ಚಿತ್ರನಿರ್ದೇಶಕ ರಾಹುಲ್ ರವೈಲ್‌ ರಚಿಸಿರುವ ‘ರಾಜ್ ಕಪೂರ್‌ – ದಿ ಮಾಸ್ಟರ್ ಅಟ್ ವರ್ಕ್‌’ ಬಯೋಗ್ರಫಿ ಡಿಸೆಂಬರ್‌ 14ರಂದು ಬಿಡುಗಡೆಯಾಗಲಿದೆ. ಹಿಂದಿ ಚಿತ್ರರಂಗದ ಮೇರು ತಾರೆ ರಾಜ್‌ ಕಪೂರ್‌ ಕುಟುಂಬದ ಆಪ್ತರಾದ ರಾಹುಲ್ ರವೈಲ್ ಕೃತಿ ನಿರೀಕ್ಷೆ ಹುಟ್ಟುಹಾಕಿದೆ.

ಹಿಂದಿ ಚಿತ್ರರಂಗ ಕಂಡ ಮೇರು ನಟ, ನಿರ್ದೇಶಕ, ನಿರ್ಮಾಪಕ ರಾಜ್ ಕಪೂರ್‌. ತಮ್ಮ ಸಿನಿಮಾಗಳ ಮೂಲಕ ಅವರು ಜಾಗತಿಕ ಸಿನಿಮಾರಂಗಕ್ಕೂ ಪರಿಚಯವಾಗಿದ್ದವರು. ಅವರ ಕುರಿತಾಗಿ ಈಗಾಗಲೇ ಕೆಲವು ಪುಸ್ತಕಗಳು ರಚನೆಯಾಗಿವೆ. ಆದರೆ ಚಿತ್ರನಿರ್ದೇಶಕ, ರಾಜ್‌ ಕಪೂರ್ ಕುಟುಂಬದ ಆಪ್ತರೂ ಆದ ರಾಹುಲ್ ರವೈಲ್‌ ರಚಿಸಿರುವ ‘ರಾಜ್‌ ಕಪೂರ್‌ – ದಿ ಮಾಸ್ಟರ್ ಅಟ್ ವರ್ಕ್‌’ ವಿಶೇಷವೆನಿಸಿದೆ. ರಾಹುಲ್ ಅವರು ಈ ಕೃತಿ ರಚನೆಗೆ ತೊಡಗಿ ಕೆಲವು ವರ್ಷಗಳೇ ಆಗಿವೆ. ಪ್ರಣೀಕಾ ಶರ್ಮಾ ಅವರಿಗೆ ಬರವಣಿಗೆಯಲ್ಲಿ ನೆರವಾಗಿದ್ದಾರೆ. ಕಳೆದ ವರ್ಷ ನಮ್ಮನ್ನಗಲಿದ ರಾಜ್ ಕಪೂರ್ ಪುತ್ರ ರಿಷಿ ಕಪೂರ್ ಅವರಿಂದ ರಾಹುಲ್ ಸಾಕಷ್ಟು ಮಾಹಿತಿ ಪಡೆದಿದ್ದಾರೆ. ರಾಜ್ ಕಪೂರ್ ಅವರ ಹಿರಿಯ ಪುತ್ರ ರಣಧೀರ್ ಕಪೂರ್ ಕೃತಿಗೆ ಮುನ್ನುಡಿ ಬರೆದಿದ್ದಾರೆ.

ರಾಹುಲ್ ರವೈಲ್‌ ತಮ್ಮ ಕೃತಿ ಕುರಿತು ಮಾತನಾಡುತ್ತಾ, “ನಾನು ಕಂಡ ರಾಜ್ ಕಪೂರ್ ಅವರಿಗೆ ಸೂಕ್ತ ನ್ಯಾಯ ಸಲ್ಲಿಸಬೇಕಿತ್ತು. ಹಾಗಾಗಿ ಈ ಕೃತಿ ರಚನೆಗೆ ಸಾಕಷ್ಟು ಸಮಯ ತೆಗೆದುಕೊಂಡೆ. ಪ್ರಕಾಶಕಿ ಪ್ರೇರಣಾ ವೋರಾ ಕೂಡ ನನಗೆ ಸಮಯ ಕೊಟ್ಟರು. ಪ್ರಣೀಕಾ ಶರ್ಮಾ ಬರವಣಿಗೆಯಲ್ಲಿ ನೆರವಾಗಿದ್ದಾರೆ. ರಾಜ್ ಕಪೂರ್ ಪುತ್ರರೊಂದಿಗೆ ಹತ್ತಾರು ಬಾರಿ ಮಾತುಕತೆ ನಡೆಸಿದ್ದೇನೆ. ಅವರು ತುಂಬಾ ಸಂತೋಷದಿಂದ ಬಯೋಗ್ರಫಿಗೆ ಒಪ್ಪಿಗೆ ಕೊಟ್ಟು ಸಹಕರಿಸಿದ್ದಾರೆ. ಈ ಕೃತಿ ರಚನೆ ಮನಸ್ಸಿಗೆ ತುಂಬಾ ಸಮಾಧಾನ ಕೊಟ್ಟಿದೆ. ಡಿಸೆಂಬರ್‌ 14ರ ರಾಜ್ ಕಪೂರ್ ಅವರ ಜನ್ಮದಿನದಂದು ಕೃತಿ ಬಿಡುಗಡೆಯಾಗಲಿದೆ” ಎಂದಿದ್ದಾರೆ. ಖ್ಯಾತ ಬಾಲಿವುಡ್ ವಿಮರ್ಶಕ ತರಣ್‌ ಆದರ್ಶ್‌ ಬಯೋಗ್ರಫಿ ಕವರ್ ಪೇಜ್‌ ಟ್ವೀಟ್ ಮಾಡಿ ಕೃತಿಯ ಬಗ್ಗೆ ಬರೆದಿದ್ದಾರೆ.

LEAVE A REPLY

Connect with

Please enter your comment!
Please enter your name here