ಇದು ಇತ್ತೀಚಿನ ದಿನಗಳ ಬಾಲಿವುಡ್‌ನ ಹೈಪ್ರೊಫೈಲ್‌ ಮದುವೆ. ತಾರೆಯರಾದ ವಿಕ್ಕಿ ಕೌಶಲ್‌ ಮತ್ತು ಕತ್ರಿಕಾ ಕೈಫ್‌ ಅವರ ವಿವಾಹ ನಿನ್ನೆ ನೆರವೇರಿದೆ. ಇಬ್ಬರು ತಮ್ಮ ಇನ್‌ಸ್ಟಾಗ್ರಾಮ್‌ ಅಕೌಂಟ್‌ಗಳಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

‘ಈ ಅಪರೂಪದ ಕ್ಷಣದಲ್ಲಿ ಪ್ರೀತಿ ಮತ್ತು ಕೃತಜ್ಞತೆ ಹೊರತಾಗಿ ನಮ್ಮ ಹೃದಯದಲ್ಲಿ ಮತ್ಯಾವ ಭಾವವೂ ಇಲ್ಲ. ಇಂದಿನಿಂದ ನಮ್ಮ ಬದುಕಿನ ಹೊಸ ಪಯಣ ಆರಂಭವಾಗಿದೆ. ನಿಮ್ಮ ಪ್ರೀತಿ, ಹಾರೈಕೆ ಇರಲಿ’ ಎಂದು ತಮ್ಮ ಇನ್‌ಸ್ಟಾಗ್ರಾಮ್‌ ಅಕೌಂಟ್‌ಗಳಲ್ಲಿ ಬರೆದುಕೊಂಡಿದ್ದಾರೆ ಬಾಲಿವುಡ್‌ ತಾರೆಯರಾದ ವಿಕ್ಕಿ ಕೌಶಲ್‌ ಮತ್ತು ಕತ್ರಿಕಾ ಕೈಫ್‌. ಈ ಒಕ್ಕಣಿ ಜೊತೆ ಮದುವೆ ಸಂದರ್ಭದ ಫೊಟೊಗಳನ್ನು ಹಂಚಿಕೊಂಡಿದ್ದಾರೆ. ರಾಜಸ್ಥಾನದ ಸವಾಯ್‌ ಮಧೋಪುರ್‌ ಜಿಲ್ಲೆಯ ಸಿಕ್ಸ್‌ ಸೆನ್ಸೆಸ್‌ ಫೋರ್ಟ್‌ ಬರ್ವಾರಾದಲ್ಲಿ ನಿನ್ನೆ ಅವರ ವಿವಾಹ ನೆರವೇರಿದೆ. ಕುಟುಂಬದವರು ಹಾಗೂ ತೀರಾ ಆತ್ಮೀಯರಿಗಷ್ಟೇ ವಿವಾಹಕ್ಕೆ ಆಹ್ವಾನ ನೀಡಲಾಗಿತ್ತು. ಕೋವಿಡ್‌ ಮಾರ್ಗಸೂಚಿ ಅನುಸರಿಸಿದ್ದು 120 ಜನರು ಮಾತ್ರ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ. ಮದುವೆ ಸಮಾರಂಭದ ಭಾಗವಾಗಿ ನಡೆದ ಮೆಹಂದಿ, ಸಂಗೀತ್‌ ಕಾರ್ಯಕ್ರಮಗಳಲ್ಲಿ ಕೂಡ ಹೆಚ್ಚಿನ ಬಾಲಿವುಡ್‌ ಮಂದಿ ಭಾಗವಹಿಸಿಲ್ಲ.

ನಿರ್ದೇಶಕ ಆನಂದ್‌ ತಿವಾರಿ, ನಟಿ ನೇಹಾ ಧೂಪಿಯಾ, ನಟ ಅಂಗದ್‌ ಬೇಡಿ, ನಿರ್ದೇಶಕ ಕಬೀರ್‌ ಖಾನ್‌, ನಿರ್ಮಾಪಕ ಅಮೃತ್‌ಪಾಲ್‌ ಸಿಂಗ್‌ ಬಿಂದ್ರಾ ಸೇರಿದಂತೆ ಕೆಲವು ಸೆಲೆಬ್ರಿಟಿಗಳು ವಿವಾಹ ಸಮಾರಂಭಕ್ಕೆ ಸಾಕ್ಷಿಯಾಗಿದರು. ವಿಕ್ಕಿ ಕೌಶಲ್‌ ಮತ್ತು ಕತ್ರಿಕಾ ಕೈಫ್‌ ಇತ್ತೀಚಿನವರೆಗೂ ತಮ್ಮ ಪ್ರೀತಿಯ ವಿಚಾರವನ್ನು ಗೋಪ್ಯವಾಗಿಯೇ ಇಟ್ಟಿದ್ದರು. ಎರಡು ವರ್ಷಗಳ ಹಿಂದೆ ಫಿಲ್ಮ್‌ ಕಂಪಾನಿಯನ್‌ ಸಂದರ್ಶನದಲ್ಲಿ ಇಬ್ಬರೂ ಪಾಲ್ಗೊಂಡಿದ್ದರು. ಅಂದು ಇಬ್ಬರ ಪ್ರೀತಿ ಕುರಿತಂತೆ ವದಂತಿ ಹರಡಿತಾದರೂ ಅದಕ್ಕೆ ದಾಖಲೆಗಳು ಇರಲಿಲ್ಲ. ನಂತರ ಕಾಫಿ ವಿಥ್‌ ಕರಣ್‌ ಶೋನಲ್ಲಿ ಡೇಟಿಂಗ್‌ ಕುರಿತು ಕೊಂಚ ಮಾಹಿತಿ ಸಿಕ್ಕಿತ್ತು. ಕೆಲವೇ ದಿನಗಳ ಹಿಂದೆ ಅವರು ವಿವಾಹದ ಬಗ್ಗೆ ಮಾತನಾಡಿದಾಗ ಅವರ ಅಭಿಮಾನಿಗಳಿಗೂ ಅಚ್ಚರಿಯಾಗಿತ್ತು. ಇನ್ನು ಸಿನಿಮಾ ವಿಚಾರವಾಗಿ ವಿಕ್ಕಿ ಕೌಶಲ್‌ (ಸರ್ದಾರ್‌ ಉದಾಮ್‌) ಮತ್ತು ಕತ್ರಿಕಾ ಕೈಫ್‌ (ಸೂರ್ಯವಂಶಿ) ಇಬ್ಬರೂ ಸದ್ಯ ಯಶಸ್ಸಿನ ಖುಷಿಯಲ್ಲಿದ್ದಾರೆ.

LEAVE A REPLY

Connect with

Please enter your comment!
Please enter your name here