ಖ್ಯಾತ ನಟ ಹಾಗೂ ತಮಿಳುನಾಡಿನ ಪ್ರಮುಖ ರಾಜಕಾರಣಿ ವಿಜಯಕಾಂತ್ (71 ವರ್ಷ) ಇಂದು (ಡಿಸೆಂಬರ್ 28) ಬೆಳಗ್ಗೆ ನಿಧನರಾಗಿದ್ದಾರೆ. 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದ ವಿಜಯಕಾಂತ್ ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ. ನಟನೆಯಿಂದ ನಿವೃತ್ತಿ ಪಡೆದ ನಂತರ ಅವರು DMDK ಪಕ್ಷ ಸ್ಥಾಪಿಸಿ ತಮಿಳು ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.
ದಕ್ಷಿಣ ಭಾರತದ ಜನಪ್ರಿಯ ನಾಯಕನಟ ವಿಜಯಕಾಂತ್ (71 ವರ್ಷ) ಇಂದು (ಡಿಸೆಂಬರ್ 28) ಬೆಳಗ್ಗೆ ಅಗಲಿದ್ದಾರೆ. ನ್ಯೂಮೋನಿಯಾದಿಂದ ಬಳಲುತ್ತಿದ್ದ ಅವರು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೊರೋನಾ ಸೋಂಕಿಗೆ ತುತ್ತಾಗಿದ್ದ ಅವರು ವೆಂಟಿಲೇಟರ್ ಸಪೋರ್ಟ್‌ನೊಂದಿಗೆ ಚಿಕಿತ್ಸೆಯಲ್ಲಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ. ಅಭಿಮಾನಿಗಳಿಂದ ‘ಕ್ಯಾಪ್ಟನ್’ ಎಂದೇ ಕರೆಸಿಕೊಳ್ಳುತ್ತಿದ್ದ ವಿಜಯಕಾಂತ್ DMDK ಪಕ್ಷ ಸ್ಥಾಪಿಸಿ ತಮಿಳು ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.
ತಮಿಳು ಚಿತ್ರರಂಗ ಕಂಡ ಜನಪ್ರಿಯ ನಾಯಕನಟರಲ್ಲೊಬ್ಬರು ವಿಜಯಕಾಂತ್. ದೇಶಭಕ್ತಿ ಸಿನಿಮಾಗಳ ಮೂಲಕ ‘ಕ್ಯಾಪ್ಟನ್’ ಎಂದೇ ಕರೆಸಿಕೊಂಡಿದ್ದ ಅವರು ಆಂಗ್ರಿ ಯಂಗ್‌ಮ್ಯಾನ್ ಇಮೇಜಿನ ಪಾತ್ರಗಳಲ್ಲಿ ಅಭಿಮಾನಿಗಳಿಗೆ ಇಷ್ಟವಾಗಿದ್ದರು. 1952, ಆಗಸ್ಟ್ 25ರಂದು ಮಧುರೈನಲ್ಲಿ ಅವರು ಜನಿಸಿದರು. ವಿಜಯರಾಜ್ ಅಳಗರಸ್ವಾಮಿ ನಾಯ್ಡು ಅವರ ಜನ್ಮನಾಮ. ವಿದ್ಯಾಭ್ಯಾಸ ಮುಗಿಸಿ ‘ಇನಿಕ್ಕುಮ್ ಇಳಮೈ’ (1979) ಚಿತ್ರದೊಂದಿಗೆ ಅವರು ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದರು. ಈ ಸಿನಿಮಾ ಯಶಸ್ವಿಯಾಗದಿದ್ದರೂ ವಿಜಯಕಾಂತ್ ನಟನಾಗಿ ಗುರುತಿಸಿಕೊಂಡರು. ಆಕ್ಷನ್ ಹೀರೋ ಆಗಿದ್ದ ಅವರಿಗೆ mass appeal ಇತ್ತು. ‘ಸಟ್ಟಂ ಒರು ಇರುಟ್ಟರೈ’, ‘ವೈದಗಿ ಕಾಥಿರುಂಥಾಲ್’, ‘ಅಮ್ಮನ್ ಕೋವಿಲ್ ಕಿಳಕಲೆ’, ‘ಕೂಲಿಕ್ಕಾರನ್’, ‘ಪೂಂಥೊಟ್ಟ ಕಾವಲ್‌ಕಾರನ್’, ‘ಸೆಂತೂರ ಪೂವೆ’, ‘ಪುಲನ್ ವಿಸರಣೈ’, ‘ಕ್ಯಾಪ್ಟನ್ ಪ್ರಭಾಕರ್’, ‘ರಮಣ’ ಅವರಿಗೆ ದೊಡ್ಡ ಹೆಸರು ತಂದುಕೊಟ್ಟ ಪ್ರಮುಖ ಸಿನಿಮಾಗಳು.
ವಿಜಯಕಾಂತ್ ಅವರಿಗೆ ನಟನೆಯಲ್ಲಿನ ಅಪಾರ ಜನಪ್ರಿಯತೆ ರಾಜಕಾರಣದಲ್ಲಿ ನೆರವಾಯ್ತು. 2005ರಲ್ಲಿ ಅವರು ದೇಸಿಯಾ ಮೂರ್ಪೊಕ್ಕು ದ್ರಾವಿಡ ಕಳಗಂ (DMDK) ರಾಜಕೀಯ ಪಕ್ಷ ಸ್ಥಾಪಿಸಿದರು. 2006ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಗಮನಾರ್ಹ ಸಾಧನೆ ಮಾಡಿತು. 2011ರ ವಿಧಾನಸಭೆ ಚುನಾವಣೆಯಲ್ಲಿ DMDK ಪಕ್ಷ ತಮಿಳುನಾಡಿನ ಪ್ರಬಲ DMK ಪಕ್ಷಕ್ಕಿಂತಲೂ ಹೆಚ್ಚು ಸ್ಥಾನ ಗಳಿಸಿ ವಿರೋಧಪಕ್ಷವಾಗಿ ಗುರುತಿಸಿಕೊಂಡಿತು. ಎರಡು ಬಾರಿ ಶಾಸಕರಾಗಿದ್ದ ವಿಜಯಕಾಂತ್ ತಮಿಳು ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದರು. ನಟನಾಗಿ ಅವರು ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿಜಯಕಾಂತ್ ನಿಧನಕ್ಕೆ ದಕ್ಷಿಣ ಭಾರತ ಚಿತ್ರರಂಗದ ಪ್ರಮುಖರನೇಕರು ಹಾಗೂ ರಾಜಕೀಯ ಕ್ಷೇತ್ರದ ಗಣ್ಯರು ಸಂತಾಪ ಸೂಚಿಸಿದ್ದಾರೆ.