ಅಚ್ಯುತ್‌ ಕುಮಾರ್‌ ನಾಯಕನಟನಾಗಿ ಅಭಿನಯಿಸಿರುವ ‘ಫೋರ್ ವಾಲ್ಸ್’ ಸಿನಿಮಾ ಫೆಬ್ರವರಿಯಲ್ಲಿ ತೆರೆಗೆ ಬರುತ್ತಿದೆ. ಇತ್ತೀಚೆಗಷ್ಟೇ ವಿತರಣೆ ಸಂಸ್ಥೆ ಆರಂಭಿಸಿರುವ ಚಿತ್ರನಿರ್ದೇಶಕ ಸತ್ಯಪ್ರಕಾಶ್‌ ಈ ಚಿತ್ರದ ವಿತರಣೆಯ ಹೊಣೆ ಹೊತ್ತಿದ್ದಾರೆ.

ಟೈಟಲ್, ಪೋಸ್ಟರ್, ಟೀಸರ್ ಹೀಗೆ ಪ್ರತಿ ಹಂತದಲ್ಲೂ ಗಮನ ಸೆಳೆದ ಸಿನಿಮಾ ‘ಫೋರ್ ವಾಲ್ಸ್’. ಮೊದಲ ಬಾರಿ ಅಚ್ಯುತ್‌ ಕುಮಾರ್‌ ಇಲ್ಲಿ ಹೀರೋ ಆಗಿ ನಟಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಚಿತ್ರದ ‘ಕಣ್ಮಣಿಯೇ ಕಣ್ಮಣಿಯೇ’ ವೀಡಿಯೋ ಸಾಂಗ್‌ ಸದ್ದು ಮಾಡಿತ್ತು. ಅಚ್ಯುತ್ ಕುಮಾರ್ ಸೈಕಲ್ ತುಳಿಯುತ್ತಾ ಗೆಳತಿಯ ಹಿಂದೆ ಸುತ್ತುತ್ತಾ ಪ್ರೀತಿ ನಿವೇದಿಸಿಕೊಳ್ಳುವ ಹಾಡನ್ನು ಜನರು ಮೆಚ್ಚಿದ್ದರು. ಶ್ರೀ ತಲಗೇರಿ ರಚನೆಯ ಹಾಡಿಗೆ ಆನಂದ ರಾಜಾ ವಿಕ್ರಮ ಸಂಗೀತ ಸಂಯೋಜಿಸಿದ್ದು, ವಿಜಯಪ್ರಕಾಶ್‌ ಹಾಡಿದ್ದಾರೆ. ಇದೀಗ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಅಚ್ಯುತ್ ಕುಮಾರ್‌, ಸುಜಯ್, ಜಾಹ್ನವಿ, ಭಾಸ್ಕರ್ ನೀನಾಸಂ, ಡಾ.ಪವಿತ್ರ, ರಚನಾ ನಟಿಸಿರುವ ಸಿನಿಮಾ ಫೆಬ್ರವರಿಯಲ್ಲಿ ತೆರೆಕಾಣಲಿದೆ.

‘ಮಂತ್ರಂ’ ಸಿನಿಮಾ ನಿರ್ದೇಶನದೊಂದಿಗೆ ಸಿನಿಮಾರಂಗ ಪ್ರವೇಶಿಸಿದ್ದ ಎಸ್‌.ಎಸ್‌.ಸಜ್ಜನ್‌ ‘ಫೋರ್‌ವಾಲ್ಸ್‌’ ಕತೆ ಬರೆದು ನಿರ್ದೇಶನ ಮಾಡಿದ್ದಾರೆ. ಅಚ್ಯುತ್ ಕುಮಾರ್ ನಾಯಕನಟನಾಗಿ ಅಭಿನಯಿಸಿದ್ದು, ಚಿತ್ರದಲ್ಲಿ ಅವರ ಪಾತ್ರಕ್ಕೆ ಮೂರು ಶೇಡ್‌ಗಳಿವೆ. “ಇದೊಂದು ಫ್ಯಾಮಿಲಿ ಎಂಟರ್‌ಟೇನ್‌ಮೆಂಟ್‌ ಚಿತ್ರವಾಗಿದ್ದು, ತಂದೆ – ಮಗನ ನಡುವಿನ ಬಾಂಧವ್ಯದ ಕತೆ ಚಿತ್ರದಲ್ಲಿದೆ. ಮನರಂಜನೆಗೆ ಎಲ್ಲೂ ಕೊರತೆ ಇಲ್ಲ” ಎನ್ನುತ್ತಾರೆ ನಿರ್ದೇಶಕ ಸಜ್ಜನ್‌. ಎಸ್.ವಿ ಪಿಕ್ಚರ್ಸ್ ಬ್ಯಾನರ್‌ನಡಿ ಟಿ. ವಿಶ್ವನಾಥ್ ನಾಯಕ್ ನಿರ್ಮಿಸಿರುವ ಚಿತ್ರದಲ್ಲಿ ಡಾ.ಪವಿತ್ರ ನಾಯಕಿಯಾಗಿ ಅಭಿನಯಿಸಿದ್ದಾರೆ. ಡಾ. ಜಾಹ್ನವಿ ಜ್ಯೋತಿ, ದತ್ತಣ್ಣ, ಭಾಸ್ಕರ್ ನೀನಾಸಂ, ಶ್ರೇಯಾ ಶೆಟ್ಟಿ, ಆಂಚಲ್ ಚಿತ್ರದ ತಾರಾಬಳಗದಲ್ಲಿದ್ದಾರೆ. ವಿಡಿಆರ್ ಛಾಯಾಗ್ರಹಣ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here