‘ಜೈ ಭೀಮ್’ ತಮಿಳು ಸಿನಿಮಾಗೆ ವಿಮರ್ಶಕರು ಹಾಗೂ ಸಿನಿಪ್ರೇಕ್ಷಕರಿಂದ ವ್ಯಾಪಕವಾಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರದಲ್ಲಿನ ಎರಡು ಸನ್ನಿವೇಶಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ. ಈ ಕುರಿತು ಚಿತ್ರದ ನಟ ಪ್ರಕಾಶ್ ರೈ ಮಾತನಾಡಿದ್ದಾರೆ.
ಸೂರ್ಯ ನಿರ್ಮಿಸಿ, ನಟಿಸಿರುವ ‘ಜೈ ಭೀಮ್’ ತಮಿಳು ಸಿನಿಮಾಗೆ ದೇಶದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಿನಿಮಾ ವಿಶ್ಲೇಷಕರು, ವೀಕ್ಷಕರು, ಸಿನಿಮಾರಂಗದ ಪ್ರಮುಖರು ಚಿತ್ರವನ್ನು ಮೆಚ್ಚಿ ಮಾತನಾಡುತ್ತಿದ್ದಾರೆ. ಅಮೇಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್ ಆಗುತ್ತಿರುವ ಸಿನಿಮಾ ಮೂಲ ತಮಿಳು ಸೇರಿದಂತೆ ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲೂ ಜನರಿಗೆ ಸಿಗುತ್ತಿದೆ. ಈ ಮಧ್ಯೆ ಚಿತ್ರದಲ್ಲಿನ ಎರಡು ಸನ್ನಿವೇಶಗಳು ವಿವಾದಕ್ಕೆ ಕಾರಣವಾಗಿವೆ. ಚಿತ್ರದಲ್ಲಿ ಪ್ರಕಾಶ್ ರೈ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ. ಹಿಂದಿ ಮಾತೃಭಾಷೆಯ ವ್ಯಕ್ತಿಯೊಂದಿಗೆ ಪ್ರಕಾಶ್ ರೈ ಸಂಭಾಷಣೆ ನಡೆಸುವ ಸನ್ನಿವೇಶವೊಂದಿದೆ. ಈ ಸಂದರ್ಭದಲ್ಲಿ ಹಿಂದಿಯಲ್ಲಿ ಮಾತನಾಡುತ್ತಿದ್ದ ವ್ಯಕ್ತಿಗೆ, “ತಮಿಳಿನಲ್ಲಿ ಹೇಳು” ಎಂದು ಪೊಲೀಸ್ ಪಾತ್ರಧಾರಿ ರೈ ಅವರು ಕೆನ್ನೆಗೆ ಹೊಡೆಯುತ್ತಾರೆ. ಈ ಸನ್ನಿವೇಶದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧದ ಚರ್ಚೆ ನಡೆಯುತ್ತಿವೆ.
ಇದು ‘ಆಂಟಿ ಹಿಂದಿ ಪ್ರೊಪಗಾಂಡಾ’ ಎಂದು ಉತ್ತರ ಭಾರತ ಮೂಲದ ಬಹಳಷ್ಟು ಜನರು ಟೀಕೆ ಮಾಡುತ್ತಿದ್ದಾರೆ. ಮತ್ತೊಂದೆಡೆ ದಕ್ಷಿಣ ಭಾರತೀಯರು ಇದನ್ನು ಸಮರ್ಥಿಸಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಪ್ರಕಾಶ್ ರೈ, “ಚಿತ್ರ ವೀಕ್ಷಿಸಿದ ಅವರು ಬುಡಕಟ್ಟು ಜನರ ನೋವನ್ನು ಅರ್ಥ ಮಾಡಿಕೊಂಡಿಲ್ಲ. ಸಾಮಾಜಿಕ ನ್ಯಾಯದ ಬಗ್ಗೆ ಕಾಳಜಿ ಇಲ್ಲ. ಅವರಿಲ್ಲಿ ಅಜೆಂಡಾ ಹುಡುಕುತ್ತಿದ್ದಾರೆ. ಒಂದೊಮ್ಮೆ ಈ ಸಿನಿಮಾದ ಕತೆ ನಡೆಯುವ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಹಾಗೆ ಪ್ರಶ್ನಿಸಿದ್ದಿದ್ದರೆ ಅವನ ಮೇಲೆ ಹಿಂದಿ ಹೇರಿಕೆಯಾಗುತ್ತಿತ್ತು ಅಷ್ಟೇ” ಎಂದಿದ್ದಾರೆ. ಮತ್ತೊಂದು ಸನ್ನಿವೇಶದಲ್ಲಿ ನಾಯಕ ಚಂದ್ರು (ನಟ ಸೂರ್ಯ) ಅಪ್ಪಣೆಯ ನಂತರ ಬಾಲಕಿ ಪೇಪರ್ ಓದತೊಡಗುತ್ತಾಳೆ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸನ್ನಿವೇಶದ ಬಗ್ಗೆಯೂ ಪರ-ವಿರೋಧದ ಹೇಳಿಕೆಗಳು ಕೇಳಿಬಂದಿವೆ. “ನೋಡುವ ದೃಷ್ಟಿಕೋನ ಸರಿಯಾಗಿದ್ದರೆ ತಪ್ಪುಗಳು ಕಾಣಿಸವು” ಎಂದು ಹಲವರು ಸನ್ನಿವೇಶವನ್ನು ಸಮರ್ಥಿಸಿಕೊಂಡಿದ್ದಾರೆ. ಟಿ.ಜೆ.ಜ್ಞಾನವೇಲ್ ನಿರ್ದೇಶನದ ಚಿತ್ರದಲ್ಲಿ ಲಿಜೊಮೊಲ್ ಜೋಸ್, ರಾವ್ ರಮೇಶ್ ಇತರರು ನಟಿಸಿದ್ದಾರೆ.