ಜನಪ್ರಿಯ ನಟ ನಾಗಾರ್ಜುನ ಬಿಗ್‌ಬಾಸ್ ತೆಲುಗು ಸೀಸನ್ 3ರಿಂದ ಇತ್ತೀಚಿನವರೆಗೂ ನಿರೂಪಕರಾಗಿ ಕಾಣಿಸಿಕೊಂಡಿದ್ದಾರೆ. ಇದೀಗ ಘೋಷಣೆಯಾಗಿರುವ ಬಿಗ್‌ಬಾಸ್ ತೆಲುಗು ಓಟಿಟಿ ವರ್ಷನ್‌ಗೂ ಅವರದೇ ನಿರೂಪಣೆ ಇರಲಿದೆ.
ಕಳೆದ ತಿಂಗಳು ಬಿಗ್‌ಬಾಸ್ ತಮಿಳು ಓಟಿಟಿ ವರ್ಷನ್‌ಗೆ ಚಾಲನೆ ಸಿಕ್ಕಿದೆ. ಈಗ ತೆಲುಗು ಓಟಿಟಿ ವರ್ಷನ್ ಸರದಿ. ಇಂದು ಪ್ರೋಮೊ ಟ್ವೀಟ್ ಮಾಡಿ ಓಟಿಟಿ ವರ್ಷನ್ ‘ಬಿಗ್‌ಬಾಸ್ ನಾನ್‌ಸ್ಟಾಪ್’ ಘೋಷಿಸಿದ್ದಾರೆ ನಟ ನಾಗಾರ್ಜುನ. ಡಿಸ್ನೀಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಫೆಬ್ರವರಿ 26ರಿಂದ ಶೋ ಸ್ಟ್ರೀಮ್ ಆಗಲಿದೆ. ಇಂದು ಬಿಡುಗಡೆಯಾಗಿರುವ ಪ್ರೋಮೊದಲ್ಲಿ ಬಿಗ್‌ಬಾಸ್ ನಾನ್‌ಸ್ಟಾಪ್ ಕಾನ್ಸೆಪ್ಟ್ ಪರಿಚಯಿಸುವ ಡ್ರಾಮಾ ಇದೆ. ಅದರಲ್ಲಿ ನಟ ನಾಗಾರ್ಜುನ ಲಾಯರ್ ಪಾತ್ರ ಮಾಡಿದ್ದರೆ, ವೆನ್ನೆಲ ಕಿಶೋರ್ ಮತ್ತು ಮುರಳೀಕೃಷ್ಣ ಕೂಡ ನಟಿಸಿದ್ದಾರೆ. ಬಿಗ್‌ಬಾಸ್ ತೆಲುಗು ಸೀಸನ್ 5 ಡಿಸೆಂಬರ್‌ನಲ್ಲಿ ಪೂರ್ಣಗೊಂಡಿತ್ತು. ಸನ್ನಿ ಬಿಗ್‌ಬಾಸ್ ಟ್ರೋಫಿ ಪಡೆದಿದ್ದರು. ತೆಲುಗು ಬಿಗ್‌ಬಾಸ್ ಮೊದಲ ಸೀಸನ್ 2017ರಲ್ಲಿ ಮೂಡಿಬಂದಿತ್ತು. ಜ್ಯೂನಿಯರ್ ಎನ್‌ಟಿಆರ್ ಈ ಸೀಸನ್ ನಿರೂಪಿಸಿದ್ದರು. ಎರಡನೇ ಸೀಸನ್ ನಿರೂಪಣೆ ಹೊಣೆ ಹೊತ್ತಿದ್ದು ನಟ ನಾನಿ. ನಂತರ ಮೂರನೇ ಸೀಸನ್‌ನಿಂದ ನಾಗಾರ್ಜುನ ನಿರೂಪಿಸುತ್ತಾ ಬಂದಿದ್ದಾರೆ. ಇದೀಗ ಓಟಿಟಿ ವರ್ಷನ್ ನಿರೂಪಕರಾಗಿ ಮುಂದುವರೆದಿದ್ದಾರೆ.