ಬೆಂಗಳೂರು ಏರ್‌ಪೋರ್ಟ್‌ ಘಟನೆಗೆ ಸಂಬಂಧಿಸಿದಂತೆ ಚೆನ್ನೈ ಸೈಡಾಪೆಟ್‌ ಕೋರ್ಟ್‌ ನಟ ವಿಜಯ್‌ ಸೇತುಪತಿಗೆ ಸಮನ್ಸ್‌ ಜಾರಿ ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜನವರಿ 4ರಂದು ನಟ ಕೋರ್ಟ್‌ಗೆ ಹಾಜರಾಗಿ ವಿಚಾರಣೆ ಎದುರಿಸಲಿದ್ದಾರೆ.

ಕೆಲವು ವಾರಗಳ ಹಿಂದೆ ನಟ ವಿಜಯ್‌ ಸೇತುಪತಿಗೆ ಸಂಬಂಧಿಸಿದ ವೀಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಓಡಾಡಿತ್ತು. ಬೆಂಗಳೂರು ಏರ್‌ಪೋರ್ಟ್‌ನಲ್ಲಿ ವ್ಯಕ್ತಿಯೊಬ್ಬ ವಿಜಯ್‌ ಸೇತುಪತಿ ಅವರಿಗೆ ಕಾಲಿನಿಂದ ಒದ್ದ ವೀಡಿಯೋ ಅದು. ಇದಕ್ಕೆ ಪ್ರತಿಯಾಗಿ ಸೇತುಪತಿ ಮ್ಯಾನೇಜರ್‌ ಜಾನ್ಸನ್‌ ಮತ್ತು ಅಂಗರಕ್ಷಕರು ಆ ವ್ಯಕ್ತಿಯ ಮೇಲೆ ದಾಳಿ ಮಾಡಿದ್ದರು. ಮಹಾ ಗಾಂಧಿ ಹೆಸರಿನ ಆ ವ್ಯಕ್ತಿ ವಿಜಯ್‌ ಸೇತುಪತಿ ಮತ್ತು ಅವರ ಮ್ಯಾನೇಜರ್‌ ಜಾನ್ಸನ್‌ ವಿರುದ್ಧ ದೂರು ದಾಖಲಿಸಿದ್ದರು. “ನಾನು ವಿಜಯ್‌ ಸೇತುಪತಿ ಸಿನಿಮಾ ಸಾಧನೆಗಾಗಿ ಅವರನ್ನು ಅಭಿನಂದಿಸಿದ್ದೆ. ಆದರೆ ನಟ ಅಭಿನಂದನೆ ಸ್ವೀಕರಿಸಿದೆ ಕಡೆಗಣಿಸಿದರು ಮತ್ತು ನನ್ನ ಜಾತಿಯ ಬಗ್ಗೆ ಕೆಟ್ಟ ರೀತಿಯಲ್ಲಿ ಮಾತನಾಡಿದ್ದಾರೆ. ನಟನ ಮ್ಯಾನೇಜರ್‌ ನಡೆಸಿದ ದಾಳಿಯಿಂದಾಗಿ ನನ್ನ ಕಿವಿಗಳಿಗೆ ಹಾನಿಯಾಗಿದ್ದು, ಶ್ರವಣದೋಷ ಉಂಟಾಗಿದೆ” ಎಂದು ಮಹಾ ಗಾಂಧಿ ದೂರು ದಾಖಲಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಚೆನ್ನೈನ ಸೈಡಾಪೆಟ್‌ ಕೋರ್ಟ್‌ ವಿಜಯ್‌ ಸೇತುಪತಿ ಮತ್ತು ಅವರ ಮ್ಯಾನೇಜರ್‌ಗೆ ಸಮನ್ಸ್‌ ಜಾರಿ ಮಾಡಿದೆ. ಅದರಂತೆ ಜನವರಿ 4ರಂದು ಇಬ್ಬರೂ ಕೋರ್ಟ್‌ಗೆ ಹಾಜರಾಗಿ ವಿವರಣೆ ನೀಡಬೇಕಾಗಿದೆ. ಸಮನ್ಸ್‌ಗೆ ಸಂಬಂಧಿಸಿದಂತೆ ವಿಜಯ್‌ ಸೇತುಪತಿ ಇಲ್ಲಿಯವರೆಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಇನ್ನು ಸಿನಿಮಾ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯ್‌ ಸೇತುಪತಿ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವಿಘ್ನೇಶ್‌ ಶಿವನ್‌ ನಿರ್ದೇಶನದಲ್ಲಿ ಅವರು ನಟಿಸಿರುವ ರೊಮ್ಯಾಂಟಿಕ್‌ ಡ್ರಾಮಾ ‘ಕಾಥು ವಾಕುಲು ರೆಂಡು ಕಾಧಲ್‌’ ತಮಿಳು ಸಿನಿಮಾ ಸದ್ಯದಲ್ಲೇ ತೆರೆಕಾಣಲಿದೆ.

ಬೆಂಗಳೂರು ಏರ್‌ಪೋರ್ಟ್‌ನಲ್ಲಿ ನಟ ವಿಜಯ್‌ ಸೇತುಪತಿ ಅವರ ಮೇಲೆ ದಾಳಿ ನಡೆದ ಸಂದರ್ಭದ ವೀಡಿಯೊ

LEAVE A REPLY

Connect with

Please enter your comment!
Please enter your name here