ನಟ ರಾಜೇಂದ್ರ ಪ್ರಸಾದ್ ಅಭಿನಯದ ‘ಸೇನಾಪತಿ’ ತೆಲುಗು ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. aha ತೆಲುಗು ಓಟಿಟಿಯಲ್ಲಿ ಸಿನಿಮಾ ಡಿಸೆಂಬರ್ 31ರಂದು ಸ್ಟ್ರೀಮ್ ಆಗಲಿದೆ.
ಖ್ಯಾತ ತೆಲುಗು ನಟ ರಾಜೇಂದ್ರ ಪ್ರಸಾದ್ ಓಟಿಟಿಗೆ ಪದಾರ್ಪಣೆ ಮಾಡಿರುವ ‘ಸೇನಾಪತಿ’ ತೆಲುಗು ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. 2017ರಲ್ಲಿ ತೆರೆಕಂಡಿದ್ದ ‘8 ತೊಟ್ಟಕ್ಕಲ್’ ತಮಿಳು ಸಿನಿಮಾ ಆಧರಿಸಿದ ಆಕ್ಷನ್ – ಥ್ರಿಲ್ಲರ್ ಇದು. ಹಾಸ್ಯ ಪಾತ್ರಗಳಲ್ಲಿ ಹೆಸರು ಮಾಡಿರುವ ನಟ ರಾಜೇಂದ್ರ ಪ್ರಸಾದ್ ಈ ಸಿನಿಮಾದೊಂದಿಗೆ ಡಿಜಿಟಲ್ ಪ್ಲಾಟ್‌ಫಾರ್ಮ್ ಪ್ರವೇಶಿಸುತ್ತಿದ್ದಾರೆ. ‘ಸೇನಾಪತಿ’ ಚಿತ್ರದಲ್ಲಿ ಅವರು ಶ್ರೀಸಾಮಾನ್ಯನ ಪಾತ್ರದಲ್ಲಿದ್ದಾರೆ. ಪೊಲೀಸ್ ಅಧಿಕಾರಿಯೊಬ್ಬ ಕಳೆದುಕೊಂಡ ತನ್ನ ಪಿಸ್ತೂಲನ್ನು ಹುಡುಕುವುದರೊಂದಿಗೆ ಟ್ರೈಲರ್ ಶುರುವಾಗುತ್ತದೆ. ಇಲ್ಲಿ ಕೆಟ್ಟ ಮತ್ತು ಒಳ್ಳೆಯ ಪಾತ್ರಗಳ ಪರಿಚಯ ಸಿಗುತ್ತಿದ್ದು, ರಾಜೇಂದ್ರ ಪ್ರಸಾದ್ ಪಾತ್ರಕ್ಕೂ, ಇನ್‌ಸ್ಪೆಕ್ಟರ್ ಪಾತ್ರಕ್ಕೂ ನಂಟು ಏನೆನ್ನುವುದರ ಬಗ್ಗೆ ಮಾಹಿತಿ ಸಿಗುವುದಿಲ್ಲ.
‘ಪ್ರೇಮ ಇಶ್ಕ್ ಕಾದಲ್’ ತೆಲುಗು ಸಿನಿಮಾ ನಿರ್ದೇಶಿಸಿದ್ದ ಪವನ್ ಸಡಿನೇನಿ ‘ಸೇನಾಪತಿ’ ಸಿನಿಮಾ ನಿರ್ದೇಶಿಸಿದ್ದಾರೆ. ನಟ ಚಿರಂಜೀವಿ ಪುತ್ರಿ ಸುಷ್ಮಿತಾ ಕೊನಿಡೇಲ ಮತ್ತು ಗೋಲ್ಡನ್ ಬಾಕ್ಸ್ ಎಂಟರ್‌ಟೇನ್‌ಮೆಂಟ್ಸ್‌ನ ವಿಶ್ವಪ್ರಸಾದ್ ಸಿನಿಮಾ ನಿರ್ಮಿಸಿದ್ದಾರೆ. ನರೇಶ್ ಅಗಸ್ತ್ಯ, ಜ್ಞಾನೇಶ್ವರಿ, ಹರ್ಷವರ್ಧನ್, ಕೇಶವ್ ದೀಪಕ್, ರಾಕೇಂದು ಮೌಳಿ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ದಕ್ಷಿಣ ಭಾರತದ ಸಿನಿಪ್ರೇಕ್ಷಕರಿಗೆ ಪರಿಚಿತರಾಗಿರುವ ರಾಜೇಂದ್ರ ಪ್ರಸಾದ್ ‘ಕ್ವಿಕ್ ಗನ್ ಮುರುಘನ್’ ಇಂಗ್ಲೀಷ್ ಚಿತ್ರದೊಂದಿಗೆ ಉತ್ತರ ಭಾರತದ ಪ್ರೇಕ್ಷಕರನ್ನೂ ತಲುಪಿರುವ ನಟ. ಅವರ ‘ಸೇನಾಪತಿ ಸಿನಿಮಾ’ aha ಓಟಿಟಿಯಲ್ಲಿ ಡಿಸೆಂಬರ್ 31ರಂದು ಸ್ಟ್ರೀಮ್ ಆಗಲಿದೆ.