‘ಸೂರ್ಯವಂಶಿ’ ಹಿಂದಿ ಚಿತ್ರದ ಮೊದಲ ವೀಡಿಯೋ ಸಾಂಗ್‌ ‘ಐಲಾ ರೇ ಐಲಾ’ ಬಿಡುಗಡೆಯಾಗಿದೆ. ಈ ಟಿಪಿಕಲ್ ಬಾಲಿವುಡ್ ದೇಸಿ ಹಾಡಿಗೆ ಚಿತ್ರದ ಹೀರೋಗಳಾದ ಅಕ್ಷಯ್ ಕುಮಾರ್, ಅಜಯ್ ದೇವಗನ್ ಮತ್ತು ರಣವೀರ್ ಸಿಂಗ್ ಹೆಜ್ಜೆ ಹಾಕಿದ್ದಾರೆ.

ರೋಹಿತ್ ಶೆಟ್ಟಿ ನಿರ್ದೇಶನದ ಹಿಂದಿ ಆಕ್ಷನ್ – ಡ್ರಾಮಾ ಸಿನಿಮಾ ‘ಸೂರ್ಯವಂಶಿ’ ಮೊದಲ ವೀಡಿಯೋ ಸಾಂಗ್ ಬಿಡುಗಡೆಯಾಗಿದೆ. ಇದೊಂದು ಪಾರ್ಟಿ ಸಾಂಗ್‌ನಂತೆ ಭಾಸವಾಗುತ್ತಿದ್ದು, ಅಜಯ್ ದೇವಗನ್, ಅಕ್ಷಯ್ ಕುಮಾರ್ ಮತ್ತು ರಣವೀರ್ ಸಿಂಗ್ ಹಾಡಿಗೆ ಕುಣಿದಿದ್ದಾರೆ. ಲ್ಯಾರ್ಜರ್‌ದ್ಯಾನ್ ಲೈಫ್ ಇಮೇಜಿನ ಪಾತ್ರಗಳ ಈ ಹೀರೋಗಳು ಪ್ರೇಕ್ಷಕರನ್ನು ಥಿಯೇಟರ್‌ಗೆ ಸೆಳೆಯುವ ಸೂಚನೆ ನೀಡಿದ್ದಾರೆ. ಅಕ್ಷಯ್ ಕುಮಾರ್ ಅಭಿನಯದ ದಶಕದ ಹಿಂದಿನ ‘ಕಟ್ಟಾ ಮೀಠಾ’ (2010) ಚಿತ್ರದ ಒರಿಜಿನಲ್‌ ಟ್ರ್ಯಾಕ್ ಇಲ್ಲಿ ಮತ್ತೆ ರೀಕ್ರಿಯೇಟ್ ಆಗಿದೆ. ಮೂಲ ಟ್ಯೂನನ್ನು ಪ್ರೀತಂ ಕಂಪೋಸ್ ಮಾಡಿದ್ದರು. ಹೊಸ ಟ್ಯೂನ್‌ಗೆ ತನಿಶ್ಕ್ ಬಾಗ್ಚಿ ಮಟ್ಟು ಹಾಕಿದ್ದಾರೆ. ಶಬ್ಬೀರ್ ಅಹ್ಮದ್ ಗೀತೆ ರಚಿಸಿದ್ದು, ದಲಾರ್ ಮೆಹಂದಿ ಹಾಡಿದ್ದಾರೆ.

ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಈ ಸಿನಿಮಾ ಈ ವರ್ಷ ಮಾರ್ಚ್‌ ತಿಂಗಳಲ್ಲೇ ತೆರೆಗೆ ಬರಬೇಕಿತ್ತು. ಕೋವಿಡ್‌ ಲಾಕ್‌ಡೌನ್‌ನಿಂದಾಗಿ ಚಿತ್ರೀಕರಣವೂ ವಿಳಂಬವಾಯ್ತು. ಕೊನೆಗೆ ನವೆಂಬರ್‌ 5ರಂದು ದೀಪಾವಳಿಗೆ ಸಿನಿಮಾ ತೆರೆಕಾಣಲಿದೆ. ಮಹಾರಾಷ್ಟ್ರದಲ್ಲಿ ಅಕ್ಟೋಬರ್‌ 22ರಿಂದ ಥಿಯೇಟರ್‌ಗಳು ಓಪನ್ ಆಗುತ್ತಿದ್ದು, ಬಾಲಿವುಡ್ ನಿರಾಳವಾಗಿದೆ. ಚಿತ್ರದಲ್ಲಿ ನಟಿ ಕತ್ರಿಕಾ ಕೈಫ್‌ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ರೋಹಿತ್ ಶೆಟ್ಟಿ ಈ ಹಿಂದೆ ಅಜಯ್ ದೇವಗನ್‌ ಅವರಿಗೆ ‘ಸಿಂಗಂ’ ಸರಣಿ ಚಿತ್ರಗಳನ್ನು ನಿರ್ದೇಶಿಸಿದ್ದರು. ರಣವೀರ್ ಸಿಂಗ್‌ ಅಭಿನಯದ ‘ಸಿಂಬಾ’ ಮತ್ತೊಂದು ಯಶಸ್ವೀ ಪೊಲೀಸ್ ಸಿನಿಮಾ. ಇದೀಗ ಮೂವರು ಹೀರೋಗಳು ಪೊಲೀಸ್ ವೇಷ ತೊಟ್ಟಿರುವ ‘ಸೂರ್ಯವಂಶಿ’ ತೆರೆಗೆ ಬರುತ್ತಿದೆ. ಅಭಿಮಾನಿಗಳು ನಿರೀಕ್ಷೆಯಿಂದ ಕಾಯುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here