2023ರ ವರ್ಷಾಂತ್ಯದಲ್ಲಿ ತೆರೆಕಂಡ ‘ಕಾಟೇರ’ ಥಿಯೇಟರ್‌ಗಳಿಗೆ ಜನರನ್ನು ಕರೆತಂದಿದೆ. ಇದೀಗ ಉದ್ಯಮದವರು ಈ ವರ್ಷದ ಲೆಕ್ಕಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಸಿಂಗಲ್‌ ಸ್ಕ್ರೀನ್‌ ಥಿಯೇಟರ್‌ಗಳು ಉಸಿರಾಡಬೇಕಾದರೆ ಸ್ಟಾರ್‌ ಹೀರೋಗಳ ಸಿನಿಮಾಗಳೇ ಬೇಕು. ಹಾಗೆ ಥಿಯೇಟರ್‌ಗೆ ಜನರನ್ನು ಸೆಳೆಯಬಹುದಾದ 2024ರ ಸಿನಿಮಾಗಳ ಪಟ್ಟಿ ಇಲ್ಲಿದೆ.

ಸಿಂಗಲ್‌ ಸ್ಕ್ರೀನ್‌ ಥಿಯೇಟರ್‌ಗಳಿಗೆ ಸ್ಟಾರ್‌ ಹೀರೋಗಳ ಸಿನಿಮಾಗಳು ಬೇಕು ಎನ್ನುವುದು ಹಳೆಯ ಕೂಗು. ತಿಂಗಳಿಗೊಂದಾದರೂ ದೊಡ್ಡ ಸಿನಿಮಾಗಳು ಸಿಕ್ಕರೆ ಸಿಂಗಲ್‌ ಸ್ಕ್ರೀನ್‌ ಚಿತ್ರಮಂದಿರಗಳು ಉಳಿಯುತ್ತವೆ, ಇಲ್ಲದಿದ್ದರೆ ಕಷ್ಟ ಎನ್ನಲಾಗುತ್ತದೆ. 2023ರ ವರ್ಷಾಂತ್ಯಕ್ಕೆ ದರ್ಶನ್‌ ಅಭಿನಯದ ‘ಕಾಟೇರ’ ಸಿನಿಮಾ ಭರವಸೆ ಮೂಡಿಸಿದೆ. ಇನ್ನು 2024ರಲ್ಲಿ ದರ್ಶನ್‌ ಅವರ ಎರಡು ಚಿತ್ರಗಳು ತೆರೆಗೆ ಬರುವ ಸಾಧ್ಯತೆಗಳಿವೆ. ಈಗಾಗಲೇ ಮಿಲನ ಪ್ರಕಾಶ್‌ ನಿರ್ದೇಶನದ ಸಿನಿಮಾಗೆ ಚಾಲನೆ ಸಿಕ್ಕಿದೆ. ಇನ್ನು ಸುದೀಪ್‌ ನಟನೆಯ ಎರಡು ಚಿತ್ರಗಳು ಬರುವ ಸೂಚನೆಗಳಿವೆ. ರಕ್ಷಿತ್‌ ಶೆಟ್ಟಿ ಅವರ ‘ರಿಚರ್ಡ್‌ ಆಂಥೋನಿ’ ತೆರೆಗೆ ಬರಲಿದ್ದು ಇನ್ನುಳಿದ ಪ್ರಮುಖ ಸಿನಿಮಾಗಳ ಪಟ್ಟಿ ಇಲ್ಲಿದೆ.

ಬಘೀರ | ಶ್ರೀಮುರಳಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಸಿನಿಮಾ. ಈ ಚಿತ್ರಕ್ಕೆ ಪ್ರಶಾಂತ್‌ ನೀಲ್‌ ಕಥೆ, ಚಿತ್ರಕಥೆ ಬರೆದಿದ್ದು, ಡಾ ಸೂರಿ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ‘ಸಪ್ತ ಸಾಗರದಾಚೆ ಎಲ್ಲೋ’ ಖ್ಯಾತಿಯ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸುತ್ತಿದ್ದು, ಪ್ರಕಾಶ್ ರಾಜ್ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ. ಚಲನಚಿತ್ರದಲ್ಲಿ ಶ್ರೀ ಮುರಳಿ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರವು ಆಕ್ಷನ್‌ – ಥ್ರಿಲ್ಲರ್‌ ಆಗಿದ್ದು, ರಂಗಾಯಣ ರಘು, ಅಚ್ಯುತ್‌ ಕುಮಾರ್, ಗರುಡ ರಾಮ್‌ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸಿನಿಮಾವನ್ನು Hombale Films ಬ್ಯಾನರ್‌ ಅಡಿಯಲ್ಲಿ ವಿಜಯ್‌ ಕಿರಗಂದೂರು ಚಿತ್ರ ನಿರ್ಮಿಸುತ್ತಿದ್ದಾರೆ. ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜನೆ, ಎ ಜೆ ಶೆಟ್ಟಿ ಛಾಯಾಗ್ರಹಣ, ಪ್ರಣವ್ ಶ್ರೀ ಪ್ರಸಾದ್ ಸಂಕಲನವಿದೆ. ಚಿತ್ರಕ್ಕೆ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿವೆ.

ಭೀಮ | ದುನಿಯಾ ವಿಜಯ್‌ ಅವರೇ ನಿರ್ದೇಶಿಸಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಈ ಸಿನಿಮಾದಲ್ಲಿ ಅಶ್ವಿನಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಚರಣ್ ರಾಜ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರವನ್ನು Krishna Creations ಮತ್ತು Jagadeesh Films ಬ್ಯಾನರ್‌ ಅಡಿಯಲ್ಲಿ ಕೃಷ್ಣ ಸಾರ್ಥಕ್ ಮತ್ತು ಜಗದೀಶ್ ಗೌಡ ನಿರ್ದೇಶಿಸುತ್ತಿದ್ದು, ಶಿವ ಸೇನಾ ಛಾಯಾಗ್ರಹಣ ನಿರ್ವಹಿಸುತ್ತಿದ್ದಾರೆ.

ಸಂಜು ವೆಡ್ಸ್‌ ಗೀತಾ 2 | ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್‌ ಮುಖ್ಯಭೂಮಿಕೆಯಲ್ಲಿರುವ ಸಿನಿಮಾ. ಈ ಚಿತ್ರದ ಮೊದಲ ಭಾಗದಲ್ಲಿ ನಟಿ ರಮ್ಯ ನಾಯಕಿಯಾಗಿ ಅಭಿನಯಿಸಿದ್ದರು. ಈ ಚಿತ್ರ ಏಪ್ರಿಲ್‌ 11, 2011ರಲ್ಲಿ ಬಿಡುಗಡೆಯಾಗಿ, ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಗಳಿಕೆ ಕಂಡಿತ್ತು ಮತ್ತು ಚಿತ್ರದ ಹಾಡುಗಳು ಹೆಚ್ಚು ಜನಪ್ರಿಯವಾಗಿದ್ದವು. ಈ ಎರಡನೇ ಭಾಗವನ್ನು ಸಹ ನಾಗಶೇಖರ್‌ ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾ ಮತ್ತೊಂದು ಭಾವ ತೀವ್ರತೆಯ ಕತೆ ಎನಿಸುತ್ತದೆ. ಸಿನಿಮಾ ಏಪ್ರಿಲ್‌ 1ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದ್ದು, ಚಿತ್ರದ ಶೀರ್ಷಿಕೆಯಲ್ಲಿಯೇ ‘ರಕ್ತದ ಮುದ್ರೆ’ ಒತ್ತುವುದರಿಂದ ಇದು ಮತ್ತೊಂದು ‘ಕೇಸ್ ಸ್ಟೋರಿ’ ಆಗಲಿದೆಯೇ ಎಂಬುದನ್ನು ಕಾದು ನೋಡಬೇಕು.

KD- The Devil | ಧ್ರುವ ಸರ್ಜಾ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಪ್ರೇಮ್ ನಿರ್ದೇಶನದ ಈ ಚಿತ್ರದಲ್ಲಿ ರಮೇಶ್ ಅರವಿಂದ್ ಮಹತ್ವದ ಪಾತ್ರ ನಿರ್ವಹಿಸಲಿದ್ದಾರೆ. ಚಿತ್ರದಲ್ಲಿ ವಿ ರವಿಚಂದ್ರನ್, ಸಂಜಯ್ ದತ್, ಶಿಲ್ಪಾ ಶೆಟ್ಟಿ ಮತ್ತು ರೀಷ್ಮಾ ನಾಣಯ್ಯ ಪ್ರಮುಖ ಪಾತ್ರಗಳಲ್ಲಿ ಕಾಣಿಕೊಳ್ಳಲಿದ್ದಾರೆ. ಈ ಚಲನಚಿತ್ರವು 70ರ ದಶಕದ ಕಥೆಯನ್ನು ಹೇಳಲಿದ್ದು, ಕುಖ್ಯಾತ ದರೋಡೆಕೋರ ಕಾಳಿಯ ಸುತ್ತ ಕೇಂದ್ರೀಕೃತವಾಗಿರಲಿದೆ. ರಮೇಶ್‌ ಅರವಿಂದ್ ಅವರು ಧ್ರುವಾ ಸರ್ಜಾ ಅವರ ಸಹೋದರನಾಗಿ ಪಾತ್ರ ನಿರ್ವಹಿಸುವ ನಿರೀಕ್ಷೆಯಿದೆ. ಧ್ರುವ ಅವರು ಈ ಚಿತ್ರಕ್ಕಾಗಿ 23 ದಿನಗಳಲ್ಲಿ 18 ಕೆಜಿ ತೂಕ ಇಳಿಸಿಕೊಂಡು ತಮ್ಮ ಪಾತ್ರಕ್ಕೆ ಹೊಂದಿಕೊಳ್ಳಲು ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದಾರೆ. ಚಿತ್ರದ ಬಿಡುಗಡೆ ದಿನಾಂಕವಿನ್ನೂ ನಿಗಧಿಯಾಗಿಲ್ಲ.

ಕಾಂತಾರ- ಅಧ್ಯಾಯ-1 | ರಿಷಬ್‌ ಶೆಟ್ಟಿ ನಿರ್ದೇಶಿಸಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ‘ಕಾಂತಾರ- ಒಂದು ದಂತಕಥೆ – ಅಧ್ಯಾಯ-1’ ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು. ಕಳೆದ ವರ್ಷ ನವೆಂಬರ್‌ ತಿಂಗಳಿನಲ್ಲಿ ಸಿನಿಮಾದ ಫಸ್ಟ್‌ಲುಕ್‌ ಪೋಸ್ಟರ್‌ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಈ ಚಿತ್ರವನ್ನು Hombale Films ಬ್ಯಾನರ್‌ ಅಡಿಯಲ್ಲಿ ವಿಜಯ್‌ ಕಿರಗಂದೂರು ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಬಿ ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜನೆ, ಅರವಿಂದ್‌ ಎಸ್‌ ಕಶ್ಯಪ್‌ ಛಾಯಾಗ್ರಹಣ, ಪ್ರತೀಕ್‌ ಶೆಟ್ಟಿ ಮತ್ತು ಕೆ ಎಂ ಪ್ರಕಾಶ್ ಸಂಕಲನವಿದೆ. ಅವರ ‘ಕಾಂತಾರ-ಒಂದು ದಂತಕಥೆ’ ಸಿನಿಮಾ ಬಿಡುಗಡೆಯಾಗಿ ವರ್ಷ ಕಳೆದಿದೆ. ‘ಕಾಂತಾರ -ಅಧ್ಯಾಯ – 1’ ಸಿನಿಮಾವು ಮೂಲ ಕನ್ನಡ ಸೇರಿದಂತೆ ಹಿಂದಿ, ತಮಿಳು, ತೆಲುಗು, ಮಲಯಾಳಂ, ಬೆಂಗಾಲಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ತೆರೆಕಾಣಲಿದೆ.

ಮಾರ್ಟೀನ್‌ | ದ್ರುವ ಸರ್ಜಾ ಮುಖ್ಯಭೂಮಿಕೆಯಲ್ಲಿರುವ ಸಿನಿಮಾ. ನಟ, ನಿರ್ದೇಶಕ ಅರ್ಜುನ್ ಸರ್ಜಾ ಚಿತ್ರಕ್ಕೆ ಕತೆ ರಚಿಸಿದ್ದಾರೆ ಎನ್ನುವುದು ವಿಶೇಷ. ಎ ಪಿ ಅರ್ಜುನ್ ನಿರ್ದೇಶಿಸಿದ್ದಾರೆ. ಚಿತ್ರವನ್ನು ಉದಯ್ ಕೆ ಮೆಹ್ತಾ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ವೈಭವಿ ಶಾಂಡಿಲ್ಯ, ಅನ್ವೇಶಿ ಜೈನ್, ಸುಕೃತಾ ವಾಗ್ಲೆ, ಅಚ್ಯುತ್ ಕುಮಾರ್ ಮತ್ತು ನಿಕಿತಿನ್ ಧೀರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಧ್ರುವ ಅವರು ಸೈನಿಕನಾಗಿ ಕಾಣಿಸಿಕೊಂಡಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ದದ ಕೆಲವು ಸನ್ನಿವೇಶಗಳನ್ನು ಈ ಚಲನಚಿತ್ರ ಒಳಗೊಂಡಿದೆ.

UI | ಉಪೇಂದ್ರ ಅವರು ನಿರ್ದೇಶಿಸಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ. ಚಿತ್ರವನ್ನು Lahari Films LLP ಮತ್ತು Venus Enterrtainers ಬ್ಯಾನರ್‌ ಅಡಿಯಲ್ಲಿ ಜಿ ಮನೋಹರನ್ ಮತ್ತು ಕೆ ಪಿ ಶ್ರೀಕಾಂತ್ ನಿರ್ಮಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ರೀಷ್ಮಾ ನಾಣಯ್ಯ, ಮುರಳಿ ಶರ್ಮಾ, ಸನ್ನಿ ಲಿಯೋನ್, ನಿಧಿ ಸುಬ್ಬಯ್ಯ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಮುರಳಿ ಕೃಷ್ಣ ಮತ್ತು ಇಂದ್ರಜಿತ್ ಲಂಕೇಶ್ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಬ್ಯಾಚುಲರ್‌ ಪಾರ್ಟಿ | ಅಭಿಜಿತ್ ಮಹೇಶ್ ನಿರ್ದೇಶಿಸುತ್ತಿರುವ ‘ಬ್ಯಾಚುಲರ್‌ ಪಾರ್ಟಿ’ ಸಿನಿಮಾ. ಚಿತ್ರದಲ್ಲಿ ದಿಗಂತ್, ಲೂಸ್ ಮಾದ ಯೋಗಿ ಮತ್ತು ಅಚ್ಯುತ್ ಕುಮಾರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ರಕ್ಷಿತ್ ಶೆಟ್ಟಿ ನಟಿಸಿ, ನಿರ್ಮಿಸಿದ್ದ ‘ಕಿರಿಕ್ ಪಾರ್ಟಿ’ ತೆರೆಕಂಡು ಏಳು ವರ್ಷಗಳು ಕಳೆದಿವೆ. ಅದರ ಯಶಸ್ಸಿನ ಬಳಿಕ ಇಡೀ ತಂಡದ ಸದಸ್ಯರು ಬೇರೆ ಬೇರೆ ಯಶಸ್ವೀ ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಆ ರೀತಿಯ ಯೂತ್ ಕಾಮಿಡಿ ಸ್ಟೋರಿ ಮತ್ತೊಂದು ಬರಲಿಲ್ಲವಲ್ಲ ಎಂಬ ಕೊರಗನ್ನು ನೀಗಿಸಲು ಮತ್ತದೇ ಬರಹಗಾರರ ತಂಡ ಸಜ್ಜಾಗಿದೆ. ಅವರೀಗ ‘ಬ್ಯಾಚುಲರ್ ಪಾರ್ಟಿ’ ಕೊಡಲು ಸಜ್ಜಾಗಿದ್ದಾರೆ. ಈ ಚಲನಚಿತ್ರವನ್ನು Paramvah Studios ಬ್ಯಾನರ್ ಅಡಿಯಲ್ಲಿ ರಕ್ಷಿತ್ ಶೆಟ್ಟಿ ಹಾಗೂ ಅಮಿತ್ ಗುಪ್ತ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಅರವಿಂದ್ ಛಾಯಾಗ್ರಹಣ, ಅರ್ಜುನ್ ರಾಮು ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಸಿನಿಮಾ ಇದೇ ಜನವರಿ 26ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

ಕೃಷ್ಣಂ ಪ್ರಣಯ ಸಖಿ | 2023ರಲ್ಲಿ ಗಣೇಶ್‌ ಅವರಿಗೆ ನಿರಾಸೆಯಾಯ್ತು. ಅವರ ಎರಡು ಸಿನಿಮಾಗಳು ವಿಫಲವಾದವು. 2024ರಲ್ಲಿ ‘ಕೃಷ್ಣಂ ಪ್ರಣಯ ಸಖಿ’ ಚಿತ್ರದೊಂದಿಗೆ ತೆರೆಗೆ ಮರಳಲಿದ್ದಾರೆ. ಶ್ರೀನಿವಾಸರಾಜು ನಿರ್ದೇಶನದ ಚಿತ್ರದ ಇಬ್ಬರು ನಾಯಕಿಯರಾಗಿ ಮಾಳವಿಕ ನಾಯರ್‌ ಮತ್ತು ಶರಣ್ಯ ಶೆಟ್ಟಿ ನಟಿಸುತ್ತಿದ್ದಾರೆ. ಅರ್ಜುನ್‌ ಜನ್ಯ ಸಂಗೀತ, ವೆಂಕಟ್‌ ಪ್ರಸಾದ್‌ ಛಾಯಾಗ್ರಹಣ, ಕೆ ಎಂ ಪ್ರಕಾಶ್‌ ಸಂಕಲನ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here