ಅಲ್ಲು ಅರ್ಜುನ್ ಅವರ ‘ಪುಷ್ಪ’ ತೆಲುಗು ಚಿತ್ರದಲ್ಲಿನ ತಮ್ಮ ಪಾತ್ರವು ಪ್ರೇಕ್ಷಕರಿಂದ ವ್ಯಾಪಕವಾಗಿ ಮೆಚ್ಚುಗೆ ಪಡೆಯುತ್ತದೆ ಎಂದು ನಟ ಧನಂಜಯ್ ನಂಬಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಧನಂಜಯ್ ವೈವಿಧ್ಯಮಯ ಪಾತ್ರಗಳ ಮೂಲಕ ತಮ್ಮದೇ ಆದ ಸ್ಥಾನವನ್ನು ಹೊಂದಿದ್ದಾರೆ. ತಮ್ಮ ಜನಪ್ರಿಯತೆ ವಿಸ್ತರಿಸುವ ಮಹತ್ವಾಕಾಂಕ್ಷೆ ಅವರದು.

ಕನ್ನಡದ ಖ್ಯಾತ ನಟ ಧನಂಜಯ್ ಅವರು ಈಗಾಗಲೇ ‘ಭೈರವ ಗೀತಾ’ ಚಿತ್ರದ ಮೂಲಕ ತೆಲುಗು ಪ್ರೇಕ್ಷಕರಿಗೆ ಪರಿಚಿತರಾಗಿದ್ದಾರೆ. ತೆರೆಗೆ ಸಿದ್ಧವಾಗಿರುವ ತೆಲುಗು ಚಿತ್ರ ‘ಪುಷ್ಪಾ: ದಿ ರೈಸ್‌’ನಲ್ಲಿ ಅವರಿಗೆ ಪ್ರಮುಖ ಪಾತ್ರವಿದೆ. ಇದು ಟಾಲಿವುಡ್‌ನಲ್ಲಿ ಅವರಿಗೆ ದೊಡ್ಡ ತಿರುವು ನೀಡಲಿದೆ ಎಂದೇ ಹೇಳಲಾಗುತ್ತಿದೆ. ಈ ಪಾತ್ರವನ್ನು ಪ್ರೇಕ್ಷಕರು ವ್ಯಾಪಕವಾಗಿ ಮೆಚ್ಚುತ್ತಾರೆ ಎಂದು ಧನಂಜಯ್ ನಂಬಿದ್ದಾರೆ. “ನಾನು ವಿಲನ್‌ಗಳಲ್ಲಿ ಒಬ್ಬನಾಗಿ ನಟಿಸುತ್ತಿದ್ದೇನೆ. ನನ್ನ ಪಾತ್ರದ ಹೆಸರು ಜಾಲಿ ರೆಡ್ಡಿ. ನಾನು ಆ ಪಾತ್ರವನ್ನು ನಿಜವಾಗಿಯೂ ಇಷ್ಟಪಟ್ಟೆ. ಪ್ರತಿಯೊಬ್ಬರೂ ನನ್ನ ನಟನೆಯನ್ನುಇಷ್ಟಪಡುತ್ತಾರೆ ಎಂದು ಭಾವಿಸುತ್ತೇನೆ “ಎಂದಿದ್ದಾರೆ ಧನಂಜಯ್‌.

‘ಪುಷ್ಪ’ ಚಿತ್ರೀಕರಣವು ಅವರ ವೃತ್ತಿಜೀವನದಲ್ಲಿ ಒಂದು ಸ್ಮರಣೀಯ ಅನುಭವವಂತೆ. ತಮ್ಮ ಬಗ್ಗೆ ಮಾತ್ರವಲ್ಲದೆ ಹೀರೋ ಅಲ್ಲು ಅರ್ಜುನ್ ಅವರ ಬಗ್ಗೆಯೂ ಮಾತನಾಡಿರುವ ಧನಂಜಯ, “ಅಲ್ಲು ಅರ್ಜುನ್ ಒಬ್ಬ ಪರಿಪೂರ್ಣತಾವಾದಿ. ಅವರು ಯಾವಾಗಲೂ ಪರಿಪೂರ್ಣತೆಗಾಗಿ ಶ್ರಮಿಸುತ್ತಾರೆ. ಸುಕುಮಾರ್ ಅವರ ಕಾರ್ಯ ವೈಖರಿ ಕೂಡಾ ತುಂಬಾ ವಿಭಿನ್ನವಾಗಿದೆ. ಶೂಟಿಂಗ್ ತುಂಬಾ ಚೆನ್ನಾಗಿತ್ತು, ನಾನು ಸಂಪೂರ್ಣ ಶೂಟಿಂಗ್ ಪ್ರಕ್ರಿಯೆಯನ್ನು ಆನಂದಿಸಿದೆ. ಅದನ್ನು ಪ್ರೇಕ್ಷಕರೊಂದಿಗೆ ಚಿತ್ರಮಂದಿರಗಳಲ್ಲಿ ನೋಡಲು ನನಗೆ ತುಂಬಾ ಕುತೂಹಲವಿದೆ. ಇದು ತುಂಬಾ ಒಳ್ಳೆಯ ಪ್ಯಾನ್ ಇಂಡಿಯಾ ಚಿತ್ರವಾಗಿದೆ” ಎಂದಿದ್ದಾರೆ ಧನಂಜಯ್‌.

‘ಪುಷ್ಪ’ ಚಿತ್ರದಲ್ಲಿ ಅಲ್ಲು ಅರ್ಜುನ್

‘ಸಲಗ’ ಕನ್ನಡ ಚಿತ್ರದ ಯಶಸ್ಸಿನಲ್ಲಿ ಬೀಗುತ್ತಿರುವ ಧನಂಜಯ ಈಗ ತಮ್ಮ ಮುಂಬರುವ ‘ರತ್ನನ್ ಪ್ರಪಂಚ’ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ರೋಡ್ ಮೂವಿ ಎಂದು ಹೇಳಲಾಗುತ್ತಿರುವ ಈ ಚಿತ್ರವನ್ನು ರೋಹಿತ್ ಪದಕಿ ಬರೆದು ನಿರ್ದೇಶಿಸಿದ್ದಾರೆ. ಇದು ಅಕ್ಟೋಬರ್ 22ರಂದು ಅಮೆಜಾನ್ ಪ್ರೈಮ್ ಓಟಿಟಿಯಲ್ಲಿ ಸ್ಟ್ರೀಮ್ ಆಗಲಿದೆ. ‘ಪುಷ್ಪ’ ಚಿತ್ರ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಮೊದಲ ಭಾಗ ‘ಪುಷ್ಪ; ದಿ ರೈಸ್’ ಈ ವರ್ಷ ಡಿಸೆಂಬರ್ 17 ರಂದು ಬಿಡುಗಡೆಯಾಗಲಿದೆ. ಮಲಯಾಳಂ ಸ್ಟಾರ್ ಫಹಾದ್ ಫಾಸಿಲ್ ಚಿತ್ರದಲ್ಲಿ ಖಳ ಪಾತ್ರ ನಿರ್ವಹಿಸಿದ್ದಾರೆ. ತೆಲುಗಿನಲ್ಲಿ ಇದು ಫಹಾದ್ ಅವರ ಚೊಚ್ಚಲ ಸಿನಿಮಾ. ರಶ್ಮಿಕಾ ಮಂದಣ್ಣ ಚಿತ್ರದ ನಾಯಕಿ. ಜಗಪತಿ ಬಾಬು, ಪ್ರಕಾಶ್ ರಾಜ್, ಸುನಿಲ್ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ.

LEAVE A REPLY

Connect with

Please enter your comment!
Please enter your name here