ಇತ್ತೀಚೆಗೆ ವಿಶಿಷ್ಟ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿರುವ ನಟರ ಪೈಕಿ ಪ್ರಮೋದ್‌ ಶೆಟ್ಟಿ ಹೆಸರು ಕಡ್ಡಾಯವಾಗಿ ಪ್ರಸ್ತಾಪವಾಗುತ್ತದೆ. ರಂಗಭೂಮಿ ಹಿನ್ನೆಲೆಯ ನಟ ಪ್ರಜ್ಞಾಪೂರ್ವಕವಾಗಿ ಸವಾಲಿನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾ ತಮ್ಮ ಪ್ರತಿಭೆಗೆ ಸಾಣೆ ಹಿಡಿಯುತ್ತಿದ್ದಾರೆ. ನಾಳೆ ತೆರೆಕಾಣುತ್ತಿರುವ ʼದೃಶ್ಯʼ ಚಿತ್ರದಲ್ಲಿನ ಅವರ ಪಾತ್ರಕ್ಕೆ ಸಾಕಷ್ಟು ಸ್ಕೋಪ್‌ ಇದೆ.

ನಟ ಪ್ರಮೋದ್‌ ಶೆಟ್ಟಿ ಮೂಲತಃ ರಂಗಭೂಮಿಯವರು. ನಟ, ನಿರ್ದೇಶಕ ರಕ್ಷಿತ್‌ ಶೆಟ್ಟಿ ಸ್ನೇಹಬಳಗದ ಪ್ರಮೋದ್‌ ಶೆಟ್ಟಿ ಸವಾಲಿನ ಪಾತ್ರಗಳನ್ನು ಎದುರುನೋಡುವ ಕಲಾವಿದ. ನಾಳೆ ತೆರೆಕಾಣುತ್ತಿರುವ ʼದೃಶ್ಯʼ ಚಿತ್ರದಲ್ಲಿ ಪೊಲೀಸ್‌ ಅಧಿಕಾರಿಯಾಗಿ ನಟಿಸಿದ್ದಾರೆ ಪ್ರಮೋದ್.‌ ಈಗಾಗಲೇ ಖಾಕಿ ಪೋಷಾಕಿನಲ್ಲಿ ಕೆಲವು ಪಾತ್ರಗಳಲ್ಲಿ ನಟಿಸಿದ್ದರೂ ಈ ಪಾತ್ರ ಬೇರೆಯದ್ದೇ ಶೇಡ್‌ನಲ್ಲಿದೆ ಎನ್ನುತ್ತಾರವರು.

ಅನುಭವಿ ನಿರ್ದೇಶಕ ವಾಸು ಅವರ ಸಿನಿಮಾದಲ್ಲಿ ಕೆಲಸ ಮಾಡಿದ ಅನುಭವ ಹೇಗಿತ್ತು?

ನಾನು ಇಲ್ಲಿಯವರೆಗೆ ನಟಿಸಿರುವುದೆಲ್ಲಾ ಯುವ ನಿರ್ದೇಶಕರ ಚಿತ್ರಗಳಲ್ಲೇ. ಸ್ನೇಹಿತರಾದ ರಕ್ಷಿತ್‌ ಶೆಟ್ಟಿ, ರಿಷಬ್‌ ಶೆಟ್ಟಿ ಸಿನಿಮಾಗಳೆಂದರೆ ಒಂದು ರೀತಿ ಕಂಫರ್ಟ್‌ ಜೋನ್‌. ಅಲ್ಲಿ ನನ್ನ ಪಾತ್ರದ ರೂಪುರೇಷೆ ಕುರಿತು ನನಗೂ ಮಾತನಾಡಲು ಅವಕಾಶವಿರುತ್ತೆ. ʼದೃಶ್ಯ 2′ ಚಿತ್ರದೊಂದಿಗೆ ಮೊದಲ ಬಾರಿ ದೊಡ್ಡ ನಿರ್ದೇಶಕ ವಾಸು ಸರ್‌ ಸಿನಮಾದಲ್ಲಿ ನಟಿಸಿದಂತಾಗಿದೆ. ಹೀಗೊಂದು ಅವಕಾಶ ಸಿಕ್ಕಿದೆ ಎಂದು ರಿಷಬ್‌ಗೆ ಹೇಳಿದಾಗ, “ವಾಸು ಅವರು ಅರವತ್ತು ಸಿನಿಮಾ ಮಾಡಿರುವ ನಿರ್ದೇಶಕರು. ಚೆನ್ನಾಗಿ ರುಬ್ಬುತ್ತಾರೆ ಹೋಗು!” ಎಂದಿದ್ದ!

‘ದೃಶ್ಯ2’ ಪಾತ್ರ ನಿಮ್ಮ ಪಾಲಿಗೆ ಒದಗಿಬಂದದ್ದು ಹೇಗೆ?

ಮೂಲ ಮಲಯಾಳಂನ ‘ದೃಶ್ಯಂ 2’ ನೋಡಿ ಚಿತ್ರದಲ್ಲಿನ ಪೊಲೀಸ್‌ ಆಫೀಸರ್‌ ಪಾತ್ರವನ್ನು ತುಂಬಾ ಇಷ್ಟಪಟ್ಟಿದ್ದೆ. ಈ ಪಾತ್ರಕ್ಕೆ ತುಂಬಾ ವೇಯ್ಟೇಜ್‌ ಇದೆ, ಕನ್ನಡದಲ್ಲಿ ಈ ಪಾತ್ರ ಯಾರು ಮಾಡಬಹುದು ಎನ್ನುವ ಕುತೂಹಲವಿತ್ತು. ಮರುದಿನ ಸಿನಿಮಾವೊಂದರ ಚಿತ್ರೀಕರಣದಲ್ಲಿದ್ದೆ. ಮಧ್ಯಾಹ್ನದ ಹೊತ್ತು. ‘ದೃಶ್ಯ2’ ಚಿತ್ರದ ಪ್ರೊಡ್ಯೂಸರ್‌ ಕಡೆಯಿಂದ ಒಂದು ಕರೆ ಬಂತು. “ನಮ್ಮ ಸಿನಿಮಾದಲ್ಲಿ ನಿಮಗೊಂದು ಪಾತ್ರವಿದೆ. ಭೇಟಿ ಮಾಡಿ ಚರ್ಚಿಸಬಹುದೇ?” ಎಂದರು. ಮರುದಿನ ಶೆರಟಾನ್‌ ಹೋಟೆಲ್‌ನಲ್ಲಿ ಭೇಟಿ ಮಾಡಿದೆ. ಹಿಂದಿನ ದಿನ ರಾತ್ರಿ ನಾನು ನೋಡಿ ಮೆಚ್ಚಿದ್ದ ಪೊಲೀಸ್‌ ಅಧಿಕಾರಿ ಪಾತ್ರ ನನ್ನ ಪಾಲಿಗೆ ಸಿಕ್ಕಿತು!

ಪಾತ್ರದ ಬಗ್ಗೆ ಹೇಳಿ…

ಮೂಲ ಮಲಯಾಳಂ ಸಿನಿಮಾ ನೋಡಿ ಕನ್ನಡ ಅವತರಣಿಕೆಯಲ್ಲಿ ನನ್ನ ಪಾತ್ರ ನೋಡಿದವರಿಗೆ ಕೊಂಚ ಲೌಡ್‌ ಅನ್ನಿಸಬಹುದು. ಯೂಶುಯಲೀ ನಾನು ಸಟ್ಲಡ್‌ ಆಗಿ ನಟಿಸಲು ಇಷ್ಟಪಡುತ್ತೇನೆ. ‘ದೃಶ್ಯ2’ ಮೊದಲ ಸನ್ನಿವೇಶದಲ್ಲಿಅದೇ ರೀತಿ ಕ್ಯಾಮೆರಾ ಎದುರಿಸಿದೆ. ಆಗ ವಾಸು ಸರ್‌, “ಅಲ್ಲಿ ಮಲಯಾಳಂನಲ್ಲಿ ಅದು ಓಕೆ. ಕನ್ನಡದಲ್ಲಿ ನಾವು ಎಲ್ಲಾ ವರ್ಗದ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ಮಾಡಬೇಕಾಗುತ್ತದೆ. ಕಮರ್ಷಿಯಲ್‌ ಆಸ್ಪೆಕ್ಟ್‌ ನೋಡಬೇಕಾದ್ದರಿಂದ ಪಾತ್ರ ಸ್ವಲ್ಪ ಲೌಡ್‌ ಆಗಿರ್ಲಿ” ಎಂದರು. ಅದರಂತೆ ನಾನು ಪಾತ್ರಕ್ಕೆ ನನ್ನನ್ನು ಒಗ್ಗಿಸಿಕೊಂಡೆ. ಇನ್ನು ಕತೆಗೆ ಸಂಬಂಧಿಸಿದಂತೆ ಹೇಳುವುದಾದರೆ ಇಲ್ಲಿ ಕೊಲೆ ಮಾಡಿರುವ ಹೀರೋನೇ ವಿಲನ್‌ ಆಗ್ಬೇಕು. ಆದರೆ ಹಾಗೋಗಲ್ಲ! ತನ್ನ ಫ್ಯಾಮಿಲಿ ಉಳಿಸಿಕೊಳ್ಳೋಕೆ ಹೋರಾಡುವ ಕಾಮನ್‌ ಮ್ಯಾನ್‌ ಆಗಿ ಅವನೇ ಹೀರೋ ಆಗುತ್ತಾನೆ. ಕೊಲೆಗಾರನನ್ನು ಪತ್ತೆ ಹಚ್ಚುವ ಪೊಲೀಸನಾದರೂ, ಒಳ್ಳೆಯ ವ್ಯಕ್ತಿಯ ಮೇಲೆ ಪತ್ತೇದಾರಿಕೆ ನಡೆಸುವ ನನ್ನನ್ನು ಪ್ರೇಕ್ಷಕರು ವಿಲನ್‌ನಂತೆ ನೋಡುತ್ತಾರೆ. ಯಾವಾಗ ಕೊಲೆಗಾರನನ್ನು ಪತ್ತೆ ಹಚ್ಚುವಲ್ಲಿ ವಿಫಲನಾಗುತ್ತಿದ್ದೇನೆ ಎನಿಸುತ್ತದೋ ಆಗ ಆ ಕೇಸು ಪೊಲೀಸ್‌ ಅಧಿಕಾರಿಗೆ ಪರ್ಸನಲ್‌ ಅನ್ನಿಸೋಕೆ ಶುರುವಾಗುತ್ತೆ. ಹೀಗೆ ಇಲ್ಲಿ ನನ್ನ ಪಾತ್ರಕ್ಕೆ ಬೇರೆಯದ್ದೇ ಶೇಡ್‌ಗಳಿವೆ.

‘ದೃಶ್ಯ 2’ ಚಿತ್ರದಲ್ಲಿ

ಪ್ರಸ್ತುತ ಚಿತ್ರೀಕರಣದಲ್ಲಿರುವ ನಿಮ್ಮ ಸಿನಿಮಾಗಳು?

‘ಕಾಂತಾರ’ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದು, ಕುಂದಾಪುರದಲ್ಲಿ ಶೂಟಿಂಗ್‌ ಸಾಗಿದೆ. ‘ನಕ್ಷೆ’, ‘ತೂತುಮಡಕೆ’ ಚಿತ್ರಗಳು ತೆರೆಗೆ ಸಿದ್ಧವಾಗಿವೆ. ‘ಲಾಫಿಂಗ್‌ ಬುದ್ಧ’ ಮತ್ತು ‘ರಿಚರ್ಡ್‌ ಆಂಟೋನಿ’ ಸಿನಿಮಾಗಳು ಶುರುವಾಗಬೇಕು.

ರಂಗಭೂಮಿ ಚಟುವಟಿಕೆಗಳ ಬಗ್ಗೆ…

ನನ್ನ ರಂಗಭೂಮಿ ನಂಟು ಶುರುವಾಗಿದ್ದು ಕಾಲೇಜು ರಂಗಭೂಮಿಯಿಂದ. ಸಿನಿಮಾ, ಸೀರಿಯಲ್‌ಗಳಲ್ಲಿ ನಟಿಸುವ ಉದ್ದೇಶ ಖಂಡಿತಾ ಇರಲಿಲ್ಲ. ಕಾಲೇಜುಗಳಲ್ಲಿ ಥಿಯೇಟರ್‌ ವರ್ಕ್‌ಶಾಪ್‌ ಮಾಡುತ್ತಿದ್ದೆ. ಮುಂದೆ ಸಮಾನಮನಸ್ಕರು ಜೊತೆಗೂಡಿ ‘ರಂಗಸೌರಭ’ ತಂಡ ರೂಪಿಸಿದೆವು. ಈಗ ನಮ್ಮ ತಂಡಕ್ಕೆ ಇಪ್ಪತ್ತು ವರ್ಷಗಳು ತುಂಬಿದೆ. ಮೊದಲು ಪ್ರತೀ ವರ್ಷ ಕಾಲೇಜು ರಂಗಭೂಮಿಯಲ್ಲಿ ಎಂಗೇಜ್‌ ಆಗುತ್ತಿದ್ದೆವು. ಸೆಮಿಸ್ಟರ್‌ ಸಿಸ್ಟಮ್‌ ಬಂದ ನಂತರ ಅಲ್ಲಿ ರಂಗಚಟುವಟಿಕೆಗಳು ಕಡಿಮೆಯಾದವು. ಈ ವರ್ಷ ಮತ್ತೆ ಅಂತರಕಾಲೇಜು ಸ್ಪರ್ಧೆಗಳನ್ನು ಆಯೋಜಿಸಲಿದ್ದೇವೆ. 2022ರ ಜನವರಿ – ಫೆಬ್ರವರಿಯಲ್ಲಿ ಸುಮಾರು ಇಪ್ಪತ್ತೈದು ಕಾಲೇಜುಗಳು ಪಾಲ್ಗೊಳ್ಳಲಿವೆ.

ಇತರೆ ಭಾಷೆಗಳಲ್ಲಿ ನಿಮಗೆ ಅವಕಾಶಗಳು ಒದಗಿಬಂದಿದ್ದವೇ?

ಮಲಯಾಳಂ, ತೆಲುಗು ಮತ್ತು ತಮಿಳಿನ ಒಂದೊಂದು ಸಿನಿಮಾಗಳಿಗೆ ಕರೆಯಿತ್ತು. ಈ ಚಿತ್ರಗಳನ್ನು ಒಪ್ಪಿಕೊಳ್ಳಲು ಇಲ್ಲಿ ಡೇಟ್ಸ್‌ ಸಮಸ್ಯೆ ಎದುರಾಗಿತ್ತು. ಅದರಲ್ಲೂ ಮಲಯಾಳಂನಲ್ಲಿ ಸಿಕ್ಕಿದ್ದ ದೊಡ್ಡ ಅವಕಾಶ ಮಿಸ್‌ ಆಗಿದ್ದು ಖೇದವೆನಿಸುತ್ತದೆ. ಬೇರೆ ಬೇರೆ ಭಾಷೆಗಳಲ್ಲಿ ನಟಿಸುವ ವಿಷಯಕ್ಕೆ ಬಂದಾಗ ನನಗೆ ನಟ ಪ್ರಕಾಶ್‌ ರೈ ಅವರ ಬಗ್ಗೆ ವಿಶೇಷ ಒಲವು. ಅವರು ಯಾವುದೇ ಭಾಷೆಗಳ, ಯಾವುದೇ ಪಾತ್ರಕ್ಕಾದರೂ ನ್ಯಾಯ ಒದಗಿಸುವ ಕಲಾವಿದ.

ಸಿನಿಮಾರಂಗದಲ್ಲಿ ನೀವು ಗಮನಿಸಿದಂತೆ ಕೋವಿಡ್‌ ನಂತರದ ದಿನಗಳು ಹೇಗಿವೆ?

ಓಟಿಟಿ ಮಾಧ್ಯಮ ಸಿನಿಮಾ ಕಲ್ಚರನ್ನು ಎಲ್ಲಿ ಟೇಕ್‌ಓವರ್‌ ಮಾಡಿಬಿಡುತ್ತದೋ ಎನ್ನುವ ಭಯವಂತೂ ಇತ್ತು. ಆದರೆ ಹಾಗೇನೂ ಆಗಲಿಲ್ಲ. ಜನ ಥಿಯೇಟರ್‌ಗಳಿಗೆ ಬರುತ್ತಿದ್ದಾರೆ. ಇನ್ನೂ ದೊಡ್ಡ ಸಂಖ್ಯೆಯಲ್ಲಿ ಬರಬೇಕು. ‘ಗರುಡ ಗಮನ ವೃಷಭ ವಾಹನ’ ಸೇರಿದಂತೆ ಕೆಲವು ಸಿನಿಮಾಗಳಿಗೆ ಉತ್ತಮ ಬೆಂಬಲ ವ್ಯಕವಾಯ್ತು. ಇದು ಭರವಸೆ ಮೂಡಿಸಿದೆ.

LEAVE A REPLY

Connect with

Please enter your comment!
Please enter your name here