್ಲಿ ಥಿಯೇಟರ್‌ಗೆಂದೇ ಮಾಡಿದ ಸಿನಿಮಾ ಎಂಬುದು ಶಿಳ್ಳೆ-ಚಪ್ಪಾಳೆಗೆ ಪ್ರೇರೇಪಿಸುವಂತೆ ಹೆಣೆದ ಕೊನೆಯ ದೃಶ್ಯಗಳಲ್ಲಿ ಮಾತ್ರ ಅನಿಸುತ್ತದೆ.

ನಿರ್ದೇಶನ : ದಿಯಾ ಅನ್ನಪೂರ್ಣ ಘೋಶ್ | ಕತೆ-ಚಿತ್ರಕತೆ : ಸುಜೋಯ್ ಘೋಶ್ | ಛಾಯಾಗ್ರಹಣ : ಗೈರಿಕ್ ಸರ್ಕಾರ್ | ನಿರ್ಮಾಣ : ಗೌರಿ ಖಾನ್, ಸುಜೋಯ್ ಘೋಶ್, ಗೌರವ್ ವರ್ಮ | ತಾರಾಗಣ : ಅಭಿಷೇಕ್ ಬಚ್ಚನ್, ಚಿತ್ರಾಂಗದಾ ಸಿಂಗ್

1 COMMENT

LEAVE A REPLY

Connect with

Please enter your comment!
Please enter your name here