ತಮ್ಮದೇ ಆದ ವಿಶಿಷ್ಟ ಆಂಗಿಕ ನಟನೆಯ ಮೂಲಕ ಕನ್ನಡಿಗರಿಗೆ ಚಿರಪರಿಚಿತರಾಗಿದ್ದ ನಟ ಬ್ಯಾಂಕ್ ಜನಾರ್ಧನ್ (76 ವರ್ಷ) ಅಗಲಿದ್ದಾರೆ. 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಅವರು ಕಿರುತೆರೆ, ರಂಗಭೂಮಿಯಲ್ಲೂ ತೊಡಗಿಸಿಕೊಂಡಿದ್ದರು.
ವಯೋಸಹಜ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಹಿರಿಯ ನಟ ಬ್ಯಾಂಕ್ ಜನಾರ್ಧನ್ (76 ವರ್ಷ) ಇಂದು ಬೆಳಗಿನ ಜಾವ ಇಹಲೋಕ ತ್ಯಜಿಸಿದ್ದಾರೆ. 2023ರ ಸೆಪ್ಟೆಂಬರ್‌ನಲ್ಲಿ ಅವರಿಗೆ ಹೃದಯಾಘಾತವಾಗಿತ್ತು. ಚಿಕಿತ್ಸೆಯ ನಂತರ ಅವರು ಚೇತರಿಸಿಕೊಂಡಿದ್ದರು. ಇತ್ತೀಚೆಗೆ ಮತ್ತೆ ಅನಾರೋಗ್ಯಕ್ಕೆ ಈಡಾಗಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು (ಏಪ್ರಿಲ್ 14) ಬೆಳಗಿನ ಜಾವ ಅಸುನೀಗಿದ್ದಾರೆ. ಹಿರಿಯ ನಟನ ಅಗಲಿಕೆಗೆ ಚಲನಚಿತ್ರ ವಾಣಿಜ್ಯ ಮಂಡಳಿ ಸೇರಿದಂತೆ ಕನ್ನಡ ಚಿತ್ರರಂಗದ ಗಣ್ಯರನೇಕರು ಸಂತಾಪ ಸೂಚಿಸಿದ್ದಾರೆ.
ಬ್ಯಾಂಕ್ ನೌಕರರಾಗಿದ್ದ ಜನಾರ್ಧನ್ ಅವರಿಗೆ ನಟನೆ ಬಗ್ಗೆ ಅಪಾರ ಒಲವಿತ್ತು. ಬ್ಯಾಂಕ್ ಕೆಲಸದ ಜೊತೆ ಅವರು ಹವ್ಯಾಸಿ ನಟನಾಗಿ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ನಾಟಕದ ನಂಟು ಅವರನ್ನು ಸಿನಿಮಾಗೆ ಕರೆತಂದಿತು. ಮುಂದಿನ ದಿನಗಳಲ್ಲಿ ಅವರು ಕನ್ನಡ ಚಿತ್ರರಂಗದ ಬೇಡಿಕೆಯ ಹಾಸ್ಯ, ಖಳ, ಪೋಷಕ ನಟನಾಗಿ ಗುರುತಿಸಿಕೊಂಡರು. ಬೆಳ್ಳಿತೆರೆಯ ಜೊತೆಜೊತೆಗೇ ಅವರು ಕಿರುತೆರೆಯಲ್ಲೂ ಮಿಂಚಿದರು. ಸಿನಿಮಾ, ಟೀವಿ ಜೊತೆಗೆ ಅವರು ತಮ್ಮನ್ನು ನಟನಾಗಿ ರೂಪಿಸಿದ ರಂಗಭೂಮಿಯನ್ನು ಮರೆಯಲಿಲ್ಲ. ತಮ್ಮ ಸಮಕಾಲೀನ ಹಾಸ್ಯನಟರೊಂದಿಗೆ ಆಗಿಂದಾಗ್ಗೆ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು.
‘ಪಿತಾಮಹ’ (1985) ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯವಾದ ಅವರ ವೃತ್ತಿ ಬದುಕಿಗೆ ‘ತರ್ಲೆ ನನ್ಮಗ’ ಸಿನಿಮಾ ತಿರುವಾಯ್ತು. ಮುಂದೆ ಸೂಪರ್ ನನ್ಮಗ, ಭಂಡ ನನ್ ಗಂಡ, ಬೆಳ್ಳಿಯಪ್ಪ ಬಂಗಾರಪ್ಪ, ಜೀ ಬೂಂಬಾ, ಗಣೇಶ ಸುಬ್ರಹ್ಮಣ್ಯ, ಕೌರವ, ಬೆಟ್ಟದ ತಾಯಿ, ಪೊಲೀಸ್ ಹೆಂಡ್ತಿ… ಸಿನಿಮಾಗಳು ಅವರ ಜನಪ್ರಿಯತೆ ಹೆಚ್ಚಿಸಿದವು. ಹೆಚ್ಚಾಗಿ ಹಾಸ್ಯಪಾತ್ರಗಳಲ್ಲಿ ಕಾಣಿಸಿಕೊಂಡ ಜನಾರ್ಧನ್ ಪೋಷಕ ಮತ್ತು ಖಳ ಪಾತ್ರಗಳಲ್ಲೂ ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರರಾಗಿದ್ದಾರ. 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಅವರು ಕಿರುತೆರೆಯಲ್ಲೂ ಸಕ್ರಿಯರಾಗಿದ್ದರು. ಪಾಪ ಪಾಂಡು, ಜೋಕಾಲಿ, ರೋಬೋ ಫ್ಯಾಮಿಲಿ, ಮಾಂಗಲ್ಯ, ಜೋಕಾಲಿ… ಅವರ ಕೆಲವು ಪ್ರಮುಖ ಧಾರಾವಾಹಿಗಳು.