ತಮಿಳು ಚಿತ್ರರಂಗದ ಖ್ಯಾತ ನಟ ಧನುಷ್‌ ಮತ್ತು ಗಾಯಕಿ, ಚಿತ್ರನಿರ್ಮಾಪಕಿ ಐಶ್ವರ್ಯ ವಿಚ್ಛೇದನ ಘೋಷಿಸಿದ್ದಾರೆ. ತಾವು ಬೇರ್ಪಡುತ್ತಿರುವ ವಿಷಯದ ಪತ್ರವನ್ನು ಟ್ವೀಟ್‌ ಮಾಡಿರುವ ಇಬ್ಬರೂ ತಮ್ಮ ನಿರ್ಧಾರ ಗೌರವಿಸುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ಭಾರತೀಯ ಸಿನಿಮಾದ ಖ್ಯಾತ ನಟ ರಜನೀಕಾಂತ್‌ ಕುಟುಂಬದ ಸುದ್ದಿಯಿದು. ಹದಿನೆಂಟು ವರ್ಷಗಳ ಹಿಂದೆ 2004ರಲ್ಲಿ ರಜನೀಕಾಂತ್‌ ಹಿರಿಯ ಪುತ್ರಿ ಐಶ್ವರ್ಯಾ ಅವರು ಖ್ಯಾತ ನಟ ಧನುಷ್‌ರನ್ನು ವರಿಸಿದ್ದರು. ಧನುಷ್‌ರಿಗಿಂತ ಐಶ್ವರ್ಯ ಎರಡು ವರ್ಷಕ್ಕೆ ದೊಡ್ಡವರು. ಇಬ್ಬರ ಪ್ರೀತಿಗೆ ವಯಸ್ಸಿನ ವ್ಯತ್ಯಾಸ ಅಡ್ಡಿಯಾಗಿರಲಿಲ್ಲ. ಇವರ ದಾಂಪತ್ಯಕ್ಕೆ ಯಾತ್ರ ಮತ್ತು ಲಿಂಗ ಇಬ್ಬರು ಗಂಡು ಮಕ್ಕಳಿದ್ದಾರೆ. ಧನುಷ್‌ ನಟನೆಯ ‘3’ (2012) ಚಿತ್ರದೊಂದಿಗೆ ಐಶ್ವರ್ಯ ನಿರ್ದೇಶಕಿಯಾಗಿ ಪರಿಚಯವಾಗಿದ್ದರು. ಅವರು ಜೊತೆಯಾಗಿ ಓಡಾಡುವ ಫೋಟೊಗಳು ಇತ್ತೀಚಿನವರೆಗೂ ಕಾಣಿಸುತ್ತಿದ್ದವು. ಇದೀಗ ಇಬ್ಬರ ದಾಂಪತ್ಯ ಕೊನೆಗೊಂಡಿದ್ದು ತಾವು ಬೇರ್ಪಡುತ್ತಿರುವ ವಿಷಯವನ್ನು ಟ್ವೀಟ್‌ ಮಾಡಿದ್ದಾರೆ.

“ಈ ಹದಿನೆಂಟು ವರ್ಷ ಸ್ನೇಹಿತರಾಗಿ, ದಂಪತಿಗಳಾಗಿ, ಪೋಷಕರಾಗಿ, ಪರಸ್ಪರರ ಯಶಸ್ಸು ಬಯಸುವವರಾಗಿ ಸಾಗಿ ಬಂದೆವು. ಇಂದು ಇಬ್ಬರೂ ಪ್ರತ್ಯೇಕ ಹಾದಿಗಳಲ್ಲಿ ನಿಂತಿದ್ದೇವೆ. ನಾನು ಮತ್ತು ಐಶ್ವರ್ಯ ಬೇರ್ಪಡುತ್ತಿದ್ದು ನಮ್ಮ ನಿರ್ಧಾರ ಗೌರವಿಸುವಂತೆ ಮನವಿ ಮಾಡುತ್ತೇನೆ” ಎಂದು ಧನುಷ್‌ ಟ್ವೀಟ್‌ ಮಾಡಿದ್ದಾರೆ. ಇದೇ ಪತ್ರವನ್ನು, “ಇದಕ್ಕೆ ಪ್ರತ್ಯೇಕ ಕ್ಯಾಪ್ಶನ್‌ ಅಗತ್ಯವಿಲ್ಲ. ನಿಮ್ಮ ಪ್ರೀತಿ ಇರಲಿ” ಎನ್ನುವ ಒಕ್ಕಣಿಯೊಂದಿಗೆ ಐಶ್ವರ್ಯ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿದ್ದಾರೆ. ಈ ಅನಿರೀಕ್ಷಿತ ಬೆಳವಣಿಗೆ ಧನುಷ್‌ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ತಾರಾ ದಂಪತಿಯ ಈ ನಿರ್ಧಾರಕ್ಕೆ ತಮ್ಮ ಕಮೆಂಟ್‌ಗಳ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಜನೀಕಾಂತ್‌ ಅವರ ಕಿರಿಯ ಪುತ್ರಿ, ಚಿತ್ರನಿರ್ದೇಶಕಿ ಸೌಂದರ್ಯ ಅವರ ಮೊದಲ ದಾಂಪತ್ಯವೂ ಡಿವೋರ್ಸ್‌ನೊಂದಿಗೆ ಕೊನೆಗೊಂಡಿತ್ತು. 2010ರಲ್ಲಿ ಅಶ್ವಿನ್‌ ರಾಮಕುಮಾರ್‌ ಅವರನ್ನು ವರಿಸಿದ್ದ ಸೌಂದರ್ಯ 2017ರಲ್ಲಿ ಅವರಿಂದ ಬೇರ್ಪಟ್ಟಿದ್ದರು. 2019ರಲ್ಲಿ ಅವರು ವಿಶಗನ್‌ ವನಂಗಮುಡಿ ಅವರನ್ನು ಮದುವೆಯಾದರು. ಇದೀಗ ಐಶ್ವರ್ಯ – ಧನುಷ್‌ ವಿಚ್ಛೇದನ ರಜನೀಕಾಂತ್‌ ಕುಟುಂಬಕ್ಕೆ ನೋವು ತಂದಿದೆ. ಇಬ್ಬರು ಪುಟ್ಟ ಮಕ್ಕಳಿರುವ ಧನುಷ್‌ – ಐಶ್ವರ್ಯ ವಿಚ್ಚೇದನಕ್ಕೆ ಕಾರಣಗಳು ಗೊತ್ತಾಗಿಲ್ಲ. ಇನ್ನು ಸಿನಿಮಾ ವಿಚಾರವಾಗಿ ಧನುಷ್‌ರ ‘ಅತ್ರಂಗಿ ರೇ’ ಹಿಂದಿ ಸಿನಿಮಾ ಮೊನ್ನೆಯಷ್ಟೇ ತೆರೆಕಂಡು ಯಶಸ್ವಿಯಾಗಿತ್ತು. ಸದ್ಯ ಅವರೀಗ ಎರಡು ತಮಿಳು ಸಿನಿಮಾಗಳ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.

LEAVE A REPLY

Connect with

Please enter your comment!
Please enter your name here