‘ರುದ್ರ’ ವೆಬ್‌ ಸರಣಿಯೊಂದಿಗೆ ಬಾಲಿವುಡ್‌ ನಟ ಅಜಯ್‌ ದೇವಗನ್‌ ಸ್ಟ್ರೀಮಿಂಗ್‌ ಪ್ಲಾಟ್‌ಫಾರ್ಮ್‌ ಪ್ರವೇಶಿಸುತ್ತಿದ್ದಾರೆ. BBC ಸರಣಿ ‘ಲೂಥರ್‌’ ಹಿಂದಿ ಅವತರಣಿಕೆಯಿದು. ಟ್ರೈಲರ್‌ ಬಿಡುಗಡೆಯಾಗಿದ್ದು, ಶೀಘ್ರದಲ್ಲೇ ಸರಣಿ ಡಿಸ್ನೀಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್‌ ಆಗಲಿದೆ.

ಅಜಯ್‌ ದೇವಗನ್‌ ಅಭಿನಯದ ‘ರುದ್ರ: ದಿ ಎಡ್ಜ್‌ ಆಫ್‌ ಡಾರ್ಕ್‌ನೆಸ್‌’ ವೆಬ್‌ ಸರಣಿಯ ಟ್ರೈಲರ್‌ ಬಿಡುಗಡೆಯಾಗಿದೆ. ರಾಜೇಶ್‌ ಮುಪಾಸ್ಕರ್‌ ನಿರ್ದೇಶನದ ಸರಣಿಯಲ್ಲಿ ದೇವಗನ್‌ ಪೊಲೀಸ್‌ ಆಫೀಸರ್‌ ಪಾತ್ರದಲ್ಲಿದ್ದಾರೆ. ಇದ್ರಿಸ್‌ ಎಲ್ಬಾ ನಟನೆಯ BBCಯ ಯಶಸ್ವೀ ಸರಣಿ ‘ಲೂಥರ್‌’ ಹಿಂದಿ ಅವತರಣಿಕೆ ‘ರುದ್ರ’. ಮೂಲ ಇಂಗ್ಲಿಷ್‌ ಸರಣಿಯಲ್ಲಿ ನಟ ಇದ್ರಿಸ್‌ ಎಲ್ಬಾ ಅವರು ಚತುರ, ನಿಷ್ಠಾವಂತ, ನಿರ್ಭಿಡೆಯ ಪೊಲೀಸ್‌ ಅಧಿಕಾರಿಯಾಗಿ ನಟಿಸಿದ್ದರು. ಹಿಂದಿ ಅವತರಣಿಕೆಯಲ್ಲಿಯೂ ಅಜಯ್‌ ಪಾತ್ರಕ್ಕೆ ಇದೇ ಮೆರುಗು ಇದೆ. ಭಯಾನಕ ಕ್ರೈಂ ಕೇಸ್‌ಗಳನ್ನು ಭೇದಿಸುವ ಹಾದಿಯಲ್ಲಿ ರುದ್ರ (ದೇವಗನ್‌) ವಿಚಲಿತನಾಗುವ, ಕೆಲವು ಬಾರಿ ಕ್ರೂರಿಯೂ ಆಗುತ್ತಾನೆ ಎನ್ನುವ ಚಿತ್ರಣ ಪಾತ್ರಕ್ಕಿದೆ. ಸರಣಿಯ ತಾಂತ್ರಿಕ ಗುಣಮಟ್ಟ ಉತ್ಕೃಷ್ಟವಾಗಿದೆ ಎನ್ನುವುದು ಟ್ರೈಲರ್‌ನಲ್ಲಿ ತಿಳಿದುಬರುತ್ತದೆ.

ಅಜಯ್‌ ದೇವಗನ್‌ ಈಗಾಗಲೇ ಪೊಲೀಸ್‌ ಪಾತ್ರಗಳಲ್ಲಿ ಯಶಸ್ವಿಯಾಗಿರುವ ನಟ. ಪೊಲೀಸ್‌ ಅಧಿಕಾರಿಯಾಗಿ ‘ಗಂಗಾಜಲ್‌’ ಸೇರಿದಂತೆ ಅವರ ‘ಸಿಂಗಂ’ ಫ್ರಾಂಚೈಸ್‌ಗಳು ದೊಡ್ಡ ಯಶಸ್ಸು ಕಂಡಿವೆ. ಹಾಗಾಗಿ ‘ರುದ್ರ’ ಸರಣಿ ಅವರ ಅಭಿಮಾನಿಗಳಿಗೆ ಇಷ್ಟವಾಗುವ ಸೂಚನೆಗಳು ಸಿಗುತ್ತವೆ. ಇಶಾ ಡಿಯೋಲ್‌, ಅತುಲ್‌ ಕುಲಕರ್ಣಿ, ಅಶ್ವಿನಿ ಕಾಲ್ಸೇಕರ್‌, ಆಶಿಷ್‌ ವಿದ್ಯಾರ್ಥಿ ಸರಣಿಯ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. “ಡಿಜಿಟಲ್‌ ಸ್ಟ್ರೀಮಿಂಗ್‌ ಜಗತ್ತು ನನಗೆ ಎಂದಿಗೂ ಅಚ್ಚರಿ ಮೂಡಿಸುತ್ತದೆ. ಲಾಂಗ್‌ – ಫಾರ್ಮ್ಯಾಟ್‌ ಕಂಟೆಂಟ್‌ನೊಂದಿಗೆ ಡಿಜಿಟಲ್‌ಗೆ ಡೆಬ್ಯೂ ಮಾಡಲು ಇಚ್ಛಿಸಿದ್ದೆ. ರುದ್ರ ಅಂಥದ್ದೊಂದು ವೇದಿಕೆ ಒದಗಿಸಿದೆ” ಎನ್ನುತ್ತಾರೆ ಅಜಯ್‌ ದೇವಗನ್‌. ಸರಣಿಯ ಸ್ಟ್ರೀಮಿಂಗ್‌ ದಿನಾಂಕವನ್ನು ಡಿಸ್ನೀಪ್ಲಸ್‌ ಹಾಟ್‌ಸ್ಟಾರ್‌ ಸದ್ಯದಲ್ಲೇ ಘೋಷಿಸಲಿದೆ.

LEAVE A REPLY

Connect with

Please enter your comment!
Please enter your name here